ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ! ಓ! ಝೂ!

Last Updated 12 ನವೆಂಬರ್ 2011, 19:30 IST
ಅಕ್ಷರ ಗಾತ್ರ

`ಓ.. ಓ.. ಹೋ.. ಅಲ್ನೋಡು, ಹುಲಿ ಹೋಗ್ತಾ ಇದೆ! ನೀರ‌್ಗೆ ಜಂಪ್ ಮಾಡ್ತು. ಈಗ ಏನ್ ಮಾಡುತ್ತೆ~- ಹೆಗಲ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ ನಾಲ್ಕು ವರ್ಷದ ಮೊಮ್ಮಗಳು ಕೇಳಿದಳು. ತಾತನಿಗೆ ಸ್ವರ್ಗಕ್ಕೆ ಮೂರೇಗೇಣು. ಏಕೆಂದರೆ ಮೊಮ್ಮಗಳು ಹುಲಿಯನ್ನು ಗುರುತಿಸಿದ್ದಳು. ಇದರಿಂದ ಖುಷಿಯಾದ ಅವರು, `ಹುಲಿ ಈಗ ಈಜಾಡುತ್ತೆ~ ಎಂದರು.

`ಅದ್ಸರಿ, ಊಟ ಏನ್ ಮಾಡುತ್ತೆ?~- ಪುಟಾಣಿಯದು ಮುಗ್ಧ ಪ್ರಶ್ನೆ. `ಅದು ದನದ ಮಾಂಸ ತಿನ್ನುತ್ತೆ. ಆಮೇಲೆ ಇದೇ ಹೊಂಡದಲ್ಲಿ ನೀರು ಕುಡಿಯುತ್ತೆ. ಖುಷಿಯಾದರೆ ಮರ ಏರಿ ಜಂಪ್ ಮಾಡುತ್ತೆ~ ಎಂದು ಅಜ್ಜ ಉತ್ಸಾಹದಿಂದಲೇ ವಿವರಿಸುತ್ತಿದ್ದರು. `ಅದ್ರ ಮನೆ ಎಲ್ಲಿದೆ ತಾತಾ?~ ಮತ್ತೊಂದು ಪ್ರಶ್ನೆ ಮೊಮ್ಮಗಳಿಂದ. `ಅಲ್ಲಿ ಕಾಣ್ತಾ ಇದೆ ನೋಡು, ಅದೇ ಹುಲಿ ಮನೆ. ಅದಕ್ಕೆ ಗುಹೆ ಅಂತಾರೆ~. ಹೀಗೆ ಬೆಂಗಳೂರಿನ ಆರ್.ವಿ.ಯಾದವ್ ಮತ್ತು ಅವರ ಮೊಮ್ಮಗಳ ಪ್ರಶ್ನೋತ್ತರ ನಡೆಯುತ್ತಲೇ ಇತ್ತು.

`ನಮ್ಮ ಸುತ್ತಮುತ್ತ ಸಾಕುಪ್ರಾಣಿಗಳು ಸುಲಭವಾಗಿ ಸಿಗುತ್ತವೆ. ಅವುಗಳ ಚಲನವಲನ, ಕೂಗು ಎಲ್ಲವನ್ನು ಮಕ್ಕಳು ಹತ್ತಿರದಿಂದ ನೋಡಿ ತಿಳಿಯುತ್ತವೆ. ಆದರೆ ಕಾಡುಪ್ರಾಣಿಗಳು ಸುಲಭಕ್ಕೆ ಸಿಗುವುದಿಲ್ಲ. ಮನೆಯಲ್ಲಿ ಕುಳಿತರೆ ಅವುಗಳನ್ನು ನೋಡಲು ಆಗುವುದಿಲ್ಲ. ಇದಕ್ಕೆ ಸೂಕ್ತ ಜಾಗ ಮೃಗಾಲಯ. ನನ್ನ ಮಗನನ್ನು ಮೊದಲ ಬಾರಿ ಮೃಗಾಲಯಕ್ಕೆ ಕರೆದುಕೊಂಡು ಹೋದಾಗ ತುಂಬಾ ಖುಷಿಪಟ್ಟಿದ್ದ~ ಎನ್ನುವ ಎನ್.ಲತಾ ಅವರ ಮಾತು, `ಮೃಗಾಲಯ~ದ ಅನನ್ಯತೆಗೆ ಕನ್ನಡಿ ಹಿಡಿಯುತ್ತದೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಸುತ್ತು ಹಾಕಿದರೆ ಇಂತಹ ದೃಶ್ಯಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಮೃಗಾಲಯ ಎಂದರೆ ಪ್ರಾಣಿ, ಪಕ್ಷಿಗಳಿರುವ ತಾಣ. ಇದು ಮಕ್ಕಳ ಪ್ರೀತಿಯ ತಾಣ. ಆದ್ದರಿಂದಲೇ ಮೃಗಾಲಯದಲ್ಲಿ ಹೆಚ್ಚಿನ ಮಕ್ಕಳು ಕಾಣಿಸುತ್ತವೆ. ಪುಟಾಣಿಗಳು ತೊದಲು ನುಡಿಯಲ್ಲಿ ತಮಗೆ ಗೊತ್ತಿರುವ ಗಿಳಿ, ಪಾರಿವಾಳ, ಬಾತುಕೋಳಿ, ಕೊಕ್ಕರೆ, ಹುಲಿ, ಸಿಂಹ, ಕೋತಿಗಳನ್ನು ಕಂಡು ಕುಣಿದು ಕುಪ್ಪಳಿಸುತ್ತವೆ. ಏಳೆಂಟು ವರ್ಷ ದಾಟಿರುವ ಮಕ್ಕಳು ಹೆಚ್ಚಾಗಿ ಹುಲಿ, ಸಿಂಹ, ಚಿರತೆ, ಕಾಳಿಂಗ ಸರ್ಪ, ಹೆಬ್ಬಾವು, ಕಾಡೆಮ್ಮೆ, ಕಾಡುಕೋಣ, ಜಿರಾಫೆ, ಮೊಸಳೆ, ನೀರಾನೆ, ಆನೆ, ಕರಡಿ, ಚಿಂಪಾಜಿಗಳನ್ನು ನೋಡಿ ಆನಂದಿಸುತ್ತವೆ.

119 ವರ್ಷಗಳಷ್ಟು ಹಳೆಯದಾದ ದೇಶದ ಹೆಸರಾಂತ ಮೃಗಾಲಯ ಇದಾಗಿದೆ. ಇಲ್ಲಿ 170 ಪ್ರಭೇದಗಳ 1400ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳು ಇವೆ. ಲವ್ ಬರ್ಡ್ಸ್, ಗಿಳಿಗಳು, ಪಾರಿವಾಳಗಳ ಸಂಖ್ಯೆ 500ಕ್ಕೂ ಹೆಚ್ಚಿವೆ. ಅಷ್ಟನ್ನೂ ಲೆಕ್ಕ ಹಿಡಿದರೆ ಇಲ್ಲಿನ ಜೀವಿಗಳ ಸಂಖ್ಯೆ 2 ಸಾವಿರ ದಾಟುತ್ತದೆ. ಇಷ್ಟೊಂದು ಪ್ರಾಣಿ, ಪಕ್ಷಿ ದೇಶದ ಯಾವ ಮೃಗಾಲಯದಲ್ಲಿಯೂ ಇಲ್ಲ.

ಮೃಗಾಲಯ ಪ್ರಾಣಿ ಮತ್ತು ಪಕ್ಷಿ ಸಂಕುಲ ಕುರಿತು ಮಕ್ಕಳಿಗೆ ಪ್ರೀತಿ ಮತ್ತು ಅರಿವು ಮೂಡಿಸಲು ಹೇಳಿ ಮಾಡಿಸಿದಂತಹ ಜಾಗ ಮೈಸೂರಿನ ಚಾಮರಾಜೇಂದ್ರ ಮೃಗಾಲಯ. ಮಕ್ಕಳು ಬಾಲ್ಯದಲ್ಲಿ ಪುಸ್ತಕ, ಚಿತ್ರಪಟಗಳಲ್ಲಿನ ಕಾಡುಪ್ರಾಣಿ, ಪಕ್ಷಿಗಳನ್ನು ನೋಡುತ್ತವೆ. ಆದರೆ ಅವುಗಳಿಗೆ ಜೀವ ಇರುವುದಿಲ್ಲ. ಅವುಗಳು ಕೂಗುವುದಿಲ್ಲ, ಕೋಪಗೊಳ್ಳುವುದಿಲ್ಲ, ನೀರಿಗೆ  ಜಿಗಿಯುವುದಿಲ್ಲ, ಗುಟುರು ಹಾಕುವುದಿಲ್ಲ, ಹಾರುವುದಿಲ್ಲ, ಕುಟುಕುವುದಿಲ್ಲ, ಆಹಾರ ತಿನ್ನುವುದಿಲ್ಲ, ನವಿಲು ಬಣ್ಣ ಬಣ್ಣದ ಗರಿಬಿಚ್ಚಿ ನಲಿಯುವುದಿಲ್ಲ, ಸರ್ಪ ಭುಸ್ ಎನ್ನುವುದಿಲ್ಲ...

ಪುಸ್ತಕದಲ್ಲಿರುವುದು ಬರೀ ಚಿತ್ರಗಳು ಅಷ್ಟೇ. ಮಕ್ಕಳು ಪಠ್ಯಪುಸ್ತಕದಲ್ಲಿ ಒಂದಿಷ್ಟು ಪ್ರಾಣಿ, ಪಕ್ಷಿಗಳ ಬಗ್ಗೆ ಓದಿರುತ್ತಾರೆ. ಆದರೆ ಅವುಗಳನ್ನು ನೋಡಿರುವುದಿಲ್ಲ. ಅಂಥವರು ಮೃಗಾಲಯದಲ್ಲಿ ತಮ್ಮ ಇಷ್ಟವಾದ ಕೋತಿ, ಸಿಂಗಳೀಕ, ಚಿಂಪಾಜಿಗಳ ಚಿನ್ನಾಟವನ್ನು ನೋಡಿ ಸಂಭ್ರಮಿಸುತ್ತಾರೆ. ಅವುಗಳನ್ನು ಚುಡಾಯಿಸಿ ಚಪ್ಪಾಳೆ ತಟ್ಟಿ ಕರೆಯುತ್ತಾರೆ. ಅವುಗಳು ಮರವೇರಿ ಕೊಂಬೆಯನ್ನು ಜಗ್ಗುವುದನ್ನು ಕಂಡು ಕೇಕೆ ಹಾಕಿ ಆನಂದಿಸುತ್ತಾರೆ.
ಚಿತ್ರಗಳು: ಎಚ್.ಜಿ.ಪ್ರಶಾಂತ್
 

ನೂರು ಎಕರೆಯ ಮೃಗಾಲಯ

ಮೈಸೂರಿನಲ್ಲಿ ಮೃಗಾಲಯವನ್ನು ಚಾಮರಾಜೇಂದ್ರ ಒಡೆಯರ್ 1892ರಲ್ಲಿ ಆರಂಭಿಸಿದರು. ಆದ್ದರಿಂದ ಇದಕ್ಕೆ ಅವರ ಹೆಸರನ್ನೇ ಇಡಲಾಗಿದೆ. 4 ಕಿ.ಮೀ. ಸುತ್ತಳತೆಯ ಇದರ ಒಟ್ಟು ವಿಸ್ತೀರ್ಣ 100 ಎಕರೆ. ಪ್ರವೇಶ ದರ ವಯಸ್ಕರಿಗೆ ರೂ. 40, ಮಕ್ಕಳಿಗೆ (5 ರಿಂದ 12 ವರ್ಷ) ರೂ.20, ಗುಂಪಿನಲ್ಲಿ ಬರುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದ ರೂ. 10ರ ಟಿಕೇಟು. ಬೆಳಿಗ್ಗೆ 9ರಿಂದ ಸಂಜೆ 5.30ರ ತನಕ ಮೃಗಾಲಯದ ತೆರೆದಿರುತ್ತದೆ.

ದೇಶದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಮೃಗಾಲಯ ಇದಾಗಿದೆ. ಇಲ್ಲಿಗೆ ವರ್ಷಕ್ಕೆ ಸರಾಸರಿ 25 ಲಕ್ಷ ಮಂದಿ ಭೇಟಿ ಕೊಡುತ್ತಾರೆ. ಇವರಲ್ಲಿ ಶೇಕಡಾ 35ರಿಂದ 40ರಷ್ಟು ಮಕ್ಕಳು ಇರುತ್ತವೆ. ಪ್ರತಿದಿನ 3-4 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ.
`ನಮ್ಮಲ್ಲಿ ಹೊಸದಾಗಿ ಜರ್ಮನ್‌ನಿಂದ ನಾಲ್ಕು ಆಫ್ರಿಕನ್ ಹಂಟಿಂಗ್ ಚೀತಾಗಳನ್ನು ತರಿಸಲಾಗಿದೆ. ಏಷಿಯಾಟಿಕ್ ಹುಲಿ, ಚೆನ್ನೈನ ಕ್ರಾಕಡೈಲ್ ಪಾರ್ಕ್‌ನಿಂದ ಐದು ಮೊಸಳೆಗಳು ಸೇರಿದಂತೆ ಕೆಲವು ಹೊಸ ಪ್ರಾಣಿಗಳನ್ನು ತರಿಸಲಾಗಿದೆ. ಇವುಗಳು ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತವೆ~ ಎನ್ನುತ್ತಾರೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT