ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದಲ್ಲಿ ಚಳಿಗಾಳಿಗೆ 15 ಸಾವು

Last Updated 17 ಜನವರಿ 2012, 10:25 IST
ಅಕ್ಷರ ಗಾತ್ರ

ಹೈದರಾಬಾದ್/ಜೈಪುರ/ ಭುವನೇಶ್ವರ (ಪಿಟಿಐ/ಐಎಎನ್‌ಎಸ್) ; ಸಾಮಾನ್ಯವಾಗಿ ಉರಿ ಬಿಸಿಲಿಗೆ ಹೆಸರುವಾಸಿಯಾದ ಆಂಧ್ರಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಬೀಸುತ್ತಿರುವ ತೀವ್ರ  ಚಳಿಗಾಳಿಗೆ  15 ಮಂದಿ ಮೃತಪಟ್ಟಿದ್ದಾರೆ.

ಕರೀಂನಗರ ಜಿಲ್ಲೆಯಲ್ಲಿ 5 ಮಂದಿ, ವಿಶಾಖಪಟ್ಟಣ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ತಲಾ 4 ಮಂದಿ,  ನಳಗೊಂಡ ಹಾಗೂ ವಾರಂಗಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವೃದ್ಧರು ಹಾಗೂ ಭಿಕ್ಷುಕರೆ ಹೆಚ್ಚಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಜ್ಯದ 23 ಜಿಲ್ಲೆಗಳಲ್ಲಿ ಸಾಮಾನ್ಯ ತಾಪಮಾನದಲ್ಲಿ 3 ರಿಂದ 9 ಡಿಗ್ರಿಯಷ್ಟು ಕುಸಿತ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ ಎಂದು ಹೇಳಲಾಗಿದ್ದರೂ ಹವಾಮಾನ ಇಲಾಖೆ ಇದನ್ನು ಖಚಿತಪಡಿಸಿಲ್ಲ.

ರಾಜ್ಯದಲ್ಲಿನ ತೀವ್ರವಾದ ತಾಪಮಾನ ಕುಸಿತವು ಆಶ್ಚರ್ಯಕ್ಕೆಡೆಮಾಡಿದೆ. ಇದುವರೆಗೂ ಚಳಿಗಾಳಿಯಿಂದ ರಾಜ್ಯದಲ್ಲಿ ಯಾರೊಬ್ಬರೂ ಸಾವನ್ನಪ್ಪಿದ ಉದಾಹರಣೆ ಇರಲಿಲ್ಲ.

ಹಿಮಾಲಯದಿಂದ ಶೀತಗಾಳಿ ಬೀಸುತ್ತಿರುವುದು ತಾಪಮಾನ ಕುಸಿತಕ್ಕೆ ಕಾರಣ ಎಂದು ವಿಶಾಖಪಟ್ಟಣಂನ ಚಂಡಮಾರುತ ಮುನ್ಸೂಚನಾ ಕೇಂದ್ರ ತಿಳಿಸಿದೆ. ಗುರುವಾರದವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಆದಿಲಾಬಾದ್ ಜಿಲ್ಲೆಯಲ್ಲಿ ರಾತ್ರಿ ತಾಪಮಾನವು 5 ಡಿಗ್ರಿಗಿಂತ ಕಡಿಮೆ ದಾಖಲಾಗಿದ್ದರೆ, ಇದೇ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿ ಶತಮಾನದಲ್ಲೆ ಕಡಿಮೆ ತಾಪಮಾನವಾದ 4.2 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದಿದೆ. ಇದೇ ರೀತಿ ಕರಾವಳಿ ಜಿಲ್ಲೆಯಾದ ಶ್ರೀಕಾಕುಳಂನಲ್ಲಿ ದಶಕದಲ್ಲೇ ಅತಿ ಕಡಿಮೆ ತಾಪಮಾನವಾದ 9 ಡಿಗ್ರಿ ಸೆಲ್ಶಿಯಸ್‌ದಾಖಲಾಗಿದ್ದರೆ, ವಿಶಾಖಪಟ್ಟಣಂವು  ಕಳೆದ 50 ವರ್ಷಗಳಲ್ಲೆ ಕಡಿಮೆ ತಾಪಮಾನ ದಾಖಲಿಸಿದೆ.
ರಾಜಸ್ತಾನದಲ್ಲಿ ಚಳಿ ಮತ್ತೆ ತನ್ನ ಪ್ರತಾಪ ತೋರಿದ್ದು, ಗುಲಾಬಿನಗರ ಜೈಪುರ, ಪಿಲಾನಿ ಹಾಗೂ ಬಿಕನೇರ್‌ನ ತಾಪಮಾನದಲ್ಲಿ ತೀವ್ರ ಕುಸಿತ ಉಂಟಾಗಿದೆ.

ತೀವ್ರ ಚಳಿಯನ್ನು ತಾಳಲಾರದೆ ಮನೆಯಲ್ಲಿ ಸಣ್ಣಗೆ ಬೆಂಕಿ ಹೊತ್ತಿಸಿ ಬೆಚ್ಚಗೆ ಮಲಗಿದ್ದವರಲ್ಲಿ 70 ವರ್ಷದ ವೃದ್ಧರೊಬ್ಬರು ಉಸಿರುಗಟ್ಟಿ ಮೃತಪಟ್ಟು ಕುಟುಂಬದ ಇತರೆ 6 ಮಂದಿ ಅಸ್ವಸ್ಥಗೊಂಡ ಘಟನೆ ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿ ನಡೆದಿದೆ.

ಬೆಳಿಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಬಾಗಿಲನ್ನು ಮುರಿದು ಕೋಣೆಯೊಳಕ್ಕೆ ಪ್ರವೇಶಿಸಿ ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿದರು. ಕಂದಮಾಲ್ ಜಿಲ್ಲೆಯ  ತಾಪಮಾನವು ಮೂರು ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT