ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಘ್ಘಾನಿಸ್ತಾನ: ಅಧಿಕಾರಿಗೆ ಗುಂಡಿಕ್ಕಿದ ಮಹಿಳಾ ಪೊಲೀಸ್

ನ್ಯಾಟೊ ಪಡೆಯಲ್ಲಿ ಹೆಚ್ಚುತ್ತಿರುವ ಆಂತರಿಕ ದಾಳಿ
Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಾಬೂಲ್ (ಎಪಿ): ಆಘ್ಘಾನಿಸ್ತಾನದ ಮಹಿಳಾ ಪೊಲೀಸ್ ಒಬ್ಬಾಕೆ ಆಯಕಟ್ಟಿನ ಜಾಗಕ್ಕೆ ನುಗ್ಗಿ ಅಮೆರಿಕದ ನಾಗರಿಕ ಪೊಲೀಸ್ ಸಲಹೆಗಾರನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಆಘ್ಘಾನಿಸ್ತಾನದಲ್ಲಿರುವ ಅಮೆರಿಕ ನೇತೃತ್ವದ ನ್ಯಾಟೊ ಮೈತ್ರಿ ಪಡೆಗಳ ಸಿಬ್ಬಂದಿ ಮೇಲೆ ಒಳಗಿನವರಿಂದಲೇ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಮವಾರದ ಘಟನೆ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ಘಟನೆಯು ಪೊಲೀಸ್ ಪ್ರಧಾನ ಕಚೇರಿಯ ಹೊರಭಾಗದಲ್ಲಿ, ಅಂದರೆ, ಅತಿ ಭದ್ರತೆಯ, ಸುತ್ತಲೂ ಕಾಂಪೌಂಡ್ ಇರುವ ಗವರ್ನರ್ ಕಚೇರಿ ಆವರಣದಲ್ಲಿ ನಡೆದಿದೆ. ನ್ಯಾಯಾಲಯ, ಬಂದೀಖಾನೆಗಳು ಕೂಡ ಈ ಆವರಣದಲ್ಲಿವೆ.

ಆಘ್ಘನ್ ಮಹಿಳಾ ಪೊಲೀಸ್ ನರ್ಗಸ್ ಎಂಬಾಕೆ ಈ ದುಷ್ಕೃತ್ಯ ಎಸಗಿದಾಕೆ. ಆಕೆ ರಾಜಧಾನಿಯ ಆಯಕಟ್ಟಿನ ಪ್ರದೇಶದಲ್ಲಿರುವ ಗವರ್ನರ್ ಕಚೇರಿಯ ಕಾಂಪೌಂಡ್ ಹೊಕ್ಕು ಅಮೆರಿಕದ ನಾಗರಿಕ ಪೊಲೀಸ್ ಸಹಾಯಕನನ್ನು ತನ್ನಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದಳು.

ಆ ಸಂದರ್ಭದಲ್ಲಿ, ದುರ್ದೈವಿಯು ಆವರಣದಲ್ಲಿದ್ದ ಅಂಗಡಿಯೊಂದರಿಂದ ಆಗಷ್ಟೇ ಸಾಮಾನುಗಳನ್ನು ಖರೀದಿಸಿ  ಮನೆ ಕಡೆಗೆ ಹೊರಟಿದ್ದರು ಎಂದು ಕಾಬೂಲ್ ಗವರ್ನರ್ ಅಬ್ದುಲ್ ಜಬಾರ್ ತಕ್ವಾ ತಿಳಿಸಿದ್ದಾರೆ.

ಘಟನೆ ನಡೆದ ಸ್ವಲ್ಪ ಹೊತ್ತಿಗೆ ಆರೋಪಿ ಮಹಿಳಾ ಪೊಲೀಸ್‌ಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಹತ್ಯೆಗೀಡಾದ ಸಲಹೆಗಾರನನ್ನು ಗುತ್ತಿಗೆದಾರ ಎನ್ನಲಾಗಿದೆ. ಆದರೆ ಆತನ ಹೆಸರು ಹಾಗೂ ಇನ್ನಿತರ ವಿವರಗಳನ್ನು ಇನ್ನೂ ಬಹಿರಂಗಗೊಳಿಸಿಲ್ಲ.

ಉತ್ತರ ಆಘ್ಘಾನಿಸ್ತಾನದ ತಪಾಸಣಾ ಚೌಕಿಯೊಂದರಲ್ಲಿ ಆಘ್ಘಾನಿಸ್ತಾನದ ಪೊಲೀಸ್ ಒಬ್ಬ ಐವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆಯಿತು.

ಆಘ್ಘನ್ ಯೋಧರು ಅಥವಾ ಪೊಲೀಸರು ಈ ವರ್ಷ ನ್ಯಾಟೊ ಮೈತ್ರಿ ಪಡೆಗೆ ಸೇರಿದ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ.

ಘಟನೆ ಕುರಿತು ತನಿಖೆ ನಡೆಸುತ್ತಿರುವುದಾಗಿ ಕಾಬೂಲ್ ಉಪ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ದೌದ್ ಅಮಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT