ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರೋಶಕ್ಕೆ ವೇದಿಕೆಯಾದ ಕಾರ್ಯಕ್ರಮ

Last Updated 15 ಡಿಸೆಂಬರ್ 2012, 19:51 IST
ಅಕ್ಷರ ಗಾತ್ರ

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿರುದ್ಧ ನಗರದ ಜನರು ಆಕ್ರೋಶ ವ್ಯಕ್ತಪಡಿಸಲು ಶನಿವಾರ ವೇದಿಕೆ ದೊರೆತಿತ್ತು. ಪುರಭವನದಲ್ಲಿ ಆಯೋಜಿಸಿದ್ದ `ಪೌರ ಸೌಲಭ್ಯಗಳ ಅಭಿವೃದ್ಧಿ ಮತ್ತು ಪಾಲಿಕೆಯ ಆಡಳಿತ ಸುಧಾರಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ' ಕಾರ್ಯಕ್ರಮದಲ್ಲಿ ಕಸದ ಸಮಸ್ಯೆ, ರಸ್ತೆಗಳ ಸಮಸ್ಯೆ ಸೇರಿದಂತೆ ನಗರದ ಹಲವು ಸಮಸ್ಯೆಗಳ ಬಗ್ಗೆ ಜನರು ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಎನ್‌ಸಿ ಲೇಔಟ್‌ನ ಅಪಾರ್ಟ್‌ಮೆಂಟ್ ಒಂದರ ನಿವಾಸಿ ಅಮೃತ್ ಕುಮಾರ್, `ಕಸವನ್ನು ವಿಂಗಡಿಸಿ, ಒಣ ಕಸವನ್ನು ಪಾಲಿಕೆಗೆ ನೀಡಲಾಗುತ್ತಿದೆ. ಆದರೆ, ಹಸಿ ಕಸವನ್ನು ಸಂಸ್ಕರಿಸಲು ನಮ್ಮ ಬಳಿ ವ್ಯವಸ್ಥೆಯಿಲ್ಲ. ಇದಕ್ಕೆ ಪಾಲಿಕೆಯು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಗತ್ಯ ನೆರವು ನೀಡಬೇಕು. ಈ ಬಗ್ಗೆ ಪಾಲಿಕೆಯಿಂದ ಸಹಕಾರ ನೀಡುವಂತೆ ಕೇಳುತ್ತಲೇ ಇದ್ದೇವೆ. ಆದರೆ, ಪಾಲಿಕೆ ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ' ಎಂದರು.

ಹಲಸೂರು ನಿವಾಸಿ ಗಜೇಂದ್ರ ಮಾತನಾಡಿ, `ನಗರದ ಕೆಲವು ಮುಖ್ಯರಸ್ತೆಗಳನ್ನು ಮಾತ್ರ ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ, ಬಡಾವಣೆಗಳ ಒಳಗಿನ ರಸ್ತೆಗಳ ಕಡೆಗೆ ಪಾಲಿಕೆ ಗಮನ ನೀಡುತ್ತಿಲ್ಲ. ರಸ್ತೆಗಳ ಅಭಿವೃದ್ಧಿಗೆ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು' ಎಂದರು.

`ಕಸ ಸಂಗ್ರಹ ಮತ್ತು ವಿಂಗಡಣೆ ಮಾಡುವ ಪೌರ ಕಾರ್ಮಿಕರಿಗೆ ಮಾಸ್ಕ್, ಶೂಗಳು ಮತ್ತು ಗ್ಲೌಸ್‌ಗಳನ್ನು ನೀಡಲು ಪಾಲಿಕೆ ಮುಂದಾಗಬೇಕು. ರಸ್ತೆಗಳಲ್ಲಿ ಕಸ ಬೀಳುವುದನ್ನು ಪಾಲಿಕೆ ನಿಯಂತ್ರಿಸಬೇಕು' ಎಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆಯ ಆಯುಕ್ತ ರಜನೀಶ್ ಗೋಯಲ್, `ನಗರದ ಕಸದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ವಲಯ ಮಟ್ಟದ ಜಂಟಿ ಆಯುಕ್ತರು ನಿಯಮಿತವಾಗಿ ಸಭೆ ನಡೆಸುವಂತೆ ಈಗಾಗಲೇ ಸೂಚಿಸಲಾಗಿದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT