ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಅಮ್ಮ ಈ ಮಗಳು

Last Updated 21 ಸೆಪ್ಟೆಂಬರ್ 2013, 5:57 IST
ಅಕ್ಷರ ಗಾತ್ರ

ಚೆನ್ನಾಗಿದ್ದೇನೆ, ವಿವಿಧ ರೀತಿಯ ಭಾವನೆಗಳಿಗೆ ಜೀವ ತುಂಬಬಲ್ಲ ಅಭಿನಯಾಸಕ್ತಿಯಿದೆ. ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಹಲವು ಭಾವಗಳಲ್ಲಿ ಕಾಣಿಸಿಕೊಳ್ಳುತ್ತಾ ತೆರೆಯ ಮೇಲೆ ಬರುವ ನನ್ನನ್ನು ನೋಡಿ ಸಿಳ್ಳೆಗಳ ಸುರಿಮಳೆ ಬೀಳಬೇಕು. ಅದೇ ಉತ್ಸಾಹದಲ್ಲಿ ಜನಪ್ರಿಯ ನಾಯಕಿಯಾಗಬೇಕು...
ಹೀಗೆ ಹತ್ತಾರು ಬಗೆಯಲ್ಲಿ ವಿವಿಧ ಕ್ಷೇತ್ರಗಳ ಕನಸಿನ ಬುಟ್ಟಿ ಹೆಣೆದ ಅದೆಷ್ಟೋ ಕಂಗಳಿವೆ.

ಸಂಪ್ರದಾಯದ ಚೌಕಟ್ಟಿನಲ್ಲಿ ಮನೆಯವರ ವಿರೋಧ ಕಟ್ಟಿಕೊಳ್ಳಲಾರದೆ ಆಸೆ ಹತ್ತಿಕ್ಕಿ ಹೊಸ ಬದುಕಿಗೆ ಒಗ್ಗಿಸಿಕೊಂಡವರೂ ಇದ್ದಾರೆ. ಈಗ ಕಾಲ ಬದಲಾಗಿದೆ. ಆ ಕಾಲ, ಈ ಕಾಲದ ವೈರುಧ್ಯಗಳಲ್ಲಿ ಹೆಣ್ಣಿನ ಆಸೆ, ಕನಸು, ಯೋಚನೆ, ಪಾತ್ರಗಳು ಬದಲಾಗಿವೆ.

ಸೆಪ್ಟೆಂಬರ್‌ 4ನೇ ಭಾನುವಾರ ‘ಮಗಳ ದಿನ’. ಇದೇ ಹಿನ್ನೆಲೆಯಲ್ಲಿ ಒಂದೇ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಮ್ಮ–ಮಗಳ ಭಾವನೆಗಳನ್ನು ಕೆದಕಿದಾಗ ಮಾತು ಹೊಮ್ಮಿತು. ಮಗಳಾಗಿ ಕಲೆ ಆಶ್ರಯಿಸಲು ಪಟ್ಟ ಕಷ್ಟ ಹಾಗೂ ತಾಯಿಯಾಗಿ ಮಕ್ಕಳ ಸಿನಿ ಬದುಕಿಗೆ ಬೆನ್ನೆಲುಬಾದ ಸಂತೋಷಗಳ ಬಗ್ಗೆ ನಟಿ ಪ್ರಮೀಳಾ ಜೋಷಾಯ್‌ ಹಾಗೂ ಅವರ ಮಗಳು ಮೇಘನಾ ರಾಜ್‌ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ...

ಹೆಚ್ಚು ತಿಳಿದ ಮಗಳು
ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಡಬೇಕು ಎಂದುಕೊಂಡ ದಿನಗಳಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಡಬಾರದು, ನಟನೆ ಹೆಣ್ಣಿಗೆ ನಿಷಿದ್ಧ ಎಂಬಂಥ ಭಾವನೆ ಇದ್ದ ಕಾಲ. ನಮ್ಮ ಮನೆಯಲ್ಲೂ ಇದೇ ವಾತಾವರಣ. ಅಮ್ಮನದ್ದೂ ಸಾಕಷ್ಟು ವಿರೋಧವಿತ್ತು. ಆದರೆ ನನಗೆ ಅಭಿನೇತ್ರಿಯಾಗಬೇಕೆಂಬ ಬಯಕೆ. ನನ್ನ ಇಷ್ಟಕ್ಕೆ ಬೆಂಬಲಿಸುವವರು ಯಾರೂ ಇರಲಿಲ್ಲ.

ಹೀಗಾಗಿ ಸಿನಿಮಾ ಕ್ಷೇತ್ರದ ಬಗೆಗಿನ ಆತಂಕ ನಿವಾರಿಸಿ ಅವರನ್ನು ಒಪ್ಪಿಸಬೇಕಾದರೆ ತುಂಬಾ ಕಷ್ಟವಾಯಿತು. ಅಪ್ಪ ಅಮ್ಮನ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಪೆಟ್ಟು ತಿಂದು ಸಿನಿಮಾ ಕ್ಷೇತ್ರ ಪ್ರವೇಶಿಸಿದವಳು ನಾನು.

ಆದರೆ ಇಂದಿಗೆ ಕಾಲ ಬದಲಾಗಿದೆ. ಮಗಳಾಗಿ ಅಮ್ಮನಲ್ಲಿ ಕಲೆಗಾಗಿ ಗೋಗರೆದಿದ್ದೆ. ಈಗ ನನ್ನ ಮಗಳಿಗೆ ಕಿವಿಮಾತು ಹೇಳುತ್ತೇನೆ. ಆಕೆ ಚಿಕ್ಕವಳಿದ್ದಾಗ ಶೂಟಿಂಗ್‌ ನಡೆಯುತ್ತಿದ್ದಲ್ಲೆಲ್ಲಾ ಬಂದು ಕೂರುತ್ತಿದ್ದಳು. ನಾನು ಮೇಕಪ್‌ ಮಾಡಿಕೊಂಡದ್ದನ್ನು ನೋಡಿ ಆಕೆಯೂ ಬಣ್ಣ ಹಚ್ಚಿಕೊಳ್ಳುತ್ತಿದ್ದಳು. ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿಕೊಂಡು ಆಕೆ ಸಂತೋಷಪಡುತ್ತಿದ್ದಳು. ಅವಳ ಆಸೆಯನ್ನು ನಾನು ಪ್ರೋತ್ಸಾಹಿಸಿದೆ. ಸಿನಿಮಾ ಕ್ಷೇತ್ರದ ಬಗ್ಗೆ ಆಕೆ ಎಲ್ಲವನ್ನೂ ತಿಳಿದೇ ಹೆಜ್ಜೆ ಇಟ್ಟಿದ್ದಾಳೆ. ಇಂದಿನ ತಲೆಮಾರಿನವರಿಗೆ ತಿಳುವಳಿಕೆ ಹೆಚ್ಚಿರುತ್ತದೆ. ಹೀಗಾಗಿ ಮಗಳಾಗಿ ನಾನು ಇಷ್ಟ ಪಟ್ಟ ಕ್ಷೇತ್ರವನ್ನು ಅವಳೂ ಸೇರುತ್ತೇನೆ ಎಂದಾಗ ಒಪ್ಪಿಕೊಂಡೆ. ನನಗಿಂತ ಆಕೆ ಹೆಚ್ಚು ತಿಳಿದುಕೊಂಡಿದ್ದಾಳೆ.
–ಪ್ರಮೀಳಾ ಜೋಷಾಯ್‌, ನಟಿ

ಅಮ್ಮ ಮರ, ನಾನು ಮರಿಗುಬ್ಬಿ

ಅಭಿನೇತ್ರಿಯ ಮಗಳು ಎಂದಾಗ ನಟನಾ ಕ್ಷೇತ್ರಕ್ಕೆ ಬರುತ್ತಾಳೆ ಎಂಬ ನಿರೀಕ್ಷೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇನ್ನೊಬ್ಬರ ನಿರೀಕ್ಷೆಗಿಂತ ನನಗೇ ಚಿಕ್ಕಂದಿನಿಂದ ಈ ಕ್ಷೇತ್ರದ ಬಗ್ಗೆ ಪ್ರೀತಿ ಬೆಳೆದುಬಿಟ್ಟಿತ್ತು. ಶಾಲಾ ಕಾಲೇಜು ದಿನಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ನಾನು ಹೆಚ್ಚು ಒಲವು ತೋರುತ್ತಿದ್ದೆ. ಆದರೆ ಶಿಕ್ಷಣ ಪಡೆಯುತ್ತಿದ್ದಂತೆ ನಾನು ವೈದ್ಯೆ ಇಲ್ಲವೇ ಸೈನಿಕಳಾಗಬೇಕು ಎಂಬ ಕನಸು ಕಾಣಲು ಪ್ರಾರಂಭಿಸಿದೆ. ಆದರೂ ಒಂದಲ್ಲಾ ಒಂದು ದಿನ ಅಭಿನಯಿಸುತ್ತೇನೆ ಎಂಬ ನಂಬಿಕೆ ಇತ್ತು. ಒಮ್ಮೆಲೇ ತಮಿಳು ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಒಪ್ಪಿಕೊಂಡೆ. ನಾನು ಏನೇ ಮಾಡಲಿ; ಅಲ್ಲಿ ಅಮ್ಮನ ಬೆಂಬಲ, ಪ್ರೋತ್ಸಾಹ, ಕಿವಿಮಾತು ಎಲ್ಲವೂ ಇರುತ್ತದೆ.

ಕುಟುಂಬದಲ್ಲಿ ಎಲ್ಲರೂ ಕಲಾವಿದರೇ ಆದ್ದರಿಂದ ಸಿನಿಮಾ ಬಗ್ಗೆ ಚರ್ಚೆ, ವೃತ್ತಿಪರತೆಯನ್ನು ಉತ್ತಮಪಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತೇವೆ. ನನ್ನ ಪ್ರತಿದಿನದ ಆಗುಹೋಗುಗಳನ್ನು ಅಮ್ಮನಲ್ಲಿ ಹೇಳಿಕೊಳ್ಳುತ್ತೇನೆ. ಇದು ಸ್ನೇಹಕ್ಕೂ ಮಿಗಿಲಾಗಿದ್ದು. ಅಮ್ಮ, ಅಮ್ಮನಂತೆಯೇ ವಿಶಾಲ ಮರ. ನಾನು ಮರಿಗುಬ್ಬಿ.  ಪಕ್ಕಾ ಅಮ್ಮಾ ಮಗಳ ಬಾಂಧವ್ಯ.

ಎಷ್ಟೋ ಬಾರಿ ನಾನು ಅಮ್ಮ ಹೇಳಿದ ಮಾತು ಕೇಳದೆ ನಿರ್ಲಕ್ಷಿಸಿದ್ದಿದೆ. ಆದರೆ ಘಟನೆಗಳು ನಡೆದಾಗ ಅಮ್ಮ ಹೇಳಿದ ಕಿವಿಮಾತು, ಸಂದೇಶ ನಿಜವಾಗಿರುತ್ತಿತ್ತು. ಆಗೆಲ್ಲಾ ಅವಳ ಬಗ್ಗೆ ನಾನು ತುಂಬಾ ಹೆಮ್ಮೆ ಪಟ್ಟಿದ್ದೇನೆ. ನನ್ನ ಪ್ರತಿ ಆಯ್ಕೆ, ನಿರ್ಧಾರ, ಯಶಸ್ಸುಗಳ ಹಿಂದೆ ಅಮ್ಮ ಇದ್ದಾರೆ. ಮಗಳಾಗಿ ಅವರ ಆಸೆಗಳನ್ನು ಪೂರೈಸುತ್ತಿದ್ದೇನೆ ಎಂಬ ತೃಪ್ತಿಯೂ ಇದೆ.
–ಮೇಘನಾ ರಾಜ್‌. ನಟಿ

ಚಿತ್ರ: ಡಿ.ಸಿ.ನಾಗೇಶ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT