ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಕನಸು ಹಾಗೇ ಉಳಿದಿದೆ!

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಾಲು ಸಾಲು ದಾಖಲೆಗಳು ಎದುರಿಗಿವೆ. ರಾಶಿ ರಾಶಿ ರನ್‌ಗಳ ಗೋಪುರ ಕಟ್ಟಿದ್ದಾರೆ. ಪ್ರಶಸ್ತಿ, ಸನ್ಮಾನ, ಬಹುಮಾನ, ಹೊಗಳಿಕೆಗೆ ಲೆಕ್ಕವಿಲ್ಲ. ವಿಶ್ವದ ಮೂಲೆಮೂಲೆಗಳಲ್ಲಿ ಅಭಿಮಾನಿಗಳಿದ್ದಾರೆ. ಕ್ರಿಕೆಟ್ ದುನಿಯಾದಲ್ಲಿ ಎರಡು ದಶಕಗಳ ಅನುಭವವಿದೆ. ಆದರೂ ವಿಶ್ವ ಕ್ರಿಕೆಟ್ ಸಾಮ್ರಾಟನ ಆ ಒಂದು ಕನಸು, ಆ ಆಸೆ ಇದುವರೆಗೆ ಈಡೇರಿಲ್ಲ. ಅದು ಏಕದಿನ ವಿಶ್ವಕಪ್ ಕಿರೀಟ! ವಿಶ್ವ ಕ್ರಿಕೆಟ್ ಒಡೆಯ ಸಚಿನ್ ತೆಂಡೂಲ್ಕರ್ ಇದುವರೆಗೆ ಐದು ವಿಶ್ವ ಕಪ್ ಚಾಂಪಿಯನ್‌ಷಿಪ್‌ಗಳಲ್ಲಿ ಆಡಿ ದ್ದರೂ ಯಶಸ್ಸು ಕಂಡಿಲ್ಲ. ಆ ಕೊರಗು ಅವರಲ್ಲಿ ಹಾಗೇ ಉಳಿದಿದೆ. ಪದೇಪದೇ ಆ ಕನಸನ್ನು ಬಿಚ್ಚಿಡುತ್ತಲೇ ಇದ್ದಾರೆ.

‘ಕಪಿಲ್‌ದೇವ್ ಲಾರ್ಡ್ಸ್ ಅಂಗಳ ದಲ್ಲಿ 1983ರ ವಿಶ್ವಕಪ್ ಎತ್ತಿ ಹಿಡಿ ದಾಗ ನಾನು ಕ್ರಿಕೆಟ್ ಆಡಲು ಶುರು ಮಾಡಿದ್ದೆ. ಹತ್ತನೇ ವಯಸ್ಸಿನಿಂದಲೇ ವಿಶ್ವಕಪ್ ಗೆಲ್ಲಬೇಕೆಂಬ ಕನಸು ಶುರುವಾಯಿತು’ ಎನ್ನುತ್ತಾರೆ ತೆಂಡೂಲ್ಕರ್. ಉಪಖಂಡದಲ್ಲಿ ನಡೆಯಲಿರುವ ‘ಹತ್ತನೇ ವಿಶ್ವಕಪ್’ ಮತ್ತೊಂದು ಅವಕಾಶದ ಬಾಗಿಲು ತೆರೆದಿಟ್ಟಿದೆ. ಬ್ಯಾಟಿಂಗ್ ಚಾಂಪಿಯನ್ ತೆಂಡೂಲ್ಕರ್‌ಗೆ ಇದು ಬಹುತೇಕ ಕೊನೆಯ ವಿಶ್ವಕಪ್. ಹಾಗಾಗಿ ಸಹ ಆಟಗಾರರು ಕೂಡ ಸಚಿನ್‌ಗೆ ದೊಡ್ಡ ಉಡುಗೊರೆ ನೀಡಲು ಸನ್ನದ್ಧರಾಗುತ್ತಿದ್ದಾರೆ. ದೋನಿ, ಗಂಭೀರ್, ಕೊಹ್ಲಿ ತಮ್ಮ ಆ ಭಾವನೆಯನ್ನು ಬಿಚ್ಚಿಟ್ಟಿದ್ದಾರೆ. ವಿಶೇಷವೆಂದರೆ ಏಪ್ರಿಲ್ ಎರಡರಂದು ಫೈನಲ್ ಪಂದ್ಯ ತೆಂಡೂಲ್ಕರ್ ಹುಟ್ಟೂರು ಮುಂಬೈನಲ್ಲಿಯೇ ನಡೆಯುತ್ತಿದೆ. ಭಾರತ ಫೈನಲ್ ಪ್ರವೇಶಿಸಿದರೆ ಆ ಸಡಗರದ ಮಜವೇ ವಿಭಿನ್ನ!

ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್‌ನಲ್ಲಿ ಸಚಿನ್ ಆಸೆ ಈಡೇರುವ ಕ್ಷಣ ಬಂದಿತ್ತು. ಕಾರಣ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ಆಸ್ಟ್ರೇಲಿಯಾ ಎದುರಿನ ಆ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಮೊದಲ ಓವರ್‌ನಲ್ಲಿಯೇ ಮೆಕ್‌ಗ್ರಾಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಆ ಆಸೆಗೆ ತೆರೆ ಬಿದ್ದಿತ್ತು. ಉಪಖಂಡದಲ್ಲಿ ನಡೆದ 1996ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೂಡ ಸಚಿನ್ ಆಸೆ ಅಸ್ತಮಿಸಿತ್ತು. ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಯಾರು ಎಂಬ ಪೈಪೋಟಿಯಲ್ಲಿ ತೆಂಡೂಲ್ಕರ್ ಜೊತೆ ಸ್ಪರ್ಧೆಗೆ ನಿಲ್ಲುವ ರಿಕಿ ಪಾಂಟಿಂಗ್ ಮಡಿಲಲ್ಲಿ ಮೂರು ವಿಶ್ವಕಪ್‌ಗಳಿವೆ. ಭಾರತದ ಆಟಗಾರನ ಮಡಿಲು ಖಾಲಿ ಖಾಲಿ! ಆದರೂ ಈ ಚಾಂಪಿಯನ್ ಬ್ಯಾಟ್ಸ್‌ಮನ್ ವಿಶ್ವಕಪ್‌ನಲ್ಲಿ ದಾಖಲೆಗಳ ರಾಶಿಯನ್ನೇ ಜೋಡಿಸಿಟ್ಟಿದ್ದಾರೆ.

ವಿಶ್ವಕಪ್ ಟೂರ್ನಿಗಳಲ್ಲಿ ಸಚಿನ್ 36 ಪಂದ್ಯಗಳಿಂದ 57.93 ಸರಾಸರಿಯಲ್ಲಿ ಒಟ್ಟು 1796 ರನ್ ಗಳಿಸಿದ್ದಾರೆ. ಅತಿ ಹೆಚ್ಚು ಬಾರಿ ‘ಪಂದ್ಯ ಪುರುಷೋತ್ತಮ’ ಎನಿಸಿದ್ದಾರೆ. 2003ರ ವಿಶ್ವಕಪ್‌ನಲ್ಲಿ 11 ಪಂದ್ಯಗಳಿಂದ 673 ರನ್ ಕಲೆ ಹಾಕಿದ್ದರು. ಅದೇ ವಿಶ್ವಕಪ್‌ನಲ್ಲಿ ‘ಟೂರ್ನಿ ಶ್ರೇಷ್ಠ’ ಕೂಡ. 1996ರ ವಿಶ್ವಕಪ್‌ನಲ್ಲೂ ಅತಿ ಹೆಚ್ಚು ರನ್ ಪೇರಿಸಿದ ಆಟಗಾರ. 87.16 ಸರಾಸರಿಯಲ್ಲಿ 523 ರನ್ ಗಳಿಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ 2003ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶೋಯಬ್ ಅಖ್ತರ್ ಎಸೆತದಲ್ಲಿ ಸಚಿನ್ ಎತ್ತಿದ ಸಿಕ್ಸರ್ ಮತ್ತೆ ಮತ್ತೆ ನೆನಪಾಗುತ್ತದೆ! ‘ವಿಶ್ವಕಪ್ ಗೆಲ್ಲುವವರೆಗೆ ಸಚಿನ್ ನಿವೃತ್ತರಾಗಲಾರರು’ ಎಂದು 1983ರ ಹೀರೊ ಕಪಿಲ್ ದೇವ್ ನುಡಿದಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನತ್ತ ತೋರಿಸುತ್ತಿರುವ ಆಸಕ್ತಿ ಗಮನಿಸಿದರೆ ಅವರು ಮತ್ತೊಂದು ವಿಶ್ವಕಪ್ ಆಡಲಾರರು. ಜೊತೆಗೆ ಅಷ್ಟರ ವೇಳೆಗೆ ಅವರ ವಯಸ್ಸು 42 ಆಗಲಿದೆ. ಈಗಲೇ ಮುಂಬೈಕರ್ ಟೆಸ್ಟ್‌ನತ್ತ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು 2010ರಲ್ಲಿ ಕಡಿಮೆ ಏಕದಿನ ಪಂದ್ಯ ಆಡಿದ್ದು. ಈ ಬಾರಿಯ ವಿಶ್ವಕಪ್‌ನಲ್ಲಿ ಆಡಬೇಕು ಎಂಬ ಉದ್ದೇಶದಿಂದಲೇ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಆದರೂ ದಕ್ಷಿಣ ಆಫ್ರಿಕಾ ಎದುರಿನ ಸರಣಿ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದರು. ಅದೇನು ಅಷ್ಟು ದೊಡ್ಡ ಸಮಸ್ಯೆ ಅಲ್ಲ ಬಿಡಿ. ನಿಜ,

ವಿಶ್ವಕಪ್ ಎಂಬುದು ಸಚಿನ್‌ಗೆ ಮಾತ್ರವಲ್ಲ; ಇಡೀ ಭಾರತ ತಂಡ ಹಾಗೂ ಅದರ ಅಭಿಮಾನಿಗಳಿಗೆ ಬಹುಮುಖ್ಯವಾದ ಟೂರ್ನಿ. ಇದೇ ಮಾತನ್ನು ಸಚಿನ್ ಕೂಡ ಹೇಳಿದ್ದಾರೆ. ‘ಇದು ಕೇವಲ ನನ್ನ ಹಾಗೂ ತಂಡದ ಕನಸಲ್ಲ. ಇಡೀ ದೇಶದ ಜನತೆ ಆ ಕ್ಷಣಕ್ಕಾಗಿ ಕಾತರವಾಗಿದೆ. ಅದರಲ್ಲೂ ಪ್ರೀತಿಯ ಅಭಿಮಾನಿಗಳ ಎದುರು ಮುಂಬೈನಲ್ಲಿ ಫೈನಲ್ ಪಂದ್ಯ ಆಡಲು ಅವಕಾಶ ಲಭಿಸಿದರೆ ಅದಕ್ಕಿಂತ ಆನಂದ ಮತ್ತೊಂದಿಲ್ಲ’ ಎಂದಿದ್ದಾರೆ. ಏನೇ ಇರಲಿ, ಎರಡು ವರ್ಷಗಳಿಂದ ಭಾರತ ತಂಡ ಕೋಚ್ ಗ್ಯಾರಿ ಕರ್ಸ್ಟನ್ ಅವರ ಮಾರ್ಗದರ್ಶನದಲ್ಲಿ ಫಾರ್ಮ್‌ನ ಉತ್ತುಂಗದಲ್ಲಿದೆ. ಟೆಸ್ಟ್‌ನಲ್ಲಿ ಅಗ್ರಸ್ಥಾನ ತಲುಪಿದೆ. ಏಕದಿನ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಾಗಿಯೇ ಎಲ್ಲರ ಫೇವರಿಟ್ ಎನಿಸಿದೆ. ಅಭಿಮಾನಿಗಳ ಬೆಂಬಲ, ಉಪಖಂಡದ ವಾತಾವರಣ, ಇಲ್ಲಿನ ಪಿಚ್‌ಗಳ ಗುಟ್ಟು ನೆರವಿಗೆ ಬರಬಹುದು. ಆದರೆ ಇದು ಕ್ರಿಕೆಟ್... ಏನೂ ಆಗಬಹುದು. 1996ರಲ್ಲಿ ಕೋಲ್ಕತ್ತದಲ್ಲಿ ನಡೆದ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿನೋದ್ ಕಾಂಬ್ಳಿ ಅಳುತ್ತಾ ಬಂದ ಕ್ಷಣ ಇನ್ನೂ ತಾಜಾವಾಗಿದೆ! ಆದರೂ ಭರವಸೆ ಇದೆ. ಕುತೂಹಲವಿದೆ.

ಸಚಿನ್ ಈ ಬಾರಿಯಾದರೂ ವಿಶ್ವಕಪ್ ಎತ್ತಿ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಆ ಕ್ಷಣವನ್ನು ಎದುರು ನೋಡುತ್ತಾ...! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT