ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವಾಣಿ ನಮ್ಮತನ ಬೆಳೆಸುವ ಮಾಧ್ಯಮ

Last Updated 20 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ಮಡಿಕೇರಿ: ಟಿ.ವಿ. ಇಂಟರ್‌ನೆಟ್‌ಗಳಂತಹ ಆಧುನಿಕ ಮಾಧ್ಯಮಗಳಿದ್ದರೂ ಆಕಾಶವಾಣಿ ಮಾಧ್ಯಮ ಇಂದಿಗೂ ಕೂಡ ಪ್ರಭಾವಿಯಾಗಿದೆ. ಆಕಾಶವಾಣಿಯು ನಮ್ಮತನವನ್ನು ಬೆಳೆಸುವಂತಹ ಕೆಲಸ ಮಾಡುತ್ತಿದೆ ಎಂದು ಬರಹಗಾರ, ಸಂಪಾಜೆಯ ಪ.ಪೂ ಕಾಲೇಜಿನ ಉಪನ್ಯಾಸಕ ಟಿ.ಕೆ.ಜಿ. ಭಟ್ ಹೇಳಿದರು. 

 ನಗರದಲ್ಲಿ ಶನಿವಾರ ಸಂಜೆ ಮಡಿಕೇರಿ ಆಕಾಶವಾಣಿಯು ಹಮ್ಮಿಕೊಂಡ `ಆಕಾಶವಾಣಿ ಹಬ್ಬ~ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿ ದಿನ, ಪ್ರತಿಕ್ಷಣ ತರಾತುರಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಟಿ.ವಿ ಮಾಧ್ಯಮಗಳು ಬಿತ್ತರಿಸುವುದರಿಂದ ವೀಕ್ಷಕರ ಹೃದಯದ ಆಳಕ್ಕೆ ಇವು ಇಳಿಯುವುದಿಲ್ಲ, ತೇಲಿಸಿಕೊಂಡು ಹೋದಂತೆ ಭಾಸವಾಗುತ್ತವೆ. ಆಕಾಶವಾಣಿ ಕಾರ್ಯಕ್ರಮಗಳು ಕೇಳುಗರನ್ನು ತನ್ನತ್ತ ಸೆಳೆದುಕೊಂಡು, ತನ್ಮಯತೆಯನ್ನು ಸೃಷ್ಟಿಸುತ್ತವೆ. ಹೀಗಾಗಿ ಆಕಾಶವಾಣಿ ಇಂದಿಗೂ ಪ್ರಭಾವಿ ಮಾಧ್ಯಮವಾಗಿ ರೂಪುಗೊಂಡಿದೆ ಎಂದರು.

ಯಕ್ಷಗಾನವು ಕೇವಲ ಮನರಂಜನೆ ಕಲೆಯಾಗಿಲ್ಲ. ಇದಕ್ಕೆ ಆರಾಧನೆ, ಶಿಕ್ಷಣ ಮಾಧ್ಯಮ, ಜಾಗೃತಿ ಹೀಗೆ ಹಲವು ಆಯಾಮಗಳಿವೆ ಎಂದು ಪ್ರಶಂಶಿಸಿದರು.

ಮತ್ತೊಬ್ಬ ಮುಖ್ಯ ಅತಿಥಿಯಾಗಿದ್ದ ಬರಹಗಾರ, ಸಿನಿಮಾ ನಿರ್ಮಾಪಕ ಎನ್.ಎಸ್. ದೇವಿಪ್ರಸಾದ್ ಮಾತನಾಡಿ, ಯಕ್ಷಗಾನದಂತಹ ಸ್ಥಳೀಯ ಕಲೆಗಳನ್ನು ಉಳಿಸಿ, ರಕ್ಷಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಮಾತನಾಡಿ, ಆಕಾಶವಾಣಿ ಹಬ್ಬವೆಂದರೆ ಕೇಳುಗರ ಹಬ್ಬ ಇದ್ದಂತೆ ಎಂದು ಹೇಳಿದರು.

ಟಿ.ವಿ ಚಾನೆಲ್‌ಗಳ ಭರಾಟೆಯಲ್ಲಿ ಆಕಾಶವಾಣಿ ಎಲ್ಲಿ ಮಂಕಾಗಿಬಿಡುತ್ತದೆಯೋ ಎನ್ನುವ ಆತಂಕ ಕಾಡಿತ್ತು. ಆದರೆ, ಹೀಗಾಗಲಿಲ್ಲ. ಆಕಾಶವಾಣಿ ಇಂದಿಗೂ ಕೇಳುಗರ ಅಚ್ಚುಮೆಚ್ಚಿನ ಮಾಧ್ಯಮವಾಗಿಯೇ ಉಳಿದುಕೊಂಡಿದೆ ಎಂದು ಅವರು ಪ್ರಶಂಶಿಸಿದರು.
 

ಆಕಾಶವಾಣಿ ಮಡಿಕೇರಿಯ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್ ಸ್ವಾಗತಿಸಿದರು. ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.

 ಯಕ್ಷಗಾನ ಪ್ರದರ್ಶನ:
 ಸಭಾ ಕಾರ್ಯಕ್ರಮದ ನಂತರ ಎಡನೀರು-ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯ ಕಲಾವಿದರು ಕೃಷ್ಣಲೀಲೆ- ತಾರಕಾಸುರನ ವಧೆ ಪ್ರಸಂಗವನ್ನು ಪ್ರಸ್ತುತ ಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT