ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಕಾಲುಗಳು

ಒಡಲ ದನಿ
Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಆ ಹುಡುಗಿ ಯಾರು, ಯಾವ ಶಾಲೆ, ಎಲ್ಲಿ ಅವಳ ಮನೆ... ಇವೆಲ್ಲ ನನಗೆ ಬೇಕಿರಲಿಲ್ಲ. ಅದನ್ನೆಲ್ಲ ತಿಳಿದುಕೊಳ್ಳುವಷ್ಟು ಅಗತ್ಯವಾಗಲಿ, ಕೂತೂಹಲವಾಗಲಿ, ವ್ಯವಧಾನವಾಗಲಿ ನನಗಿರಲಿಲ್ಲ. ಪ್ರತಿ ದಿನ ನಾನು ಹೋಗುತ್ತಿದ್ದ ಬಸ್‌ಸ್ಟಾಪಿಗೆ ಅವಳು ಬರುತ್ತಿದ್ದರೂ ಮೊದಲು ನಾನು ಅವಳನ್ನು ಹೆಚ್ಚಾಗಿ ಗಮನಿಸಿರಲಿಲ್ಲ.

ಆ ದಿನ ಕಳೆದ ಮೂರು ದಿನಗಳಿಂದ ಹಗಲೂ ರಾತ್ರಿ ಒಂದೇ ಸಮನೆ ಬಿಡದೇ ಹೊಯ್ದ ಮಳೆಯಿಂದ ನೆಲವೆಲ್ಲ ತೋಯ್ದು, ಕಾಲಿಟ್ಟರೆ ಹೂತು ಹೋಗೋ ಹಾಗಿತ್ತು. ನಮ್ಮ ಮನೆಯಿಂದ ಬಸ್‌ಸ್ಟಾಪಿನ ದಾರಿ ಟಾರಿಲ್ಲದ ಮಣ್ಣಿನ ರಸ್ತೆಯಾಗಿದ್ದರಿಂದ ನಡೆಯುವುದೇ ಕಷ್ಟ. ನಾನು ನೆಲವನ್ನೇ ನೋಡುತ್ತಾ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದೆ. ನನ್ನ ಕಡೆಗೆ ಎದುರಿನಿಂದ ಎರಡು ಬರಿದೇ ಪಾದಗಳು ಮಣ್ಣಿನ ರಾಡಿಯಲ್ಲಿ ಮಿಂದು ಬರುತ್ತಿದ್ದವು. ಕಾಲ ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ಸುತ್ತಮುತ್ತಲ ತರತರಹದ ಚಪ್ಪಲಿ, ಶೂಗಳ ನಡುವೆ ಈ ಬರಿದಾದ ಕಾಲುಗಳು ಭಯ, ನಡುಕದಿಂದ ಕಂಪಿಸುತ್ತಿದ್ದವು.

ಇಂಥ ರಾಡಿಯಲ್ಲಿ ಬರಿಗಾಲಿನಲ್ಲಿ ಬರುವವರು ಯಾರು ಎಂದು ನಾನು ತಲೆ ಎತ್ತಿ ನೋಡಿದಾಗ, ಹೆಗಲ ಮೇಲೆ ಪುಸ್ತಕದ ಬ್ಯಾಗ್ ಏರಿಸಿಕೊಂಡಿದ್ದ ಹುಡುಗಿ ಕಂಡಳು. ಸಮವಸ್ತ್ರ ತೊಡದಿದ್ದರೂ ಅವಳ ಬ್ಯಾಗ್ ನೋಡಿ ಶಾಲೆಗೆ ಹೋಗುವ ಹುಡುಗಿ ಎಂದು ತಿಳಿದು, ಇವಳ್ಯಾಕೆ ಹೀಗಿದ್ದಾಳೆ ಎನಿಸಿತು.

ಬಸ್‌ಸ್ಟಾಪಿನಲ್ಲಿ ನನ್ನ ಪಕ್ಕದಲ್ಲೇ ಆ ಬರೀ ಕಾಲುಗಳ ಹುಡುಗಿ ನಿಂತಳು. ನಾನು ಅವಳನ್ನೇ ನೋಡುತ್ತಿದ್ದೆ. ಅವಳಿಗೆ ಕಸಿವಿಸಿ. ನಾನು ಅವಳ ಕಾಲನ್ನು ನೋಡಿದೆನೆಂದು ಮುಖ ಸಪ್ಪಗೆ ಮಾಡಿಕೊಂಡಳು. ಸ್ವಲ್ಪ ದೂರ ಸರಿದು, ನಾನು ಅವಳನ್ನು ಗಮನಿಸುತ್ತಿರುವೆನೇನೋ ಎಂದು ಕದ್ದು ಕದ್ದು ನೋಡಿ ಖಚಿತಪಡಿಸಿಕೊಂಡಳು. ಅಷ್ಟರಲ್ಲಿ ನನ್ನ ಬಸ್ಸು ಬಂತು. ನಾನು ಹತ್ತಿ ನನ್ನ ಕೆಲಸಕ್ಕೆ ಹೊರಟೆ.

ಬಸ್ಸಿನಲ್ಲೂ ಅವಳದೇ ಚಿಂತೆ. ನಾನು ಅವಳನ್ನು ಎಷ್ಟೋ ಬಾರಿ ನೋಡಿದ್ದೆ. ಅವಳ ಮುಗ್ಧ ಮುಖ ಪ್ರತಿ ದಿನ ನನ್ನ ಕಣ್ಣಿಗೆ ಮುಕ್ತವಾಗಿ ಕಾಣಿಸುತ್ತಿತ್ತು. ಆದರೆ ಎಂದೂ ಅವಳ ಬರಿದಾದ ಕಾಲುಗಳನ್ನು ನೋಡಿರಲಿಲ್ಲ. ಸಾಧಾರಣವಾದ ಉಡುಪು ಧರಿಸಿ, ಭಾರದ ಬ್ಯಾಗು ಹೊತ್ತು, ದೂರದ ಶಾಲೆಗೆ ಹೋಗುತ್ತಿದ್ದಳು. ಮತ್ತೇನೂ ಅವಳ ಬಗ್ಗೆ ತಿಳಿದಿರಲಿಲ್ಲ. ಆದರೆ ಅಂದು ನನ್ನ ಮನ ಕಲಕಿತು. ಸಮವಸ್ತ್ರ ಧರಿಸಿ, ಅದಕ್ಕೊಪ್ಪುವ ಟೈ, ಶೂ ತೊಟ್ಟು ಶಿಸ್ತಾಗಿ ಶಾಲೆಗೆ ಹೋಗುವ ಮಕ್ಕಳು ಎಂದೂ ಬರಿಗಾಲಿನಲ್ಲಿ ಹೋಗುವುದಿಲ್ಲ, ಶೂ ಕಡ್ಡಾಯ. ಕೆಲ ಶಾಲೆಗಳಲ್ಲಿ ಚಪ್ಪಲಿಯಾದರೂ ತೊಡಬಹುದು. ಆದರೆ ಇವಳಿಗೆ ಅದ್ಯಾವುದೂ ಇಲ್ಲ. ಅದೇನು ಬಡತನವಿದೆಯೋ, ಇವಳದು ಅದೆಂತಹ ಶಾಲೆ, ಅಲ್ಲಿನ ವ್ಯವಸ್ಥೆ ಹೇಗಿದೆ, ಕಲಿಯುತ್ತಿರುವ ಮಕ್ಕಳು ಎಂತಹವರು... ಹೀಗೆ ನನ್ನ ಯೋಚನಾ ಲಹರಿ ಹರಿಯಿತು.

ಮರುದಿನ ಯಥಾಪ್ರಕಾರ ಬಸ್‌ಸ್ಟಾಪಿಗೆ ಆ ಹುಡುಗಿ ಬಂದಳು. ಆ ದಿನವಾದರೂ ಅವಳ ಕಾಲಿನಲ್ಲಿ ಚಪ್ಪಲಿ, ಶೂ ಏನಾದರೂ ಕಾಣಬಹುದೇನೋ ಎಂದು ನೋಡಿದೆ; ಏನೂ ಇಲ್ಲ. ಮನಸ್ಸಿಗೆ ಸಂಕಟವಾಯಿತು. ಮಾರನೆಯ ದಿನವೂ ನನ್ನ ಕಣ್ಣುಗಳು ಅವಳ ಕಾಲಿನಲ್ಲಿ ಚಪ್ಪಲಿಯನ್ನು ಹುಡುಕಿದವು. ಇಲ್ಲ, ಅಂದೂ ಅವಳು ಚಪ್ಪಲಿ ತೊಟ್ಟಿರಲಿಲ್ಲ. ನನಗೆ ಮತ್ತದೇ ಬೇಸರ, ಅದೇ ನೋವು.

ಕಾಲಿಗೆ ಚಪ್ಪಲಿ ತೊಡದೆ ಓಡಾಡುವ ಅನೇಕರನ್ನು ನಾನು ಕಂಡಿದ್ದೇನೆ. ಆದರೆ ದೂರದ ಶಾಲೆಗೆ, ಬಸ್ಸಿನಲ್ಲಿ ಹೋಗುವ ಬರಿದೇ ಕಾಲಿನ ಈ ಹುಡುಗಿಯ ತರಹದವರು ನನಗೆ ಹಿಂದೆಂದೂ ಕಂಡಿರಲಿಲ್ಲ. ಬಸ್ಸಿನ ಜನಜಂಗುಳಿಯಲ್ಲಿ ಈ ಹುಡುಗಿಯ ಪಾದಗಳನ್ನು ಅದೆಷ್ಟು ಜನ ತುಳಿಯುವರೋ, ರಕ್ಷೆ ಇಲ್ಲದೆ ಅವಳ ಪಾದಗಳಿಗೆ ಅದೆಷ್ಟು ಪೆಟ್ಟಾಗುವುದೋ... ನನ್ನ ಮನಸ್ಸಿಗೆ ಘಾಸಿಯಾಯಿತು.

ಇದಾದ ನಾಲ್ಕೈದು ದಿವಸಗಳ ನಂತರ ಬಸ್‌ಸ್ಟಾಪಿಗೆ ಅವಳ ಜೊತೆಯಲ್ಲಿ ಅವಳಿಗಿಂತ ಸ್ವಲ್ಪ ಹಿರಿಯಳಾದ ಕಾಲೇಜು ಹುಡುಗಿಯಂತೆ ಕಾಣುತ್ತಿದ್ದ ಇನ್ನೊಬ್ಬಳು ಬಂದಳು. ಸುಂದರವಾಗಿ ಸಿಂಗರಿಸಿಕೊಂಡಿದ್ದ ಅವಳ ಕಾಲಲ್ಲಿ ವಸ್ತ್ರಕ್ಕೆ ಒಪ್ಪುವಂತಹ ಚಪ್ಪಲಿ. ಇಬ್ಬರೂ ಮಾತನಾಡುತ್ತಾ ನಿಂತಿದ್ದರು. ಬರಿಗಾಲಿನ ಹುಡುಗಿಯ ಬಸ್ಸು ಮೊದಲು ಬಂತು, ಅವಳು ಹೋದಳು. ಕಾಲೇಜು ಹುಡುಗಿ ನಿಂತಿದ್ದಳು.

ಕುತೂಹಲದಿಂದ ನಾನು ಆ ಕಾಲೇಜು ಹುಡುಗಿಯನ್ನು ಕೇಳಿದೆ: `ಈಗ ನಿನ್ನ ಜೊತೆ ಬಂದಿದ್ದಳಲ್ಲ ಆ ಹುಡುಗಿ ಯಾರು?'
`ಅವಳು ನನ್ನ ತಂಗಿ, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ'.

ಇಷ್ಟೊಂದು ಶಿಸ್ತಾಗಿರುವ ಇವಳಿಗೆ, ಕಾಲಿಗೆ ಏನೂ ತೊಡದ ತಂಗಿಯೇ!- ನನಗೆ ಆಶ್ಚರ್ಯ.

ಕೇಳಲೋ ಬೇಡವೋ ಎಂದು ಅಂಜಿ ಅಂಜಿ ಕೊನೆಗೆ ಧೈರ್ಯ ಮಾಡಿ ಅವಳನ್ನು ಕೇಳಿಬಿಟ್ಟೆ. `ಇವಳು ಪ್ರತಿ ದಿನ ಶಾಲೆಗೆ ಬರಿಗಾಲಿನಲ್ಲಿ ಹೋಗುತ್ತಾಳಲ್ಲ ಯಾಕೆ?'

ಅದಕ್ಕವಳು ಬೇಸರ ಬೆರೆತ ನಿರುತ್ಸಾಹದಿಂದ `ಓ ಅದಾ, ಅವಳು ಹೊಸ ಚಪ್ಪಲಿಯನ್ನು ಕಳೆದುಕೊಂಡುಬಿಟ್ಟಳು. ಅದಕ್ಕೆ ನಮ್ಮಪ್ಪ ಕೋಪಗೊಂಡು ಇವಳಿಗೆ ಬೇರೆ ಚಪ್ಪಲಿ ತೆಗೆಸಿಕೊಟ್ಟಿಲ್ಲ'.

ಅಬ್ಬಾ! ಚಪ್ಪಲಿ ಕಳೆದುಕೊಂಡದ್ದಕ್ಕೆ ಇನ್ನೆಂದೂ ಚಪ್ಪಲಿ ಕೊಡಿಸಬಾರದೇ? ಮಕ್ಕಳು  ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ದುಬಾರಿ ವಸ್ತುಗಳು ಅಥವಾ ತೆಗೆಸಿಕೊಟ್ಟ ಹೊಸತರಲ್ಲೇ ಆ ವಸ್ತುಗಳನ್ನು ಕಳೆದುಕೊಂಡಾಗ ಪೋಷಕರು ಆ ಕ್ಷಣದಲ್ಲಿ `ಮತ್ತೆಂದೂ ಅದನ್ನು ಕೊಡಿಸುವುದಿಲ್ಲ' ಎನ್ನುವುದು, ಕಳೆದುಕೊಂಡಿದ್ದಕ್ಕೆ ಬೈಯುವುದು, ಕೆಲವೊಮ್ಮೆ ಒಂದೆರಡು ಏಟು ಕೊಟ್ಟು ಸುಮ್ಮನಾಗುವುದು ಸಹಜ. ಆದರೆ ಮಗಳು ಪ್ರತಿ ದಿನ ಶಾಲೆಗೆ ಚಪ್ಪಲಿ ಇಲ್ಲದೆ ಹೋಗುತ್ತಿದ್ದರೂ ಲೆಕ್ಕಿಸದೇ ಇರಲು ಸಾಧ್ಯವೇ? ನನ್ನ ಕುತೂಹಲ ಇನ್ನೂ ಹೆಚ್ಚಾಯಿತು.

`ಬರಿಗಾಲಿನಲ್ಲಿ ನಡೆಯುವುದು ಅಪಾಯವಲ್ಲವೇ? ಅದೂ ಮಳೆ ಬಂದು, ರಸ್ತೆಯಲ್ಲೆಲ್ಲ ನೀರು ನಿಂತು ರಾಡಿಯಾಗಿರುವಾಗ. ಚಿಕ್ಕ ಹುಡುಗಿ ಚಪ್ಪಲಿ ಕಳೆದುಕೊಂಡು ಬಿಟ್ಟಿದ್ದಾಳೆ, ಮತ್ತೊಂದು ತೆಗೆಸಿಕೊಡಬಹುದಿತ್ತು ಅಲ್ಲವೇ'?

ಅವಳು ಅನ್ಯಮನಸ್ಸಿನಿಂದಲೇ ಉತ್ತರಿಸಿದಳು- `ಇವಳಿಗೆ ಏನು ತೆಗೆದುಕೊಟ್ಟರೂ ಹಾಗೆ, ಎಲ್ಲವನ್ನೂ ಕಳೆದುಕೊಳ್ಳುತ್ತಾಳೆ. ಒಂದೂ ಸರಿಯಾಗಿ ಇಟ್ಟುಕೊಳ್ಳುವುದಿಲ್ಲ'.

`ಅವಳಿನ್ನೂ ಸಣ್ಣವಳಲ್ಲವೇ? ಒಂದು ಸಣ್ಣ ತಪ್ಪಿಗೆ ಇಷ್ಟೊಂದು ದೊಡ್ಡ ಶಿಕ್ಷೆಯೇ? ಅವಳು ಬರಿಗಾಲಿನಲ್ಲಿ ಓಡಾಡುವುದರಿಂದ ನಿಮ್ಮ ಅಮ್ಮ, ಅಪ್ಪನಿಗೆ ಏನೂ ಅನ್ನಿಸುವುದಿಲ್ಲವೇ?'

ಅವಳು ತುಂಬಾ ಬೇಸರದಿಂದ `ನಮ್ಮ ಅಮ್ಮ, ಪಾಪ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಮನೆಯಲ್ಲಿ ಅವರ ಮಾತು ಏನೂ ನಡೆಯದು. ಇನ್ನು ನಮ್ಮಪ್ಪನಿಗೆ ಮೊದಲೇ ಇವಳನ್ನು ಕಂಡರೆ ಆಗುವುದಿಲ್ಲ. ನಾವು ನಾಲ್ವರು ಹೆಣ್ಣು ಮಕ್ಕಳ ಪೈಕಿ ಇವಳು ಕೊನೆಯವಳು. ಇವಳು ಹುಟ್ಟುವ ಮುಂಚೆ ಗಂಡು ಮಗು ಆಗುತ್ತೆ ಅಂತ ನಮ್ಮಪ್ಪ ತುಂಬಾ ಆಸೆ ಇಟ್ಟುಕೊಂಡಿದ್ದರಂತೆ. ಆದರೆ ಇವಳು ಹುಟ್ಟಿದಳು. ಹುಟ್ಟಿದಾಗಿನಿಂದ ಇವಳನ್ನು ಕಂಡರೆ ಅಪ್ಪನಿಗೆ ತಿರಸ್ಕಾರ. ಇವಳು ಚಪ್ಪಲಿ ಕಳೆದುಕೊಂಡು ಮನೆಗೆ ಬಂದಾಗ ಅಪ್ಪ ತಮ್ಮ ಬೆಲ್ಟ್‌ನಿಂದ ಬಾಸುಂಡೆ ಬರುವವರೆಗೂ ಹೊಡೆದಿದ್ದರು. ಯಾರೂ ಅವಳಿಗೆ ನಮ್ಮ ಚಪ್ಪಲಿ ಕೊಡಕೂಡದು ಎಂದು ನಮಗೆಲ್ಲ ತಾಕೀತು ಮಾಡಿದರು. ಅಷ್ಟೇ ಅಲ್ಲ, ಹೊಸದೇನಾದರೂ ತೆಗೆಸಿಕೊಟ್ಟರೆ ನಮ್ಮ ಚರ್ಮ ಸುಲಿಯುವುದಾಗಿ ಎಚ್ಚರಿಸಿದರು. ನನ್ನ ಚಪ್ಪಲಿ ಇವಳಿಗೆ ದೊಡ್ಡದು. ಪಾಕೆಟ್ ಮನಿಯಲ್ಲಿ ತೆಗೆದುಕೊಡೋಣ ಎಂದರೆ ಅಪ್ಪನ ಭಯ. ಅಪ್ಪನಿಗೆ ಕೋಪ ಬಂದರೆ ತುಂಬಾ ಕಷ್ಟ. ಹಿಂದೆ ಒಮ್ಮೆ ಅಮ್ಮ ಬಟ್ಟೆ ಹೊಲಿದು ಕೂಡಿಟ್ಟ ಹಣದಿಂದ ಇವಳಿಗೆ ಹೊಸ ಬ್ಯಾಗು ಕೊಡಿಸಿದ್ದರಿಂದ ಅಮ್ಮನಿಗೆ ಅಪ್ಪ ಚೆನ್ನಾಗಿ ಬಾರಿಸಿದ್ದರು. ಗಂಡು ಮಗುವನ್ನಂತೂ ಹೆರಲಿಲ್ಲ, ಇರುವುದನ್ನೆಲ್ಲಾ ಈ ಹಾಳು ಹೆಣ್ಣು ಮಕ್ಕಳಿಗೇ ಸುರಿಯಬೇಡ ಅಂತ ಚೆನ್ನಾಗಿ ಬೈಯ್ದುಬಿಟ್ಟರು. ಅದಕ್ಕೆ ನಾನು ಅವಳ ಹಣೆಬರಹ ಅಂತ ಸುಮ್ಮನಿದ್ದೇನೆ'.
ಮನಸ್ಸಿಗೆ ಮತ್ತಷ್ಟು ಪಿಚ್ಚೆನ್ನಿಸಿತು. `ಇವಳ ಶಾಲೆಯಲ್ಲಿ ಯಾರೂ ಕೇಳುವುದಿಲ್ಲವೇ?'

`ಅವಳ ಶಾಲೆನೇ, ಅದು ಸರ್ಕಾರಿ ಶಾಲೆ. ಅಲ್ಲಿ ಹೇಗೆ ಹೋದರೂ ನಡೆಯುತ್ತೆ. ಮಕ್ಕಳು ಶೂ, ಚಪ್ಪಲಿ, ಸಮವಸ್ತ್ರ ತೊಡಲೇಬೇಕೆಂಬ ಕಡ್ಡಾಯವೇನೂ ಇಲ್ಲ'.

ಆ ಹುಡುಗಿಗೆ ತಿರುಗಿ ನಾನು ಏನೂ ಹೇಳದಾದೆ. ಆದರೆ ನನ್ನ ಮನಸ್ಸಿನಿಂದ  ಈ ವಿಷಯ ಹೋಗಲೇ ಇಲ್ಲ. ಚಪ್ಪಲಿಯಲ್ಲಿ  ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ಶಿಕ್ಷಿಸಬಹುದು, ಜೊತೆಯವರು ಅವರನ್ನು ರೇಗಿಸಬಹುದು, ಶೂ ಸ್ವಲ್ಪ ಕೊಳೆಯಾಗಿದ್ದರೆ ಎಲ್ಲರ ಮುಂದೆ ಬೈದು ಶಿಕ್ಷಿಸಿರುವ ಘಟನೆಗಳು ಎಷ್ಟೋ ಶಾಲೆಗಳಲ್ಲಿ ನಡೆದಿವೆ. ಆದರೆ ಶೂ/ ಚಪ್ಪಲಿ ಏನೂ ತೊಡದ ಇವಳಂತಹವಳಿಗೆ ಶಾಲೆಯಲ್ಲಿ ಏನು ಶಿಕ್ಷೆ ಕೊಟ್ಟಿರಬಹುದು?, ಅದನ್ನು ಈ ಪುಟ್ಟ ಹುಡುಗಿ  ಹೇಗೆ ಸಹಿಸಿಕೊಂಡಿರಬಹುದು? ಕಲ್ಲು, ಮುಳ್ಳು ಚುಚ್ಚಿ ಇವಳ ಕಾಲಿಗೆ ಪೆಟ್ಟಾಗಿಲ್ಲವೇ? ಇತರರನ್ನು ನೋಡಿ ಇವಳಿಗೆ ದುಃಖವಾಗುವುದಿಲ್ಲವೇ?, ಬರಿಗಾಲಿನಲ್ಲಿ ಇರಬೇಕಾದ ತನ್ನ ಸ್ಥಿತಿಗೆ ಸಂಕಟವಾಗಿಲ್ಲವೇ? ಇದೇ ವಿಷಯ ನನ್ನ ತಲೆಯಲ್ಲಿ ಗಿರಕಿ ಹೊಡೆಯಿತು.

ನಮ್ಮ ದೇಶದಲ್ಲಿ ಉಣ್ಣಲು ಅನ್ನವಿಲ್ಲದೆ, ತೊಡಲು ಬಟ್ಟೆ ಇಲ್ಲದೆ, ಸಲಹುವ ಪೋಷಕರಿಲ್ಲದೆ ಬೀದಿಯಲ್ಲಿ ಭಿಕ್ಷೆ ಬೇಡುವ ಅನಾಥ ಮಕ್ಕಳಿಗೇನೂ ಕೊರತೆಯಿಲ್ಲ. ಪೋಷಕರಿದ್ದೂ ಸರಿಯಾಗಿ ಪೋಷಿಸಲಾಗದೆ ಸೊರಗಿರುವ ಮಕ್ಕಳೂ ಇದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗದೆ ಮಕ್ಕಳನ್ನು ಬೀದಿಗೆ ಬಿಟ್ಟಿರುವ ಅಸಹಾಯಕ ತಂದೆ- ತಾಯಿಯರೂ ಇದ್ದಾರೆ. ಆದರೆ ಹೆಣ್ಣು ಎಂಬ ಒಂದೇ ಕಾರಣಕ್ಕೆ ಆ ಮಗುವಿನ ಸಣ್ಣ ತಪ್ಪನ್ನೂ ಕ್ಷಮಿಸದೆ, ಅಲಕ್ಷ್ಯ ಮಾಡುವ ತಂದೆಯ ಧಾರ್ಷ್ಟ್ಯ ಅಸಹ್ಯ ಹುಟ್ಟಿಸಿತು. ಇಂದಿನ ಕಾಲದಲ್ಲೂ ಲಿಂಗ ತಾರತಮ್ಯ ಈ ರೀತಿ ತಾಂಡವವಾಡುತ್ತಿರುವುದಕ್ಕೆ ಅಚ್ಚರಿ ಅಷ್ಟೇ ಅಲ್ಲ, ಆತಂಕವೂ ಆಯಿತು.

ಇದಾದ ಸ್ವಲ್ಪ ದಿನಗಳ ಮೇಲೆ ಬೇಸಿಗೆ ರಜೆ ಶುರುವಾಗಿತ್ತು. ನಂತರ ಆ ಹುಡುಗಿ ಮತ್ತೆ ನನ್ನ ಕಣ್ಣಿಗೆ ಬೀಳಲೇ ಇಲ್ಲ. ಆದರೆ ಅವಳಂತಹವಳಿಗೆ ನಾನು ಏನು ಮಾಡಬಹುದು? ಇದನ್ನೆಲ್ಲ ಎಲ್ಲಿ ಸರಿ ಮಾಡಬೇಕು?, ಅವಳ ಅಪ್ಪನನ್ನು ತಿದ್ದಬೇಕೇ? ಅಂತಹವರಿಗೆ ಹೇಗೆ ಬುದ್ಧಿ ಕಲಿಸುವುದು? ಅವಳ ಅಮ್ಮನ, ಅಕ್ಕಂದಿರ ಅಸಹಾಯಕತೆಗೆ ಮರುಗಬೇಕೇ?, ಅವಳ ಶಾಲೆಯ ಪರಿಸ್ಥಿತಿಯನ್ನು ಸುಧಾರಿಸುವ ದಾರಿ ಯಾವುದು? ಲಿಂಗ ತಾರತಮ್ಯ ಹೋಗಲಾಡಿಸುವುದು ಹೇಗೆ?... ಪ್ರಶ್ನೆಗಳಿಂದ ನನ್ನ ಮನಸ್ಸು ರಾಡಿಯಾಯಿತು.

ಈಗಲೂ ಮಳೆ ಬಂದು ಮಣ್ಣು ತುಂಬಿದ ನೀರನ್ನು
ನೋಡಿದರೆ ನನಗೆ ಆ ಪುಟ್ಟ ಕಾಲುಗಳೇ ನೆನಪಿಗೆ ಬರುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT