ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದಲ್ಲೂ ಫಿಟ್, ಮೈಮಾಟದಲ್ಲೂ ಫಿಟ್

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

`ಫಿಟ್‌ನೆಸ್ ಕೇವಲ ಕ್ರೀಡಾಪಟುಗಳಿಗೆ ಮಾತ್ರವಲ್ಲ; ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ. ಆದರೆ ಉತ್ತಮ ಫಿಟ್‌ನೆಸ್ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಬೇಕಾಗುತ್ತದೆ. ಸೇವಿಸುವ ಆಹಾರ ಹಾಗೂ ಇತರ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ಇರಬೇಕಾಗುತ್ತದೆ. ಕಠಿಣ ಪ್ರಯತ್ನ ಹಾಕಬೇಕಾಗುತ್ತದೆ. ಫಿಟ್‌ನೆಸ್‌ನಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ'
-ಇವು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಭಾರತದ ಬ್ಯಾಡ್ಮಿಂಟನ್‌ನ ಯಶಸ್ವಿ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ಅಂತರಾಳದ ಮಾತುಗಳು.

ನಾಲ್ಕು ವರ್ಷಗಳಿಂದ ಹೈದರಾಬಾದ್‌ನ ಜ್ವಾಲಾ ಗುಟ್ಟಾ ಅವರ ಜೊತೆಗೂಡಿ ಡಬಲ್ಸ್‌ನಲ್ಲಿ ಆಡುತ್ತಿರುವ ಕರ್ನಾಟಕದ ಅಶ್ವಿನಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿರುವ ಭರವಸೆ ಅಮೋಘ. ಲಂಡನ್ ಒಲಿಂಪಿಕ್ಸ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮಹಿಳೆಯರ     ಡಬಲ್ಸ್‌ನಲ್ಲಿನ ಕೆಲ ವಿವಾದಗಳಿಂದಾಗಿ ಕ್ವಾರ್ಟರ್ ಫೈನಲ್ ತಲುಪುವ ಅವಕಾಶವನ್ನು ಕೊಂಚದರಲ್ಲಿ ತಪ್ಪಿಸಿಕೊಂಡರು.

`ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿರುವುದಕ್ಕೆ ಉತ್ತಮ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡಿರುವುದೂ ಒಂದು ಕಾರಣ. ಇದು ಕೇವಲ ಆಟದ ದೃಷ್ಟಿಯಿಂದ ಮಾತ್ರವಲ್ಲ; ಆರೋಗ್ಯದ ದೃಷ್ಟಿಯಿಂದ ಕೂಡ ಒಳ್ಳೆಯದು' ಎನ್ನುತ್ತಾರೆ ಅಶ್ವಿನಿ. 

ಅಂಗಳದ ಹೊರಗೆ ತಮ್ಮ ಚೆಂದದ ಗ್ಲಾಮರ್ ನೋಟದಿಂದ ರೂಪದರ್ಶಿಯಂತೆ ಕಾಣುವ ಅಶ್ವಿನಿ ಅಂಗಳಕ್ಕಿಳಿದರೆ ಅಷ್ಟೇ ಅದ್ಭುತ ಆಟಗಾರ್ತಿ.
`ಜ್ವಾಲಾ ಕೂಡ ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ನಾವಿಬ್ಬರೂ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಅತ್ಯುತ್ತಮ ಹೊಂದಾಣಿಕೆ ಇದೆ. ಇದು ನಮ್ಮ ಯಶಸ್ಸಿಗೆ ಕಾರಣ' ಎನ್ನುತ್ತಾರೆ ಅಶ್ವಿನಿ.

`ತರಬೇತಿ ವೇಳೆ ನನ್ನ ಫಿಟ್‌ನೆಸ್ ಕಾರ್ಯಕ್ರಮವನ್ನು ದೈಹಿಕ ತರಬೇತುದಾರರು ರೂಪಿಸುತ್ತಾರೆ. ಉಳಿದ ಸಮಯದ್ಲ್ಲಲೂ ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ. ನಾನು ನಡೆಸುವ ವರ್ಕ್‌ಔಟ್ ನನ್ನ ಆಟಕ್ಕೆ ಪೂರಕ ಆಗಿರುವಂಥದ್ದು' ಎಂದು ಸ್ಪಷ್ಟಪಡಿಸುತ್ತಾರೆ.
ತರಬೇತಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಅಶ್ವಿನಿ ಸದ್ಯ ಹೈದರಾಬಾದ್‌ನಲ್ಲೇ ನೆಲೆಸಿದ್ದಾರೆ. `ತರಬೇತಿ ವೇಳೆ ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಒಂದು ಚಾರ್ಟ್ ಇರುತ್ತದೆ. ಇದನ್ನು ತರಬೇತುದಾರರು ಹಾಗೂ ಪೋಷಕಾಂಶ ತಜ್ಞರು ರೂಪಿಸಿರುತ್ತಾರೆ. ಹಾಗಾಗಿ ಅದನ್ನು ಖಡಕ್ಕಾಗಿ ಪಾಲಿಸಬೇಕಾಗುತ್ತದೆ. ಮನೆಯಲ್ಲಿ ಮಾಡಿದ ಆಹಾರವೇ ನನಗೆ ತುಂಬಾ ಇಷ್ಟ. ನಾನು ಮಾಂಸಾಹಾರಿ. ಆದರೆ ಒಂದು ಹೊತ್ತಿನ ಊಟದಲ್ಲಿ ಮಾತ್ರ ಮಾಂಸ ಸೇವಿಸುತ್ತೇನೆ. ಬೆಳಿಗ್ಗೆ ಮೊಟ್ಟೆ ಸೇವಿಸುವುದನ್ನು ತಪ್ಪಿಸುವುದಿಲ್ಲ. ಜೊತೆಗೆ ಓಟ್ಸ್ ಸೇವಿಸುತ್ತೇನೆ. ಸಿಹಿ ಹಾಗೂ ಮೊಸರು ಹೆಚ್ಚು ತಿನ್ನುತ್ತೇನೆ' ಎಂದು ತಮ್ಮ ಆಹಾರದ ಬಗ್ಗೆ ಮಾಹಿತಿ ನೀಡುತ್ತಾರೆ.

`ನಾನು ಬೆಳಿಗ್ಗೆ 7 ಗಂಟೆಯಿಂದ 8.30ರವರೆಗೆ ಜಿಮ್‌ನಲ್ಲಿ ವರ್ಕ್‌ಔಟ್ ನಡೆಸುತ್ತೇನೆ. ಸಂಜೆ ಆಟದತ್ತ ಹೆಚ್ಚು ಗಮನ ಹರಿಸುತ್ತೇನೆ. ಎರಡು ಗಂಟೆ ಅಭ್ಯಾಸ ನಡೆಸುತ್ತೇನೆ' ಎಂದು ಅವರು ಹೇಳುತ್ತಾರೆ.

`ಉತ್ತಮ ಫಿಟ್‌ನೆಸ್ ಕಾಪಾಡಿಕೊಂಡರೆ ಗಾಯದ ಸಮಸ್ಯೆಯಿಂದ ದೂರ ಇರಬಹುದು. ಹಾಗಾಗಿ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಕ್ರೀಡೆಯಲ್ಲಿ ತಮ್ಮ ಜೀವನ ಕಂಡುಕೊಳ್ಳಲು ಮುಂದಾಗುವ ಯುವ ಕ್ರೀಡಾಪಟುಗಳು ಫಿಟ್‌ನೆಸ್‌ಗೆ ತುಂಬಾ ಮಹತ್ವ ನೀಡಬೇಕು' ಎಂದು ಗ್ಲಾಮರ್ ಹುಡುಗಿ ಅಶ್ವಿನಿ ಕಿವಿಮಾತು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT