ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕ ಗುಂಡು ತಗುಲಿ ಇಬ್ಬರಿಗೆ ಗಾಯ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಂಕಲಗಿ (ಗೋಕಾಕ): ಗುಂಡೇಟಿನಿಂದ ಇಬ್ಬರು ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಸುಲಧಾಳ ಗ್ರಾಮದ ಹೊರವಲಯದ ಶ್ರೀ ಜಡಿಸಿದ್ಧೇಶ್ವರ ಮಠದ ಆವರಣದಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಸಂತೋಷ ಮೋದಗಿ ಮತ್ತು ಸುಲಧಾಳ ಗ್ರಾಮದ ನಾಗನಗೌಡ ಪಾಟೀಲ ಎಂದು ಗುರುತಿಸಲಾಗಿದೆ. ಸಂತೋಷ ಅವರ ಕುತ್ತಿಗೆಗೆ ಮತ್ತು ನಾಗನಗೌಡ ಅವರ ಕೈಗೆ ಗಾಯವಾಗಿದೆ. ಅವರಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗ್ರಾಮದ ಶ್ರೀ ಜಡಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಠದ ಆವರಣದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನದ ಉದ್ಘಾಟನೆ ವೇಳೆ ಖುಷಿಗಾಗಿ ಆಕಾಶಕ್ಕೆ ಗುಂಡು ಹಾರಿಸುವ ವಾಡಿಕೆ ಇಲ್ಲಿದೆ. ಅದರಂತೆ ಮುಖ್ಯ ಅತಿಥಿಯಾಗಿದ್ದ ಧಾರವಾಡದ ಶಿವಪ್ಪ ಪ್ರಭುಲಾಪುರೆ ರಿವಾಲ್ವರ್‌ನಿಂದ ಮೇಲೆ ಗುಂಡು ಹಾರಿಸಿದ್ದಾರೆ. ಅದು ಆಕಾಶದತ್ತ ಚಿಮ್ಮದೆ ವೇದಿಕೆಗೆ ಅಳವಡಿಸಿದ್ದ ಕಬ್ಬಿಣ ಪಟ್ಟಿಗೆ ತಾಗಿ, ಕೆಳಗೆ ಬಂದು ಇಬ್ಬರಿಗೆ ತಗುಲಿ ಗಾಯಗಳಾಗಿವೆ.

ಇನ್ನೊಬ್ಬ ಅತಿಥಿ, ಅಂಕಲಗಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಂ.ಎಚ್ .ಕಾಂಬಳೆ ಅವರು ಘಟನೆಯಿಂದ ತುಸು ಹೊತ್ತು ಏನಾಯಿತೆಂಬುದು ತಿಳಿಯದೆ ಗಲಿಬಿಲಿಗೊಂಡರು ಎಂದು ಪ್ರತ್ಯಕ್ಷದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಈ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಶಿವಪ್ಪ ಪ್ರಭಾಲಾಪುರೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಜೆಎಮ್‌ಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT