ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕ ಗುಂಡು ಹಾರಿ ಗ್ರಾಹಕನಿಗೆ ಗಾಯ

ಎಸ್‌ಬಿಐ ಶಾಖೆಯಲ್ಲಿ ದುರ್ಘಟನೆ
Last Updated 22 ಜುಲೈ 2013, 19:27 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ನ ಹಣ ಸಾಗಿಸುವ ವಾಹನದ ಭದ್ರತಾ ಸಿಬ್ಬಂದಿಯ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಗ್ರಾಹಕರೊಬ್ಬರು ಗಾಯಗೊಂಡಿರುವ ಘಟನೆ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಗಾಯಾಳು ಚಂದ್ರು (35) ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಶ್ಚಿಮ ಕಾರ್ಡ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರಾಜಾಜಿನಗರ ಶಾಖೆಯ ಬಳಿ ಈ ದುರ್ಘಟನೆ ನಡೆದಿದ್ದು, ಘಟನೆ ಸಂಬಂಧ ಸೆಕ್ಯುರಿಟಿ ಗಾರ್ಡ್ ಸಂಪತ್‌ರಾಜ್ (58) ಅವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಆ ಬ್ಯಾಂಕ್‌ನಿಂದ ಇತರೆ ಶಾಖೆಗಳಿಗೆ ಹಣ ಸಾಗಿಸುವ ವಾಹನದಲ್ಲಿ ಸಂಪತ್‌ರಾಜ್ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದರು.
ಬ್ಯಾಂಕ್‌ನ ಸಿಬ್ಬಂದಿ ಬೆಳಿಗ್ಗೆ ಹಣ ತುಂಬಿದ ಪೆಟ್ಟಿಗೆಗಳನ್ನು ವಾಹನದಲ್ಲಿ ಇಟ್ಟುಕೊಂಡು ಹೊರಡಲು ಅಣಿಯಾಗುತ್ತಿದ್ದರು. ಈ ಸಂದರ್ಭದಲ್ಲಿ ಸಂಪತ್‌ರಾಜ್, ವಾಹನದ ಮುಂಬಾಗಿಲು ತೆರೆದು ವಾಹನಕ್ಕೆ ಹತ್ತಲು ಮುಂದಾಗಿದ್ದಾರೆ.

ಆಗ ಅವರ ಕೈನಲ್ಲಿದ್ದ ಜೋಡಿ ನಳಿಕೆ ಬಂದೂಕಿಗೆ ವಾಹನದ ಬಾಗಿಲು ಆಕಸ್ಮಿಕವಾಗಿ ತಾಗಿ ಗುಂಡು ಹಾರಿದೆ. ಈ ವೇಳೆ ಸಮೀಪದಲ್ಲೇ ಬ್ಯಾಂಕ್‌ನ ಪ್ರವೇಶದ್ವಾರದ ಬಳಿ ನಿಂತಿದ್ದ ಚಂದ್ರು ಅವರಿಗೆ ಗುಂಡಿನ ಕಬ್ಬಿಣದ ಚೂರುಗಳು (ಪೆಲೆಟ್) ಹೊಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವೇಳೆ ಬಂದೂಕಿನ ನಳಿಕೆ ಬ್ಯಾಂಕ್‌ನ ಕಟ್ಟಡದ ಮೆಟ್ಟಿಲುಗಳ ಕಡೆಗೆ ಮುಖ ಮಾಡಿದ್ದರಿಂದ ಗುಂಡು ಮೆಟ್ಟಿಲಿಗೆ ತಾಗಿದೆ. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಗುಂಡಿನ ಕಬ್ಬಿಣದ ಚೂರುಗಳು ಹೊಕ್ಕಿದ್ದರಿಂದ ಚಂದ್ರು ಅವರ ಎಡಗಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಂಪಾಪುರ ಅಗ್ರಹಾರ ನಿವಾಸಿಯಾದ ಅವರು ಎಲೆಕ್ಟ್ರಿಷಿಯನ್ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಂಪತ್‌ರಾಜ್, ಹಲಸೂರು ನಿವಾಸಿ. ಭಾರತೀಯ ಸೇನೆಯಲ್ಲಿ ನಾಯಕ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಎಸ್‌ಬಿಐ ಶಾಖೆಯಲ್ಲಿ ಎಂಟು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿದ್ದರು. ಅವರ ವಿರುದ್ಧ ಶಸ್ತ್ರಾಸ್ತ್ರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ (ಐಪಿಸಿ-287) ಮತ್ತು ಬೇರೆಯವರ ಸುರಕ್ಷತೆಗೆ ಕುತ್ತು ತಂದ (ಐಪಿಸಿ- 336 ಮತ್ತು 337) ಆರೋಪದ ಮೇಲೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಬ್ಯಾಂಕ್‌ನ ಸಿಬ್ಬಂದಿ ಹಣದ ಪೆಟ್ಟಿಗೆಗಳನ್ನು ವಾಹನದಲ್ಲಿಟ್ಟುಕೊಂಡು ಹೊರಡಲು ಮುಂದಾದಾಗ ಗುಂಡಿನ ಸದ್ದು ಕೇಳಿಸಿತು. ದುಷ್ಕರ್ಮಿಗಳು ಹಣ ದೋಚಲು ಬಂದಿರಬಹುದೆಂದು ಭಾವಿಸಿ ಬಂದೂಕಿನೊಂದಿಗೆ ಕೂಡಲೇ ಸ್ಥಳಕ್ಕೆ ಓಡಿ ಬಂದೆ. ಆದರೆ, ವ್ಯಕ್ತಿಯೊಬ್ಬರ ಕಾಲಿಗೆ ಪೆಟ್ಟಾಗಿ ರಕ್ತ ಸುರಿಯುತ್ತಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು' ಎಂದು ಬ್ಯಾಂಕ್‌ನ ಎಟಿಎಂ ಘಟಕದ ಸೆಕ್ಯುರಿಟಿ ಗಾರ್ಡ್ ಪಾಪಣ್ಣ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT