ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಚಾಲಕ: ಈಗ ಯಶಸ್ವಿ ಕೃಷಿಕ!

ಪ್ರಜಾವಾಣಿ ವಿಶೇಷ ಕೃಷಿ ಖುಷಿ
Last Updated 4 ಡಿಸೆಂಬರ್ 2013, 8:31 IST
ಅಕ್ಷರ ಗಾತ್ರ

ಬೀದರ್: ಸರ್ಕಾರಿ ಕೆಲಸ ಬೆನ್ನತ್ತಿ ಬೆಂಗಳೂರಿಗೆ  ತೆರಳಿದ್ದ ಯುವಕನೊಬ್ಬ ಕೆಲಸ ಸಿಗುವುದರ ಹಿಂದಿನ ಕಸರತ್ತುಗಳಿಂದ ಬೇಸತ್ತು ಮರಳಿ ಊರಿಗೆ ಬಂದು ಯಶಸ್ವಿ ಕೃಷಿಕನಾದ ಯಶೋಗಾಥೆ ಇದು.

ಓದಿದ್ದು ಐಟಿಐ ಎಲೆಕ್ಟ್ರಿಕಲ್‌, ಮಾಡಿದ್ದು, ವಾಹನ ಚಾಲನೆ ಕೆಲಸ. ಈಗವರು ಯಶಸ್ವಿ ಕೃಷಿಕರು!

20–30 ಸಾವಿರ ಮಾಸಿಕ ವೇತನದ ಕನಸು ಕಂಡ ಯುವಕನ ಈಗಿನ ಆದಾಯ ದೈನಿಕ ಸರಾಸರಿ 4 ಸಾವಿರ ರೂಪಾಯಿ! ಈ ಆದಾಯ ದಲ್ಲಿ ವಾರ್ಷಿಕವಾಗಿ ಕಬ್ಬು ಬೆಳೆಯಿಂದ ಬರುವ, ಹಂಗಾಮು ಮುಗಿದಾಗ ಶುಂಠಿ, ಈರುಳ್ಳಿ, ಟೊಮೊಟೊ ಇತ್ಯಾದಿ ಬೆಳೆಯಿಂದ ಬರುವ ಆದಾಯ ಸೇರಿಲ್ಲ!

ಹೈನುಗಾರಿಕೆಯಿಂದ ನಿತ್ಯ ಸರಾಸರಿ 110 ಲೀಟರ್ ಹಾಲು ಹಾಕಿದರೆ; ಪಾಲಕ್‌, ಮೆಂತ್ಯ, ಕೊತ್ತಂಬರಿ ಮತ್ತಿತರ ಉಪ ಕೃಷಿ ಬೆಳೆಗಳಿಂದ ನಿತ್ಯ ಅಂದಾಜು ರೂ1 ಸಾವಿರ ಆದಾಯ ನಿರೀಕ್ಷಿಸುತ್ತಾರೆ. ಸರಾಸರಿ ಆದಾಯ 5 ಸಾವಿರ ಇದೆ. ಖರ್ಚು 2 ಸಾವಿರ ಬರಬಹುದು ಎಂಬುದು ಅವರು ನೀಡುವ ಲೆಕ್ಕಾಚಾರ.

ಇವರು ಸಿದ್ದರಾಮ ನಾಗಶೆಟ್ಟಿ. ಬೀದರ್ ಹೊರವಲಯದ ಚಿಕ್ಕಪೇಟೆಯಲ್ಲಿ ಸುಮಾರು 8.10 ಎಕರೆ ಭೂಮಿಯಲ್ಲಿ ಕೃಷಿ ಸಂಭ್ರಮ ವನ್ನು ಕಂಡುಕೊಂಡಿರುವ ಯುವಕ ‘ಭೂಮಿ ನಮ್ಮದೆ. ಕೃಷಿಯೂ ನಮ್ದದೇ. ನೆಮ್ಮದಿಯೂ ಇದೆ. ಆದಾಯವೂ ಇದೆ’ ಎಂದು ಸಮಾಧಾನ ವ್ಯಕ್ತಪಡಿಸುತ್ತಾರೆ.

32 ವರ್ಷ ವಯಸ್ಸಿನ ಇವರು ಚಿಕ್ಕಪೇಟೆಯ ರಾಮಣ್ಣ ಅವರ ನಾಲ್ವರು ಮಕ್ಕಳಲ್ಲಿ ಒಬ್ಬರು. ಇವರು ಓದಿದ್ದು ಐ.ಟಿ.ಐ ಎಲೆಕ್ಟ್ರಿಕಲ್‌. ವಾಹನ ಚಾಲನೆಯೂ ಗೊತ್ತಿದ್ದರಿಂದಾಗಿ ಗುತ್ತಿಗೆ ಆಧಾರದಲ್ಲಿ ಕೆಲವು ದಿನ ವಿಧಾನಸೌಧದಲ್ಲಿ ಚಾಲಕನಾಗಿ ಕೆಲಸ ಮಾಡಿದರು. ಅವಧಿ ಮುಗಿದ ನಂತರ ಬೆಂಗಳೂರು ಇನ್ಸ್‌ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯಲ್ಲಿ ವಾಹನ ಚಾಲನೆ ಕೆಲಸ ಮುಂದುವರಿಯಿತು.

ಕೆಲಸ ಕಾಯಂ ಆಗುವ ಭರವಸೆಯೊಂದಿಗೆ ಸ್ಟೇರಿಂಗ್‌ ಹಿಡಿದದ್ದೇ ಬಂತು. ನಿರೀಕ್ಷಿಸಿದ್ದ ಕಾಯಂ ಉದ್ಯೋಗ ಇನ್ನೊಬ್ಬರ ಪಾಲು ಆದಾಗ ಭ್ರಮನಿರಸನವಾಯಿತು. ಅದೇ ಬೇಸರ ದಲ್ಲಿ ಬೀದರ್‌್ ಬಸ್ ಏರಿದರು. ಮರಳಿ ಊರು ಸೇರಿದ ನಂತರವು ಇಲ್ಲಿ ಆಗಷ್ಟೇ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಚಾಲಕನಾಗಿ ಸೇವೆ ಆರಂಭಿಸಿದರು.

ಕೆಲವೊಂದು ಕಾರಣಗಳಿಗಾಗಿ ಅಲ್ಲಿಯೂ ಹಿರಿಯ ಅಧಿಕಾರಿಗಳಿಂದ ವಿನಾಕಾರಣ ನಿಂದ ನೆಗೆ ಒಳಗಾಗಬೇಕಾದ ಸಂದರ್ಭದಲ್ಲಿ ಬೇಸತ್ತು ಎರಡು ವರ್ಷದ ಹಿಂದೆ ಕೃಷಿಯತ್ತ ಮುಖ ಮಾಡಿದರು. ಅದು ಅವರ ಬದುಕಿನ ಬಹುದೊಡ್ಡ ತಿರುವು ಆಯಿತು.

ಚಿಕ್ಕಪೇಟೆಯಲ್ಲಿ ತಂದೆಯಿಂದ ಬಂದಿದ್ದ ಸುಮಾರು ಐದು ಎಕರೆ ಭೂಮಿಯನ್ನು ಮಾರಾಟ ಮಾಡಿದ ಸಿದ್ದರಾಮ ನಾಗಶೆಟ್ಟಿ, ಬಳಿಕ ಬೀದರ್ ಹೊರವಲಯದಲ್ಲಿ ಹಾಲು ಒಕ್ಕೂಟದ ಡೇರಿ ಹಿಂಭಾಗ ಸುಮಾರು 8 ಎಕರೆ ಭೂಮಿ ಖರೀದಿಸಿದರು. ಅಲ್ಲಿಯೇ ಕೃಷಿ ಯಾತ್ರೆಯನ್ನು ಆರಂಭಿಸಿದರು.

ಏರು–ಪೇರಿನಿಂದ ಕೂಡಿದ ಭೂಮಿಯನ್ನು ಹದಕ್ಕೆ ತಂದು ಒಂದು ಎಕರೆ ಭೂಮಿಯಲ್ಲಿ ಮೊದಲು ಕಬ್ಬು ಬೆಳೆದರು. ಬಂದ ಲಾಭದಲ್ಲಿ ಭೂಮಿಯನ್ನು ಇನ್ನಷ್ಟು ಹದ ಪಡಿಸಿ ಗಂಗಾ ಕಲ್ಯಾಣ ಯೋಜನೆಯ ಲಾಭ ಪಡೆದು ಕೊಳವೆ ಬಾವಿ ಕೊರೆಸಿದರು. ನೀರು ಸಂಗ್ರಹಕ್ಕಾಗಿ ತೆರೆದ ಬಾವಿಯನ್ನು ತೆಗೆಸಿದರು.

ಬೆಳಿಗ್ಗೆ ಕಾಡುತ್ತಿದ್ದ ವಿದ್ಯುತ್‌ ಸಮಸ್ಯೆಯಿಂದ ಪಾರಾಗಲು ರಾತ್ರಿಹೊತ್ತು ಕೊಳವೆಬಾಯಿಂದ ನೀರು ಹರಿಸಿ ತೆರೆದ ಬಾವಿಗಳಲ್ಲಿ ಸಾಧ್ಯವಾ ದಷ್ಟು ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರು. ಹಗಲು ಹೊತ್ತು ಅಗತ್ಯ ಬಿದ್ದಷ್ಟು ನೀರು ಹರಿಸಿ ಕೃಷಿ ಮಾಡುತ್ತಿದ್ದರು.

ಬಳಿಕ ಕೃಷಿ ಚಟುವಟಿಕೆ ವೈವಿಧ್ಯತೆ ಮತ್ತು ವಿಸ್ತಾರ ಎರಡನ್ನೂ ಪಡೆಯಿತು. ವಿವಿಧ ಬೆಳೆಗಳನ್ನು ಬೆಳೆಯಲು ಶುರು ಮಾಡಿದರು. ಪ್ರಸ್ತುತ ಎಂಟು ಎಕರೆ ಭೂಮಿಯಲ್ಲಿ ಕಬ್ಬು, ಶುಂಠಿ, ಟೊಮೆಟೊ, ಈರುಳ್ಳಿ ಬೆಳೆಯುತ್ತಿ ದ್ದಾರೆ. ನೀರಿನ ಮಿತ ಬಳಕೆಗೆ ಪೂರಕವಾಗಿ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡಿದ್ದಾರೆ.  ಸುಮಾರು 1 ಎಕರೆ ಭೂಮಿಯಲ್ಲಿ ಪಾಲಕ್‌, ಮೆಂತ್ಯ, ಕೊತ್ತಂಬರಿ, ಸಿಹಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಹೈನುಗಾರಿಕೆ: ಇವರ ಬಳಿ 10 ಎಮ್ಮೆ, ಎರಡು ಹಸುಗಳಿವೆ. ಜೊತೆಗೆ ಸುಮಾರು 20–25  ಆಡು, ಮೇಕೆಗಳನ್ನು ಸಾಕಿಕೊಂಡಿದ್ದಾರೆ. ಮೇಕೆ, ಆಡು ಸಂತತಿ ಬೆಳೆದಷ್ಟು,  ಅವು ಕೊಬ್ಬಿದಷ್ಟೂ ಇವರ ಆದಾಯವೂ ಹೆಚ್ಚುತ್ತಾ ಹೋಗುತ್ತದೆ. 10 ಎಮ್ಮೆ ಮತ್ತು 2 ಹಸುಗಳಿಂದ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ಸೇರಿ ಸರಾಸರಿ 110 ಲೀಟರ್‌ ಹಾಲು ಕರೆಯುತ್ತಾರೆ.

ಕೃಷಿ ಎಂದಿಗೂ ಕೈಕೊಡುವುದಿಲ್ಲ. ವ್ಯವಸ್ಥಿತವಾಗಿ ಮಾಡಿದರೆ ನಷ್ಟ ಆಗುವುದಿಲ್ಲ. ಭೂಮಿಯು ನಮ್ಮದೇ ಆಗಿರುವ ಕಾರಣ ಸ್ವಲ್ಪ ನಷ್ಟ ಆದರೂ ಅಷ್ಟು ಬಾಧಿಸುವುದಿಲ್ಲ. ಕೃಷಿಯನ್ನು ನೋಡುತ್ತಾ, ಕುಟುಂಬವನ್ನು ಪಾಲನೆ ಮಾಡು ವುದು ಸಾಧ್ಯವಾಗಿದೆ. ಸರ್ಕಾರಿ ಉದ್ಯೋಗ ಕ್ಕಿಂತಲೂ ಹೆಚ್ಚು ಆದಾಯ ಇದೆ. ಅದಕ್ಕೂ ಮಿಗಿಲಾಗಿ ಯಾರಿಂದಲೂ ನಿಂದನೆ ಮಾತು ಕೇಳುವ ಅಗತ್ಯವಿಲ್ಲ ಎನ್ನುತ್ತಾರೆ ಸ್ವಾಭಿಮಾನಿ ಯುವ ರೈತ.

ಕೃಷಿಯಿಂದ ನಷ್ಟ, ಕೃಷಿ ಮಾಡುವುದೇ ಹೊರೆ ಎಂದು ಭಾವಿಸುವವರಿಗೆ, ಅದು ಸರಿಯಲ್ಲ ಎಂದು ಉತ್ತರಿಸಲು ಸಿದ್ಧರಾಮ ಸಿದ್ಧ ಉತ್ತರವಾಗಿದ್ದಾರೆ.

ಮಾಹಿತಿಗೆ 90368 17096 ಸಂಪರ್ಕಿಸಿ

‘ಯುವಜನ ಮನಸ್ಸು ಮಾಡಲಿ’
‘ಭೂಮಿ ನಮ್ಮದೆ. ಕೃಷಿಯೂ ನಮ್ದದೇ. ನೆಮ್ಮದಿಯೂ ಇದೆ. ಆದಾಯವೂ ಇದೆ. ವ್ಯವಸ್ಥಿತವಾಗಿ ಮಾಡಿದರೆ ಕೃಷಿಯಲ್ಲಿ ನಷ್ಟದ ಬಾಬತ್ತು ಇಲ್ಲ. ಯುವಜನರು ಇದರತ್ತ ಮನಸ್ಸು ಮಾಡಬೇಕು’.

–ಸಿದ್ದರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT