ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪುನರ್‌ರಚನೆ ಮಸೂದೆ ಮಂಡನೆ

ಸೀಮಾಂಧ್ರ ಶಾಸಕರಿಂದ ಮಸೂದೆ ಪ್ರತಿಗೆ ಬೆಂಕಿ ಹಚ್ಚಿ ಪ್ರತಿಭಟನೆ
Last Updated 17 ಡಿಸೆಂಬರ್ 2013, 9:34 IST
ಅಕ್ಷರ ಗಾತ್ರ

ಹೈದರಾಬಾದ್‌: ಸೀಮಾಂಧ್ರ ಶಾಸಕರ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೂ ಆಂಧ್ರಪ್ರದೇಶ ಪುನರ್‌­ರಚನೆ ಮಸೂದೆ 2013 ಆಂಧ್ರ ವಿಧಾನಸಭೆಯಲ್ಲಿ ಸೋಮವಾರ ಮಂಡನೆಯಾಯಿತು.

ಮಸೂದೆ ಮಂಡನೆಯಾಗುತ್ತಿದ್ದಂತೆ  ತೀವ್ರ ಗದ್ದಲ ಉಂಟಾಗಿ ಅನೇಕ ನಾಟಕೀಯ ಬೆಳವಣಿಗೆಗಳಿಗೆ ವಿಧಾನ­ಸಭೆ ಸಾಕ್ಷಿಯಾಯಿತು.

ಆಂಧ್ರ ವಿಭಜನೆಗೆ ಮೊದಲಿ­ನಿಂ­ದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದ ಮುಖ್ಯಮಂತ್ರಿ ಎನ್‌.ಕಿರಣ್‌­ಕುಮಾರ್‌ ರೆಡ್ಡಿ ಅವರು ಅನಾರೋಗ್ಯದ ಕಾರಣ ಸದನಕ್ಕೆ ಗೈರು ಹಾಜರಾ­ಗಿದ್ದರು.

ರೆಡ್ಡಿ ಅನುಪಸ್ಥಿತಿಯಲ್ಲಿ ಮಸೂದೆ ಮಂಡನೆ­ಯಾ­ಗುತ್ತಿದ್ದಂತೆಯೇ ಸೀಮಾಂಧ್ರ ಶಾಸಕರು ವಿರೋಧ ಸೂಚಿಸಿದರು. ಅಲ್ಲದೇ ಘೋಷಣೆ­ಗಳನ್ನು ಕೂಗುತ್ತ ಸ್ಪೀಕರ್‌ ಪೀಠದ ಬಳಿ ಜಮಾಯಿಸಿದರು.

ಶಾಸಕರ ಈ ವರ್ತನೆಯನ್ನು ತೆಲಂಗಾಣ ಭಾಗದ ಜನಪ್ರತಿನಿಧಿಗಳು ತೀವ್ರವಾಗಿ ಖಂಡಿಸಿ­ದರು. ಶಾಸಕರ ವಾಗ್ವಾದ, ಆರೋಪ ಪ್ರತ್ಯಾರೋಪದಿಂದ ವಿಧಾನಸಭೆ ಅಕ್ಷರಶಃ ಗೊಂದಲದ ಗೂಡಾಗಿತ್ತು. ತೆಲಗುದೇಶಂಗೆ ಸೇರಿದ ಸೀಮಾಂಧ್ರ ಶಾಸಕರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿದರೆ, ಸೀಮಾಂಧ್ರದ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕರು, ಸದನದ ಹೊರಗೆ ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಸೂಚಿಸಿದರು. ಈ ಕ್ರಮವನ್ನು ತೆಲಂ­ಗಾಣ ಭಾಗದ ಶಾಸಕರು ತೀವ್ರವಾಗಿ ಖಂಡಿಸಿದರು.

ತೆಲಂಗಾಣ ರಾಷ್ಟ್ರ ಸಮಿತಿ  ಮುಖ್ಯಸ್ಥ ಇ. ರಾಜೇಂದ್ರ ‘ಇದು ತೆಲಂಗಾಣ ಜನತೆಗೆ ಮಾಡಿದ ಅವಮಾನ. ಅವರು ಕೂಡಲೆ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಮಸೂದೆಯ ಪ್ರಮುಖ ಅಂಶಗಳು
*ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ತೆಲಂಗಾಣ ರಾಜ್ಯ 119 ವಿಧಾನಸಭೆ ಸದಸ್ಯರು, 40 ವಿಧಾನ ಪರಿಷತ್‌ ಸದಸ್ಯರು, 17 ಲೋಕಸಭೆ ಮತ್ತು 7 ರಾಜ್ಯಸಭೆ ಸದಸ್ಯರನ್ನು ಒಳಗೊಂಡಿರಲಿದೆ.

*ಆಂಧ್ರ ಪ್ರದೇಶದಲ್ಲಿ 175 ಚುನಾಯಿತ ಶಾಸಕರು, 50 ವಿಧಾನ ಪರಿಷತ್‌ ಸದಸ್ಯರು, 25 ಲೋಕಸಭೆ ಮತ್ತು 11 ರಾಜ್ಯಸಭೆ ಸದಸ್ಯರು ಇರಲಿದ್ದಾರೆ.

* ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸದ್ಯದ ಮಟ್ಟಿಗೆ ಒಂದೇ ಹೈಕೋರ್ಟ್‌ ಇರಲಿದೆ. ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ಹೈಕೋರ್ಟ್‌ ಅಸ್ತಿತ್ವಕ್ಕೆ ಬರುವವರೆಗೆ ಎರಡೂ ರಾಜ್ಯಗಳು ಜನಸಂಖ್ಯೆಗೆ ಅನುಗುಣವಾಗಿ ಖರ್ಚನ್ನು ಭರಿಸಬೇಕು.

* ಆಂಧ್ರ ಪ್ರದೇಶ ಪುನರ್‌ರಚನೆ ಮಸೂದೆ–2013 ಜಾರಿಗೆ ಬಂದ ಎರಡು ತಿಂಗಳ ಒಳಗಾಗಿ ಕೇಂದ್ರ ಸರ್ಕಾರ ಮತ್ತು ಜಲಸಂಪನ್ಮೂಲ ಸಚಿವಾಲಯ, ಕೃಷ್ಣಾ ನದಿ ನಿರ್ವಹಣಾ ಮಂಡಳಿ ಮತ್ತು ಗೋದಾವರಿ ನದಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು.

*ಅಖಿಲ ಭಾರತ ಸೇವೆ ಪ್ರಕಾರ ಎರಡೂ ರಾಜ್ಯಗಳಲ್ಲಿ ಪ್ರತ್ಯೇಕ ವೃಂದ ನೇಮಕಾತಿಗೆ ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT