ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಕ್ಕುಂಟು, ಲೆಕ್ಕಕ್ಕಿಲ್ಲ! (ಬೋರ್ಡ್ ರೂಮಿನ ಸುತ್ತ ಮುತ್ತ)

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಅರಸುತಿರು ಅರ್ಹನನೆ ಮಂದಿ ಮಧ್ಯದಿಮೆಂದು /
ಗುರುತಿಸವನನು ನಿನಗೆ ದೊರೆತ ಆ ಚಣವೆ //
ಅರುಹಿ ಅವನೊಳು ನಿನ್ನ ಅಂತರಂಗದ ಗುರಿಯ /
ಪಾರಯಿಸು ಯಶವನ್ನೆ  - ನವ್ಯಜೀವಿ 

ನಾನೀಗ ಹೇಳಲಿರುವ ವಿಷಯ ಚಿಕ್ಕ ಚಿಕ್ಕ ಕಂಪೆನಿಗಳಿಗೆ, ಅಂದರೆ ಸುಮಾರು ನೂರಿನ್ನೂರು ಮಂದಿ ಕೆಲಸದಲ್ಲಿರುವ ಕಂಪೆನಿಗಳಿಗೆ ಪ್ರಾಯಶಃ ಅನ್ವಯಿಸದಿರಬಹುದು. ಆದರೆ, ದೊಡ್ಡ ಕಂಪೆನಿಗಳಲ್ಲಿ ಇದು ಅಹಿತವಾದರೂ ಸತ್ಯ!

ಕಂಪೆನಿಯೊಂದು ಬೆಳೆಯುತ್ತ ಸಾಗಿದಂತೆಲ್ಲ ತನ್ನರಿವಿಗಿಲ್ಲದೆಯೇ ಆ ಕಂಪೆನಿಯಲ್ಲಿ ಕೆಲಸವನ್ನು ಸರಿಯಾಗಿ ತಿಳಿಯದ ಅಥವಾ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಅಭ್ಯಾಸವಿರದ ಅಥವಾ ಕೆಲಸಕ್ಕೆ ಬಾರದ ಅನೇಕರು ಶಾಮೀಲಾಗಿ ಬಿಡುತ್ತಾರೆ.

ಮಾನವ ಸಂಪನ್ಮೂಲ ವಿಭಾಗದಲ್ಲಿ ಸಾಕಷ್ಟು ನುರಿತ ನನ್ನ ಸ್ನೇಹಿತ ಶೇಖರ್ ನನಗೊಮ್ಮೆ ಹೇಳಿದ್ದುಂಟು - `ಇತ್ತೀಚೆಗೆ ನಡೆದ ಒಂದು ಕಾರ್ಪೊರೇಟ್ ಸಮೀಕ್ಷೆಯಂತೆ ಹಾಗೂ ಅನೇಕ ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳ ಅನಿಸಿಕೆಯಂತೆ, ಯಾವುದೇ ಕಂಪೆನಿಯಲ್ಲಿನ ಶೇಕಡಾ ನಲವತ್ತರಷ್ಟು ನೌಕರರನ್ನು ಕೆಲಸದಿಂದ ತೆಗೆದು ಹಾಕಿದರೂ, ಕಂಪೆನಿಯ ಯಶಸ್ಸಿಗೆ ಯಾವುದೇ ತೊಡಕು ಇರುವುದಿಲ್ಲ~.

ಶೇಖರ್ ಹೇಳಿದ ಮಾತಿನ ಅರ್ಥ ಸರಳ. ಸಮೃದ್ಧವಾದ ಚಿನ್ನದ ಗಣಿಯೊಂದರಲ್ಲಿ ಚಿನ್ನದ ಚೆಂಡೊಂದನ್ನು ಉರುಳಿಸಿ ನೋಡಿ. ಆ ಚೆಂಡು ಉರುಳಿದಂತೆಲ್ಲ ಅದಕ್ಕೆ ಸುತ್ತಲಿನ ಮಣ್ಣು ಮಿಶ್ರಿತ ಚಿನ್ನವೂ ಅಂಟುತ್ತ ಆ ಚೆಂಡು ಗಾತ್ರದಲ್ಲಿ ಬೆಳೆಯುತ್ತದೆ. ಯಾವುದೇ ಹಂತದಲ್ಲಿ ಉಬ್ಬಿರುವ ಆ ಚೆಂಡನ್ನು ಪರೀಕ್ಷಿಸಿದರೆ, ಅದರಲ್ಲಿ ಬರಿಯ ಚಿನ್ನವೇ ಕಂಡು ಬರುವುದಿಲ್ಲ. ಬಹಳಷ್ಟು ಮಣ್ಣು ಇದ್ದೇ ಇರುತ್ತದೆ.

ಅಂತೆಯೇ ಬೆಳೆಯುತ್ತಿರುವ ಅಥವಾ ಬೆಳೆದು ನಿಂತಿರುವ ಯಾವುದೇ ಕಂಪೆನಿಯಲ್ಲಿಯೂ ಕನಿಷ್ಠ ಶೇಕಡಾ ನಲವತ್ತರಷ್ಟು ನೌಕರರು ಕಂಪೆನಿಯ ಯಶಸ್ಸಿಗೆ ನೇರವಾಗಿ ಅನುಕೂಲವಾಗುವಂತೆ ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿರುವುದಿಲ್ಲ. ತಮ್ಮದೇ ಲೋಕದಲ್ಲಿರುತ್ತಾರೆ. ತಮ್ಮದೇ ಚಿಂತನೆಯಲ್ಲಿ ಮುಳುಗಿರುತ್ತಾರೆ. ಅಂತಹವರನ್ನೆಲ್ಲ ಕಲೆ ಹಾಕಿ ಕೆಲಸದಿಂದ ತೆಗೆದದ್ದೇ ಆದರೆ ಕಂಪೆನಿಯ ಒಟ್ಟಾರೆ ಗಳಿಕೆಯಲ್ಲಿ ಯಾವುದೇ ಕುಂದು ಉಂಟಾಗದು ಎಂಬುದೇ ಶೇಖರ್ ಹೇಳಿದ ಸಮೀಕ್ಷೆಯ ವರದಿಯ ತಿರುಳು.

ಇದರ ಜಾಡನ್ನೇ ಹಿಡಿದು ಮುಂದುವರೆಸುವುದಾದರೆ, ಯಾರೊಬ್ಬ ಮ್ಯಾನೇಜರ್‌ನ ತಂಡದಲ್ಲಿ  ಕನಿಷ್ಠ ಶೇಕಡಾ ನಲವತ್ತರಷ್ಟು ಮಂದಿ `ಆಟಕ್ಕುಂಟು, ಲೆಕ್ಕಕ್ಕಿಲ್ಲ~ ಗುಂಪಿಗೆ ಸೇರಿದವರೇ ಆಗಿರುತ್ತಾರೆ ಎನ್ನಬಹುದು. ಈ ಸಂಖ್ಯೆಯ ನಿಖರತೆಯ ಬಗ್ಗೆ ನಾವು ವಾದ ಮಾಡಬಹುದಾದರೂ ಈ ವಿಚಾರದ ಹಿಂದಿರುವ ಸತ್ಯವನ್ನು ನಾವು ಶಂಕಿಸಲಾಗುವುದಿಲ್ಲ. ಇಪ್ಪತ್ತೈದು ವರ್ಷಗಳ ಕಾಲ ಹಲವಾರು ಕಂಪೆನಿಗಳಲ್ಲಿ ದುಡಿದ ನನಗಂತೂ ಇದರಲ್ಲಿ ಸಾಕಷ್ಟು ಸತ್ಯವಿದೆ ಎಂದೇ ಅನ್ನಿಸುತ್ತದೆ.

ಹೀಗಿರುವಾಗ ಬೋರ್ಡ್ ರೂಮಿನ ಸುತ್ತಮುತ್ತಲಿನ ಮಂದಿ ಅಧಿಕಾರ ಹಂಚಿಕೆಗೆಂದು ಕಾರ್ಯತತ್ಪರರಾದಾಗ ಪಾಲಿಸಬೇಕಾದ ಎಚ್ಚರಿಕೆಯೇನು ಎಂಬುದೇ ಈಗ ನಮ್ಮ ಮೂಲ ಪ್ರಶ್ನೆ.

ಶಿವಾಜಿಯ ತಾಯಿ ಜೀಜಾಬಾಯಿ ಆಗ ಇದ್ದದ್ದು ರಾಜಗಡದಲ್ಲಿ. ಅಲ್ಲಿಂದ ಕೇವಲ ಆರು ಮೈಲಿಯಷ್ಟೇ ಕೊಂಡಾಣದ ಸಿಂಹಗಡ. ರಾಜಗಡದ ಬುರುಜಿನ ಮೇಲೆ ನಿಂತರೆ ಜೀಜಾಬಾಯಿಗೆ ದೂರದಲ್ಲಿ ಸಿಂಹಗಡ ಕಾಣುತ್ತಿತ್ತು. ಔರಂಗಜೇಬನ ಆಧಿಪತ್ಯದಲ್ಲಿ ಆಗ ಕೊಂಡಾಣವನ್ನು ಆಳುತ್ತಿದ್ದವನು ಅಪ್ರತಿಮ ಶೂರನಾದ ಉದಯಬಾನು ರಾಠೋಡ ಎಂಬ ರಜಪೂತ ಸರದಾರ.  ಆಕೆ ಒಂದು ದಿನ  ಶಿವಾಜಿಗೆ, -`ನಿನ್ನ ಮೊಗಲರ ವಿರುದ್ಧದ ಪುನರ್ಯುದ್ಧದಲ್ಲಿ ಕೊಂಡಾಣವನ್ನು ಗೆಲ್ಲುವುದೇ ಮೊದಲ ಹೆಜ್ಜೆಯಾಗಲಿ~ ಎಂದು ಆಶೀರ್ವದಿಸುತ್ತಾಳೆ.

ಶಿವಾಜಿಗೂ ಅದೇ ಆಸೆ. ಆದರೆ, ಸಿಂಹಗಡ ಎಲ್ಲ ರೀತಿಯಲ್ಲೂ ದುರ್ಗಮವಾದ ಕೋಟೆ. ಕೋಟೆಯ ಮೇಲೆ ರಾಠೋಡನ ಸಾವಿರದ ಐನೂರು ರಜಪೂತ ಸಿಪಾಯಿಗಳು. ಎಲ್ಲ ಬುರುಜುಗಳ ಮೇಲೂ ತೋಪುಗಳ ಮಹಾಪೂರ. ಆ ದುರ್ಗಕ್ಕೆ ಎರಡು ಕಡೆ ಮಾತ್ರ ಕೋಟೆಯ ಬಾಗಿಲುಗಳಿದ್ದುವು.

ಇನ್ನೆರಡು ದಿಕ್ಕುಗಳಲ್ಲಿ ಪ್ರಕೃತಿಯದೇ ರಕ್ಷಣೆ. ಭೀಕರ ಕಣಿವೆಯಿಂದ ಮೇಲೇಳುವ ದೊಡ್ಡ ಗಾತ್ರದ ಶಿಲಾಭಿತ್ತಿಗಳು. ಇದನ್ನು ಏರಿ ಯಾರೊಬ್ಬರೂ ಕೋಟೆಗೆ ಬರುವ ಸಾಧ್ಯತೆಯೇ ಇಲ್ಲವಾದ್ದರಿಂದ ಆ ಎರಡು ದಿಕ್ಕುಗಳಲ್ಲಿ ಕೋಟೆಗೆ ಬಾಗಿಲುಗಳಿರಲಿಲ್ಲ! ಎಲ್ಲ ರೀತಿಯಲ್ಲೂ ಅಭೇದ್ಯವಾದ ಕೋಟೆಯನ್ನು ಗೆಲ್ಲುವುದು ಅಸಾಧ್ಯ ಎಂಬುದು ಶಿವಾಜಿಗೂ ಗೊತ್ತಿತ್ತು.
 
ಇದು ಅತ್ಯಂತ ಸಾಹಸದ ಕೆಲಸವೇ ಸರಿ. ದಿನದಲ್ಲಿ ಕೋಟೆಗೆ ಲಗ್ಗೆ ಹಾಕಿ ತೋಪುಗಳ ತುಫಾಕಿಗಳಿಂದ ಪಾರಾಗಿ ಕೋಟೆಯ ಮೇಲೆ ಸರಿದು ರಜಪೂತರನ್ನು ಎದುರಿಸುವುದು ಒಟ್ಟಾರೆ ಮೃತ್ಯುವಿಗೆ ಕರೆ ಕೊಟ್ಟಂತೆಯೇ ಹೌದು. ಆದ್ದರಿಂದ ಈ ಕೆಲಸ ರಾತ್ರಿಯೇ ಆಗಬೇಕು ಹಾಗೂ ಕದನ ದೀರ್ಘವಾಗಿ ನಡೆಯದೆ ಆದಷ್ಟು ಬೇಗ ತಮ್ಮ ಗೆಲುವಿನಲ್ಲಿ ಪರಿಸಮಾಪ್ತಿಯಾಗಿ ಬಿಡಬೇಕು. ಇಲ್ಲದಿದ್ದರೆ ಸೋಲು ನಿಶ್ಚಯ.

ಶಿವಾಜಿ ತನ್ನ ನೆಚ್ಚಿನ ಸಂಗಡಿಗರನ್ನು ಕರೆಸಿ ಇದರ ವಿಚಾರವಾಗಿ ಸುದೀರ್ಘವಾಗಿ ಪರಾಮರ್ಶಿಸುತ್ತಾನೆ. ಕಡೆಯಲ್ಲಿ ತನ್ನ ಬಾಲ್ಯಮಿತ್ರನಾದ ಸುಬೇದಾರ ತಾನಾಜಿ ಮಾಲಸುರೆಯನ್ನು ನೋಡಿ - `ತಾನಾಜಿ, ಈ ಕೆಲಸ ನಿನ್ನಿಂದ ಮಾತ್ರವೇ ಸಾಧ್ಯ. ನೀನೇ ಈ ಕೋಟೆಯನ್ನು ಗೆಲ್ಲ ಬಲ್ಲ ನನ್ನ ಏಕೈಕ ಸರದಾರ ಎಂಬುದು ನನ್ನ ದೃಢ ನಂಬಿಕೆ.

ಕೊಂಡಾಣದ ಲಗ್ಗೆಗೆ ನಾನು ನಿನ್ನನ್ನು ನಿಯುಕ್ತಗೊಳಿಸುತ್ತಿದ್ದೇನೆ. ನಿನಗೆ ಜಯವಾಗಲಿ~ ಎನ್ನುತ್ತ ತಾನಾಜಿಗೆ ರಣವೀಳ್ಯ ನೀಡುತ್ತಾನೆ.

ಅಲ್ಲಿಂದ ಮುಂದೆ ನಡೆಯುವುದೆಲ್ಲ ತಾನಾಜಿಯ ಪರಾಕ್ರಮದ ಗಾಥೆ. ಅವನ ಮಗನಾದ ರಾಯಬಾನನ ಮದುವೆ ಕೂಡ ಅದೇ ಸಮಯದಲ್ಲಿರುತ್ತದೆಯಾದರೂ ತಾನಾಜಿ ತನ್ನ ಅಧಿಪತಿ ನಿಯೋಜಿಸಿದ ಕಾರ್ಯಕ್ಕಾಗಿ ಸಜ್ಜಾಗಿ ಬಿಡುತ್ತಾನೆ. `ರಾಯಬಾನ ಮದುವೆ ನಂತರ, ಮೊದಲು ಕೊಂಡಾಣದ ಮದುವೆ!~ ಎಂದು ವೀರ ತಾನಾಜಿ ನುಡಿದ ಮಾತುಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವೇ ಆಗಿದೆ.

ತಾನಾಜಿ ತನ್ನ ತಮ್ಮ ಸೂರ್ಯಾಜಿಯೊಡನೆ ಕೇವಲ ಐನೂರು ಮಾವಳಿ ವೀರರೊಂದಿಗೆ ಕೊಂಡಾಣದ ಆಕ್ರಮಣಕ್ಕೆ ಯೋಜನೆ ರೂಪಿಸುತ್ತಾನೆ. ನಂತರ ಯಶವಂತಿ ಎಂಬ ಉಡದ ಸಹಾಯದಿಂದ ಪ್ರಕೃತಿ ನಿರ್ಮಿತ ಶಿಲೆಗಳನ್ನೆ ಮೆಟ್ಟಲಾಗಿಸಿ ಕೋಟೆ ಹತ್ತಿದ್ದು, ಉದಯಬಾನುವಿನ ಜೊತೆ ಸೆಣಸುತ್ತ ಅವನನ್ನೂ ಸಂಹರಿಸಿ ಕಡೆಯಲ್ಲಿ ತಾನೂ ವೀರಸ್ವರ್ಗ ಅಪ್ಪಿದ್ದು ಹಾಗೂ ಕೊಂಡಾಣವನ್ನು ಶಿವಾಜಿಯ ತೆಕ್ಕೆಗೆ ಸೇರಿಸಿದ್ದು - ಹೀಗೆ ಎಲ್ಲವೂ ತಾನಾಜಿಯ ಯಶೋಗಾಥೆಗಳು.

`ಕೊಂಡಾಣವನ್ನೇನೋ ಗೆದ್ದಾಯಿತು. ಆದರೆ, ಯುದ್ಧದಲ್ಲಿ ತಾನಾಜಿ ಮಡಿದ~ ಎಂಬ ಸುದ್ದಿಯನ್ನು ದೂತನಿಂದ ಕೇಳಿದ ಶಿವಾಜಿ `ಗಡ ಆಲಾ. ಪಣ್ ಸಿಂಹ ಗೇಲಾ~ - (ಗಡ ಬಂತು. ಆದರೆ, ಸಿಂಹ ಹೋಯಿತಲ್ಲ) ಎಂಬ ದುಃಖತಪ್ತವಾದ ಉದ್ಗಾರವು ಶಿವಾಜಿಗೆ ತಾನಾಜಿಯಲ್ಲಿದ್ದ ಅಪ್ರತಿಮ ಪ್ರೇಮದ ಸಂಕೇತ ಮಾತ್ರವಲ್ಲ, ಅದು ಅಧಿಪತಿಯೊಬ್ಬನಿಗೆ ತನ್ನ ಸಹಚರನ ಮೇಲಿದ್ದ ಅದಮ್ಯ ವಿಶ್ವಾಸದ ದೃಷ್ಟಾಂತವೂ ಆಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಲು ಅರ್ಹವೆನಿಸುತ್ತದೆ.

ಅಂಕಣದ ಮೊದಲಲ್ಲಿ ನಮ್ಮನ್ನು ಕಾಡಿದ ಮೂಲ ಪ್ರಶ್ನೆಗೆ, ಅಂದರೆ, ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿ ಅಧಿಕಾರ ಹಂಚಿಕೆಗೆಂದು ಕಾರ್ಯತತ್ಪರರಾದಾಗ ಪಾಲಿಸಬೇಕಾದ ಎಚ್ಚರಿಕೆಯೇನು ಎಂಬುದರತ್ತ ಗಮನ ಹರಿಸೋಣ.

ಶಿವಾಜಿಯ ಬಳಿ ಅನೇಕ ಸರದಾರರಿದ್ದರು. ಕೊಂಡಾಣದ ಆಕ್ರಮಣಕ್ಕೆ ಶಿವಾಜಿ ಅವರಲ್ಲಿ ಯಾರನ್ನು ಬೇಕಾದರೂ ನಿಯೋಜಿಸಬಹುದಿತ್ತು. ಆದರೆ, ಕೊಂಡಾಣ ಅದೆಷ್ಟು ದುರ್ಗಮವಾದ ತಾಣ ಎಂಬುದು ಶಿವಾಜಿಗೆ ತಿಳಿದಿತ್ತು.

ಉದಯಬಾನುವಿನ ಪರಾಕ್ರಮದ ಬಗ್ಗೆಯೂ ಶಿವಾಜಿಗೆ ಸಂಶಯವಿರಲಿಲ್ಲ. ಹೀಗಾಗಿ ಕೊಂಡಾಣವನ್ನು ಗೆಲ್ಲುವ ಸರದಾರನಿಗೆ ಪರಾಕ್ರಮದ ಜೊತೆ ಚಾಣಾಕ್ಷತನವೂ ಇರಬೇಕು. ಸ್ವರಾಜ್ಯ ಸ್ಥಾಪನೆಯ ಬಗ್ಗೆ ತನಗಿರುವಷ್ಟೇ ಕಾಳಜಿ ಇರಬೇಕು. ಇವೆಲ್ಲ ಶಿವಾಜಿಗೆ ಕಂಡದ್ದು ತಾನಾಜಿಯಲ್ಲಿ. ಅದರಂತೆಯೇ ತಾನಾಜಿಗೆ ರಣವೀಳ್ಯ ನೀಡುತ್ತಾನೆ.

ನಂತರದ್ದೆಲ್ಲ ತಾನಾಜಿಯದೇ ಯೋಜನೆ. ಅವನದೇ ಕಾರ್ಯಾಚರಣೆ. ಸೋಲು ಗೆಲುವುಗಳೆಲ್ಲ ಅವನದೇ ಲೆಕ್ಕಾಚಾರ. ಶಿವಾಜಿ ಎಲ್ಲೂ ತನ್ನದೆಂಬ ಶಿಷ್ಠಾಚಾರಗಳನ್ನಾಗಲೀ ಅಥವಾ ನಂಬುಗೆಗಳನ್ನಾಗಲೀ ತಾನಾಜಿಯ ಮೇಲೆ ಹೇರುವುದಿಲ್ಲ. ಹಿಂದೆ ನಿಂತು ಅವನ ಪ್ರತಿ ಹೆಜ್ಜೆಯನ್ನೂ ಪ್ರಶ್ನಿಸುವುದಿಲ್ಲ.

ಅಧಿಕಾರ ಹಂಚಿಕೆಯ ಬಗೆಗಿನ ಬಹುಮುಖ್ಯ ಪಾಠ ನಮಗಿಲ್ಲೇ ಪ್ರಾಪ್ತಿ. ನಿಮ್ಮ ವಿಭಾಗದವರಿಗೆ ಕೆಲಸ ಹಂಚಿದಾಗ ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ನಿಮಗನ್ನಿಸಿದರೆ ಅವರಿಗೆ ಸೂಕ್ತ ಶಿಕ್ಷಣ ನೀಡಿ. ಕೈಹಿಡಿದು ನಡೆಸಿ, ಆದರೆ, ತಾವು ನೀಡಿರುವ ಕೆಲಸವನ್ನು ಆತ ದಕ್ಷತೆಯಿಂದ ನಿಭಾಯಿಸಬಲ್ಲನೆಂಬ ನಂಬಿಕೆ ನಿಮಗಿದ್ದರೆ ಅವನನ್ನು ಅವನಷ್ಟಕ್ಕೆ ಬಿಟ್ಟು ಬಿಡಿ. ಗೆದ್ದು ಬಂದಾಗ ಮನ್ನಣೆ ನೀಡಿ. ಹೀಗೊಮ್ಮೆ ಸೋತಲ್ಲಿ, ಮತ್ತೊಂದು ಅವಕಾಶ!

ಇದಕ್ಕೂ ಮುಂಚೆ `ಆಟಕ್ಕುಂಟು ಲೆಕ್ಕಕ್ಕಿಲ್ಲ~ ಎಂಬ ಶೇಕಡಾ ನಲವತ್ತರಷ್ಟು ಮಂದಿಯ ನಡುವೆ ಅಡಗಿ ಕುಳಿತಿರುವ ತಾನಾಜಿಯನ್ನು ಸರಿಯಾಗಿ ಗುರುತಿಸುವುದು ಮಾತ್ರ ನಿಮ್ಮದೇ ಕೆಲಸ. ಅದಾಗಬೇಕಿದ್ದರೆ ಶಿವಾಜಿಯ ಹಾಗೆ ನಿಮಗೆ ನಿಮ್ಮಲ್ಲೇ ಅದಮ್ಯ ನಂಬಿಕೆ ಅಗತ್ಯ. ಎಲ್ಲರೊಳಗೊಂದಾಗಬೇಕೆಂಬ ಅಹಂಕಾರರಹಿತ ನಿಲುವಿನಲ್ಲೇ ಮನ್ನಣೆಯ ದಾಹಕ್ಕೆ ಬಲಿಪಶುವಾಗದಂತೆ ಎಚ್ಚರಿಕೆಯಿಂದಿರುವ ಪ್ರಜ್ಞೆಯೂ ಅತ್ಯವಶ್ಯಕ.

ಇವೆಲ್ಲ ಅಧಿಕಾರ ಹಂಚಿಕೆಯ ಮಾಡುವವನಲ್ಲಿ ಮೇಳೈಸಿ ಬಿಟ್ಟರೆ, ಅವನ ವಿಭಾಗದಲ್ಲಿನ ಬಹುತೇಕ ಎಲ್ಲರೂ ತಾನಾಜಿಯಂತೆಯೇ ಜೀವದ ಹಂಗು ತೊರೆದು ಅವನ ಆದೇಶವನ್ನು ಪಾಲಿಸುವಲ್ಲಿ ಸ್ವಪ್ರೇರಣೆಯಿಂದ ಮುಂದಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಅಧಿಕಾರ ಹಂಚಿಕೆ ಎಂಬುದು ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿಗೆ ಸುಲಭವೆಂದು ತೋರಿದರೂ ಆಚರಣೆಯಲ್ಲಿ ಕಷ್ಟ ಎನಿಸುವ ಕಾರ್ಯ.
 
ಇದನ್ನು ಸೂಕ್ತವಾಗಿ ನಿಭಾಯಿಸಿದಲ್ಲಿ ಆತ ತನ್ನ ಕೆಲಸದಲ್ಲಿ ಅರ್ಧ ಗೆದ್ದಂತೆಯೇ ಸರಿ. ಈ ವಿಚಾರವಾಗಿ ಈಗಾಗಲೇ ನನ್ನಅನುಭವಕ್ಕೆ ಸರಿ ಎನಿಸಿದನ್ನು ಚರ್ಚಿಸಿದ್ದೇನೆ. ಮುಂದಿನ ಅಂಕಣದಲ್ಲಿ ಮಹತ್ತರವಾದ ಇನ್ನಿತರ ಮ್ಯಾನೇಜ್‌ಮೆಂಟ್ ವಿಷಯಗಳತ್ತ ಗಮನ ಹರಿಸೋಣ.

ಲೇಖಕರನ್ನು satyesh.bellur@gmail.com  ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT