ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಶಾಸಕರ ಬೆಂಬಲಿಗರಿಂದ ಪೊಲೀಸರ ಮೇಲೆ ಹಲ್ಲೆ

Last Updated 19 ಮೇ 2012, 20:15 IST
ಅಕ್ಷರ ಗಾತ್ರ

ಬೆಂಗಳೂರು: ಅತಿ ವೇಗವಾಗಿ ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ ಸಂಬಂಧ ದೂರು ದಾಖಲಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಆಂಧ್ರಪ್ರದೇಶದ ಕಾಂಗ್ರೆಸ್ ಶಾಸಕ ಮಧುಸೂದನ್ ಗುಪ್ತ ಅವರ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ರಸ್ತೆಯಲ್ಲಿ ಶನಿವಾರ ನಡೆದಿದೆ.

ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆ ಎಸ್‌ಐ ರಾಮಚಂದ್ರ ಭಜಂತ್ರಿ ಅವರು, ಶಾಸಕರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎಸ್‌ಐ ಭಜಂತ್ರಿ, ಮುಖ್ಯ ಕಾನ್‌ಸ್ಟೇಬಲ್ ರಾಮಕೃಷ್ಣ ಮತ್ತು ಕಾನ್‌ಸ್ಟೇಬಲ್ ಶಿವಕುಮಾರ್ ಅವರು ಚಿಕ್ಕಜಾಲ ವೃತ್ತದ ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಂಟರ್‌ಸೆಪ್ಟರ್ ವಾಹನ ನಿಲ್ಲಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಶಾಸಕರ ಬೆಂಬಲಿಗರ ಕಾರುಗಳು (ನೋಂದಣಿ ಸಂಖ್ಯೆ ಎಪಿ-02, ಎಎಲ್-6207 ಮತ್ತು ಎಪಿ-02, ಟಿವಿ-0679) ಅತಿ ವೇಗವಾಗಿ ಚಲಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ, ಅವರ ಕಾರುಗಳನ್ನು ತಡೆದು ಪ್ರಕರಣ ದಾಖಲಿಸಿದರು. ಬಳಿಕ ದೂರಿನ ಪ್ರತಿ ನೀಡಿ ರೂ 600 ದಂಡ ಕಟ್ಟುವಂತೆ ಸೂಚಿಸಿದರು.

ಆದರೆ, ದಂಡ ಕಟ್ಟಲು ನಿರಾಕರಿಸಿದ ಶಾಸಕರ ಬೆಂಬಲಿಗರು ಪೊಲೀಸ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಅಲ್ಲದೇ, ಶಿವಕುಮಾರ್ ಅವರನ್ನು ಎಳೆದಾಡಿ ಹಲ್ಲೆ ನಡೆಸಿ ಹೊರಟು ಹೋದರು. ಈ ಬಗ್ಗೆ ಭಜಂತ್ರಿ ಅವರು ಚಿಕ್ಕಜಾಲ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಶಾಸಕರ ಬೆಂಬಲಿಗರ ಕಾರುಗಳನ್ನು ಬೆನ್ನಟ್ಟಿ 6 ಮಂದಿಯನ್ನು ಬಂಧಿಸಿದರು.

ಆರೋಪಿಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಮಧುಸೂದನ್ ಗುಪ್ತ ಅವರ ಆರೋಗ್ಯ ವಿಚಾರಿಸಲು ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಆಂಧ್ರಪ್ರದೇಶದ ಗುಂತಕಲ್ ನಗರಸಭೆ ಮಾಜಿ ಅಧ್ಯಕ್ಷ ರಾಮಾಂಜನೇಯ, ರಮೇಶ್, ಧನಂಜಯ್, ಮಲ್ಲೇಶ್, ಮನ್ಸೂರ್ ಮತ್ತು ಮೆಹಬೂಬ್ ಪಾಷಾ ಎಂಬುವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ .

ವೇಗ ಮಿತಿ: `ಬಿಐಎಎಲ್ ರಸ್ತೆಯಲ್ಲಿ ವಾಹನಗಳಿಗೆ 80 ಕಿ.ಮೀ ವೇಗ ಮಿತಿ ನಿಗದಿಪಡಿಸಲಾಗಿದೆ. ಆದರೆ, ಶಾಸಕರ ಬೆಂಬಲಿಗರ ಒಂದು ಕಾರು 86 ಕಿ.ಮೀ ಹಾಗೂ ಮತ್ತೊಂದು ಕಾರು 98 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರ ವಾಹನಗಳನ್ನು ತಡೆದು ದೂರು ದಾಖಲಿಸಲಾಯಿತು~ ಎಂದು ಭಜಂತ್ರಿ `ಪ್ರಜಾವಾಣಿ~ಗೆ ತಿಳಿಸಿದರು.

`ಅವರ ಕಾರುಗಳು ಅತಿ ವೇಗವಾಗಿ ಚಲಿಸುತ್ತಿದ್ದ ದೃಶ್ಯ ಇಂಟರ್‌ಸೆಪ್ಟರ್ ವಾಹನದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯವನ್ನು ಅವರಿಗೆ ತೋರಿಸಲಾಯಿತು. ಆದರೂ ಅವರು ಸಿಬ್ಬಂದಿ ಜತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದರು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT