ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ಸಂಗೀತೋತ್ಸವ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಿಂದುಸ್ತಾನಿ ಸಂಗೀತದಲ್ಲಿ ಧಾರವಾಡದ ಪಂ. ಅರ್ಜುನಸಾ ನಾಕೋಡ ಖ್ಯಾತನಾಮರು. ಉತ್ತರ ಕರ್ನಾಟಕ ಭಾಗದಲ್ಲಿ ಶಾಸ್ತ್ರೀಯ ಸಂಗೀತ ಹರಡುವಲ್ಲಿ ಅವರ ಶ್ರಮ ಅವಿರತ.

ಬಹುಮುಖ ವ್ಯಕ್ತಿತ್ವದ ಪಂ. ಅರ್ಜುನಸಾ ಪೈಲ್ವಾನರಾಗಿ, ಕಂಪೆನಿಯ ಮಾಲೀಕರಾಗಿ, ಸಂಗೀತ ಶಾಲೆಯ ಪ್ರಾಚಾರ್ಯರಾಗಿ ಕಲೆಯನ್ನು ಜೀವನದುದ್ದಕ್ಕೂ ಪೋಷಿಸಿಕೊಂಡು ಬಂದವರು. ಸ್ವಯಂ ಸಾಧನೆಯಿಂದ ಸಂಗೀತ ಕಲೆ, ನಾಟಕ ಎಲ್ಲವನ್ನೂ ಪೋಷಿಸಿಕೊಂಡು ಬಂದು ಅದನ್ನು ಸಾಕಾರಗೊಳಿಸಿದವರು ಪಂಡಿತ್‌ಜೀ.

ಇಡೀ ಕುಟುಂಬವನ್ನು ಸಂಗೀತದಲ್ಲಿ ತೊಡಗಿಸಿ ಮಕ್ಕಳೂ ಸಂಗೀತ ಸರಸ್ವತಿಯನ್ನು ಪಾಲಿಸಿಕೊಂಡು ಬರುವಂತೆ ಮಾಡಿದವರು. ಹುಬ್ಬಳ್ಳಿ- ಧಾರವಾಡ ಅಲ್ಲದೆ ಬೆಂಗಳೂರಿನಲ್ಲಿ ಹಿಂದುಸ್ತಾನಿ ಸಂಗೀತವನ್ನು ಬೆಳೆಸಿದವರು.
 
ಹುಬ್ಬಳ್ಳಿಯ ಸಂಗೀತ ದಿಗ್ಗಜ ಪಂಚಾಕ್ಷರ ಗವಾಯಿ ಅವರ ಗರಡಿಯಲ್ಲಿ ಪಳಗಿದ ಇವರು ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ತಾಲೀಮು ನಡೆಸಿದರು. ಇದ್ದೊಂದು ಸೂರನ್ನು ಮಾರಿ ನಾಟಕ ಕಂಪೆನಿ ಕಟ್ಟಿದರು. ನಾಟಕಗಳಲ್ಲಿ ಬಣ್ಣ ಹಚ್ಚಿ ರಂಗಭೂಮಿಯನ್ನು ಶ್ರೀಮಂತಗೊಳಿಸಿದರು.

ಧಾರವಾಡ ಆಕಾಶವಾಣಿಯಲ್ಲಿ ಕಲಾವಿದರಾಗಿ ಹುದ್ದೆಯನ್ನೂ ಪಡೆದರು. ಗ್ವಾಲಿಯರ್ ಘರಾಣೆಯಲ್ಲಿ ಪ್ರಭುತ್ವ ಸಾಧಿಸಿದ ಇವರು ತಮ್ಮ ಮಕ್ಕಳನ್ನೂ ಗಾಯನ, ವಾದನಗಳಲ್ಲಿ ಪಳಗಿಸಿದರು. ಇವರ ಮಕ್ಕಳಾದ ರಘುನಾಥ, ಬಾಲಚಂದ್ರ, ವಿಶ್ವನಾಥ ಮತ್ತು ರಾಜೇಂದ್ರ ಈಗ ನಾಡಿನ ನುರಿತ ಕಲಾವಿದರಾಗಿ ರೂಪುಗೊಂಡಿದ್ದಾರೆ.

ತಂದೆಯವರ ಸಾಧನೆಗೆ ಮನ್ನಣೆ ಸಿಗಲು ಮಗನಾದ ತಬಲಾ ಕಲಾವಿದ ಪಂ. ವಿಶ್ವನಾಥ ನಾಕೋಡ ಅವರು ಬೆಂಗಳೂರಿನಲ್ಲಿ 1997ರಲ್ಲಿ `ರೇಣುಕಾ ಸಂಗೀತ ಸಭಾ~ ಸಂಸ್ಥೆ ಕಟ್ಟಿದರು. ಪ್ರತಿವರ್ಷ ಅಹೋರಾತ್ರಿ ಸಂಗೀತೋತ್ಸವ ಏರ್ಪಡಿಸುವ ಮೂಲಕ `ತಂದೆಯಂತೆ ಮಗ~ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಅಂದಹಾಗೆ ಪಂ.ಅರ್ಜುನಸಾ ನಾಕೋಡ ಅವರ ಸವಿನೆನಪಿಗಾಗಿ ಕಟ್ಟಿರುವ `ರೇಣುಕಾ ಸಂಗೀತ ಸಭಾ~ಕ್ಕೆ ಇದೀಗ ದಶಮಾನೋತ್ಸವ ಸಂಭ್ರಮ. ಖ್ಯಾತ ಕಲಾವಿದರನ್ನು ಕರೆಸಿ ಸಂಗೀತ ಕಾರ್ಯಕ್ರಮ ಸಂಘಟಿಸುವುದು ಇಂದು ಸುಲಭದ ಮಾತಲ್ಲ.
 
ಕಲಾವಿದರ ಸಂಭಾವನೆ, ಖರ್ಚು ವೆಚ್ಚವನ್ನು ಸರಿದೂಗಿಸುವುದು ಹಾಗೂ ದೂರದೂರುಗಳಿಂದ ಕಲಾವಿದರನ್ನು ಸತ್ಕರಿಸಿ ಕಾರ್ಯಕ್ರಮ ನಡೆಸುವುದು ಕೂಡ ಕಷ್ಟ. ಇಂಥ ಸಂದರ್ಭದಲ್ಲಿ ಸಂಗೀತದ ಬಗ್ಗೆ ವಿಶೇಷ ಕಳಕಳಿ ಇರುವ ರೇಣುಕಾ ಸಂಗೀತ ಸಭಾ ಕಳೆದ 10 ವರ್ಷಗಳಿಂದ ಅಹೋರಾತ್ರಿ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.

ಧೀಮಂತ ಕಲಾವಿದರಾಗಿದ್ದ ಪಂ. ಅರ್ಜುನಸಾ ನಾಕೋಡ ಅವರಿಗೆ ನಿಜವಾಗಿ ಸಲ್ಲುವ ನಮನವೂ ಹೌದು. ಅಹೋರಾತ್ರಿ ನಡೆಯುವುದು ಅಕ್ಷರಶಃ ಸಂಗೀತ ಸರಸ್ವತಿಯ ಆರಾಧನೆ.

ಅಹೋರಾತ್ರಿ ಸಂಗೀತೋತ್ಸವ, ಸಂಗೀತ ಜಗತ್ತಿನಲ್ಲಿ ಇಡೀ ರಾತ್ರಿ ಸಂಗೀತದ ವಿವಿಧ ರಾಗಗಳನ್ನು ಅದರಲ್ಲೂ ಕರ್ನಾಟಕಿ ಮತ್ತು ಹಿಂದುಸ್ತಾನಿ ಎರಡೂ ಶೈಲಿಯ ಗಾಯನ ವಾದನ ಎರಡನ್ನೂ ಕೇಳುವ ಸುಯೋಗ ಸಹೃದಯರಿಗೆ ಸಿಗುವುದು ವರ್ಷದಲ್ಲಿ ಬೆರಳೆಣಿಕೆಯಷ್ಟು ಮಾತ್ರ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಅಹೋರಾತ್ರಿ ಸಂಗೀತೋತ್ಸವ ಸಂಭ್ರಮ. ನಮ್ಮ ನಾಡಿನ ಕಲಾವಿದರ ಜತೆ ಬೇರೆ ರಾಜ್ಯದ ಖ್ಯಾತ ಕಲಾವಿದರನ್ನೂ ಈ ವೇದಿಕೆಗೆ ಕರೆಸಿ ವಿವಿಧ ಘರಾಣೆಗಳ ಸೊಬಗನ್ನು ಸವಿಯುವ ಅವಕಾಶ `ಅಹೋರಾತ್ರಿ ಸಂಗೀತೋತ್ಸವ~ದಲ್ಲಿ ಇದೆ.

ರಾತ್ರಿಯ ಸುಮಧುರ ರಾಗಗಳು ಅಹೋರಾತ್ರಿಯಲ್ಲಿ ರಂಜಿಸಲಿದೆ. ರಾತ್ರಿಯ ರಾಗಗಳಾದ ಮಾಲ್‌ಕೌಂಸ್, ಭಾಗೇಶ್ರೀ, ಭಾಗೇಶ್ರೀ ಕಾನಡಾ, ಕಾಫಿ ಕಾನಡಾ ಜೈಜವಂತಿ, ಮಧ್ಯರಾತ್ರಿ ರಾಗ ದರ್ಬಾರಿ ಕಾನಡಾ, ಬೆಳಗ್ಗಿನ ರಾಗಗಳಾದ ಭೈರವ್, ಭೈರಾಗಿ ಭೈರವ್, ತೋಡಿ, ಮಿಯಾಕಿ ತೋಡಿ, ಭಿಲಾಸ್‌ಖಾನಿ ತೋಡಿ ಮುಂತಾದ ವಿಶಿಷ್ಟ ರಾಗಗಳನ್ನು ರಾತ್ರಿಯಿಡೀ ಕೇಳುವ ಸುಯೋಗ ಸಹೃದಯರಿಗೆ.

ವಿಶ್ವವಿಖ್ಯಾತ ಕಲಾವಿದರಿಂದ ಶಾಸ್ತ್ರೀಯ ಗಾಯನ, ತಬಲಾ ಸೋಲೊ, ಸಿತಾರ್ ಕಛೇರಿ, ಸರೋದ್ ಮುಂತಾದ ವಾದ್ಯ ಸಂಗೀತ ಅಲ್ಲದೆ ಸಂಗೀತದಲ್ಲಿ ವಿಶಿಷ್ಟ ರೀತಿಯ ಜುಗಲ್‌ಬಂದಿಯನ್ನೂ ಏರ್ಪಡಿಸುವ ರೇಣುಕಾ ಸಂಗೀತ ಸಭಾದ ಸಾಧನೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಆಗುತ್ತಿರುವ ದಿಟ್ಟ ಹೆಜ್ಜೆ.

ಅಹೋರಾತ್ರಿ ಸಂಗೀತೋತ್ಸವದಲ್ಲಿ ಒಂದೇ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತದ ಎರಡು ಪ್ರಮುಖ ಶೈಲಿಗಳಾದ ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತವನ್ನು ಸವಿಯಬಹುದು. ಮಧುರಾತಿ ಮಧುರ ರಾಗಗಳನ್ನು ಕೇಳಬಹುದು ಎನ್ನುತ್ತಾರೆ ಸಂಗೀತ ಸಭಾದ ಅಧ್ಯಕ್ಷರಾದ ಪಂ. ವಿಶ್ವನಾಥ ನಾಕೋಡ್.

ಈ ಬಾರಿಯ ಸಂಗೀತೋತ್ಸವದಲ್ಲಿ
ಈ ಬಾರಿ ಫೆ.11 ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಕೋಲ್ಕತ್ತಾದ ಸರೋದ್‌ವಾದಕ ಪಂ. ತೇಜೇಂದ್ರ ನಾರಾಯಣ್ ಮಜುಂದಾರ್, ಸಂತೂರ್ ವಾದಕ ಪಂ. ತರುಣ್ ಭಟ್ಟಾಚಾರ್ಯ, ಮೈಸೂರು ಎಂ ನಾಗರಾಜ್ ಅವರಿಂದ ಪಿಟೀಲು, ಪಂ. ಕೈವಲ್ಯ ಕುಮಾರ್ ಗುರವ್ ಅವರಿಂದ ಹಿಂದುಸ್ತಾನಿ ಗಾಯನ, ಕೋಲ್ಕತ್ತಾದ ಪಂ. ಶುಭಂಕರ ಬ್ಯಾನರ್ಜಿ ಅವರಿಂದ ತಬಲಾ, ಪಂ. ಬಾಲಚಂದ್ರ ನಾಕೋಡ್ ಅವರಿಂದ ಗಾಯನ, ಉಸ್ತಾದ್ ಶಫೀಖ್ ಖಾನ್ ಅವರಿಂದ ಸಿತಾರ್ ಮತ್ತು ಹುಬ್ಬಳ್ಳಿಯ ಜಯತೀರ್ಥ ಮೇವುಂಡಿ ಅವರಿಂದ ಗಾಯನ ಕಾರ್ಯಕ್ರಮವಿದೆ.

ಹಿಂದುಸ್ತಾನಿ ಸಂಗೀತದಲ್ಲಿ ಸುಮಾರು 60 ಶಿಷ್ಯರನ್ನು ಪಳಗಿಸಿದ ವಿಶ್ವನಾಥ್ ನಾಕೋಡ್ ಅವರ ಈ ಶಿಷ್ಯರಿಂದಲೇ ಪ್ರಾರ್ಥನಾ ಗೀತೆಯೂ ಮೊಳಗಲಿದೆ. ಪ್ರವೇಶ ಉಚಿತ. ರಾತ್ರಿ 9 ಗಂಟೆಯಿಂದ ಕಾರ್ಯಕ್ರಮ ಆರಂಭ. ಮಾಹಿತಿಗೆ: 080-23496424

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT