ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ

Last Updated 14 ಜುಲೈ 2012, 18:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಒಳಚರಂಡಿ ಮಾರ್ಗಗಳಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ಆಗಸ್ಟ್‌ನಿಂದ ಚಾಲನೆ ನೀಡಲಾಗುತ್ತಿದ್ದು, ಉಪ ವಿಭಾಗವಾರು ಹೂಳೆತ್ತಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಗೌರವ್ ಗುಪ್ತ ತಿಳಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಜಲಮಂಡಳಿಗೆ ಲಭ್ಯವಾಗಲಿರುವ 30 ಹೊಸ ಯಂತ್ರಗಳನ್ನು ಬಳಸಿಕೊಂಡು, ವೇಳಾಪಟ್ಟಿಯಂತೆ ಹೊಸ ಪ್ರದೇಶಗಳಿಗೆ ವಿಭಾಗವಾರು ನಿಯೋಜಿಸಿ ಒಳಚರಂಡಿಗಳಲ್ಲಿನ ಹೂಳನ್ನು ತೆಗೆಯುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತಹ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.


ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರ ಜತೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, `ಸಂಪೂರ್ಣ ಹಾಳಾಗಿದ್ದ ಚಲ್ಲಘಟ್ಟ ಕೊಳವೆ ಮಾರ್ಗವನ್ನು ಬದಲಿಸಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ತ್ಯಾಜ್ಯ ನೀರಿನ ಸರಾಗ ಹರಿವಿಗೆ ಅನುಕೂಲವಾಗಿದೆ. ಹೆಬ್ಬಾಳ ಮತ್ತು ಹೆಣ್ಣೂರು ಉಪ ಮಾರ್ಗಗಳನ್ನು ಕೂಡ ಪ್ರಧಾನ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಈ ಕಾಮಗಾರಿ ಕೂಡ ಒಂದೆರಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ~ ಎಂದು ಹೇಳಿದ್ದಾರೆ.

`ಪ್ರಸ್ತುತ ಮಂಡಳಿಗೆ ಬರುವ ಆದಾಯದ ಶೇ 70ರಷ್ಟು ಮೊತ್ತವು ಕಾವೇರಿ ನೀರು ಪಂಪ್ ಮಾಡುವಂತಹ ವಿದ್ಯುತ್ ವೆಚ್ಚಕ್ಕೆ ಬಳಕೆಯಾಗುತ್ತಿದೆ. ಪ್ರತಿ ವರ್ಷ 300 ಕೋಟಿ ರೂಪಾಯಿಗಳನ್ನು ಮಂಡಳಿಯು ವಿದ್ಯುತ್ ಬಿಲ್‌ಗಾಗಿಯೇ ಪಾವತಿಸುತ್ತಿದೆ. ಕಾವೇರಿ 4ನೇ ಘಟ್ಟ 2ನೇ ಹಂತದ ಯೋಜನೆ ಅನುಷ್ಠಾನಗೊಂಡಲ್ಲಿ ವಿದ್ಯುತ್ ಬಿಲ್ ಪಾವತಿ ಮೊತ್ತ 450 ಕೋಟಿ ರೂಪಾಯಿಗಳಷ್ಟಾಗಬಹುದು.

ದೇಶದ ಬೇರೆ ಯಾವುದೇ ನಗರದಲ್ಲೂ ನೀರು ಪಂಪ್ ಮಾಡುವುದಕ್ಕಾಗಿ ಇಷ್ಟೊಂದು ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ. ಅಲ್ಲದೆ, ಮಂಡಳಿ ನೀಡುವಂತಹ ಸೇವೆಗೆ ಸರಿಯಾದ ಆದಾಯವೂ ಇಲ್ಲ. ನೀರಿನ ದರ ಏರಿಕೆಗೂ ಸರ್ಕಾರ ಅನುಮತಿ ನೀಡಿಲ್ಲ~ ಎಂದು ಅವರು ಮಂಡಳಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

`ಆರ್ಥಿಕ ಹಾಗೂ ಸಿಬ್ಬಂದಿ ಕೊರತೆ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತೆಗೆಯುವ ಕೊಳವೆ ಬಾವಿಗಳನ್ನು ಮಂಡಳಿಯು ನಿರ್ವಹಿಸಲು ಸಾಧ್ಯವಾಗುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆ ಅನುಷ್ಠಾನಕ್ಕೆ ಬಂದ ನಂತರ ನಗರಕ್ಕೆ ಸೇರ್ಪಡೆಯಾಗಿರುವ ಹೊಸ ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದೆ. ಅಲ್ಲದೆ, ಹಳೇ ಪ್ರದೇಶದ ನೀರಿನ ಕೊರತೆಯೂ ನಿವಾರಣೆಯಾಗಲಿದೆ. ಅದಕ್ಕೆ ಮೊದಲು ಪ್ರತಿ ನೀರಿನ ಸಂಪರ್ಕಗಳಿಗೆ ಮೀಟರ್ ಅಳವಡಿಸುವುದು ಅನಿವಾರ್ಯವಾಗಿದೆ~ ಎಂದು ಗೌರವ್ ಗುಪ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT