ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪ ಎತ್ತಿದ್ದ ಮಾರನ್

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಂಚಿಕೆ ಸಂಬಂಧ 2006ರಲ್ಲಿ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿ ರೂಪಿಸಿದ್ದ `ಪರಿಮಿತಿ ನಿಬಂಧನೆ~ಗೆ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಅಂಶ ಇದೀಗ ಹೊರಬಿದ್ದಿದೆ.

ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸಚಿವರ ಸಮಿತಿಯು ರಕ್ಷಣಾ ಉದ್ದೇಶಕ್ಕೆ ಅಗತ್ಯವಾದ ತರಂಗಾಂತರದ ಬಗ್ಗೆ ಮಾತ್ರ ಕರಾರುಗಳನ್ನು ನಿಗದಿ ಮಾಡಬೇಕು ಎಂಬುದು ಮಾರನ್ ವಾದವಾಗಿತ್ತು. 2006ರ ಫೆ.28ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿದ್ದ ಪತ್ರದಲ್ಲಿ ಮಾರನ್ ಈ ಆಕ್ಷೇಪ ಎತ್ತಿರುವುದು ಸ್ಪಷ್ಟವಾಗಿದೆ. ಸಚಿವರ ಸಮಿತಿ ವಿಧಿಸಿದ್ದ ನಿಬಂಧನೆಗಳು ದೂರಸಂಪರ್ಕ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತವೆ ಎಂದೂ ಅವರು ಭಾವಿಸಿದ್ದರು.

`ರಕ್ಷಣಾ ಉದ್ದೇಶಕ್ಕೆ ಮೀಸಲಿರಿಸಬೇಕಾದ ತರಂಗಾಂತರಗಳನ್ನು ಗಮನದಲ್ಲಿ ಇರಿಸಿಕೊಂಡು ಸಚಿವರ ಸಮಿತಿ ನಿಬಂಧನೆಗಳನ್ನು ವಿಧಿಸುತ್ತದೆ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ಸಚಿವರ ಸಮಿತಿಯು ಅದಕ್ಕೂ ಮಿಗಿಲಾದ ಕರಾರುಗಳನ್ನು ವಿಧಿಸಿದೆ. ಇದು ಇಲಾಖೆಯ ಸಾಮಾನ್ಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದಂತೆ~ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಾರನ್ ಅಸಮಾಧಾನ ದಾಖಲಿಸಿದ್ದಾರೆ.

ಏರ್‌ಸೆಲ್ ಕಂಪೆನಿಯ ಷೇರುಗಳನ್ನು ಮಲೇಷ್ಯಾದ ಮ್ಯಾಕ್ಸಿಮ್ ಗ್ರೂಪ್‌ಗೆ ಮಾರಾಟ ಮಾಡಲು ಒತ್ತಡ ಹೇರಿರಬಹುದೆಂಬ ಶಂಕೆಗೆ ಒಳಗಾಗಿರುವ ಮಾರನ್ ಇದೀಗ ಈ ಪತ್ರದಿಂದಾಗಿ ಮತ್ತೊಂದು ಅನುಮಾನದಲ್ಲಿ ಸಿಕ್ಕಿಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT