ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆ: ಮಳೆಗಾಲದ ದೃಶ್ಯಕಾವ್ಯ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆಗುಂಬೆ ಕರ್ನಾಟಕದ ಚಿರಾಪುಂಜಿ ಎಂದು ಕರೆಸಿಕೊಳ್ಳುವ ಪ್ರಕೃತಿಪ್ರಿಯರ ಅದ್ಭುತ ತಾಣ. ಘಟ್ಟದ ಮೇಲಿನ ಶಿವಮೊಗ್ಗ ಮತ್ತು ಕರಾವಳಿ ಜಿಲ್ಲೆಗಳನ್ನು ಬೆಸೆಯುವ ಸುಮಾರು 8 ಕಿ.ಮೀ. ಘಾಟಿ ರಸ್ತೆಯಲ್ಲಿ 14 ತಿರುವುಗಳಿವೆ. ಪ್ರತಿ ದಿನ ಸಾವಿರಕ್ಕೂ ಮಿಕ್ಕಿ ವಾಹನಗಳ ಸಂಚಾರ ದಟ್ಟಣೆಯಿರುವ ರಸ್ತೆಯಿದು. ರಸ್ತೆಯ ಪ್ರಯಾಣ ಅತ್ಯಂತ ರೋಚಕ ಅನುಭವ. 

ಇದೀಗ ಮಳೆಯ ಆರ್ಭಟ ಕಡಿಮೆಯಾಗಿದೆ. ಹಾಗೆಂದು ಆಗುಂಬೆಯ ಪಾಲಿಗೆ ಅದು ಪೂರ್ತಿ ಕಡಿಮೆಯಲ್ಲ. ಭರ‌್ರನೆ ಒಮ್ಮೆಲೆ ಬಂದು ಹನಿ ಸಿಂಚನ ಮಾಡಿ ಹೋಗುತ್ತದೆ. ಇಲ್ಲಿ ಮೋಡ, ಮಳೆಯ ಕಣ್ಣಮುಚ್ಚಾಲೆ, ಅದರ ನಡುವೆ ಇಣುಕಲು ಯತ್ನಿಸುವ ಸೂರ್ಯ. ಈ ನೋಟಗಳು ಮನಸ್ಸಿಗೆ ಮುದ ನೀಡುತ್ತವೆ.

ಮಳೆಗಾಲ (ಈಗ)ದಲ್ಲಿ ಇಲ್ಲಿನ ರಸ್ತೆಯ ತಿರುವುಗಳಲ್ಲಿ ಅತ್ಯಂತ ಸುಂದರವಾದ ಝರಿಗಳಿವೆ. ಅತ್ಯಾಧುನಿಕ ಪೈಪ್‌ಲೈನ್ ವ್ಯವಸ್ಥೆಗೆ ಸವಾಲೊಡ್ಡುವ ಬಂಡೆಯ ಸೀಳಿನಿಂದ ಹರಿದುಬರುವ ಜಲಧಾರೆ. ಅದೆಲ್ಲಿಂದಲೋ ಸಿಡಿದು ಬಂದು ಕಗ್ಗಲ್ಲುಗಳಿಗೆ ಅಭಿಷೇಕ ಮಾಡುವ ನೀರಧಾರೆ.

ಆ ನೀರಿನ ಆಸರೆಗೆ ಮನಸೋತು ಅಲ್ಲೇ ಅರಳಿರುವ ಕಾಡುಪುಷ್ಪಗಳು. ಗೌರಿ ಹೂವು (ಇಂಪಾಷಿಯನ್ಸ್), ಕರ್ಣ ಕುಂಡಲ  ಗುಲಾಬಿ, ನೀಲಿ ಬಿಳಿ ಬಣ್ಣದ  ಪುಟ್ಟ ಗಾತ್ರದ ಪುಷ್ಪ ಸಾಲು. ಗುಡ್ಡ ಕುಸಿಯದಂತೆ ನಿರ್ಮಿಸಿದ ತಡೆಗೋಡೆಯ ಮೇಲೂ ಹರಡಿಕೊಂಡ ಹಸಿರೆಲೆಗಳ ತಳಿರು ತೋರಣ. ಕಪ್ಪು ಹಸಿರಿನ ಸುಂದರ ಕ್ಯಾನ್ವಾಸ್.

ಅದರ ಹಿನ್ನೆಲೆಯಲ್ಲಿ ನೀರಿನ ತೇವ. ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಇಲ್ಲಿನ ಪ್ರತಿಯೊಂದು ಸಸ್ಯವೂ ಅಧ್ಯಯನದ ವಸ್ತು. ವರ್ಷಕ್ಕೆ ಇಲ್ಲಿ ಕನಿಷ್ಠ 5,240ರಿಂದ ಗರಿಷ್ಠ 11,360 ಮಿ.ಮೀ ಮಳೆಯಾಗುತ್ತದೆ. ಉಷ್ಣವಲಯದ ನಿತ್ಯ ಹರಿದ್ವರ್ಣದ ಕಾಡು ಇದು. ಉಷ್ಣಾಂಶ ಕನಿಷ್ಠ 4ರಿಂದ 6 ಡಿಗ್ರಿವರೆಗೆ ಇಳಿಯುವುದೂ ಇದೆ.

ಹೆಚ್ಚೆಂದರೆ 32 ಡಿಗ್ರಿ ತಲುಪಬಹುದು. ಆದರೆ, ಆಸುಪಾಸಿನ ಅರಣ್ಯವೂ ಕಡಿಮೆಯಾಗುತ್ತಿರುವುದರಿಂದ ಈ ಅಂಕಿ ಅಂಶಗಳೂ ವ್ಯತ್ಯಾಸವಾಗುತ್ತದೆ ಎಂಬುದು ಸ್ಥಳೀಯರ ಅನಿಸಿಕೆ.

ಸಮುದ್ರಮಟ್ಟದಿಂದ ಆಗುಂಬೆ ಘಾಟಿಯ ತುದಿ 600 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಅಲ್ಲಲ್ಲಿ ಇಳಿದ ಜಲಧಾರೆ ಒಟ್ಟಾಗಿ ಸೇರಿ ಬೆಟ್ಟದ ತಪ್ಪಲಿನ ಸೀತಾನದಿಯಲ್ಲಿ ಭೋರ್ಗರೆದು ಹರಿಯುತ್ತದೆ.

ಮಳೆಗಾಲದ ಅವಧಿಯಲ್ಲಿ ಸೂರ್ಯಾಸ್ತಮಾನ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಆದರೂ ಬಂದು ಹೋಗುವ ಜನ ಕಡಿಮೆಯೇನಿಲ್ಲ. ಇದ್ದಕ್ಕಿದ್ದಂತೆಯೇ ಮಂಜು ಹನಿ  ಮುಸುಕುತ್ತದೆ. ಅಲ್ಲಿಗೆ ಬಂದ ಹುಡುಗ ಹುಡುಗಿಯರು ಸಂಭ್ರಮಿಸುತ್ತಾರೆ.

ವಯಸ್ಸಾದವರು ತಮ್ಮ ಸ್ವೆಟರ್, ಶಾಲನ್ನು ಇನ್ನಷ್ಟು ಬಿಗಿಗೊಳಿಸುತ್ತಾರೆ. ಎತ್ತರದ ಬೆಟ್ಟಕ್ಕೆ ಮುತ್ತಿಕ್ಕುವ ಮೋಡದ ಸಾಲು, ಹಸಿರು, ನೀಲಿ ಹಾಗೂ ಬೆಳ್ಳಿ ಬಣ್ಣದ ಸಂಯೋಜನೆ ಛಾಯಾಗ್ರಾಹಕರಿಗೆ ರಸದೌತಣ ನೀಡುತ್ತದೆ.

ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೆ ಪ್ರಪಾತದ ಪಾಲಾಗುವುದು ಖಂಡಿತ. ಸಾಕಷ್ಟು ಅಪಘಾತಗಳೂ ನಡೆದಿವೆ. ಇಡೀ ಕುಟುಂಬ ಸಾವಿಗೀಡಾದ ಉದಾಹರಣೆಯಿದೆ. ಅದಕ್ಕೆ ತಕ್ಕಂತೆ ಕಡಿದಾದ ತಿರುವುಗಳಲ್ಲಿ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸಂಚಾರದಿಂದ ಅದುರಿದ ಗುಡ್ಡ ಅಲ್ಲಲ್ಲಿ ಕುಸಿತದ ಭೀತಿ ಎದುರಿಸುತ್ತಿದೆ. ರಸ್ತೆ ದುರಸ್ತಿಯಾಗಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT