ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ದಿನ ಮರೆಯಲು ಸಾಧ್ಯವೇ?

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅವತ್ತು ನಂಬಲು ಸಾಧ್ಯವಾಗಿರಲಿಲ್ಲ... ಇವತ್ತೂ ನಂಬಲು ಸಾಧ್ಯವಾಗುತ್ತಿಲ್ಲ...! ಅದು ಜೂನ್ 18, 1983. ಭಾರತದ ಕನಸು ಅರಳಿ ಹೂ ಬಿಡಲು ಕಾರಣವಾದ ಮೊಗ್ಗು ಟಿಸಿಲೊಡೆದ ದಿನ. ಕ್ರಿಕೆಟ್ ಎಂಬುದು ಈ ಜಗತ್ತಿನಲ್ಲಿ ಇರುವವರೆಗೆ ನೆನಪಿಸಿಕೊಳ್ಳಲೇಬೇಕಾದ ಕ್ಷಣವದು. ಜಿಂಬಾಬ್ವೆ ವಿರುದ್ಧ ಅಂದು ನಡೆದ ಆ ಪಂದ್ಯವನ್ನು ಮರೆಯಲು ಸಾಧ್ಯವೇ? ಅಕಸ್ಮಾತ್ ಆ ಪಂದ್ಯ ಸೋತಿದ್ದರೆ ವಿಶ್ವಕಪ್ ಕೈ ತಪ್ಪಿ ಹೋಗುವ ಸಾಧ್ಯತೆ ಇತ್ತು.
 
1983ರ ವಿಶ್ವಕಪ್‌ನಲ್ಲಿ ಭಾರತ ತಂಡದ ಮಟ್ಟಿಗೆ ಅದೊಂದು ಟರ್ನಿಂಗ್ ಪಾಯಿಂಟ್ ಕೂಡ. ಕಾರಣವಿಷ್ಟೇ; ಕೆಂಟ್‌ನ ನೆವಿಲ್ ಕ್ರೀಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಆ ಪಂದ್ಯದಲ್ಲಿ ‘ಕಪಿಲ್ ಡೆವಿಲ್ಸ್’ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಜಿಂಬಾಬ್ವೆ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ತುಂಬಾ ಉತ್ಸಾಹದಲ್ಲಿತ್ತು. ಆದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಮುಂದಾದ ಭಾರತ ಕೇವಲ 17 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಬಿಟ್ಟಿತು! ಸುನಿಲ್ ಗಾವಸ್ಕರ್ (0), ಕೆ.ಶ್ರೀಕಾಂತ್ (0), ಮೋಹಿಂದರ್ ಅಮರ್‌ನಾಥ್ (5), ಸಂದೀಪ್ ಪಾಟೀಲ್ (1), ಯಶ್ಪಾಲ್ ಶರ್ಮ (9) ಹಾಗೇ ಬಂದು ಹೀಗೆ ಹೋಗಿದ್ದರು.

ಭಾರತದ ಕಥೆ ಮುಗಿದು ಹೋಯಿತು ಎಂದು ಅನೇಕ ಮಂದಿ ಕ್ರೀಡಾಂಗಣದಿಂದ ಎದ್ದು ಹೋಗಿದ್ದರು. ರೆಡಿಯೋದಲ್ಲಿ ಕಾಮೆಂಟರಿ ಕೇಳುತ್ತಿದ್ದವರು ನಿರಾಶರಾಗಿದ್ದರು. ಆದರೆ ಅಲ್ಲೊಂದು ಪವಾಡ ನಡೆದು ಹೋಯಿತು. ಆಗ ಕ್ರೀಸ್‌ನಲ್ಲಿದ್ದ ನಾಯಕ ಕಪಿಲ್ ದೇವ್ ಪಂದ್ಯದ ಹಣೆಬರಹವನ್ನೇ ಬದಲಾಯಿಸಿದರು.

ಕರ್ನಾಟಕದ ರೋಜರ್ ಬಿನ್ನಿ (22) ಜೊತೆಗೂಡಿ ಆರನೇ ವಿಕೆಟ್‌ಗೆ 60 ರನ್ ಹಾಗೂ ಮದನ್ ಲಾಲ್ (17) ಜೊತೆ ಎಂಟನೇ ವಿಕೆಟ್‌ಗೆ 62 ರನ್ ಕಲೆಹಾಕಿದರು. ಎಂಟನೇ ವಿಕೆಟ್ ಪತನವಾದಾಗ ಭಾರತದ ಮೊತ್ತ 140 ಅಷ್ಟೆ. ಈ ಹಂತದಲ್ಲಿ ಕಪಿಲ್ ಜೊತೆಗೂಡಿದ್ದು ಕರ್ನಾಟಕದ ಮತ್ತೊಬ್ಬ ಆಟಗಾರ ಸೈಯದ್ ಕಿರ್ಮಾನಿ! ‘ಇಡೀ ತಂಡ ಆಗ ಗಾಬರಿಗೆ ಒಳಗಾಗಿತ್ತು.

ಏನು ಮಾಡಬೇಕೆಂಬುದು ಯಾರಿಗೂ ತೋಚುತ್ತಿರಲಿಲ್ಲ. ಡ್ರೆಸ್ಸಿಂಗ್ ಕೊಠಡಿಯಲ್ಲಂತೂ ತಳಮಳ. ಇನ್ನೂ ಸುಮಾರು 25 ಓವರ್‌ಗಳು ಬಾಕಿ ಉಳಿದಿದ್ದವು. ಆ ಹಂತದಲ್ಲಿ ನಾವು ಅಷ್ಟೊಂದು ಒತ್ತಡಕ್ಕೆ ಸಿಲುಕಿದ್ದೆವು. ಅದು ಗೆಲ್ಲಲೇಬೇಕಾಗಿದ್ದ ಗುಂಪು ಹಂತದ ಪಂದ್ಯ. ಕ್ರೀಸ್‌ಗೆ ಆಗಮಿಸಿದ ನಾನು ನೇರವಾಗಿ ಕಪಿಲ್ ಬಳಿ ತೆರಳಿದೆ. ಗಾಬರಿಗೆ ಒಳಗಾಗಬೇಡಿ. ನಾನು ನಿಮಗೆ ಸಾಥ್ ನೀಡುತ್ತೇನೆ ಎಂದು ಭರವಸೆ ನೀಡಿದೆ’ ಎಂದು ವಿವರಿಸುತ್ತಾರೆ ಕಿರ್ಮಾನಿ.

‘ನಾನು ಒಂಟಿ ರನ್ ತೆಗೆದು ನಿಮಗೆ ಸ್ಟ್ರೈಕ್ ನೀಡುತ್ತೇನೆ. ನೀವು ನಿಮ್ಮ ನೈಜ ಆಟವಾಡಿ ಎಂದೆ. ನಾನು ಎದುರಿಸಿದ ಮೊದಲ ಎರಡು ಎಸೆತಗಳು ಬ್ಯಾಟ್ ವಂಚಿಸಿ ವಿಕೆಟ್ ಕೀಪರ್ ಕೈಸೇರಿದವು. ಚೆಂಡು ಸ್ವಿಂಗ್ ಆಗುತಿತ್ತು. ಮೂರನೇ ಎಸೆತವನ್ನು ಬೌಂಡರಿಗೆ ಬಾರಿಸಿದೆ. ಅದು ಕಪಿಲ್‌ಗೂ ವಿಶ್ವಾಸ ತಂದಿತು. ಅಲ್ಲಿಂದು ಶುರುವಾಯಿತು ನೋಡಿ ಕಪಿಲ್ ಆಟ’ ಎಂದು ಅವರು ಆ ಕ್ಷಣವನ್ನು ನೆನಪಿಸಿಕೊಂಡರು. ಹೌದು, ಕಪಿಲ್ ಹಾಗೂ ಕಿರ್ಮಾನಿ ಅಲ್ಲೊಂದು ಇತಿಹಾಸ ನಿರ್ಮಿಸಿದರು. ಅವರಿಬ್ಬರು ಮುರಿಯದ 9ನೇ ವಿಕೆಟ್‌ಗೆ 126 ರನ್ ಸೇರಿಸಿದರು. ಅದು ವಿಶ್ವಕಪ್‌ನಲ್ಲಿ ಇನ್ನೂ ದಾಖಲೆಯಾಗಿ ಉಳಿದಿದೆ.

ಕಿರ್ಮಾನಿ ಅಜೇಯ 24 (56 ಎಸೆತ, 2 ಬೌಂ) ರನ್ ಗಳಿಸಿದರೆ ‘ಹರಿಯಾಣ ಹರಿಕೇನ್’ ಖ್ಯಾತಿಯ ಕಪಿಲ್ ಅಜೇಯ 175 ರನ್ ಬಾರಿಸಿದರು. 138 ಎಸೆತ ಗಳ ಅವರ ಇನಿಂಗ್ಸ್‌ನಲ್ಲಿ 16 ಬೌಂಡರಿ, 6 ಸಿಕ್ಸರ್‌ಗಳಿ ್ದದವು. ಈ ಪರಿಣಾಮ ಭಾರತ 60 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಲು ಸಾಧ್ಯವಾಯಿತು. ಆ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ 57 ಓವರ್‌ಗಳಲ್ಲಿ 235 ರನ್‌ಗಳಿಗೆ ಆಲ್‌ಔಟ್. ಭಾರತ 31 ರನ್‌ಗಳ ಜಯಭೇರಿ ಮೊಳಗಿಸಿತ್ತು. ನಂತರದ್ದು ಇತಿಹಾಸ.

1983, ಜೂನ್ 25ರಂದು ಲಾರ್ಡ್ಸ್ ಅಂಗಳದಲ್ಲಿ ನಡೆದ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸಿ ಕಪಿಲ್ ಟ್ರೋಫಿ ಎತ್ತಿ ಹಿಡಿದೇ ಬಿಟ್ಟರು. ಆದರೆ ಟರ್ನಿಂಗ್ ಪಾಯಿಂಟ್ ಎನಿಸಿದ ಜಿಂಬಾಬ್ವೆ ವಿರುದ್ಧದ ಆ ಪಂದ್ಯವನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಕಪಿಲ್ ಅವರ ಆ ಇನಿಂಗ್ಸ್ ವಿಸ್ಡನ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

‘ಅದೊಂದು ನಾ ಕಂಡ ಅದ್ಭುತ ಇನಿಂಗ್ಸ್. ಸದಾ ನೆನಪಿಸಿಕೊಳ್ಳುವ ಕ್ಷಣ. ಆ ಸಂದರ್ಭದಲ್ಲಿ ಅವರಿಗೆ ಸಾಥ್ ನೀಡಿದ್ದು ನಾನು ಎಂಬುದು ಹೆಮ್ಮೆಯ ವಿಷಯ’ ಎನ್ನುತ್ತಾರೆ ವಿಕೆಟ್ ಕೀಪರ್ ಆಗಿದ್ದ ಕಿರ್ಮಾನಿ. ವಿಶೇಷವೆಂದರೆ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಮೊದಲ ಶತಕವದು. ಕಪಿಲ್ ಪಾಲಿಗೆ ಚೊಚ್ಚಲ ಹಾಗೂ ಕೊನೆಯ ಶತಕ. ಅದನ್ನು ಭಾರತದ ಅಭಿಮಾನಿಗಳು ರೆಡಿಯೋದಲ್ಲಿ ಕಾಮೆಂಟರಿ ಕೇಳಿ ಆನಂದಿಸಿದ್ದರು.

ದುರದೃಷ್ಟವೆಂದರೆ ಆ ವಿಶಿಷ್ಟ ಇನಿಂಗ್ಸ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಆಗಲೇ ಇಲ್ಲ. ಏನೇ ಇರಲಿ, ಅಪಾರ ಕನಸು ಹೊತ್ತಿರುವ ಮಹೇಂದ್ರ ಸಿಂಗ್ ದೋನಿ ಪಡೆಗೆ ಆ ಕ್ಷಣ ಈ ಬಾರಿ ಸ್ಫೂರ್ತಿ ಆಗಲಿ...! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT