ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಿಸಿದ ಉಮ್ಮತ್ ಬೊಳಕ್ ನೃತ್ಯ ಸ್ಪರ್ಧೆ

Last Updated 23 ಜನವರಿ 2012, 5:50 IST
ಅಕ್ಷರ ಗಾತ್ರ

 ಗೋಣಿಕೊಪ್ಪಲು : ಮಿರಿಮಿರಿ ಮಿಂಚುವ ಬಣ್ಣದ ಬಟ್ಟೆ ತೊಟ್ಟ ಮಹಿಳೆಯರು, ದಟ್ಟಿಕುಪ್ಪಸ ತೊಟ್ಟ ಪುರುಷರು  ಹಾಡಿನ ತಾಳಕ್ಕೆ ಹೆಜ್ಜೆಹಾಕುತ್ತಾ  ಪೊನ್ನಂಪೇಟೆ ನಿನಾದ ಶಾಲೆಯ ಆವರಣದಲ್ಲಿ ನರ್ತಿಸಿದ ನೃತ್ಯ ಮನಮೋಹಕವಾಗಿತ್ತು.

 ಗೋಣಿಕೊಪ್ಪಲು ಮುಳಿಯ  ಜ್ಯುವೆಲರ್ಸ್‌ ಹಾಗೂ ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯ ಆಶ್ರಯದಲ್ಲಿ  ಭಾನುವಾರ ನಡೆದ  ಕೊಡವ ಕುಟುಂಬಗಳ ನಡುವಿನ `ಉಮ್ಮತ್ ಬೊಳಕ್~ ಕೊಡವ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಅತ್ಯಂತ ಆಕರ್ಷಕವಾಗಿದ್ದು  ಪ್ರೇಕ್ಷಕರಿಗೆ ಮುದನೀಡಿತು.  ಮೈಸೂರು, ಬೆಂಗಳೂರು ಹಾಗೂ ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ  ಸ್ಪರ್ಧಿಗಳು  ಉಮ್ಮತ್ತಾಟ್ ಮತ್ತು ಬೊಳಕಾಟ್ ನೃತ್ಯವನ್ನು ವಿವಿಧ ಬಗೆಯಲ್ಲಿ ಅಭಿವ್ಯಕ್ತಿಸಿದರು.

   ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತಂಡಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಮುಕ್ಕೋಡ್ಲುವಿನ ಕಾಳಚಂಡ ಪಳಂಗಪ್ಪ ಅವರ ತಂಡ ಬೊಳಕಾಟ್ ನೃತ್ಯವನ್ನು ಅತ್ಯುತ್ತಮವಾಗಿ ನರ್ತಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಬಾಳೋಪಾಟ್ ಹಾಡಿಗೆ ತಕ್ಕಂತೆ ಹೆಜ್ಜೆಹಾಕಿ ಪ್ರಾಚೀನ ಕೊಡವ ಸಂಸ್ಕೃತಿಯ ನೃತ್ಯಕ್ಕೆ ಜೀವ ತುಂಬಿದರು.

ಕಾರ್ಯಕ್ರಮ ಉದ್ಘಾಟಿಸಿದ  ಮಡಿಕೇರಿಯ ನಿವೃತ್ತ ಪ್ರಾಂಶುಪಾಲರಾದ  ಡಾ.ಪುಷ್ಪ ಕುಟ್ಟಣ್ಣ ಮಾತನಾಡಿ  ಸಂಸ್ಕೃತಿಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಕೇವಲ ಒಂದು ಜನಾಂಗಕ್ಕೆ ಸಂಸ್ಕೃತಿಯನ್ನು  ಸೀಮಿತಗೊಳಿಸಿದರೆ ಅದು ಬೆಳೆಯಲಾರದು. ಸಮುದಾಯದ ಎಲ್ಲ ಜನರಿಗೆ  ಕಲಿಸಿದಾಗ ಮಾತ್ರ  ಉಳಿಯಲು ಸಾಧ್ಯ ಎಂದು ಹೇಳಿದರು.

ತುಳು ಅಕಾಡೆಮಿ ತುಳು ಭಾಷೆ ಗೊತ್ತಿರುವ ಎಲ್ಲರಿಗೂ ತುಳು ಸಂಸ್ಕೃತಿ ಕಲಿಸುತ್ತಿದೆ. ಇಂತಹದ್ದೆ ಭಾವನೆ ಕೊಡವ ಸಾಹಿತ್ಯ ಅಕಾಡೆಮಿಗೂ ಇರಬೇಕು. ಎಲ್ಲರನ್ನು ಸೇರಿಸಿಕೊಂಡು ಮುಂದುವರಿದರೆ ಅದೇ ದೇಶದ ದೊಡ್ಡ ಶಕ್ತಿ ಎಂದು ಅಭಿಪ್ರಾಯಪಟ್ಟರು.

  ಮುಳಿಯ ಜ್ಯುವೆಲರ್ಸ್‌ನ ಮುಖ್ಯ ವ್ಯವಸ್ಥಾಪಕ  ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಸಮಾಜದಿಂದ ಗಳಿಸಿದ್ದನ್ನು ಮರಳಿ ಸಮಾಜಕ್ಕೆ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ  ಸಂಸ್ಕೃತಿಯ ಉಳಿವಿಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

  ಪರಿಸರವನ್ನು ಕಾಡುತ್ತಿರುವ ಪ್ಲಾಸ್ಟಿಕ್ ನಿಷೇದದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ  ಹಾಗೂ ಕಿವುಡು ಮತ್ತು ಮೂಖ ಮಕ್ಕಳಿಗೆ ಚಿಕಿತ್ಸೆ ನೀಡುವ ಪ್ರಮುಖ ಕಾರ್ಯಕ್ರಮಗಳನ್ನು ಮುಂದೆ  ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

  ನಿನಾದ ಸಂಸ್ಥೆಯ ಕಾರ್ಯದರ್ಶಿ ಚೇಂದಿರ  ಬೋಪಣ್ಣ,  ಕಾರ್ಯಕ್ರಮ ಸಂಯೋಜಕ ತೀತಿರ ಸೋಮಣ್ಣ,  ತೀತಿರ ಬೋಪಣ್ಣ ಹಾಜರಿದ್ದರು. ನಿನಾದ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ಬೋಪಣ್ಣ ಸ್ವಾಗತಿಸಿದರು. ಮದ್ರೀರ ಗಣಪತಿ, ಸಣ್ಣುವಂಡ ನೀರಜ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT