ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ್ಯ ಪಾಠಶಾಲೆಯ ಅಮೃತ ಮಹೋತ್ಸವ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಆಚಾರ್ಯ ಪಾಠಶಾಲೆ ಒಳ್ಳೆಯ ವಿದ್ಯಾಭ್ಯಾಸ ನೀಡುವ ಸಾಮಾಜಿಕ ಕಳಕಳಿಯೊಡನೆ ಹುಟ್ಟಿದ ಶಿಕ್ಷಣ ಸಂಸ್ಥೆ. ಬಸವನಗುಡಿ ಪ್ರದೇಶದಲ್ಲಿ ಅನುಕೂಲಸ್ಥರ ಮಕ್ಕಳಷ್ಟೇ ಅಲ್ಲ, ಅತ್ಯಂತ ಬಡವರ ಮಕ್ಕಳೂ ಪ್ರಾಥಮಿಕ ಶಾಲೆಯಿಂದ ಆರಂಭಿಸಿ ಪದವಿ ಪಡೆವವರೆಗೂ ನಿರಾತಂಕವಾಗಿ ಶಿಕ್ಷಣ ಪಡೆಯಲು ಅಗತ್ಯ ಸೌಕರ್ಯಗಳನ್ನು ರೂಪಿಸಿದ ಸಾರ್ಥಕ ಸಂಸ್ಥೆ. ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ಇದೀಗ ಅಮೃತ ಮಹೋತ್ಸವದ ಆಚರಣೆ ಹಮ್ಮಿಕೊಂಡಿದೆ. ಅದರೊಂದಿಗೆ ಸಂಸ್ಥೆಯ ಸ್ಥಾಪಕರಾದ ಪ್ರೊ. ಎನ್. ಅನಂತಾಚಾರ್ ಅವರ ಶತಮಾನೋತ್ಸವದ ಅರ್ಥಪೂರ್ಣ ಸಂಭ್ರಮವೂ ಸೇರಿಕೊಂಡಿದೆ.

1935ರ ಆಗಸ್ಟ್ 15ರಂದು ನಗರದ ಹಳೆಯ ಬಡಾವಣೆ ನರಸಿಂಹರಾಜ ಕಾಲೋನಿಯಲ್ಲಿ ಆಚಾರ್ಯ ಪಾಠಶಾಲಾ ಪ್ರಾಥಮಿಕ ಶಾಲೆ ಆರಂಭವಾಯಿತು. ಶಾಲೆ ಆರಂಭಿಸುವ ಕನಸು ಕಂಡ ಎನ್. ಅನಂತಾಚಾರ್ ಅವರ ವ್ಯಕ್ತಿತ್ವವೇ ಆದರ್ಶಮಯ. 1910ರ ಸೆಪ್ಟೆಂಬರ್ 5ರಂದು ಮೈಸೂರಿನಲ್ಲಿ ಜನಿಸಿದ ಅವರು, ಇತಿಹಾಸದಲ್ಲಿ ಎಂ.ಎ. ಪದವಿ ಪಡೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು. ಆದರೆ ಸೂಕ್ತ ಉದ್ಯೋಗ ಸಿಗದಿದ್ದಾಗ ಎದೆಗುಂದದೆ ತರಕಾರಿ ವ್ಯಾಪಾರ ಶುರು ಮಾಡಿದರು. ಇಪ್ಪತ್ತೈದು ವರ್ಷದ ಯುವಕನಾಗಿದ್ದ ಆ ಶಿಕ್ಷಣ ಪ್ರೇಮಿ, ಅಂದಿನ ಗಣ್ಯ ವ್ಯಕ್ತಿಗಳಾದ ಎಂ.ಎನ್. ಕೃಷ್ಣರಾವ್, ನವರತ್ನ ರಾಮರಾವ್, ರಾವ್‌ಸಾಹೇಬ್ ರಾಮರಾವ್ ಮೊದಲಾದವರಿಂದ ಪ್ರೇರಣೆ ಪಡೆದು ಕೇವಲ ಮೂರು ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಿಸಿದರು. ಒಂದೇ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅರವತ್ತಕ್ಕೇರಿತು. ಈಗ ವಿವಿಧ ಪ್ರೌಢಶಾಲೆಗಳು, ಕಲೆ, ವಾಣಿಜ್ಯ, ವಿಜ್ಞಾನ ಕಾಲೇಜುಗಳು, ಸಂಜೆ ಕಾಲೇಜು, ಪಾಲಿಟೆಕ್ನಿಕ್ ಸೇರಿ ಹನ್ನೊಂದು ಶಿಕ್ಷಣ ಸಂಸ್ಥೆಗಳನ್ನು `ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್~ ನಿರ್ವಹಿಸುತ್ತಿದೆ.

ಆಚಾರ್ಯ ಪಾಠಶಾಲೆಯ ಸರ್ವತೋಮುಖ ಉನ್ನತಿಗಾಗಿ ಶ್ರಮಿಸಿದ ಪ್ರೊ ಎನ್. ಅನಂತಾಚಾರ್ ಅವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಅಕೆಡೆಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸದಸ್ಯರಾಗಿಯೂ ಶಿಕ್ಷಣ ಸೇವೆ ಸಲ್ಲಿಸಿದ್ದರು (ನಿಧನ: 21 ಏಪ್ರಿಲ್ 1976). ಸಂಸ್ಥೆಯು ಅವರ ಜನ್ಮ ಶತಮಾನೋತ್ಸವ ಸ್ಮರಣೆಗೆ ಉಪನ್ಯಾಸ ಮಾಲೆಯನ್ನು ಆರಂಭಿಸಿದ್ದು, ವಿವಿಧ ವಿಷಯಗಳ ಬಗ್ಗೆ ಉಪಯುಕ್ತ ಉಪನ್ಯಾಸಗಳನ್ನು ಏರ್ಪಡಿಸುತ್ತಿದೆ.

ಗುರುವಾರ (ಜುಲೈ 5) ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ಲೇಖಕಿ ಡಾ. ಸುಧಾ ಮೂರ್ತಿ ಅವರ ಉಪನ್ಯಾಸವಿದೆ. ವಿಷಯ: `ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು~. ಅಧ್ಯಕ್ಷತೆ: ಸಂಸ್ಥೆಯ ಅಧ್ಯಕ್ಷ ಟಿ.ವಿ.ಮಾರುತಿ. ಸ್ಥಳ: ಎಪಿಎಸ್ ವಾಣಿಜ್ಯ ಕಾಲೇಜಿನ ಸಭಾಂಗಣ, ಎನ್. ಆರ್. ಕಾಲೋನಿ. ಸಮಯ: ಸಂಜೆ 5 ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT