ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಗಲ್ಲಿಯಲ್ಲಿರುವರೆಲ್ಲಾ ಇಲ್ಲಿ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಗಣರಾಜ್ಯೋತ್ಸವದ ಸಲುವಾಗಿ ಗಣ್ಯರೆಲ್ಲ ದೆಹಲಿಗೆ ಆಗಮಿಸುವುದು ವಾಡಿಕೆ. ಆದರೆ ಈ ಬಾರಿ ಬೆಂಗಳೂರಿಗೂ ಗಣ್ಯರು ದೌಡಾಯಿಸಿದ್ದರು.
 
ಆದರೆ ಬಂದವರೆಲ್ಲಾ ಬಾಲಿವುಡ್ ಮಂದಿ. ಸರ್ಕಾರಿ ರಜದಂದು ಬರಲು ಕಾರಣವೂ ಇತ್ತು. `ಗಲಿ ಗಲಿ ಚೋರ್ ಹೈ~ ಚಿತ್ರ ಇನ್ನೇನು ತೆರೆ ಕಾಣಬೇಕೆಂದಿರುವಾಗಲೇ ಅದರ ಪ್ರಚಾರಕ್ಕಾಗಿ ಚಿತ್ರ ತಂಡದವರು ಊರೂರು ಅಲೆಯುತ್ತಿದ್ದಾರೆ.ಹೀಗೆಯೇ ಅವರು ಮೊನ್ನೆ ಬೆಂಗಳೂರಿಗೂ ಬಂದಿದ್ದರು.

ನಿರ್ಮಾಪಕ ನಿತಿನ್ ಮನಮೋಹನ್ ಅವರ ಉಪಸ್ಥಿತಿ, ನಿರ್ದೇಶಕ ರಮ್ಮಿ ಜಾಫ್ರಿ ಅವರ ನಿರ್ವಹಣೆ ಹಾಗೂ ಸಂಗೀತ ನಿರ್ದೇಶಕ ಅನು ಮಲ್ಲಿಕ್ ನಿರೂಪಣೆ ಹಾಗೂ ಗಾಯನ ಪತ್ರಿಕಾಗೋಷ್ಠಿಯ ಕಳೆ ಕಟ್ಟಿಸಿತು. ಇನ್ನು ನಟಿಯರಾದ ಬಿಚ್ಚು ಬೆನ್ನಿನ ಅನಾರ್ಕಲಿ ಸಲ್ವಾರ್ ತೊಟ್ಟಿದ್ದ ಶ್ರೇಯಾ ಸರಣ್ ಹಾಗೂ ಆಧುನಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಮುಗ್ದಾ ಗೋಡ್ಸೆ ಆಗಮನ ಕಾರ್ಯಕ್ರಮಕ್ಕೆ ಕಳೆ ಕಟ್ಟಿತು. ಚಿತ್ರದ ನಾಯಕ ನಟ ಅಕ್ಷಯ್ ಖನ್ನಾ ಅನಾರೋಗ್ಯ ಕಾರಣ ನೀಡಿ ಬೆಂಗಳೂರಿನ ಪ್ರವಾಸ ರದ್ದುಗೊಳಿಸಿದ್ದರು.

ಮುದ್ದು ಮೊಗದ ನಟಿಯರ ಉಪಸ್ಥಿತಿ ನಟ ಅಕ್ಷಯ್ ಅವರ ಅನುಪಸ್ಥಿತಿಯನ್ನು ಮರೆಸಿತು. ಚಿತ್ರದ ಸಂಗೀತ ಕುರಿತು ಕೇಳುಗರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದು ಸ್ಫೂರ್ತಿಗೊಂಡಿದ್ದ ಅನು ಮಲ್ಲಿಕ್ ಚಿತ್ರದ ಶೀರ್ಷಿಕೆ ಗೀತೆ ಗಲಿ ಗಲಿ ಜೋರ್ ಹೈ ಹಾಡಲು ಮುಂದಾದರು. ಅನು ಮಲ್ಲಿಕ್ ಗಾಯನಕ್ಕೆ ನಿರ್ದೇಶಕರೇ ಮೈಕ್ ಹಿಡಿದು ಅವರನ್ನು ಹಾಡಲು ಹುರಿದುಂಬಿಸಿದರು. ಇದರಿಂದ ಸ್ಫೂರ್ತಿಗೊಂಡ ಅನು ಮಲ್ಲಿಕ್ ಎದುರಿಗದ್ದ ಮೇಜನ್ನು ಗುದ್ದುತ್ತಾ ಹಾಡು ಹೇಳಲು ಆರಂಭಿಸಿದರು. ತಮ್ಮ ಎಡ ಬಲದಲ್ಲಿದ್ದ ಇಬ್ಬರು ನಟಿಯರು ಅನು ಹಾಡಿಗೆ ಗುನುಗಿ ಬೆಂಬಲ ಸೂಚಿಸಿದರು.

`ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ಹಬ್ಬಿದೆ. ಈ ಸುಳಿಯೊಳಗೆ ಸಿಕ್ಕ ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದು ಚಿತ್ರದ ಕಥೆ. ಚಿತ್ರದಲ್ಲಿ ಈ ಘಟನೆಗಳು ಭಾರತ್ ಎಂಬ ವ್ಯಕ್ತಿಯ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
 
ಈ ರೀತಿಯಲ್ಲಿ ಚಿತ್ರಕಥೆ ಸಿದ್ಧಗೊಂಡಿದೆ. ತನಗೆ ಗೊತ್ತಿಲ್ಲದೆ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕುವ ನಾಯಕನ ಪಾತ್ರ ಸೃಷ್ಟಿಸುವಾಗ ಅಕ್ಷಯ್ ಖನ್ನಾ ಅವರೇ ಮನಸ್ಸಿನಲ್ಲಿದ್ದರಂತೆ. ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುವಲ್ಲಿ ಅಕ್ಷಯ್ ಖನ್ನಾ ಭಾರೀ ಅಳೆದು ಸುರಿಯುವುದರಿಂದ ಇದನ್ನು ಒಪ್ಪಿಕೊಳ್ಳುವರೋ ಎಂಬ ಆತಂಕ ನಿರ್ದೇಶಕರಲ್ಲಿತ್ತಂತೆ.
 
ಆದರೆ ಕಥೆ ಆಲಿಸುತ್ತಿದ್ದಂತೆ ಅಕ್ಷಯ್ ಮರು ಮಾತನಾಡದೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಇದೇ ಮೊದಲು~ ಎಂದು ಅಕ್ಷಯ್ ಪರವಾಗಿ ನಿರ್ದೇಶಕರು ಹೇಳಿದರು.

ಅಕ್ಷಯ್ ಮಡದಿಯಾಗಿ ನಟಿಸಿರುವ ಶ್ರೇಯಾ ಸರಣ್ ಹಾಗೂ ಅವರ ಮನೆಗೆ ಪೇಯಿಂಗ್ ಗೆಸ್ಟ್ ಆಗಿ ಆಗಮಿಸುವ ಮಾದಕ ಅತಿಥಿ ಮುಗ್ದ ಗೋಡ್ಸೆ ಚಿತ್ರದ ಗ್ಲಾಮರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭೋಪಾಲ್‌ನಲ್ಲಿ ನಡೆಯುವ ಗಲಿ ಗಲಿ ಚೋರ್ ಹೈ ಚಿತ್ರ ಹೆಚ್ಚು ನಗಿಸಿದರೂ ಅಂತಿಮವಾಗಿ ಪ್ರೇಕ್ಷಕರಿಗೆ ಸಂದೇಶವೊಂದನ್ನು ತಲುಪಿಸಲಿದೆ. ಅದು ದೇಶ ನಿರ್ಮಾಣಕ್ಕೆ ಸಹಯವಾಗಲಿದೆ ಎನ್ನುವುದು ಚಿತ್ರತಂಡದ ವಿಶ್ವಾಸ.
 

ಅಣ್ಣಾ ಹಜಾರೆ ಅವರು ಈ ಚಿತ್ರ ವೀಕ್ಷಿಸಿ ಮೆಚ್ಚುಗೆಯ ಸರ್ಟಿಫಿಕೇಟ್ ನೀಡಿದ್ದಾರಂತೆ. ಅಣ್ಣಾ ಅವರಿಗೆ ಇಷ್ಟವಾಗದ ಐಟಂ ಗೀತೆ ಹಾಗೂ ಇನ್ನೊಂದಿಷ್ಟು ದೃಶ್ಯಗಳಿಗೆ ಕತ್ತರಿಸಿ ನಂತರ ಅವರಿಗೆ ತೋರಿಸಿದ ವಿಷಯವನ್ನು ನಿರ್ದೇಶಕರು ಹಂಚಿಕೊಂಡರು.

ಆಗಾಗ ಐಟಂ ಗೀತೆ, ಚಿತ್ರದ ಶೀರ್ಷಿಕೆ ಗೀತೆಗಳನ್ನು ಗುನುಗುತ್ತಿದ್ದ ನಟಿಯರಿಗೆ ಗಣರಾಜ್ಯೋತ್ಸವದ ದಿನದಂದು ಒಂದು ದೇಶ ಭಕ್ತಿಗೀತೆಯನ್ನು ಹಾಡಿ ಎಂದು ಮಾಧ್ಯಮದವರು ಕೇಳಿದಾಗ ಗೀತೆಗಾಗಿ ನಟಿಯರು ತಡಕಾಡಿದರು.
 
ಕೆಲ ನಿಮಿಷಗಳ ಕಾಲ ಯಾವ ದೇಶಭಕ್ತಿ ಗೀತೆ ಇದೆ? ಯಾವುದನ್ನು ಹಾಡಬೇಕು? ಎನ್ನುವ ಗೊಂದಲದಲ್ಲೇ ಮುಳುಗಿದ್ದ ಇಬ್ಬರು ಸಹಾಯ ಬೇಡುವಂತೆ ಅನು ಮಲ್ಲಿಕ್ ಕಡೆ ಕಣ್ಣು ಹಾಯಿಸಿದರು. ಮುದ್ದು ಮುಖದ ನಟಿಯರ ನೆರವಿಗೆ ದೌಡಾಯಿಸಿದ ಅನು `ಏ ಮೇರೆ ವತನ್ ಕೆ ಲೋಗೋ~ ಗೀತೆಯನ್ನು ಹಾಡಿದರು. ಆಗಲೂ ನಟಿಯರದ್ದು ಗುನುಗು ಗಾಯನ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT