ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ-ಕೂಟಕ್ಕೆ ರಾಜಾತಿಥ್ಯದ ‘ಉತ್ತರ’

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ಸಭಾಂಗಣಕ್ಕೆ ಇತ್ತೀಚೆಗೆ ಯಕ್ಷಲೋಕದ ಪ್ರಭಾವಳಿಯ ಸ್ಪರ್ಶ. ಹೊರಗೆ ಒಂದೇ ಸಮನೆ ಜಿಟಿಜಿಟಿ ಮಳೆ ಸದ್ದು ಮಾಡುತ್ತಿದ್ದರೂ ಒಳಗೆ ಕುಳಿತವರಿಗೆ ಅದರ ಪರಿವೆಯೇ ಇರಲಿಲ್ಲ. ಯಾಕೆಂದರೆ ಅಲ್ಲಿ ನಡೆಯುತ್ತಿದ್ದ ‘ಮಾರುತಿ ಪ್ರತಾಪ’ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯರಸದ ಮುಸಲಧಾರೆಯೇ ಸುರಿಯುತ್ತಿತ್ತು.

ತಿಳಿಹಾಸ್ಯದ ಹೊನಲು ಝರಿಝರಿಯಾಗಿ ಹರಿಯುತ್ತಿದ್ದಾಗ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು, ಕೆಲವರು ನಕ್ಕು ನಕ್ಕು ಬಿದ್ದರು. ಇದಾದ ನಂತರ ಕೀಚಕ ವಧೆಯೂ ಪ್ರೇಕ್ಷಕರನ್ನು ರಸಗಡಲಲ್ಲಿ ತೇಲಿಸಿತು. ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ಆಟಗಳು ಮುಗಿದಾಗ ರಾತ್ರಿ ಒಂಬತ್ತು ಗಂಟೆ.

ಒಂದು ವಾರದ ನಂತರ ಅದೇ ಜಾಗದಲ್ಲಿ ‘ಕೂಟ’ದ ರಸಗಡಲು ಉಕ್ಕಿ ಹರಿಯಿತು. ‘ವೀರಮಣಿ ಕಾಳಗ'ದಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಖ್ಯಾತ ಕಲಾವಿದರು ಸಂಗಮಿಸಿದ ತಾಳಮದ್ದಳೆ ‘ಕೇಳಲು’ ಸಂಘಟಕರ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ತುಂಬಿದ್ದರು.

ಉತ್ತರ ಕರ್ನಾಟಕದಲ್ಲಿ ಯಕ್ಷಗಾನ ನೋಡಲು ಸಿಗುವುದು ಮಳೆಗಾಲದಲ್ಲಿ ಮಾತ್ರ. ಯಕ್ಷಗಾನವನ್ನು ಈ ಭಾಗದಲ್ಲಿ ಪ್ರಚುರಪಡಿಸುವುದಕ್ಕೆಂದೇ ಟೊಂಕ ಕಟ್ಟಿ ನಿಂತಿರುವ ಹುಬ್ಬಳ್ಳಿಯ ಉದ್ಯಮಿಗಳ ತಂಡ ‘ರಂಗ ಮಿತ್ರರು’ ಮಳೆಗಾಲದಲ್ಲಿ ಇಲ್ಲಿಗೆ ಈ ಕಲೆಯನ್ನು, ಕಲಾವಿದರನ್ನು ಕರೆತರುತ್ತಾರೆ. ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲಿ ಪ್ರದರ್ಶನವಿದ್ದರೂ ಕಲಾವಿದರಿಗೆ ತಾತ್ಕಾಲಿಕ ನಿಲುಗಡೆ, ವಿಶ್ರಾಂತಿ -ಆತಿಥ್ಯ ಇವರಿಂದಲೇ. ‘ರಂಗಮಿತ್ರರು’ ತಂಡದ ಈ ಸೇವೆಗೆ ಈಗ ಏಳು ವರ್ಷ ತುಂಬಿದೆ.   

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಬಂದು ಅವಳಿ ನಗರದಲ್ಲಿ ಹೋಟೆಲ್ ಮತ್ತಿತರ ಉದ್ಯಮದಲ್ಲಿ ತೊಡಗಿರುವ ಸಮಾನ ಮನಸ್ಕರು ಸಂಘಟನೆಯನ್ನು ಹುಟ್ಟುಹಾಕಿದ್ದು 2005ರಲ್ಲಿ. ಅಂದಿನಿಂದ ಪ್ರತಿವರ್ಷ ಹುಬ್ಬಳ್ಳಿಯಲ್ಲಿ ತಾಳಮದ್ದಳೆ ಏರ್ಪಡಿಸಿಕೊಂಡು ಬರುತ್ತಿದ್ದಾರೆ. ಕಲಾ ಪೋಷಕರು ಇರುವ ವಿಷಯ ತಿಳಿದ ನಂತರ ಕಲಾವಿದರು ಇತ್ತ ಬರಲು ಹೆಚ್ಚು ಆಸಕ್ತಿ ತೋರಿಸಿದರು. ವರ್ಷ ಕಳೆದಂತೆ ಈ ಭಾಗಕ್ಕೆ ಬರುವ ಕಲಾವಿದರ ಸಂಖ್ಯೆ ಹೆಚ್ಚಾಯಿತು; ಹಾಗೆ ಬರುವವರೇ ಸೇರಿ ಒಂದು ಮೇಳವಾಯಿತು. ಈಗ ವರ್ಷದಲ್ಲಿ ಕನಿಷ್ಠ ಹತ್ತು ಆಟಗಳು ನಡೆಯುತ್ತವೆ. ಪ್ರೇಕ್ಷಕರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಇಲ್ಲಿ ಮೊದಲ ಕೂಟಕ್ಕೆ ಸೇರಿದ್ದ ಪ್ರೇಕ್ಷಕರ ಸಂಖ್ಯೆ 60. ಈಗ ಆ ಸಂಖ್ಯೆ 250 ದಾಟಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಸತೀಶ ಶೆಟ್ಟಿ.

ಕಲಾವಿದರು-ಮೇಳಗಳ ಮಿಶ್ರಣ
ಮಳೆಗಾಲದಲ್ಲಿ ಈ ಭಾಗಕ್ಕೆ ಬರುವ ಕಲಾವಿದರು ಒಂದೇ ಮೇಳದವರಲ್ಲ. ತವರಿನಲ್ಲಿ ಆಟ-ಕೂಟಗಳು ನಡೆಯುವುದು ಕಡಿಮೆಯಾದ್ದರಿಂದ ಈ ಸಂದರ್ಭದಲ್ಲಿ ಕಲಾವಿದರು ಮುಂಬೈ, ಬೆಂಗಳೂರು, ಉತ್ತರ ಕರ್ನಾಟಕ ಭಾಗಕ್ಕೆ ತೆರಳುತ್ತಾರೆ. ಬೇರೆ ಬೇರೆ ಮೇಳಗಳ ಕಲಾವಿದರು ಸೇರಿಕೊಂಡು ಒಂದು ಪ್ರಸಂಗವನ್ನು ಆಡುವುದು ಈ ‘ತಿರುಗಾಟ’ದ ವೈಶಿಷ್ಟ್ಯ. ನವೆಂಬರ್‌ನಿಂದ ಮೇ ತಿಂಗಳವರೆಗೆ ದಕ್ಷಿಣದಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ನಡೆಯುತ್ತದೆ. ಈ ಸಂದರ್ಭದಲ್ಲಿ ಇಡೀ ಮೇಳ ಒಂದೊಂದು ಪ್ರದೇಶದಲ್ಲಿ ಲಂಗರು ಹಾಕಿರುತ್ತದೆ. ಹೀಗಾಗಿ ಕಲಾವಿದರು ಸಿಗುವುದು ಕಡಿಮೆ.

ಮಳೆಗಾಲದಲ್ಲಿ ಅವರಿಗೆ ವಿಶ್ರಾಂತಿ. ಹೀಗಾಗಿ ಬಿಡಿ ಬಿಡಿಯಾಗಿ ಸಿಗುತ್ತಾರೆ. ಹೀಗೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬರುವ ಕಲಾವಿದರಿಗೆ ಈ ಭಾಗದಲ್ಲಿ ಉತ್ತಮ ಆತಿಥ್ಯ ಸಿಗುತ್ತದೆ. ‘ನೀಲ್ಕೋಡ್ ಯಕ್ಷ ಸಂಘ’ದಂಥ ಇತರ ಸಂಘಟನೆಗಳ ಪದಾಧಿಕಾರಿಗಳು ಕೂಡ ‘ರಂಗ ಮಿತ್ರ’ರಿಗೆ ಸಹಕಾರ ನೀಡುತ್ತಾರೆ. ಸಂಘಟಕರು ಯಾರೇ ಆಗಿರಲಿ, ಕಲಾವಿದರಿಗೆ ವಸತಿ- ಊಟೋಪಚಾರದ ವ್ಯವಸ್ಥೆ ಮಾಡುವುದಕ್ಕೆ ‘ರಂಗ ಮಿತ್ರರು’ ಮುಂದೆ ಬರುತ್ತಾರೆ. ಧರ್ಮಸ್ಥಳ-, ಕಟೀಲು, ಪೆರಡೂರು-, ಸಾಲಿಗ್ರಾಮ ಹೀಗೆ ವಿವಿಧ ಮೇಳದವರು ಒಂದುಗೂಡಿ ಬರುತ್ತಾರೆ. ಹೀಗೆ ಬರುವಾಗ ಪ್ರತ್ಯೇಕವಾದ ಹೆಸರನ್ನೂ ಇಟ್ಟುಕೊಳ್ಳುತ್ತಾರೆ. ‘ರಂಗ ಮಿತ್ರರು’ ತಂಡದ ವರ್ಷದ ಕೊನೆಯ ಯಕ್ಷಗಾನ ಕಾರ್ಯಕ್ರಮ ಪ್ರತಿವರ್ಷ ಗಾಂಧಿ ಜಯಂತಿ ದಿನ ನಡೆಯುತ್ತದೆ.

ಯಕ್ಷಗಾನ ಕಲಾವಿದರು ಘಟ್ಟ ಏರಿ ಗಂಡುಮೆಟ್ಟಿನ ನಾಡಿಗೆ ಬರಲು ಇಲ್ಲಿನ ಕಲಾಸಕ್ತರ ಪ್ರೋತ್ಸಾಹವೇ ಕಾರಣ. ಹುಬ್ಬಳ್ಳಿಗೆ ಸಮೀಪದ ಕಲಘಟಗಿ, ಯಲ್ಲಾಪುರದವರೆಗೆ ಬರುತ್ತಿದ್ದ ಕಲಾವಿದರು ಆತಿಥ್ಯ ಸಿಗುವ ಭರವಸೆ ಇಲ್ಲದ ಕಾರಣ ಮುಂದೆ ಪಯಣ ಬೆಳೆಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ‘ಕಲಾವಿದರು ಶ್ರಮಪಟ್ಟು ಇಷ್ಟು ದೂರ ಬರುವಾಗ ನಾವು ಕಿಂಚಿತ್ ಸಹಾಯ ಮಾಡದಿದ್ದರೆ ಹೇಗೆ’ ಎಂದುಕೊಂಡು ‘ರಂಗ ಮಿತ್ರರು’ ರಂಗ ಪ್ರವೇಶ ಮಾಡಿದರು. ಅವರ ಈ ನಿರ್ಧಾರದಿಂದ ನಾರಾಯಣ ಶಬರಾಯ, ದಿನೇಶ ಅಮ್ಮಣ್ಣಾಯ, ಕುಂಬ್ಳೆ ಸುಂದರರಾವ್, ಪ್ರಭಾಕರ ಜೋಷಿ, ಚನ್ನಪ್ಪ ಶೆಟ್ಟಿ, ವಿಶ್ವನಾಥ ಶೆಟ್ಟಿ, ಜಬ್ಬಾರ್ ಸಮೋ, ವಾಸುದೇವ ರಂಗ ಭಟ್ ಮುಂತಾದ ಅನೇಕ ಕಲಾವಿದರ ನಾಟ್ಯ ನೋಡಲು, ವಾಕ್ಚಾತುರ್ಯ ಆಲಿಸಲು ಇಲ್ಲಿನ ರಸಿಕರಿಗೆ ಸಾಧ್ಯವಾಯಿತು.

‘ಯಕ್ಷಗಾನ ಒಂದು ಅದ್ಭುತ ಕಲೆ. ನಾಟ್ಯ, ಮಾತುಗಾರಿಕೆ, ಪ್ರಸಾದನ, ಹಿಮ್ಮೇಳ- ಮುಮ್ಮೇಳಗಳ ಮಿಶ್ರಣ ಇದರ ವೈಶಿಷ್ಟ್ಯ. ಬೇರೆ ಬೇರೆ ಕಾರಣಗಳಿಂದ ಊರು ಬಿಟ್ಟು ದೂರ ಇರುವವರು ಇದರ ಸವಿ ಉಣ್ಣುವುದರಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಯಕ್ಷಗಾನವನ್ನು ಸಂಘಟಿಸುತ್ತೇವೆ. ಇದು ನಮ್ಮಲ್ಲಿ ಕೃತಾರ್ಥ ಭಾವವನ್ನು ಮೂಡಿಸಿದೆ’ ಎನ್ನುತ್ತಾರೆ ಅನಂತ ಪದ್ಮನಾಭ ಐತಾಳ.

‘ಯಕ್ಷಗಾನದಲ್ಲಿ ಅಶ್ಲೀಲ ಸಂಭಾಷಣೆಗೆ ಅವಕಾಶ ಇಲ್ಲದಿರುವುದು ಇದರ ಮಹತ್ತರ ಗುಣ. ಇಂಥ ಕಲೆಯ ಸೊಬಗು ಜನರ ಮನದಿಂದ ಮರೆತು ಹೋಗಬಾರದು ಎಂಬ ಕಾರಣದಿಂದ ಹಣ ಒಟ್ಟುಗೂಡಿಸಿ, ಜನ ಸೇರಿಸಿ ಕಲಾವಿದರನ್ನು ಕರೆಸುತ್ತೇವೆ’ ಎಂಬುದು ಸತೀಶ ಶೆಟ್ಟಿ ಅವರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT