ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಅಂಕಲ್‌ಗೆ ನೂರು ನಮನ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

`ನಾಲ್ಕು ರೂಪಾಯಿ ಚಿಲ್ರೆ ಇಲ್ಲ. ಎಪ್ಪತ್ತಾರು ಬಿದ್ದಿದೆ. ನೀವು ಇಪ್ಪತ್ನಾಲ್ಕು ಕೊಡ್ಬೇಕು. ನನ್ನಲ್ಲಿರೋದು ನೂರು ರೂಪಾಯಿ ನೋಟು~ ರಿಕ್ಷಾವಾಲಾನಿಗೆ ವಿನಂತಿಸಿದೆ.

ಚೌಕಾಶಿ ಮಾಡೋ ಉದ್ದೇಶ ನನಗಿರಲಿಲ್ಲ. ಚಿಲ್ರೆ ಇಲ್ಲ, ನೀವೇ ತಂದುಕೊಡಿ ಅಂತ ನನ್ನನ್ನು ಎಲ್ಲಿ ಅಂಗಡಿ ಅಂಗಡಿ ಬಾಗಿಲು ಅಲೆಸುತ್ತಾರೋ ಅನ್ನೋ ಆತಂಕ. ಹೋಗಲಿ, ಆ ನಾಲ್ಕು ರೂಪಾಯಿ ಬಿಟ್ಟು ಇಪ್ಪತ್ತೇ ಕೊಡಿ ಅಂತ ಉದಾರಿಯಾಗೋಣ ಅಂದ್ರೆ ಸಾಯಂಕಾಲ ಎರಡು ಬಸ್ ಬದಲಿಸಿ ಮನೆ ಸೇರಬೇಕಾದ್ರೆ ಕರೆಕ್ಟಾಗಿ 24 ರೂಪಾಯಿ ಬೇಕೇಬೇಕು! ಬ್ಯಾಗ್‌ನ ಯಾವುದೇ ಮೂಲೆಯಲ್ಲಿ ಜಾಲಾಡಿದರೂ ನಯಾಪೈಸೆ ಇಲ್ಲ. ಏನಪ್ಪಾ ಮಾಡೋದು? ಸಂಜೆಯ ಟಿಕೆಟ್‌ಗೆ ಅಂತ 24 ರೂಪಾಯಿ ಉಳಿಸಿಕೊಳ್ಳಬೇಕಾದರೆ ಆಟೊರಿಕ್ಷಾ ಇಳಿದು ಕಚೇರಿಗೆ ಒಂಬತ್ತು ನಿಮಿಷ ನಡೆಯಬೇಕು. ಇದನ್ನೆಲ್ಲ ಈ ಆಟೊ ಡ್ರೈವರ್ ಹತ್ರ ಹೇಳಿಕೊಳ್ಳೋಕಾಗುತ್ತಾ? ಅಂತ ಸೀಟಿನ ಹಿಂದಕ್ಕೆ ಸರಿದೆ, ಸ್ವಾಭಿಮಾನದ ಮುದ್ದೆಯಾಗಿ...

ಆಟೊ ಅಂಕಲ್ ಅಂದ್ರು- `ಎಲ್ಲಾದ್ರೂ ಚೇಂಜ್ ಇದ್ರೂ ಇರ‌್ಬೋದು. ಚೆಕ್ ಮಾಡೀಮ್ಮ~
ನಾನು ಬಾಯಿಬಿಟ್ಟೆ, `ಅಂಕಲ್ ನಿಜ ಹೇಳ್ಲಾ? ನನ್ನಲ್ಲಿರೋದೇ ಈ ನೂರು ರೂಪಾಯಿ. ಹುಡುಕೋ ಪ್ರಶ್ನೆನೇ ಇಲ್ಲ~

`ಹೌದ್ರಾ. ಮತ್ತೆ ಬಸ್‌ನಲ್ಲೇ ಬರ‌್ಬೇಕಾಗಿತ್ತು. ಮೂರು ದಿನ ಓಡಾಡುವಷ್ಟು ದುಡ್ಡು ಒಂದೇ ದಿನ ಖರ್ಚು ಮಾಡಿಬಿಟ್ರಿ ಅನ್ಸುತ್ತೆ~
`ಅರ್ಜೆಂಟ್ ಕೆಲ್ಸ ಇದೇಂತ ಆಟೊಗೆ ಬಂದೆ~
`ಹೌದ್ರಾ?~
**
ಮ್ಯೂಸಿಯಂ ರಸ್ತೆಯಿಂದ ಕುಂಬ್ಳೆ ಸರ್ಕಲ್‌ಗೆ ಬಂತು ಆಟೊ. ನನ್ನ ನಿಲ್ದಾಣ, ಈಗ ಯುದ್ಧ ಶುರು ಆಗುತ್ತದೆ. `ಚಿಲ್ರೆ ಇಲ್ದೇ ಹೋದ್ಮೇಲೆ ಯಾಕ್ರೀ ಆಟೊದಲ್ಲಿ ಬರ‌್ತೀರಿ? ಬೆಳಿಗ್ಗೆಬೆಳಿಗ್ಗೆ ನಮ್ ತಲೆ ತಿನ್ನೋಕೆ~ ಎಂದು ಆಟೊ ಅಂಕಲ್ ಬೈಯ್ತಾರೆ ಅಂತ ಸಣ್ಣಗೆ ನಡುಗಿದೆ. ನಾನಿನ್ನೂ ಕುಳಿತೇ ಇದ್ದೆ.

`ದುಡ್ಡು ಕೊಡೀಮ್ಮ~ ಅಂದ್ರು ಆಟೊ ಅಂಕಲ್. ನೂರರ ನೋಟು ಕೊಟ್ಟೆ. ಮೂವತ್ತು ರೂಪಾಯಿ ವಾಪಸ್ ಕೊಟ್ರು!

`ಅಂಕಲ್ ಚೇಂಜ್ ಇಲ್ಲ ಅಂದ್ನಲ್ಲ?~ ಅಂದೆ.

“ಇರ‌್ಲಿ ಬಿಡಮ್ಮ. ನನಗೂ ಮಗಳಿದ್ದಾಳೆ. ಅವ್ಳನ್ನು `ಅಂಬೇಡ್ಕರ್ ಹತ್ರ~ ಬಿಟ್‌ಬಿಟ್ಟು ಈಚೆ ಬರ‌್ತಿದ್ದೀನಿ. ದಿನಾ ನಂದು ಇದೇ ರೂಟ್‌” ಅಂದುಬಿಟ್ರು!

ಅವಾಕ್ಕಾದೆ. ಆರು ರೂಪಾಯಿ ವಿನಾಯಿತಿ ಕೊಟ್ಟು ಎಪ್ಪತ್ತಾರಕ್ಕೆ ಬರೇ ಎಪ್ಪತ್ತು ತಗೊಂಡು ಹೃದಯವಂತಿಕೆ ತೋರಿಸಿದ್ದು ಒಂದು ಕಡೆಯಾದ್ರೆ, ಮಗಳನ್ನು ಅಂಬೇಡ್ಕರ್ ಹತ್ರ ಬಿಟ್ಟೆ ಅಂದಿದ್ದು ಇನ್ನೊಂದು ಶಾಕ್ ನನಗೆ.

ವಿವರವಾಗಿ ಕೇಳಬೇಕು ಅನ್ನಿಸ್ತು.

ಮರುದಿನ ಅದೇ ಸಮಯಕ್ಕೆ ಸರಿಯಾಗಿ ರಸ್ತೆ ಬದಿಯಲ್ಲಿ ನಿಂತವಳು ಅದೇ ಅಂಕಲ್‌ನ ಆಟೊ ಹತ್ತಿದೆ. ವಿಜಯನಗರ ಮಾರುತಿಮಂದಿರದಿಂದ ಮಹಾತ್ಮ ಗಾಂಧಿ ರಸ್ತೆಗೆ. ಏನಿಲ್ಲ ಅಂದ್ರೂ ಮುಕ್ಕಾಲು ಗಂಟೆ ಹಾದಿ. ಮಾತಿನ ಬಂಡಿಗೆ ಯಾವುದೇ ಸಿಗ್ನಲ್, ಟ್ರಾಫಿಕ್ ಅಡ್ಡಿಯಾಗಲಿಲ್ಲ.
**
“ಇಪ್ಪತ್ತು ವರ್ಷದಿಂದ ಆಟೊ ಓಡಿಸ್ತಾ ಇದ್ದೀನಮ್ಮ. ಇಲ್ಲೇ ಹತ್ರ ನಮ್ ಮನೆ. ನಾನು ಓದಿಲ್ಲ. ನಮ್ ಹೆಂಡ್ರೂ ಓದಿಲ್ಲ. ನಮ್ ಮಕ್ಳಾದ್ರೂ ಓದಿ ಮುಂದೆ ಬರ‌್ಬೇಕು, ಸಮಾಜದಲ್ಲಿ ಒಂದು ಸ್ಥಾನಮಾನ ಸಿಗ್ಬೇಕು, ವಿದ್ಯೆ ಕಲಿಯದೆ ನಾವು ಅನುಭವಿಸಿದ್ದನ್ನು ಅವ್ರ ಅನುಭವಿಸ್ಬಾರ‌್ದು ಅಂತ ನಮ್ ಆಸೆ. ದೇವ್ರೆ ಕೈ ಬಿಡ್ಲಿಲ್ಲಮ್ಮ. ಮಗ ಬಿ.ಇ. ಮುಗ್ಸಿ ಕೆಲ್ಸಕ್ಕೆ ಸೇರವ್ನೆ, ಮಗಳು ಡಾಕ್ಟ್ರು ಓತ್ತವ್ಳೆ. ಸೆಕೆಂಡ್ ಇಯರ್. ಬ್ರಿಲಿಯೆಂಟು ಮೇಡಂ ನಮ್ ಮಕ್ಳು...”

ನಮ್ಮಣ್ಣ ಗೌರ್ಮೆಂಟ್ ನೌಕ್ರಿಯಲ್ಲಿ ವೋದ್ ತಿಂಗ್ಳು ರಿಟೈರ್ಡ್‌ ಆದ. ಒಬ್ಬ ತಮ್ಮ, ಒಬ್ಳು ತಂಗಿ. ಎಲ್ರೂ ಓದವ್ರೆ. ನಾವು(ನು) ಮೊದ್ಲಿಂದ್ಲೂ ಹೀಗೇ ಯಾವ್ದೇ ಡಿಮ್ಯಾಂಡ್ ಇಲ್ದೆ ಬದುಕಿದ್ವಿ. ಸಾಲೆಗೆ ಹೋಗ್ಬೇಡ ಅಂದ್ರು. ವೋಗ್ಲಿಲ್ಲ. ಅದ್ಕೇ ಎಲ್ರೂ ನಮ್ಮುನ್ನ ತುಳುದ್ರು. ಅವ್ರ ನೋಡಿದ್ ಹುಡ್ಗೀನೇ ಮದ್ವೆ ಮಾಡ್ಕೊಂಡೆ. ಅವ್ಳಿಗೂ ಭಾಳ ಕಷ್ಟ ಕೊಟ್ರಮ್ಮ. ಕೊನೆಗೆ ಅವ್ರ ಮನೇಲಿ ಚಾಕ್ರಿ ಮಾಡ್ಕೊಂಡಿರೋದು ಬೇಡಾಂತ ಅವ್ಳ ಮಾಂಗಲ್ಯಸರ ಮತ್ತು ನನ್ದೊಂದು ಉಂಗ್ರ ಅಡಾ ಇಟ್ಟು ಈ ಆಟೊ ಕೊಂಡ್ಕೊಂಡೆ. ಅಲ್ಲಿಂದ ಎಲ್ರೂ ನಮ್ ಕಡೆ ತಿರುಗಿ ನೋಡೋಕೆ ಸುರು ಮಾಡಿದ್ರು...

ಕಷ್ಟ ಯಾವಾಗ್ಲೂ ನಮ್ಗೆ ಒಳ್ಳೆ ಪಾಠ. ಅಲ್ವೇನಮ್ಮ? ನಮ್ ಮಕ್ಳಿಗೆ ಅದರ ಬಿಸಿ ತಗುಲ್ಬಾರ‌್ದು ಅಂತ ಇಬ್ರೂ ಕಷ್ಟಪಟ್ಟು ದುಡುದ್ವಿ. ಓದ್ಸಿದ್ವಿ. ಮಕ್ಳೂ ಎಲ್ಲಾ ಕಡೆ ಕ್ಲಾಸ್‌ಗೇ ಫಸ್ಟ್ ಬರೋರು. ಮಗ ಫಸ್ಟ್ ಕ್ಲಾಸ್‌ಗೂ ಮೇಲೆ, ರ‌್ಯಾಂಕ್‌ಗೆ ಕೆಳಗೆ ಮಾರ್ಕ್ ತಗೊಂಡ. ಬಿ.ಇ. ಓದ್ತೀನಿ ಅಂದ. ಸಾಲ ಮಾಡಿ ಓದಿಸ್ದೆ. ಹೋದ್ವರ್ಷ ಒಳ್ಳೆ ಕಡೆ ಕೆಲ್ಸ ಸಿಗ್ತು. ಸಾಲ ಅವ್ನೇ ತೀರಿಸ್ತೀನಿ ಅಂದವ್ನೆ.

ಮಗಳು ಪಿವುಸೀಲಿ ಒಳ್ಳೆ ನಂಬರ್ ತಗೊಂಡ್ಳು. ಡಾಕ್ಟ್ರು ಓದ್ತೀನಿ ಅಂದ್ಳು. ಅದಕಿಂತ ಸೌಭಾಗ್ಯ ಇನ್ನೇನು ಬೇಕು ಅಲ್ವೇನಮ್ಮ? ಮಗನೂ ಸ್ವಲ್ಪ ಕಾಸು ಕೊಟ್ಟ. ಉಳ್ದಿದ್ದು ನಾವು ಹೊಂದಿಸಿದ್ವಿ. ಈಗ ಸೆಕೆಂಡ್ ಇಯರ್ ಓದ್ತಿದಾಳೆ. ಇನ್ನು ಎರಡು ವರ್ಷ ಓದಿಸಿ ಕೈ ತೊಳ್ಕೊಂಡ್ ಬಿಡ್ತೀನಿ. ಆಮ್ಯಾಕೆ ಮದ್ವೆ ಅದು ಇದು ಎಲ್ಲ ಅವ್ರವ್ರ ಹಣೇಲಿ ಬರ‌್ದಂಗೆ ಆಗುತ್ತೆ ಅಲ್ವೇನಮ್ಮ?

ಆಟೊದೋರ‌್ಗೆಲ್ಲ ನನ್ನ ಕಂಡ್ರೆ ಭಾಳ ಭಕ್ತಿ. ಇದ್ರೆ ನಿನ್ನಂಗೆ ಇರ‌್ಬೇಕಣ್ಣ ಅಂತಾರೆ. ಜೀವ್ನದಲ್ಲಿ ಚಲ ಇರ‌್ಬೇಕಮ್ಮ. ಯಾರೂ ಮಾಡದ್ದನ್ನು ನಾನು ಮಾಡಿಲ್ಲ. ಏನೋ ದೇವ್ರ ಶಕ್ತಿ ಕೊಟ್ಟ ಮಾಡಿದೆ. ಒಂದು ದಿನಾನೂ-ಮಳೆ, ಬಿಸ್ಲು, ಚಳಿ, ಜ್ವರ, ನೆಗಡಿ ಅಂತ ರಜಾ ಮಾಡಿಲ್ಲ. ನಮ್ ಹೆಂಡ್ರೂ ಅಷ್ಟೇ. ದೊಡ್ಡೋರ್ ಮನೇಲಿ ಕಸಮುಸುರೆ ಅಂತ ದುಡೀತಾಳೆ. ಅವ್ಳೆ ರಜೆ ಮಾಡಿದ್ದು ನಂಗೆ ಜ್ಞಾಪ್ಕ ಇಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ದೇವ್ರ ಕೊಟ್ಟವ್ರೆ ಕಣಮ್ಮ”
**
ಮಹಾತ್ಮನ ರಸ್ತೆಯ ಕುಂಬ್ಳೆ ವೃತ್ತದಲ್ಲಿ ಕೆಂಪು ಸಿಗ್ನಲ್. ನೂರಾರು ವಾಹನಗಳದ್ದು `ಆನ್ ಯುವರ್ ಮಾರ್ಕ್~ ಪ್ರತೀಕ್ಷೆ. ಅಂಕಲ್‌ನ ಆಟೊ ಒಮ್ಮೆ ನಿಟ್ಟುಸಿರು ಬಿಟ್ಟಿತು. ಸಿಗ್ನಲ್ ಕಣ್ಣು ಹಸಿರಾಯಿತು. ಮಹಾತ್ಮನ ರಸ್ತೆಗೆ ನುಗ್ಗಿದ ಆಟೊ ಕಚೇರಿ ಮುಂದೆ ನಿಂತಿತು.

`ನೆನ್ನೇದೂ ಸೇರಿಸಿ ತಗೊಳ್ಳಿ ಅಂಕಲ್~ ಅಂತ ನೂರು ರೂಪಾಯಿ ಕೊಟ್ಟೆ. ಇಪ್ಪತ್ತು ವಾಪಸ್ ಕೊಟ್ರು. `ಇನ್ನೂ ಹತ್ತು ತಗೊಳ್ಳಿ ನೀವ್ಯಾಕೆ ಲಾಸ್ ಮಾಡ್ಕೋತೀರಾ~ ನನ್ನದು ಸಾಲ ತೀರಿಸೋ ಲೆಕ್ಕಾಚಾರ.

`ಅಯ್ಯೋ, ಹಾಗೆಲ್ಲ ದುಡ್ಡು ಮಾಡೋದಾದ್ರೆ ನನ್ ಸರ್ವಿಸ್‌ನಲ್ಲಿ ಎಷ್ಟೊಂದು ಮಾಡ್ಬೋದಾಗಿತ್ತು~

`ಅಂಕಲ್ ನಿಮ್ ಹೆಸ್ರು?~

`ಆಟೊ ಅಂಕಲ್!~ ಅಂದುಬಿಟ್ಟು ತುಂಟ ನಗೆ ನಕ್ಕು ಅಂಕಲ್ ಹೊರಟೇ ಹೋದ್ರು. ಆಟೊ ನಂಬರ‌್ರೂ ನೋಡದೆ ತಪ್ಪು ಮಾಡಿದೆ ಅಂತ ಇವತ್ತಿಗೂ ಅನಿಸುತ್ತಲೇ ಇದೆ. ಮೂರು ವರ್ಷದ ಹಿಂದೆ ತಮ್ಮ ಬದುಕಿನ ವಿರಾಟ್‌ಸ್ವರೂಪ ತೋರಿಸಿದ ಆ ಆಟೊ ಅಂಕಲ್ ಈಗಲೂ ನೆನಪಾಗುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT