ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂದೋಲನದಿಂದ ದೂರ ಉಳಿದ ಹೆಗ್ಡೆ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಸ್ಸಾರ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಗಾಂಧಿವಾದಿ ಅಣ್ಣಾ ಹಜಾರೆ ತಂಡ ನಡೆಸುತ್ತಿರುವ ಆಂದೋಲನದಿಂದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ದೂರ ಉಳಿಯಲು ನಿರ್ಧರಿಸಿದ್ದಾರೆ. ಅಣ್ಣಾ ತಂಡದ ಸದಸ್ಯರು ಪಕ್ಷವೊಂದನ್ನು ಗುರಿಯಾಗಿಸಿಕೊಂಡು ಹೋರಾಟಕ್ಕೆ ಮುಂದಾಗಿರುವುದು ಅವರ ಈ ನಿರ್ಧಾರಕ್ಕೆ ಕಾರಣ.

ಅಣ್ಣಾ ಹಜಾರೆ ತಂಡದಲ್ಲಿನ ಪ್ರಮುಖರು ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿಕೊಂಡು ಹೋರಾಟ ಆರಂಭಿಸಿರುವ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಸಂತೋಷ್ ಹೆಗ್ಡೆ, `ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಒಂದೇ ಶಾಲೆಯಿಂದ ಬಂದವರು. ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ವಿರುದ್ಧ ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ~ ಎಂದರು. ಗೋವಾ ಪ್ರವಾಸದಲ್ಲಿರುವ ಅವರು ಸೋಮವಾರ ಈ ಕುರಿತು ತಮ್ಮ ನಿಲುವನ್ನು ಪ್ರಕಟಿಸಲು ಯೋಚಿಸಿದ್ದಾರೆ.

`ಪ್ರಬಲ ಲೋಕಪಾಲ ಮಸೂದೆಯ ಜಾರಿಗೆ ಒತ್ತಾಯಿಸಿ ಆರಂಭವಾದ ಹೋರಾಟಕ್ಕೆ ನಾನು ಪೂರ್ಣ ಬೆಂಬಲ ಸೂಚಿಸಿದ್ದೆ. ಅದು ರಾಜಕೀಯದ ಸ್ಪರ್ಶ ಇಲ್ಲದೇ ಆರಂಭವಾಗಿತ್ತು. ಈವರೆಗೂ ಹಾಗೆಯೇ ಮುಂದುವರಿದಿತ್ತು. ಆದರೆ, ಅಣ್ಣಾ ತಂಡದ ಕೆಲ ಸದಸ್ಯರು ಒಂದು ಪಕ್ಷವನ್ನು ನೇರವಾಗಿ ವಿರೋಧಿಸುವುದರಿಂದ ಹೋರಾಟಕ್ಕೆ ರಾಜಕೀಯದ ನಂಟಿನ ಆರೋಪ ಅಂಟಿಕೊಳ್ಳುವ ಅಪಾಯ ಸೃಷ್ಟಿಯಾಗಿದೆ. ಇದು ಸರಿಯಾದ ಮಾರ್ಗವಲ್ಲ~ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

`ಭ್ರಷ್ಟಾಚಾರದ ವಿಷಯದಲ್ಲಿ ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಒಬ್ಬ ರಾಜಕೀಯ ಮುಖಂಡನ ವಿರುದ್ಧ ಹೋರಾಟ ನಡೆಸುವಂತಹ ಪರಿಸ್ಥಿತಿ ಭಾರತದಲ್ಲಿ ಇಲ್ಲ. ಈಗ ಇರುವ ಹಲವು ರಾಜಕೀಯ ಪಕ್ಷಗಳಿಗೆ ಭ್ರಷ್ಟಾಚಾರದ ಕೊಳೆ ಅಂಟಿಕೊಂಡಿದೆ.
 
ಬಹುತೇಕ ರಾಜಕಾರಣಿಗಳು ಒಂದೇ ಶಾಲೆಯ `ವಿದ್ಯಾರ್ಥಿ~ಗಳು. ಹೀಗಿರುವಾಗ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ನಾವು ಕಾಂಗ್ರೆಸ್ ಅಥವಾ ಇತರೆ ಯಾವುದೇ ಒಂದು ರಾಜಕೀಯ ಪಕ್ಷವನ್ನು ವಿರೋಧಿಸುವಂತೆ ಜನತೆಗೆ ಕರೆ ನೀಡುವುದರಲ್ಲಿ ಅರ್ಥವೇ ಇಲ್ಲ~ ಎಂದರು.

ಚರ್ಚೆ ನಡೆಸಿಲ್ಲ: `ಅಣ್ಣಾ ತಂಡದ ಹೆಸರಿನಲ್ಲಿ ಹಿಸ್ಸಾರ್‌ನಲ್ಲಿ ಆಂದೋಲನ ನಡೆಸುವ ಬಗ್ಗೆ ಯಾರೂ ನನ್ನ ಜೊತೆ ಚರ್ಚಿಸಿಲ್ಲ. ನಾನು ಅಣ್ಣಾ ಹಜಾರೆ ಅವರ ರಾಜಕೀಯರಹಿತ ಹೋರಾಟವನ್ನು ಮಾತ್ರವೇ ಬೆಂಬಲಿಸುತ್ತೇನೆ ಎಂದು ಈಗಾಗಲೇ ಅವರಿಗೆ ಸ್ಪಷ್ಟಪಡಿಸಿದ್ದೇನೆ. ಮುಂದಿನ ದಿನಗಳಲ್ಲೂ ಅದೇ ನಿಲುವನ್ನು ಕಾಯ್ದುಕೊಳ್ಳುತ್ತೇನೆ. ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ನಡೆಯುವ, ರಾಜಕೀಯ ಸ್ಪರ್ಶವಿಲ್ಲದ ಹೋರಾಟಗಳಲ್ಲಿ ಮಾತ್ರ ಭಾಗವಹಿಸುತ್ತೇನೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಸ್ಸಾರ್‌ನಲ್ಲಿ ಈಗ ಆಂದೋಲನ ಆರಂಭಿಸಿರುವವರು ತುಳಿದಿರುವ ಹಾದಿ ಸರಿಯೋ? ತಪ್ಪೋ? ಎಂಬುದನ್ನು ವ್ಯಾಖ್ಯಾನಿಸಲು ತಾವು ಹೋಗುವುದಿಲ್ಲ. ಅದನ್ನು ಆಂದೋಲನ ಆರಂಭಿಸಿರುವವರೇ ಮಾಡಬೇಕು. ತಾವು ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ. ರಾಜಕೀಯವನ್ನೂ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT