ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ್ಯ ನಿಧನಕ್ಕೆ ಶ್ರದ್ಧಾಂಜಲಿ

Last Updated 15 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಗೃಹ ಸಚಿವ ವಿ.ಎಸ್. ಆಚಾರ್ಯ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ಮಾತನಾಡಿ, ಆಚಾರ್ಯ ಅವರು ಜನಸಂಘದಿಂದ ಬಂದು ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದರು. ಉಡುಪಿ ಪುರಸಭೆ ಸದಸ್ಯ ಸೇರಿದಂತೆ ಹಂತಹಂತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಸ್ಮರಿಸಿದರು.

ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಆಚಾರ್ಯ ಅವರ ಸುಸಂಸ್ಕೃತ ಆದರ್ಶ ಇತರರಿಗೂ ಮಾದರಿ. ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದರು. ಇವರ ನಿಧನಕ್ಕೆ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.

ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ.ಎಸ್. ಮಂಜುನಾಥ್, ಎಂ.ಪಿ. ಗುರುರಾಜ್, ಬದ್ರಿನಾಥ್ ನಾಗರಾಜ್ ಬೇದ್ರೆ, ರಾಮದಾಸ್, ಎಂ.ಡಿ. ರಷೀದ್, ಜಿ.ಟಿ. ಗಿರೀಶ್, ಕೆ. ವಿಜಯಲಕ್ಷ್ಮೀ, ಉಷಾಬಾಯಿ, ಸುನೀತಾ, ಸುಮಾ, ಜಯಕುಮಾರಿ, ನಿಸಾರ್, ಜಿ.ಎಚ್. ಮೋಹನ್ ಮತ್ತಿತರರು ಹಾಜರಿದ್ದರು.

ಜೆಡಿಎಸ್ ಸಂತಾಪ: ಸಚಿವ ಆಚಾರ್ಯ ನಿಧನಕ್ಕೆ ಶಾಸಕ ಎಸ್.ಕೆ. ಬಸವರಾಜನ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶೇಷಣ್ಣಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಂಜುನಾಥ್ ಕಂಬನಿ
ಹಿರಿಯೂರು:
ಸುಸಂಸ್ಕೃತ, ಸಜ್ಜನ ರಾಜಕಾರಣಿಯೆಂದು, ಅಜಾತ ಶತೃವೆಂದು ಖ್ಯಾತಿ ಪಡೆದಿದ್ದ ಡಾ.ವಿ.ಎಸ್.ಆಚಾರ್ಯ ಅವರ ನಿಧನದಿಂದ ರಾಜಕೀಯ ಕ್ಷೇತ್ರ ನಿಜವಾಗಿಯೂ ಬಡವಾಗಿದೆ ಎಂದು ಮಾಜಿ ಸಚಿವ ಡಿ. ಮಂಜುನಾಥ್ ಕಂಬನಿ ಮಿಡಿದಿದ್ದಾರೆ.

ತಾ.ಪಂ. ಮಾಜಿ ಅಧ್ಯಕ್ಷೆ ಡಾ.ಜೆ.ಆರ್. ಸುಜಾತಾ, ಮಾಜಿ ಶಾಸಕ ಆರ್.ರಾಮಯ್ಯ, ವಕೀಲ ಕೆ. ರಾಜಪ್ಪ ಮತ್ತಿತರರು ಆಚಾರ್ಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ನಷ್ಟ

ನಿಷ್ಕಳಂಕ ರಾಜಕಾರಣಿ, ಬಿಜೆಪಿಯಲ್ಲಿ ಎಲ್ಲರಿಗೂ ಅನಿವಾರ್ಯವಾದ ವ್ಯಕ್ತಿಯಾಗಿದ್ದ ಡಾ.ವಿ.ಎಸ್. ಆಚಾರ್ಯ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ವೈ.ಎಸ್. ಅಶ್ವತ್ಥಕುಮಾರ್ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಡಾ.ವಿ.ಎಸ್. ಆಚಾರ್ಯ ಅವರ ನಿಧನಕ್ಕೆ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಂತಾಪ ಸೂಚಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿ, ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಆಚಾರ್ಯ ಅವರು ಪ್ರತಿಪಕ್ಷಗಳೂ ಸಹ ಮೆಚ್ಚುತ್ತಿದ್ದ ವ್ಯಕ್ತಿಯಾಗಿದ್ದರು. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದಿದ್ದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬಲಗೊಳ್ಳಲು ಕಾರಣರಾಗಿದ್ದರು. ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದರು.

ಎಂ.ಎಸ್. ರಾಘವೇಂದ್ರ ಮಾತನಾಡಿದರು. ಎಂ.ವಿ. ಹರ್ಷ, ಕೇಶವಮೂರ್ತಿ,  ವಿಜಯಲಕ್ಷ್ಮಿ, ಬಿ.ಆರ್. ರಂಗಸ್ವಾಮಿ, ಕೆ.ನಾಗರಾಜ್, ಸಿ. ಗೋಪಾಲ್, ಸರವಣ, ಎಚ್. ಲೋಕೇಶ್, ಬಸವರಾಜನಾಯಕ, ಬಿ. ಸಿದ್ದಪ್ಪ, ಸೌಭಾಗ್ಯ, ರಂಗನಾಥ್, ಸಲೀಂ, ದುಬೈ ತಿಪ್ಪೇಸ್ವಾಮಿ, ನಿಜಲಿಂಗಪ್ಪ, ಕೃಷ್ಣಮೂರ್ತಿ, ಎನ್. ಚಿತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸಾಣೇಹಳ್ಳಿ ಶ್ರೀ ಸಂತಾಪ
ಸಿರಿಗೆರೆ: ಡಾ.ವಿ.ಎಸ್. ಆಚಾರ್ಯ ಅವರ ನಿಧನಕ್ಕೆ ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಶಿವಸಂಚಾರದ ಉಪಾಧ್ಯಕ್ಷ ಎಸ್.ಜಿ. ಪ್ರಭು ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಜ್ಯದ ಕಳಂಕ ರಹಿತ, ಉತ್ತಮ ಹಾಗೂ ದಕ್ಷ ಆಡಳಿತಗಾರಾಗಿದ್ದ ಅವರು ಇಡೀ ಮಂತ್ರಿಮಂಡಲದಲ್ಲೇ ಉತ್ತಮ ಸೌಮ್ಯ ಮನೋಭಾವದ ಒಬ್ಬ ಧೀಮಂತ ರಾಜಕಾರಣಿ ಆಗಿದ್ದವರು. ಇಂತಹ ಸಜ್ಜನ ವ್ಯಕ್ತಿಯನ್ನು ನಮ್ಮ ರಾಜ್ಯ ಕಳೆದುಕೊಂಡಂತಾಗಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ್ದ ಅವರು ಸಾಣೇಹಳ್ಳಿ ಶ್ರೀಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
 
ಅವರ ನಿಧನದಿಂದ ಅಪಾರ ನೋವಾಗಿದೆ. ಒಟ್ಟಾರೆ ರಾಜ್ಯದ ಉತ್ತಮ ಆಡಳಿತಕ್ಕೆ ಪೂರಕವಾಗಿ ಯಾವುದೇ ಭ್ರಷ್ಟಚಾರದೊಂದಿಗೆ ಗುರುತಿಸಿಕೊಳ್ಳದ ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದುಶೋಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT