ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ಮನದೊಳಗೆ ಸಂಕಷ್ಟಗಳ ಬಿರುಗಾಳಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಿಸಿ ತುಪ್ಪವನ್ನು ಬಾಯಲ್ಲಿ ಇಟ್ಟುಕೊಂಡಂತಹ ಸ್ಥಿತಿ ನಮ್ಮ ದೇಶದ ಹಾಕಿ ಆಟಗಾರರದ್ದು. ಉಗುಳುವಂತಿಲ್ಲ-ನುಂಗುವಂತಿಲ್ಲ. ಸದ್ಯಕ್ಕೆ ಆಟಗಾರರ ಪಾಲಿಗೆ `ಆಡಳಿತ ಸಂಸ್ಥೆಗಳು~ ನುಂಗಲಾರದ ತುತ್ತಾಗಿವೆ.

ರಾಷ್ಟ್ರೀಯ ಕ್ರೀಡೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲಬೇಕಾದ ದೇಶದ ಹಾಕಿ ಸಂಸ್ಥೆಗಳೇ ಆಟಗಾರರ ಭವಿಷ್ಯಕ್ಕೆ ತೊಡರುಗಾಲು ಹಾಕುತ್ತಿವೆ. ಈ ಸಂಕಷ್ಟದ ನಡುವೆಯೇ ಭಾರತದ ಆಟಗಾರರು ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಆಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಈಗ ಬಿರುಗಾಳಿ ಎದ್ದಿರುವುದು ವಿಶ್ವ ಹಾಕಿ ಸರಣಿಯ ಬಗ್ಗೆ. ಫೆಬ್ರುವರಿ 29ರಿಂದ ಈ ಸರಣಿ ನಡೆಯಬೇಕಿದೆ. ಆದರೆ, ಇದಕ್ಕೆ ಯಾವುದೇ ಮಾನ್ಯತೆ ಇಲ್ಲ.
ಅಂತರರಾಷ್ಟ್ರೀಯ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳು ವಂತಿಲ್ಲ ಎನ್ನುವ ಬೆದರಿಕೆಯನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಒಡ್ಡಿದೆ. ಇದಕ್ಕಾಗಿ ಹೈಕೋರ್ಟ್ ಮೆಟ್ಟಿಲು ಏರಿದ್ದೂ ಆಯಿತು.

ಭಾರತದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅಧಿಕೃತವಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಪರವಾನಗಿ ನೀಡಿರುವುದು ಹಾಕಿ ಇಂಡಿಯಾಕ್ಕೆ ಮಾತ್ರ. ಈಗ ಭಾರತ ಹಾಕಿ ಫೆಡರೇಷನ್ ಹಾಗೂ ನಿಂಬಸ್ ಸ್ಪೋರ್ಟ್ಸ್ ಕಮ್ಯೂನಿಕೇಷನ್ ಜಂಟಿಯಾಗಿ ವಿಶ್ವ ಸರಣಿಯನ್ನು ಆಯೋಜಿಸಿದೆ.

ಈ ಸರಣಿ ಅಂತರರಾಷ್ಟ್ರೀಯ ವೇಳಾಪಟ್ಟಿಗೆ ದಕ್ಕೆಯಾಗಲಿದೆ ಎನ್ನುವ ಕಾರಣದಿಂದ ಸರಣಿ ನಡೆಸುವಂತಿಲ್ಲ ಎನ್ನುವ ವಾದ ಮುಂದಿಟ್ಟಿದೆ ಎಫ್‌ಐಎಚ್.
ಸದ್ಯಕ್ಕೆ ಈ ಸರಣಿಯನ್ನು ತಡೆದು ಮುಂದಿನ ದಿನಗಳಲ್ಲಿ ಹಾಕಿ ಇಂಡಿಯಾ ಜೊತೆಗೂಡಿ ಇದೇ ಮಾದರಿಯಲ್ಲಿ ಸರಣಿ ನಡೆಸುವ ಲೆಕ್ಕಾಚಾರ ಎಫ್‌ಐಎಚ್ ಹೊಂದಿದೆ.
 
ಇದೇ ಉದ್ದೇಶದಿಂದ ಆಟಗಾರರ ಮೇಲೆ ಚಾಟು ಏಟು ಬೀಸುತ್ತಿದೆ. ಒಂದರ್ಥದಲ್ಲಿ ಅವರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಯತ್ನ ನಡೆಸುತ್ತಿದೆ.
ಹಾಕಿ ಇಂಡಿಯಾ ಹಾಗೂ ಭಾರತ ಹಾಕಿ ಫೆಡರೇಷನ್‌ಗಳ ನಡುವಿನ ಹೊಂದಾಣಿಕೆಯ ಕೊರತೆ ಆಟಗಾರರ ಪಾಲಿಗೆ ಕಂಟಕವಾಗಿದೆ.
 
ಆದ್ದರಿಂದ ಎರಡೂ ಸಂಸ್ಥೆಗಳು ಒಂದುಗೂಡಿ ಮಾತುಕತೆ ನಡೆಸಬೇಕು. ಪರಿಹಾರ ಹುಡುಕಬೇಕು. ಮುಖ್ಯವಾಗಿ ಆಟಗಾರರಿಗೆ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಮುಖ್ಯ. ಈ ಮಾತನ್ನು ರಾಷ್ಟ್ರೀಯ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯ ಎ.ಬಿ. ಸುಬ್ಬಯ್ಯ ಸಹ ಒಪ್ಪುತ್ತಾರೆ.

`ಸಂಸ್ಥೆಗಳ ಹಿತಾಸಕ್ತಿಗಿಂತ ಆಟಗಾರರ ಮನಸ್ಥಿತಿ ಮುಖ್ಯ. ಎರಡೂ ಸಂಸ್ಥೆಯವರು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಬೇಕು. ಇದು ಆಟಗಾರರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು~ ಎನ್ನುವ ಅಭಿಪ್ರಾಯವನ್ನೂ ಅವರು ಹೇಳುತ್ತಾರೆ.

`ಆಟಗಾರರು ಆರ್ಥಿಕವಾಗಿ ಸಧೃಡರಾಗಲು ಹಾಕಿ ಸರಣಿ ನೆರವಾಗುತ್ತದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ದೇಶದ ಗೌರವವನ್ನೂ ಎತ್ತಿ ಹಿಡಿಯುವ ಜವಾಬ್ದಾರಿಯೂ ಇವರ ಮೇಲಿದೆ. ಇದರಿಂದ ನಿಜಕ್ಕೂ ಒತ್ತಡಕ್ಕೆ ಒಳಗಾಗಿದ್ದು ಆಟಗಾರರೇ~ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಥರಗುಟ್ಟುವ ಚಳಿಯಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಭಾರತ ಹಾಕಿ ತಂಡ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಸರತ್ತು ನಡೆಸುತ್ತಿದೆ. ಅಲ್ಲಿರುವ ಆಟಗಾರರಿಗೆ ಹೊರ ಜಗತ್ತಿನ ವಿಷಯಗಳ ಬಗ್ಗೆ ಸದ್ಯಕ್ಕೆ ಆಸಕ್ತಿಯಿಲ್ಲ.

`ದುಡ್ಡು, ಸ್ಥಾನಮಾನ, ಹಾಕಿ ಸರಣಿ ತಪ್ಪಿಸಿಕೊಂಡರೆ ಆಗಬಹುದಾದ ತೊಂದರೆ, ಆಡಿದರೆ ಆಗುವ ಪರಿಣಾಮ ಹೀಗೆ ಯಾವುದರ ಬಗ್ಗೆಯೂ ಸದ್ಯಕ್ಕೆ ಚಿಂತೆಯಿಲ್ಲ. ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಪಡೆಯಬೇಕು ಎನ್ನುವ ಗುರಿ ಮಾತ್ರ ನನ್ನ ಮುಂದಿದೆ~ ಎಂದು ಕರ್ನಾಟಕದ ಎಸ್.ವಿ. ಸುನಿಲ್ ಹೇಳುತ್ತಾರೆ. ಈ ಆಟಗಾರ ಹಾಕಿ ಸರಣಿಯಲ್ಲಿ ಮುಂಬೈ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಅರ್ಹತಾ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

`ಅರ್ಹತಾ ಟೂರ್ನಿ ಮುಗಿಯಲಿ. ಮುಂದೇನು ಎನ್ನುವುದನ್ನು ಯೋಚಿಸುತ್ತೇನೆ~ ಎನ್ನುತ್ತಾರೆ ಕೊಡಗಿನ ಸುನಿಲ್. ರಾಜ್ಯದ ಇನ್ನೊಬ್ಬ ಆಟಗಾರ ಅರ್ಜುನ್ ಹಾಲಪ್ಪ ಸಹ ಬೆಂಗಳೂರು ತಂಡದ ನಾಯಕರು.

ವಿಶ್ವ ಹಾಕಿ ಸರಣಿ ವಿವಾದ ಇಂದಿನದ್ದೇನಲ್ಲ. ಆರಂಭಕ್ಕೂ ಮುನ್ನವೇ ವಿವಾದಕ್ಕೆ ಕಾವು ಇದಕ್ಕೆ ತಗುಲಿತ್ತು. ಇದರಲ್ಲಿ ಆಟಗಾರರ ಪಾಲೂ ಇದೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಶಿಬಿರವನ್ನು ಬಿಟ್ಟು ಹಾಕಿ ಸರಣಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವ ಮೂಲಕ ಕೆಲಆಟಗಾರರು ಆರಂಭದಲ್ಲಿ ವಿವಾದಕ್ಕೆ ಕಾರಣರಾದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ಈ ಸರಣಿ ನಡೆಯಬೇಕಿತ್ತು. ಆದರೆ, ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ನೆಪ ಒಡ್ಡಿದ್ದರಿಂದ ಸಂಘಟಕರು ಅನಿವಾರ್ಯವಾಗಿ ಸರಣಿಯನ್ನು ಮುಂದೂಡಬೇಕಾಯಿತು.

ಈ ಸರಣಿ ಈಗ ನಿಗದಿಯಂತೆ ಆರಂಭವಾದರೆ ಕೇವಲ ಒಂದು ವಾರವಷ್ಟೇ ಬಾಕಿ ಉಳಿಯುತ್ತದೆ. ಈಗ ಎಫ್‌ಐಎಚ್ ಚಾಟಿ ಏಟು ಬೀಸಿ ಹಾಕಿ ಸರಣಿಗೆ ತಡೆಗೋಡೆಯಾಗಿದೆ.

ಒಂದೆಡೆ ಆಡಳಿತಾತ್ಮಕ ಸಂಸ್ಥೆಗಳ ಗುದ್ದಾಟ, ಆಟಗಾರರನ್ನು ಸಂಕಷ್ಟಕ್ಕೆ ದೂಡಿದೆ. ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಆಟಗಾರರಿಗೆ ಕಿರಿ ಕಿರಿ ಆಗಿರುವುದಂತೂ ಸತ್ಯ. ಸರಣಿಯಲ್ಲಿ ಶೇ. 80ರಷ್ಟು ಆಟಗಾರರು ಭಾರತದವರೇ ಇದ್ದಾರೆ. ಆದ್ದರಿಂದ ನಾವು ಸರಣಿಯನ್ನು ನಡೆಸುತ್ತವೆ ಎನ್ನುವುದು ಸಂಘಟಕರ ವಾದ. ಈ ಎಲ್ಲಾ ಜಂಜಾಟದಿಂದ ಆಟಗಾರರಿಗೆ ಮುಕ್ತಿ ಸಿಗುವುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT