ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲು ಆಲಿಸಲು ಸಮ್ಮುಖ ಕಾರ್ಯಕ್ರಮ - ಮೇಯರ್ ಡಿ.ವೆಂಕಟೇಶ್ ಮೂರ್ತಿ

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಾಗರಿಕರ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕರಿಸಿ, ನಿಗದಿತ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಲು `ಸಮ್ಮುಖ~ ಎಂಬ ವಿನೂತನ ಜನಸ್ಪಂದನ ಕಾರ್ಯಕ್ರಮವನ್ನು ಬಿಬಿಎಂಪಿಯಲ್ಲಿ ಆರಂಭಿಸಲಾಗುವುದು~ ಮೇಯರ್ ಡಿ.ವೆಂಕಟೇಶ್‌ಮೂರ್ತಿ ತಿಳಿಸಿದರು.

`ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಶಾಸಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಪ್ರತಿ 15 ದಿನಕೊಮ್ಮೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ  ಶಾಸಕರು, ಪಾಲಿಕೆ ಸದಸ್ಯರು, ಇಲಾಖೆಯ ಮುಖ್ಯಸ್ಥರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ನಾಗರಿಕರ ಸಮಸ್ಯೆಗಳ ಆದ್ಯತೆಯ ಮೇರೆಗೆ ಶಾಸಕರು ಸೂಚಿಸುವ ದಿನದಂದು ಕಾರ್ಯಕ್ರಮ ನಡೆಯಲಿದೆ~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

`ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳಲ್ಲಿರುವ ಸಾರ್ವಜನಿಕ ದೂರುಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲಾಗುವುದು. ಸದ್ಯದಲ್ಲೇ ಮೇಯರ್ ಸಹಾಯವಾಣಿಯನ್ನು ಸಹ ಆರಂಭಿಸಲಾಗುವುದು. ನಗರದ ಅಭಿವೃದ್ಧಿಗೆ ಚಾಲನೆ ನೀಡಲು ಅಭಿವೃದ್ಧಿ ಹಂತದಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು~ ಎಂದು ಹೇಳಿದರು.

ಆಡಳಿತ ಪಕ್ಷದ ನಾಯಕ: ಬಿಬಿಎಂಪಿಯ ಆಡಳಿತ ಪಕ್ಷದ ನಾಯಕರನ್ನಾಗಿ ಬೈರಸಂದ್ರ ವಾರ್ಡ್‌ನ ಸದಸ್ಯ ಎನ್.ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೇಯರ್  ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎನ್.ನಾಗರಾಜು, `ಆಡಳಿತ ಪಕ್ಷದ ನಾಯಕರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಿಯೋಜಿಸಿರುವ ಕರ್ತವ್ಯವನ್ನು ಪಾಲಿಸುತ್ತೇನೆ~ ಎಂದು ಹೇಳಿದರು.

ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಪಕ್ಷದ ವರಿಷ್ಠರು ನಾಗರಾಜ್ ಅವರ ಆಯ್ಕೆಯನ್ನು ಅಂತಿಮಗೊಳಿಸಿದ್ದರು. ಕಡೆ ಗಳಿಗೆಯಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ ಎನ್.ನಾಗರಾಜ್ ಅವರನ್ನು ಆಡಳಿತದ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಎನ್.ನಾಗರಾಜ್ ಅವರು ಸೋಮವಾರ ಆಡಳಿತ ಪಕ್ಷದ ನಾಯಕರಾಗಿ ತಮ್ಮ ಕೊಠಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಬಿಬಿಎಂಪಿ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ತೋಟಗಾರಿಕೆ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

`ಅಕ್ರಮ ಸಕ್ರಮ~ ರಾಜ್ಯಪಾಲರ ಬಳಿ ನಿಯೋಗ
ಬಿಬಿಎಂಪಿ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ `ಅಕ್ರಮ ಸಕ್ರಮ~ ಯೋಜನೆಗೆ ರಾಜ್ಯಪಾಲರಿಂದ ಒಪ್ಪಿಗೆ ಪಡೆಯಲು ಮೇಯರ್ ನೇತೃತ್ವದ ನಿಯೋಗವು  ಸದ್ಯದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆದಿದೆ~ ಎಂದು ಮೇಯರ್ ಡಿ.ವೆಂಕಟೇಶ್‌ಮೂರ್ತಿ ಮಾಹಿತಿ ನೀಡಿದರು.

 `ನಗರ ಉಸ್ತುವಾರಿ ಸಚಿವ ಆರ್.ಅಶೋಕ, ಉಪ ಮೇಯರ್ ಎಲ್.ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್ ಮತ್ತು ಸ್ಥಳೀಯ ಶಾಸಕರನ್ನು ಒಳಗೊಂಡ ಈ ನಿಯೋಗವು ರಾಜ್ಯ ಪಾಲರನ್ನು ಭೇಟಿ ಮಾಡಿ, ಅಕ್ರಮ ಸಕ್ರಮ ಯೋಜನೆಗೆ ಸಹಿ ಹಾಕುವಂತೆ ಮನವಿ ಮಾಡಲಿದೆ~ ಎಂದು ಹೇಳಿದರು. 

 `ಪಾಲಿಕೆಯಲ್ಲಿ ಮಂಡಿಸುವ ಬಜೆಟ್‌ನ ಅಂಶಗಳು ನಿಗದಿತ ಸಮಯದೊಳಗೆ ಅನುಷ್ಠಾನಗೊಳಿಸಲು ವಿಫಲವಾಗುತ್ತದೆ ಎಂಬ ಮಾತಿದೆ. ಇದೇ ತಿಂಗಳ ಒಳಗೆ ಪಾಲಿಕೆಯು `ರಿಯಾಲಿಟಿ ಬಜೆಟ್~  ಮಂಡಿಸಲಿದೆ~ ಎಂದು ಪ್ರತಿಕ್ರಿಯಿಸಿದರು.

ಉಪಮೇಯರ್ ಅವರು ಚಿಕ್ಕಲಸಂದ್ರ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮನೆ  ನಿರ್ಮಾಣ ಮಾಡಿದ್ದರಲ್ಲ ಈ ಬಗ್ಗೆ ಕ್ರಮ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ, `ಈಚೆಗಷ್ಟೆ ಉಪಮೇಯರ್ ಅವರು ಕೆರೆ ಒತ್ತುವರಿ ಮಾಡಿಕೊಂಡು ಮನೆ  ನಿರ್ಮಾಣ ಮಾಡಿಲ್ಲ ಎಂಬುದನ್ನು ಸ್ಪಷ್ಟಿಕರಿಸಿದ್ದಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ~ ಎಂದು ಹೇಳಿದರು.


`ಯಾವುದೇ ಆರೋಪಗಳಿಗೆ ಅವಕಾಶವಿಲ್ಲದಂತೆ ಸ್ಥಾಯಿ ಸಮಿತಿಯ ಅಧ್ಯಕ್ಷರು, ಆದ್ಯತೆಯ ಮೇರೆಗೆ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಇದೇ ಸೋಮವಾರದಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT