ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ವ್ಯಕ್ತಿ ಯಾರೆಂದು ಗೊತ್ತಿಲ್ಲ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರಭಜನ್ ಸಿಂಗ್ ಅವರನ್ನೂ ಫಿಕ್ಸಿಂಗ್ ಪ್ರಕರಣದಲ್ಲಿ ಎಳೆದು ತರುವ ಪ್ರಯತ್ನವನ್ನು ಬುಕ್ಕಿ ಮಜರ್ ಮಾಜಿದ್ ಮಾಡಿದ್ದಾನೆ.

ಪಾಕಿಸ್ತಾನದ ಕ್ರಿಕೆಟಿಗರು `ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ಭಾಗಿಯಾದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಲಂಡನ್ ನ್ಯಾಯಾಲಯದಲ್ಲಿ `ಯುವಿ~ ಹಾಗೂ `ಭಜ್ಜಿ~ ಹೆಸರು ಕೂಡ ಪ್ರಸ್ತಾವವಾಗಿದೆ. ಆಂಗ್ಲ ನಿಯತಕಾಲಿಕದ ಪತ್ರಕರ್ತ ನಡೆಸಿದ ಮಾರುವೇಷದ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತದ ಈ ಇಬ್ಬರು ಕ್ರಿಕೆಟಿಗರ ಜೊತೆಗೆ ಸಂಪರ್ಕ ಇರುವುದಾಗಿಯೂ ಮಾಜಿದ್ ಹೇಳಿಕೊಂಡಿದ್ದಾನೆ. ಈ ಕುರಿತ ವಿವರವು ನ್ಯಾಯಾಲಯದ ಮುಂದೆ ಬಂತು.

`ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಪಾಕ್ ಮಾಜಿ ನಾಯಕ ಸಲ್ಮಾನ್ ಬಟ್ ಹಾಗೂ ವೇಗದ ಬೌಲರ್ ಮೊಹಮ್ಮದ್ ಆಸಿಫ್ ವಿಚಾರಣೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಭಾರತದ ಆಟಗಾರರು ಕೂಡ ಪರಿಚಿತರೆಂದು ಬುಕ್ಕಿ ಹೇಳಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ವಿಚಾರಣೆಯ ವಿವರಗಳು ಪತ್ರಿಕೆಗಳಲ್ಲಿಯೂ ವರದಿಯಾಗಿವೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರಭಜನ್ ಅವರು `ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ~ ಎಚ್ಚರಿಕೆ ನೀಡಿದ್ದಾರೆ. ಆದರೆ ಯುವರಾಜ್ `ಆರೋಪವೆಲ್ಲಾ ಸುಳ್ಳು~ ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

`ಆ ವ್ಯಕ್ತಿ (ಬುಕ್ಕಿ ಮಾಜಿದ್) ಯಾರೆಂದು ಗೊತ್ತಿಲ್ಲ. ಅವನನ್ನು ಯಾವತ್ತೂ ಭೇಟಿಯಾಗಿಲ್ಲ. ನನ್ನ ಜೊತೆ ಸಂಪರ್ಕ ಇರುವುದಾಗಿ ಹೇಳಿಕೊಂಡಿರುವ ಅವನ ವಿರುದ್ಧ ಕಾನೂನು ಕ್ರಮ ಖಂಡಿತ~ ಎಂದು ಸದ್ಯ ನಾಗಪುರದಲ್ಲಿರುವ ಭಜ್ಜಿ ದಿಟ್ಟತನದಿಂದ ಹೇಳಿದ್ದಾರೆ.

`ವಿಷಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಮನಕ್ಕೆ ತರುತ್ತೇನೆ. ಕಾನೂನು ಕ್ರಮ ಕೈಗೊಳ್ಳುವುದು ಈಗಿನ ನನ್ನ ನಿರ್ಧಾರ. ಆದರೆ ಬಿಸಿಸಿಐ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ~ ಎಂದಿರುವ ಅವರು `ಇಂಥ ಕೆಲವರು ಕೆಸರು ಎರಚುವ ಪ್ರಯತ್ನ ಮಾಡುತ್ತಿದ್ದಾರೆ. ಮನಬಂದಂತೆ ಮಾತನಾಡುವ ಮೂಲಕ ಅವರು ಹೆಸರು ಕೆಡಿಸುವ ದುಸ್ಸಾಹಸ ನಡೆಸಿದ್ದಾರೆ~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಯುವರಾಜ್ ತಮ್ಮ ಪರ ವಾದವನ್ನು ಮುಂದಿಡಲು ಟ್ವಿಟರ್ ಬಳಸಿಕೊಂಡಿದ್ದಾರೆ. `ಯಾರು ಈ ಮಾಜಿದ್? ಅವನು ಹೇಳಿದ್ದೆಲ್ಲ ಸುಳ್ಳು. ನಾನೆಂದೂ ಆ ವ್ಯಕ್ತಿಯನ್ನು ನೋಡಿಯೇ ಇಲ್ಲ~ ಎಂದು ಅವರು ಸಂದೇಶವನ್ನು ಹರಿಬಿಟ್ಟಿದ್ದಾರೆ.

`ಭಾರತದಲ್ಲಿ ಸುಳ್ಳು ಕೂಡ ಸುದ್ದಿಯಾಗುತ್ತದೆ. ಯಾವನೋ ಏನೋ ಹೇಳಿದ ಎಂದು ಅದನ್ನು ದೊಡ್ಡದಾಗಿ ಮಾಡಲಾಗುತ್ತದೆ. ಅದಕ್ಕೆ ಉಪ್ಪು-ಖಾರ ಕೂಡ ಸೇರಿಸಲಾಗುತ್ತದೆ. ಆರೋಪಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿ ಹೇಳಿದ್ದು ಸತ್ಯವೇ? ಎಂದು ಯೋಚಿಸುವ ವ್ಯವಧಾನವೂ ಇಲ್ಲ~ ಎಂದು ಯುವಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT