ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಕ್ರಿಕೆಟ್ ಎಂದರೆ ಆ್ಯಷಸ್.... ಈಗ?

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ನೀವು ಯಾವುದೇ ದೇಶದವರಾಗಿರಬಹುದು. ಆದರೆ ಆ್ಯಷಸ್ ಕ್ರಿಕೆಟ್ ಸರಣಿ ಎಂದಾಗ ನಿಮ್ಮ ಕಿವಿಗಳು ಚುರುಕಾಗದೆ ಇರವು. ಆ ಕ್ಷಣಕ್ಕಾಗಿ ನಿಮ್ಮ ಹೃದಯ ತುಡಿಯದೇ ಇರದು. ಇನ್ನು ಆ ಸರಣಿ ಆಡುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಯಾವ ರೀತಿಯ ವಾತಾವರಣ ಇರಬಹುದು ಯೋಚಿಸಿ...

ಅದು ಆ್ಯಷಸ್ ಸರಣಿಯ ಮಹಿಮೆ.  ಕ್ರಿಕೆಟ್‌ಗೆ ಹೊಸ ಅರ್ಥ ನೀಡಿದ ಸರಣಿ ಆ್ಯಷಸ್. ಹಾಗಾಗಿಯೇ ಈ ಸರಣಿಗೆ ಐತಿಹಾಸಿಕ ಮಹತ್ವವಿದೆ. ಎಲ್ಲಾ ಟೆಸ್ಟ್ ಸರಣಿಗಳ ತಾಯಿ `ಆ್ಯಷಸ್' ಎನ್ನುತ್ತಾರೆ. `ಬೂದಿಗಡಿಗೆ'ಗಾಗಿ ನಡೆಯುವ ಈ ಹೋರಾಟ ಸದಾ ಸ್ಮರಣೀಯ. ಕ್ರೀಡೆಯಲ್ಲಿ ವೈರತ್ವ ಎನ್ನುವುದು ಇದ್ದಿದ್ದೇ. ಆದರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಸರಣಿಯಲ್ಲಿ ಅದು ಜಾಸ್ತಿ. ಆ ವೈರತ್ವಕ್ಕೆ ಸರಣಿ ವೇಳೆ ನಡೆದ ವಿವಾದಗಳೇ ಸಾಕ್ಷಿ. ಶತಮಾನದಿಂದ ಉಭಯ ತಂಡಗಳ ನಡುವೆ ಅಂಥ ವೈರತ್ವ ಇರುವುದರಿಂದಲೇ ಪ್ರತಿ ಬಾರಿ ಆ್ಯಷಸ್ ಸರಣಿ ಶುರುವಾದಾಗ ಕುತೂಹಲ ದುಪ್ಪಟ್ಟಾಗುತ್ತದೆ. ಈಗ ನಡೆಯುತ್ತಿರುವುದು 67ನೇ ಆ್ಯಷಸ್ ಸರಣಿ.

ಪ್ರತಿ ದೇಶಗಳು ಈ ಸರಣಿಯ ಆಗು ಹೋಗುಗಳನ್ನು ಕುತೂಹಲದಿಂದ ಗಮನಿಸುತ್ತವೆ. ಅದರಲ್ಲೂ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆ್ಯಷಸ್ ಟೆಸ್ಟ್ ಪಂದ್ಯ ಎಂದರೆ ಅದೊಂದು ಕ್ರಿಕೆಟ್ ಜಗತ್ತಿನಲ್ಲಿ ಅದ್ಭುತವೇ ಸರಿ. ಈ ಬಾರಿಯ ಆ್ಯಷಸ್ ಸರಣಿಯ ಎರಡನೇ ಪಂದ್ಯದ ಆರಂಭಕ್ಕೆ ಮುನ್ನ ರಾಣಿ ಎಲಿಜಬೆತ್ ಐತಿಹಾಸಿಕ ಲಾರ್ಡ್ಸ್ ಅಂಗಳಕ್ಕೆ ಬಂದು ಆಟಗಾರರನ್ನು ಪರಿಚಯ ಮಾಡಿಕೊಂಡಿದ್ದು ಅದಕ್ಕೊಂದು ಸಾಕ್ಷಿ. ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್‌ನ ರಾಣಿ ಯಾವುದೇ ಕ್ರೀಡೆ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದ ಉದಾಹರಣೆ ಇಲ್ಲ.

ಆದರೆ ನೂರು ವರ್ಷಗಳ ಇತಿಹಾಸ ಇರುವ ಈ ಸರಣಿ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಖರತೆ ಹಾಗೂ ಮಹತ್ವ ಕಳೆದುಕೊಳ್ಳುತ್ತಿದೆ. ಕ್ರೀಡಾಂಗಣಕ್ಕೆ ಆಗಮಿಸಿ ಈ ಪ್ರತಿಷ್ಠಿತ ಸರಣಿ ವೀಕ್ಷಿಸುವವರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಈ ಸರಣಿಯಲ್ಲಿ ಕಾಪಾಡಿಕೊಂಡು ಬಂದಿದ್ದ ಕೆಲವೊಂದು ಕಟ್ಟುಪಾಡುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ.

ಇದಕ್ಕೆ ಕಾರಣ ಹಲವು. ಕ್ರಿಕೆಟ್‌ನಲ್ಲಿ ಈಗ ಆಗಿರುವ ಬದಲಾವಣೆ, ಬಿಡುವಿಲ್ಲದೇ ನಡೆಯುತ್ತಿರುವ ವಿಪರೀತ ಪಂದ್ಯಗಳು, ಪ್ರಮುಖ ಆಟಗಾರರು ವಿದಾಯ ಹೇಳಿದ್ದು, ಏಷ್ಯಾದ ರಾಷ್ಟ್ರಗಳತ್ತ ಕ್ರಿಕೆಟ್ ಲೋಕದ ಚಿತ್ತ ಹರಿದಿದ್ದು ಆ್ಯಷಸ್ ಸರಣಿಯ ರೋಚಕತೆಯನ್ನು ಕೊಂಚ ಕಡಿಮೆ ಮಾಡಿದೆ.

ಒಂದು ಹಂತದಲ್ಲಿ ಆ್ಯಷಸ್ ಸರಣಿ ರದ್ದು ಮಾಡುವ ಯೋಚನೆಯೂ ಹೊಳೆದಿತ್ತು. ಅದಕ್ಕೆ ಬದಲಾಗಿ `ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್' ನಡೆಸಿ ಅದರಲ್ಲಿ ಗೆಲ್ಲುವ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಭಾರಿ ವಿರೋಧದ ಕಾರಣ ಆ ಯೋಜನೆ ಅಲ್ಲಿಗೇ ಸ್ಥಗಿತಗೊಂಡಿತ್ತು.

ಒಂದೊಮ್ಮೆ ಈ ಸರಣಿಯಲ್ಲಿ ಸಂಪೂರ್ಣ ಪಾರಮ್ಯ ಸಾಧಿಸಿದ್ದ ಕಾಂಗರೂ ಬಳಗ ಇತ್ತೀಚಿನ ದಿನಗಳಲ್ಲಿ ಕಳೆಗುಂದಿದೆ. ಹಿಂದಿನ ಎರಡೂ ಸರಣಿಗಳಲ್ಲಿ ಸೋಲು ಕಂಡಿದೆ. ಅದರಲ್ಲೂ 2011ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದ ಆಂಗ್ಲರು ಸರಣಿ ಜಯಿಸಿದ್ದರು. 24 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದರು ಎಂಬುದು ವಿಶೇಷ. ಪ್ರಮುಖವಾಗಿ ಆಸ್ಟ್ರೇಲಿಯಾದಲ್ಲಿಯೇ ಆ್ಯಷಸ್ ಸರಣಿಗೆ ಹಿಂದಿನಷ್ಟು ಪ್ರತಿಕ್ರಿಯೆ ಸಿಗುತ್ತಿಲ್ಲ.

`ಭಾರತದೊಂದಿಗಿನ ಸರಣಿ ಕಾಂಗರೂ ನಾಡಿನಲ್ಲಿ ಆ್ಯಷಸ್‌ಗಿಂತ ಹೆಚ್ಚು ಮಹತ್ವ ಪಡೆಯುತ್ತಿದೆ' ಎಂದು ಆಸ್ಟ್ರೇಲಿಯಾದ ಕೆಲ ಆಟಗಾರರು ಹೇಳಿಕೆ ನೀಡಿದ್ದು ಅದಕ್ಕೆ ಸಾಕ್ಷಿ. ಅದು ಇತ್ತೀಚಿನ ವರ್ಷಗಳಲ್ಲಿ ನಿಜವೂ ಆಗಿದೆ. 2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಭಾರತ ವಿರುದ್ಧದ ಸರಣಿ ಹಲವು ವಿವಾದಗಳಿಂದ ಭಾರಿ ಪ್ರಚಾರ ಪಡೆದಿತ್ತು. ಆ ಸರಣಿಯ ಪಂದ್ಯಗಳನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದಿದ್ದರು. `ಕ್ರಿಕೆಟ್ ಆಸ್ಟ್ರೇಲಿಯಾ' ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಯಿತು.

ಅದೇನೇ ಇರಲಿ, ಆ್ಯಷಸ್ ಸರಣಿಯ ಸಂಪ್ರದಾಯ ಹಾಗೇ ಉಳಿದುಕೊಂಡು ಬಂದಿದೆ. ಈಗ ನಡೆಯುತ್ತಿರುವ ಸರಣಿಯಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ನಿಜ. ಆದರೆ ಆ್ಯಷಸ್ ಮಾತ್ರವಲ್ಲ; ಇಡೀ ಟೆಸ್ಟ್ ಕ್ರಿಕೆಟ್ ಈಗ ಸಾಯುವ ಹಂತದಲ್ಲಿದೆ. ಕ್ರಿಕೆಟ್ ಕ್ರೇಜ್ ರಾಷ್ಟ್ರ ಭಾರತದಲ್ಲೂ ಈಗ ಆಸಕ್ತಿ ಕಡಿಮೆಯಾಗುತ್ತಿದೆ.

ಪಂದ್ಯ ನಡೆಯುವ ವೇಳೆ ಕ್ರೀಡಾಂಗಣಗಳು ಖಾಲಿ ಖಾಲಿಯಾಗಿರುತ್ತವೆ. ಅಧಿಕ ಸಂಖ್ಯೆಯ ಪಂದ್ಯಗಳು, ಟ್ವೆಂಟಿ-20 ಕ್ರಿಕೆಟ್ ಪ್ರವೇಶ ಇದಕ್ಕೆಲ್ಲಾ ಕಾರಣ ಇರಬಹುದು. ಈ ನಡುವೆಯೂ ಕಟ್ಟಾ ಕ್ರಿಕೆಟ್ ಪ್ರಿಯರು ಆಸಕ್ತಿಯಿಂದ ಪ್ರತಿಷ್ಠಿತ ಆ್ಯಷಸ್ ಸರಣಿಯ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ.

ಆ್ಯಷಸ್ ಹಿಂದಿನ ಗುಟ್ಟು...

ಸರದಿಯ ಪ್ರಕಾರ ಒಮ್ಮೆ ಆಸ್ಟ್ರೇಲಿಯಾದಲ್ಲಿ, ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿ ಈ ಟೂರ್ನಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಅಕಸ್ಮಾತ್ ಸರಣಿ ಡ್ರಾ ಆದರೆ ಹಿಂದಿನ ಬಾರಿ ಗೆದ್ದಿದ್ದ ತಂಡದ ಬಳಿಯೇ ಟ್ರೋಫಿ ಉಳಿಯುತ್ತದೆ.

ಆ್ಯಷಸ್ ಸರಣಿ ಜನ್ಮ ತಾಳಲು ಕಾರಣವಾದ ಘಟನೆ ಆಸಕ್ತಿದಾಯಕವಾಗಿದೆ. 1882ರ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದವರು ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದ್ದರು. `ಇಂಗ್ಲಿಷ್ ಕ್ರಿಕೆಟ್ ನಿಧನ' ಎಂದು ಆಗ ಅಲ್ಲಿನ ಪತ್ರಿಕೆ `ದಿ ಸ್ಪೋರ್ಟಿಂಗ್ ಟೈಮ್ಸ' ಬರೆದಿತ್ತು. ಅಷ್ಟು ಮಾತ್ರವಲ್ಲದೇ, ಶ್ರದ್ಧಾಂಜಲಿ ಪ್ರಕಟಿಸಿತ್ತು.

`ಇಂಗ್ಲೆಂಡ್ ಕ್ರಿಕೆಟ್‌ನ ಅಂತ್ಯಕ್ರಿಯೆ ನಡೆಯಲಿದ್ದು, ಬೂದಿಯನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗುವುದು' ಎಂದು ಆ ಪತ್ರಿಕೆ ಬರೆದಿತ್ತು. ಕೆಲ ತಿಂಗಳುಗಳಲ್ಲಿ ಇಂಗ್ಲೆಂಡ್ ತಂಡ ಕಾಂಗರೂ ನಾಡಿನ ಪ್ರವಾಸ ಕೈಗೊಂಡಿತ್ತು. `ಬೂದಿಯನ್ನು ಮರಳಿ ಪಡೆಯಲು ಇಂಗ್ಲೆಂಡ್ ಪ್ರಯತ್ನಿಸುತ್ತಿದೆ' ಎಂದು ಆಗ ಇಂಗ್ಲೆಂಡ್ ಮಾಧ್ಯಮಗಳು ಬರೆದಿದ್ದವು.

ಆ ಪ್ರವಾಸದ ಅವಧಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಇವೊ ಬ್ಲಿಗ್‌ಗೆ ಮೆಲ್ಬರ್ನ್‌ನ ಕೆಲ ಯುವತಿಯರು ಮಣ್ಣಿನಿಂದ ತಯಾರಿಸಿದ ಪುಟ್ಟ ಬೂದಿಗಡಿಗೆ ನೀಡಿದ್ದರು. ಈಗಲೂ ಆ ಬೂದಿಗಡಿಗೆಯನ್ನು ಆ್ಯಷಸ್ ಸರಣಿಗೆ ಮುನ್ನ ಉಭಯ ಆಟಗಾರರು ಅನಾವರಣಗೊಳಿಸುತ್ತಾರೆ.

ಸರಣಿಯಲ್ಲಿ ಗೆದ್ದ ತಂಡದ ಆಟಗಾರರು ಆ ಪುಟ್ಟ ಬೂದಿಗಡಿಗೆಯನ್ನು ಹಿಡಿದು ಸಂಭ್ರಮಿಸುತ್ತಾರೆ. ಅದು ಈ ಸರಣಿಯ `ಲಾಂಛನ' ಎನಿಸಿಬಿಟ್ಟಿದೆ. ವಿಶೇಷವೆಂದರೆ ಆ ಬೂದಿಗಡಿಗೆ ಸರಣಿಯ ಅಧಿಕೃತ ಟ್ರೋಫಿ ಅಲ್ಲ.

ಯಾರೇ ಚಾಂಪಿಯನ್ ಆದರೂ ಆ ಬೂದಿಗಡಿಗೆನ್ನು ಮಾತ್ರ ಮೆರಿಲೆಬೋನ್ ಕ್ರಿಕೆಟ್ ಕ್ಲಬ್‌ನ (ಎಂಸಿಸಿ) ವಸ್ತು ಸಂಗ್ರಹಾಲಯದಲ್ಲಿ ಇಡಲಾಗುತ್ತದೆ. ಬ್ಲಿಗ್ ನಿಧನದ ಬಳಿಕ ಅವರ ಪತ್ನಿ ಈ ಬೂದಿಗಡಿಗೆಯನ್ನು ಎಂಸಿಸಿಗೆ ನೀಡಿದ್ದರು.

ಆ್ಯಷಸ್ ವಿಶೇಷ....

  • 1882/83ರಲ್ಲಿ ಮೊದಲ ಸರಣಿ ನಡೆಯಿತು.
  • ಇದು ಐದು ಪಂದ್ಯಗಳ ಸರಣಿ.
  • ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.
  • ಸರದಿ ಪ್ರಕಾರ ಒಮ್ಮೆ ಆಸ್ಟ್ರೇಲಿಯಾ, ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿ ಜರುಗುತ್ತದೆ.
  • ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್: ಡಾನ್ ಬ್ರಾಡ್ಮನ್ (5028; ಆಸ್ಟ್ರೇಲಿಯಾ).
  • ಹೆಚ್ಚು ವಿಕೆಟ್ ಗಳಿಸಿದ ಬೌಲರ್: ಶೇನ್ ವಾರ್ನ್ (195; ಆಸ್ಟ್ರೇಲಿಯಾ).
  • ತಂಡದ ಅತಿ ಹೆಚ್ಚು ಮೊತ್ತ: ಇಂಗ್ಲೆಂಡ್: 903/7 ಡಿಕ್ಲೇರ್ಡ್ (1938ರಲ್ಲಿ-ದಿ ಓವಲ್).
  • ತಂಡದ ಅತಿ ಕಡಿಮೆ ಮೊತ್ತ: ಆಸ್ಟ್ರೇಲಿಯಾ: 36 (1902ರಲ್ಲಿ-ಬರ್ಮಿಂಗ್‌ಹ್ಯಾಮ್).
  • ವೈಯಕ್ತಿಕ ಅತಿ ಹೆಚ್ಚು ಪಂದ್ಯಗಳು: ಸಿಡ್ನಿ ಗ್ರೆಗೋರಿ (ಆಸ್ಟ್ರೇಲಿಯಾ; 52 ಪಂದ್ಯ).
  • ನಾಯಕನಾಗಿ ಅತಿ ಹೆಚ್ಚು ಪಂದ್ಯಗಳು: ಅಲನ್ ಬಾರ್ಡರ್ (ಆಸ್ಟ್ರೇಲಿಯಾ; 28 ಪಂದ್ಯ).

ಆ್ಯಷಸ್ ಟೆಸ್ಟ್ ಸರಣಿಯ ಪಂದ್ಯಗಳ ಅಂಕಿ-ಅಂಶ
                        ಪಂದ್ಯ              ಗೆಲುವು        ಸೋಲು        ಡ್ರಾ
ಆಸ್ಟ್ರೇಲಿಯಾ         310                123            100          87
ಇಂಗ್ಲೆಂಡ್             310                100            123          87

                         ಸರಣಿ                ಗೆಲುವು            ಸೋಲು         ಡ್ರಾ
ಆಸ್ಟ್ರೇಲಿಯಾ          66                    31                 30              5
ಇಂಗ್ಲೆಂಡ್              66                    30                 31              5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT