ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಟಗಾರರ ಮೇಲೆ ಭರವಸೆ ಇದೆ'

ಏಷ್ಯಾಕಪ್ ಟೂರ್ನಿಗೆ ಸಿದ್ಧತೆ: ಬೆಂಗಳೂರಿನಲ್ಲಿ ಭಾರತ ಹಾಕಿ ತಂಡದ ಶಿಬಿರ ಆರಂಭ
Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಆಟಗಾರರ ಮೇಲೆ ನನಗೆ ಪೂರ್ಣ ಭರವಸೆ ಇದೆ. ಆದರೆ ವಾಸ್ತವವನ್ನು ಅರಿತು ನಾವು ನಿರೀಕ್ಷೆ ಇಟ್ಟುಕೊಳ್ಳಬೇಕು. ನಮ್ಮ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಈಗ 12ನೇ ಸ್ಥಾನದಲ್ಲಿದೆ. ಕಳೆದ ಕೆಲ ವರ್ಷಗಳಿಂದ ಪ್ರಮುಖ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಶೇಕಡಾ ನೂರರಷ್ಟು ಪ್ರಯತ್ನ ಹಾಕಿ ಆಡಲು ಪ್ರಯತ್ನಿಸುತ್ತೇವೆ. ಆದರೆ ಸೋಲು-ಗೆಲುವು ನನ್ನ ಕೈಯಲ್ಲಿಲ್ಲ. ಪ್ರಮುಖ ದೇಶಗಳನ್ನು ಮಣಿಸಿ ಪ್ರಶಸ್ತಿ ಗೆಲ್ಲಲು ಸಾಕಷ್ಟು ಸಮಯಾವಕಾಶ ಬೇಕು' ಎಂದು ಭಾರತ ಹಾಕಿ ತಂಡದ ಹಂಗಾಮಿ ಮುಖ್ಯ ಕೋಚ್ ರೋಲೆಂಟ್ ಒಲ್ಟಮನ್ಸ್ ನುಡಿದರು.

ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದಕ್ಷಿಣ ಕೇಂದ್ರದಲ್ಲಿ ಮಂಗಳವಾರ ಆರಂಭವಾದ ರಾಷ್ಟ್ರೀಯ ಸೀನಿಯರ್ ಹಾಕಿ ತಂಡದ ಮೊದಲ ದಿನದ ಶಿಬಿರದ ಬಳಿಕ ಅವರು ಮುಂದಿನ ದಿನಗಳ ತಮ್ಮ ಯೋಜನೆ ಬಗ್ಗೆ ಮಾತನಾಡಿದರು.

`ಮುಂಬರುವ ಏಷ್ಯಾಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಾವು ತರಬೇತಿ ನಡೆಸುತ್ತೇವೆ. ಈಗ ಸಂಭವನೀಯ ಆಟಗಾರರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಎರಡು ವಾರಗಳ ಬಳಿಕ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ. ಶಿಬಿರದ ವೇಳೆ ಉತ್ತಮ ಪ್ರದರ್ಶನದ ಮೂಲಕ ಸ್ಥಾನ ಉಳಿಸಿಕೊಳ್ಳುವುದು ಆಟಗಾರರಿಗೆ ಬಿಟ್ಟ ವಿಚಾರ' ಎಂದು ಅವರು ಹೇಳಿದರು.

ಹಾಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಹಾಕಿ ಲೀಗ್‌ನಲ್ಲಿ ಭಾರತ ತೀರಾ ಕಳಪೆ ಪ್ರದರ್ಶನ ನೀಡಿತ್ತು. ಈ ಕಾರಣ ಮುಖ್ಯ ಕೋಚ್ ಮೈಕಲ್ ನಾಬ್ಸ್ ಅವರನ್ನು `ಹಾಕಿ ಇಂಡಿಯಾ'ದ ಶಿಫಾರಸಿನ ಮೇರೆಗೆ ಭಾರತ ಕ್ರೀಡಾ ಪ್ರಾಧಿಕಾರ ವಜಾ ಮಾಡಿತ್ತು. ತಾತ್ಕಾಲಿಕ ವ್ಯವಸ್ಥೆಯಾಗಿ `ಪ್ರದರ್ಶನ ವೃದ್ಧಿ' ನಿರ್ದೇಶಕ ಒಲ್ಟಮನ್ಸ್ ಅವರನ್ನು ನೇಮಿಸಲಾಗಿದೆ. ಎಂ.ಕೆ.ಕೌಶಿಕ್ ಕೋಚ್ ಆಗಿ ಕಾರ್ಯುನಿರ್ವಹಿಸಲಿದ್ದಾರೆ.

ಹಾಲೆಂಡ್‌ನಲ್ಲಿ ಆರನೇ ಸ್ಥಾನ ಪಡೆದ ಕಾರಣ 2014ರ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಸರ್ದಾರ್ ಸಿಂಗ್ ಸಾರಥ್ಯದ ತಂಡ ಕಳೆದುಕೊಂಡಿತ್ತು. ಹಾಗಾಗಿ ಮುಂಬರುವ ಏಷ್ಯಾಕಪ್ ಟೂರ್ನಿ ಈ ನಿಟ್ಟಿನಲ್ಲಿ ಕೊನೆಯ ಅವಕಾಶವಾಗಿದೆ. ಇಲ್ಲಿ ಗೆದ್ದರೆ ಅರ್ಹತೆ ಪಡೆಯಬಹುದು.

`ನಮ್ಮ ಮೊದಲ ಗುರಿ ಏಷ್ಯಾಕಪ್ ಗೆಲ್ಲುವುದು. ಅದಕ್ಕಾಗಿ ತಂಡವನ್ನು ಸೂಕ್ತ ರೀತಿಯಲ್ಲಿ ಸಿದ್ಧಗೊಳಿಸುವುದು ಕೋಚ್ ಆದ ನನ್ನ ಮುಖ್ಯ ಜವಾಬ್ದಾರಿ. ವಿಶ್ವಕಪ್ ಬಗ್ಗೆ ನಾವು ಸದ್ಯಕ್ಕೆ ಚಿಂತಿಸುತ್ತಿಲ್ಲ. ಆಟಗಾರರು ಪೂರ್ಣ ಪ್ರಯತ್ನ ಹಾಕಿ ಅಭ್ಯಾಸ ನಡೆಸಲಿದ್ದಾರೆ ಎಂಬ ಭರವಸೆಯನ್ನು ನೀಡುತ್ತೇನೆ' ಎಂದು ಒಲ್ಟಮಸ್ ವಿವರಿಸಿದರು.

ಏಷ್ಯಾಕಪ್ ಆಗಸ್ಟ್ 24ರಿಂದ ಸೆಪ್ಟೆಂಬರ್ 1ರ ವರೆಗೆ ಮಲೇಷ್ಯಾದಲ್ಲಿ ನಡೆಯಲಿದೆ. ಅದಕ್ಕಾಗಿ ಇಲ್ಲಿ ಶಿಬಿರ ನಡೆಯುತ್ತಿದೆ. ಒಂದು ತಿಂಗಳ ಈ ಶಿಬಿರ    ಆಗಸ್ಟ್ 16ರಂದು ಕೊನೆಗೊಳ್ಳಲಿದೆ. 

`ನಾವು ಆಸ್ಟ್ರೇಲಿಯಾ, ಯುರೋಪ್, ಕೊರಿಯಾ ಶೈಲಿಯ ಆಟದ ಬಗ್ಗೆ ಮಾತನಾಡುತ್ತೇವೆ. ಆದರೆ ಭಾರತದ ಆಟಗಾರರು ಅವರ ಸಾಮರ್ಥ್ಯಕ್ಕೆ ಸೂಕ್ತವಾಗುವ ಶೈಲಿಯ ಆಟವಾಡಬೇಕು. ಬೇರೆ ದೇಶಗಳ ಆಟದ ಶೈಲಿಯಲ್ಲಿ ನನಗೆ ನಂಬಿಕೆ ಇಲ್ಲ' ಎಂದೂ ಅವರು ಸ್ಪಷ್ಟಪಡಿಸಿದರು.

`ಗೋಲ್ ಕೀಪಿಂಗ್ ಕೋಚ್‌ನ ಅಗತ್ಯವಿದೆ. ಈ ವಿಭಾಗದಲ್ಲಿ ಸುಧಾರಣೆ ಕಾಣಬೇಕಾಗಿದೆ. ಅದಕ್ಕಾಗಿ ಪ್ರತ್ಯೇಕ ಕೋಚ್ ಬರಲಿದ್ದಾರೆ. ಅಷ್ಟು ಮಾತ್ರವಲ್ಲದೇ, ಏಷ್ಯಾಕಪ್ ನಡೆಯಲಿರುವ ಮಲೇಷ್ಯಾಕ್ಕೂ ಆ ಕೋಚ್ ಬರಲಿದ್ದಾರೆ' ಎಂದು ಒಲ್ಟಮಸ್ ಹೇಳಿದರು.

ಕೋಚ್ ಹಾಗೂ ಆಟಗಾರರ ನಡುವಿನ ಸಂಪರ್ಕ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಭಾಷಾ ಸಮಸ್ಯೆಯಿಂದ ಸಂಪರ್ಕದ ಕೊರತೆ ಇದೆ ಅನಿಸುತ್ತಿದೆ. ಆದರೆ ಇದಕ್ಕೆಲ್ಲಾ ನಮ್ಮಲ್ಲಿ ಪರಿಹಾರವಿದೆ. ಆಟಗಾರರಿಗೆ ಅರ್ಥವಾಗುವಂತೆ ತಿಳಿಸುತ್ತೇವೆ. ಆಟಗಾರರು ಇಂಗ್ಲಿಷ್ ಭಾಷೆ ಕಲಿಯುವುದು ಅಗತ್ಯ ಎಂಬುದು ನನ್ನ ಅಭಿಪ್ರಾಯ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT