ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂದ ಮಠ: ಸ್ವಾಮೀಜಿ ಸಮರ್ಥನೆ

Last Updated 24 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ತುಮಕೂರು: ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ ತರುವುದು ಅನಿವಾರ್ಯವಾಗಿತ್ತು ಎಂದು ಒಕ್ಕೂಟದ ಕಾರ್ಯಾಧ್ಯಕ್ಷ ಶಿವಗಂಗೆಯ ಮಹಾಲಕ್ಷ್ಮೀ ಮಹಾಸಂಸ್ಥಾನ ಮಠದ ಜ್ಞಾನಾನಂದಪುರಿ ಸ್ವಾಮೀಜಿ ಸಮರ್ಥಿಸಿಕೊಂಡರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ರಾಜ್ಯದ ವಿವಿಧ ಮಠಗಳಿಗೆ ರೂ. 400 ಕೋಟಿ ಅನುದಾನ ನೀಡಿದೆ. ಆದರೆ ಈ ಅನುದಾನ ನೀಡಿಕೆ ಯಲ್ಲಿ ಬಲಾಢ್ಯ ಸಮುದಾಯದ ಮಠಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಿದೆ.
 
ಆದರೆ ದಲಿತ, ಇನ್ನಿತರ ಮಠಗಳಿಗೆ ಅತ್ಯಲ್ಪ ಅನುದಾನ ನೀಡಿದೆ. ಈ ಸರ್ಕಾರ ಅನುದಾನ ನೀಡಿಕೆಯಲ್ಲೂ ಜಾತಿ ತಾರತಮ್ಯ ಮಾಡಿದೆ. ಇದನ್ನು ಜನತೆಗೆ ತಿಳಿಸಲು ಒಕ್ಕೂಟದ ಅಗತ್ಯವಿತ್ತು ಎಂದರು.

ಬಲಾಢ್ಯ ಮಠಗಳಿಗೆ ಅನುದಾನ ಶೀಘ್ರವೇ ತಲುಪು ತ್ತಿದೆ. ಆದರೆ ಹಿಂದುಳಿದ ಮಠಗಳಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿ ವರ್ಷ ಕಳೆದರೂ ಅನು ದಾನ ಬಿಡುಗಡೆ ಮಾಡುತ್ತಿಲ್ಲ. ಬಲಾಢ್ಯ ಮಠಗಳಿಗೆ ಭರವಸೆ ನೀಡಿ ಮೂರು ದಿನಕ್ಕೆ ಅನುದಾನ ಬಿಡುಗಡೆ ಮಾಡಿದ ಉದಾಹರಣೆಗಳಿವೆ ಎಂದು ಹೇಳಿದರು.

ರಾಜಕೀಯ, ಧಾರ್ಮಿಕವಾಗಿ ಕೂಡ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ. ರಾಜ್ಯದಲ್ಲಿ 40 ಲಕ್ಷ ತಿಗಳ ಸಮುದಾಯವಿದೆ. ಆದರೆ ಒಬ್ಬರೂ ಸಚಿವರು ಇಲ್ಲ. ಸ್ಥಳೀಯ ಸಂಸ್ಥೆಗಳಿಗೆ ದಲಿತರು, ಹಿಂದುಳಿದ ವರಿಗೆ ರಾಜಕೀಯ ಪ್ರಾತಿನಿಧ್ಯ ಮೀಸಲಾತಿ ಮೂಲಕ ದೊರೆತಿದೆಯೇ ಹೊರತು ಯಾವುದೇ ಪಕ್ಷ ನೀಡಿದ್ದಲ್ಲ.

ಈ ಬಗ್ಗೆ ಜಾಗೃತಿ ಮೂಡಿಸಲು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ರಚಿಸಲಾಗಿದೆ ಎಂದರು.
ಮಡೆಮಡೆ ಸ್ನಾನ ಮತ್ತು ಪಂಕ್ತಿಭೇದ ಒಂದು ಹೇಯ ಕೃತ್ಯ ಎಂದು ಕಿಡಿಕಾರಿದರು.

ಯೋಗ ಮಂದಿರಕ್ಕೆ ಶಿಲಾನ್ಯಾಸ

ಶಿವಗಂಗೆಯ ಮಹಾಲಕ್ಷ್ಮೀ ಮಹಾಸಂಸ್ಥಾನ ಮಠದ ವತಿಯಿಂದ ನಗರದ ಹನುಮಂತಪುರದಲ್ಲಿ ನೂತನವಾಗಿ ಮಹಾಲಕ್ಷ್ಮೀ ಯೋಗ ಮತ್ತು ಜ್ಞಾನ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಠದ ಸ್ವಾಮೀಜಿ ಜ್ಞಾನಾನಂದಪುರಿ ಸ್ವಾಮೀಜಿ ಗುರವಾರ ಇಲ್ಲಿ ತಿಳಿಸಿದರು.

ಮಠಕ್ಕೆ ನಿವೇಶನವನ್ನು ನಗರಸಭೆ ನೀಡಿತ್ತು. ಇದೀಗ ರೂ. 56 ಲಕ್ಷ ವೆಚ್ಚದಲ್ಲಿ ಯೋಗ, ಜ್ಞಾನ ಮಂದಿರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಹೇಳಿದರು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹೊಸದುರ್ಗ ಮಠದ ಪುರುಷೋತ್ತಮಾನಂದ ಸ್ವಾಮೀಜಿ, ಹಿರೇ ಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ,  ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಿಗೆ ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಶಾಸಕರು ಭಾಗವಹಿಸುವರು ಎಂದರು. ಸಭಾ ಕಾರ್ಯಕ್ರಮ 26ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರಪಳಿ ಮಠದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT