ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರ ರ್‍ಯಾಂಕಿಂಗ್‌ನಲ್ಲಿ ಕುಸಿತ

ಕ್ರಿಕೆಟ್‌: ಅಗ್ರಸ್ಥಾನ ಕಾಯ್ದುಕೊಂಡ ಭಾರತ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹೀನಾಯ ಸೋಲನು ಭವಿಸಿದ ಪರಿಣಾಮ  ಭಾರತೀಯ ಆಟಗಾರರು ತಮ್ಮ  ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.

ಐಸಿಸಿ ಗುರುವಾರ  ಪ್ರಕಟಿಸಿರುವ ನೂತನ ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್‌ನಲ್ಲಿ ಭಾರತದ ವಿರಾಟ್‌ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮ ಮತ್ತು ಸುರೇಶ್ ರೈನಾ ತಮ್ಮ ಸ್ಥಾನಗಳಲ್ಲಿ ಇಳಿಕೆ ಕಂಡಿದ್ದಾರೆ.

ಟೂರ್ನಿಯ ಆರಂಭಕ್ಕೂ ಮುನ್ನ ಅಗ್ರ ಸ್ಥಾನದಲ್ಲಿದ್ದ ಕೊಹ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ನಾಯಕ ಮಹೇಂದ್ರ ಸಿಂಗ್ ದೋನಿ ಆರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರನ್ ಕಲೆಹಾಕಲು ಪರದಾಡಿದ  ಆರಂಭಿಕ ಆಟಗಾರ ಧವನ್ ಒಂದು ಸ್ಥಾನ ಕೆಳಗಿಳಿದಿದ್ದು 10 ನೇ ಸ್ಥಾನದಲ್ಲಿದ್ದಾರೆ. 15 ನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮ ಮೂರು ಸ್ಥಾನಗಳಲ್ಲಿ ಕುಸಿತ ಕಂಡು 18 ನೇ ಸ್ಥಾನ ಪಡೆದಿದ್ದಾರೆ.

ಭಾರತದ ವಿರುದ್ಧ  ಶತಕ ಸಹಿತ ಒಟ್ಟು 189 ರನ್‌ ಗಳಿಸಿದ ದ.ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಏಕದಿನ ಹಾಗೂ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ  ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.  ಇದರೊಂದಿಗೆ ಏಕಕಾಲದಲ್ಲಿಯೇ ಎರಡೂ ವಿಭಾಗಗಳಲ್ಲಿ ಅಗ್ರ ಸ್ಥಾನ ಪಡೆದ ದ.ಆಫ್ರಿಕಾದ ಮೂರನೇ ಹಾಗೂ ವಿಶ್ವದ ಒಂಬತ್ತನೇ ಆಟಗಾರ ಎನಿಸಿದ್ದಾರೆ.

ಭಾರತದ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಹ್ಯಾಟ್ರಿಕ್ ಶತಕದ ಸಾಧನೆ ಮಾಡಿ ಮಿಂಚಿದ್ದ ದ.ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 61 ಸ್ಥಾನ ಮೇಲೇರುವ ಮೂಲಕ ಇದೇ ಮೊದಲ ಬಾರಿಗೆ 14 ನೇ ಸ್ಥಾನಕ್ಕೆ  ಬಡ್ತಿ ಪಡೆದಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ  ಮೂರನೇ ಸ್ಥಾನದಲ್ಲಿದ್ದ ರವೀಂದ್ರ ಜಡೇಜ ನಾಲ್ಕು ಸ್ಥಾನ ಕೆಳಗಿಳಿದಿದ್ದಾರೆ.

ಉಳಿದಂತೆ ದ.ಆಫ್ರಿಕಾದ ವೇಗಿ ಡೇಲ್‌ ಸ್ಟೇನ್ ಮೂರು ಸ್ಥಾನ ಮೇಲೇರಿ ಎರಡನೇ ಸ್ಥಾನವನ್ನು ಪಡೆದಿದ್ದು,  ಲೊನ್ವಾಬೊ ಸೊಸೊಬೆ ಎರಡು ಸ್ಥಾನ ಜಿಗಿದು ಏಂಟು ಮತ್ತು ಮೊರ್ನೆ ಮಾರ್ಕೆಲ್ ಒಂಬತ್ತನೇ ಸ್ಥಾನ ಪಡೆಯುವ ಮೂಲಕ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಮೊಹಮ್ಮದ್ ಶಮಿ 43 ಮತ್ತು ಇಶಾಂತ್   51 ನೇ ಸ್ಥಾನದಲ್ಲಿದ್ದಾರೆ.

ಏಕದಿನ ತಂಡಗಳ ರ್‍ಯಾಂಕಿಂಗ್‌ನಲ್ಲಿ ಭಾರತ 2 ರೇಟಿಂಗ್ ಪಾಯಿಂಟ್ ಕುಸಿ ದಿದ್ದು 120 ಪಾಯಿಂಟ್‌ ಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ದ. ಆಫ್ರಿಕಾ 110 ಪಾಯಿಂಟ್ ಹೊಂದಿದ್ದು ಐದನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT