ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರು ಅಲ್ಲಿ, ಇಲ್ಲಿ...!

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು... ಓ... ಈ ಹೆಸರಲ್ಲೇ ಎಂತಹ ಆಕರ್ಷಣೆ! ಉದ್ಯಾನ ನಗರಿಯಲ್ಲಿ ಓಡಾಡುವುದೇ ಒಂದು ಖುಷಿ. ಪರಸ್ಥಳಗಳಿಂದ ಬಂದವರಿಗಂತೂ ಬೆಂಗಳೂರೆಂಬ ಬೆಡಗಿಯ ಆಕರ್ಷಣೆ ಕಡಿಮೆಯಾಗುವುದೇ ಇಲ್ಲ. ಎಲ್ಲೆಡೆ ಸಾರಿಗೆಯ ವ್ಯವಸ್ಥೆ ಇರುವುದರಿಂದ ಓಡಾಟ ಸಲೀಸು ನಿಜ. ಆದರೆ ಕೆಲವೊಮ್ಮೆ ‘ಆಟೊ’ಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ.

ನಾನು ನನ್ನ ಊರಾದ ಸಕಲೇಶಪುರದಿಂದ ಬೆಂಗಳೂರಿಗೆ ತಿಂಗಳಿಗೊಮ್ಮೆ ಪ್ರಯಾಣ ಮಾಡುತ್ತಿರುತ್ತೇನೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ‘ಬಹಳಷ್ಟು’ ಆಟೊ ಚಾಲಕರ ವರ್ತನೆ ಜೊತೆ ನನ್ನೂರಿನ ಚಾಲಕರ ವರ್ತನೆ ಹೋಲಿಸುತ್ತೇನೆ. ಆಗ ನನ್ನೂರಿನ ಆಟೊ ಚಾಲಕರೇ ಹೆಚ್ಚು ತೂಗುತ್ತಾರೆ. ಒಮ್ಮೆ ತುರ್ತಾಗಿ ಮೆಜೆಸ್ಟಿಕ್‌ನಿಂದ ಚಿಕ್ಕಪೇಟೆಗೆ ಹೋಗಬೇಕಿತ್ತು. ಲಗ್ಗೇಜು ಬೇರೆ. ನಾನು ಹೋಗಬೇಕಿದ್ದ ಸ್ಥಳಕ್ಕೆ ಒಬ್ಬನೇ ಒಬ್ಬ ಆಟೊ ಚಾಲಕನೂ ಬರಲಿಲ್ಲ. ಆಟೊದವರನ್ನು ಶಪಿಸುತ್ತಲೇ ಕಾಲ್ನಡಿಗೆಯಲ್ಲಿ ಸಾಗಬೇಕಾಯಿತು.

ಈ ಬೆಂಗಳೂರಿನ ಆಟೊ ಚಾಲಕರನ್ನು ಬುದ್ಧಿವಂತರೆನ್ನಬೇಕೋ ಏಮಾರಿಸುವವರು ಎನ್ನಬೇಕೋ ಗೊತ್ತಾಗುವುದಿಲ್ಲ. ಸ್ವಲ್ಪ ದೂರ ಹೋದ ನಂತರ ‘ಯಾವ ದಾರಿಯಲ್ಲಿ ಹೋಗಬೇಕು’ ಎಂದು ನಮ್ಮನ್ನೇ ಕೇಳುತ್ತಾರೆ. ಹೊಸಬರಿಗೆ ದಾರಿ ಹೇಳುವುದು ಎಂದು ಗೊತ್ತಾಗದೆ, ಹತ್ತಿರದ ದಾರಿಯಲ್ಲಿ ಹೋಗಲು ತಿಳಿಸಿದರೆ ಚಾಲಕನಿಗೆ ಖುಷಿ ‘ಬಕರಾ ಸಿಕ್ಕಿತು’ ಎಂದು..! ಆಟೊ ಕರೆದಾಗಲೇ ಈ ‘ಬುದ್ಧಿವಂತರಿಗೆ’ ತಿಳಿದು ಬಿಡುತ್ತದೆ; ಇವರು ಬೆಂಗಳೂರಿಗೆ ಹೊಸಬರೋ, ಹಳಬರೋ ಎಂದು.

ನನಗೆ ಮೆಜೆಸ್ಟಿಕ್‌ನಿಂದ ಆನಂದರಾವ್ ಸರ್ಕಲ್‌ನಲ್ಲಿರುವ ರೆಡ್‌ಕ್ರಾಸ್ ಕ್ಯಾಂಪ್‌ಗೆ ಹೋದಾಗಲೂ ಇದೇ ಅನುಭವ. ಒಬ್ಬ ಆಟೊ ಚಾಲಕ 50 ರೂ ಹೇಳಿ ನಂತರ 40 ರೂಗೆ ಇಳಿಸಿದ. ಜೊತೆಗೆ ‘ಮೀಟರ್ ಹಾಕಲ್ಲ ಬೇಕಿದ್ದರೆ ಬನ್ನಿ ಇಲ್ಲದಿದ್ದರೆ ಇಲ್ಲ’ ಎನ್ನುವ ಒರಟು ಮಾತು ಬೇರೆ. ಕೇವಲ ಮಿನಿಮಮ್ ದರವಲ್ಲವೇ ಎಂದರೆ ವಾಪಸ್ಸು ಖಾಲಿ ಬರಬೇಕು ಎನ್ನುವ ಸಿದ್ಧ ಉತ್ತರ.

ಇನ್ನೂ ಕೆಲವು ಚಾಲಕರು ಸುಮ್ಮನೆ ಆಟೊ ನಿಲ್ಲಿಸಿಕೊಂಡಿರುತ್ತಾರೆಯೇ ಹೊರತು ನಾವು ಕೇಳಿದ ಕಡೆ ಬರುವುದಿಲ್ಲ. ಮತ್ತೊಂದು ಅನುಭವ; ಕೆಲ ತಿಂಗಳ ಹಿಂದೆ ಮೆಜೆಸ್ಟಿಕ್ ಹತ್ತಿರ ಇರುವ  ‘ಕೆಎಸ್‌ಐಸಿ’ ಶೋ ರೂಂನಲ್ಲಿ ಸೀರೆಗಳನ್ನು ಕೊಂಡು ಹಿಂದಿರುಗುವ ವೇಳೆ ಸಂಜೆಯ ಮಳೆ. ಆಕಾಶವೇ ತೂತಾಗಿ ನೀರಿನ ಧಾರೆ. ಒಂದೇ ಒಂದು ಆಟೊ ನಾನು ಕೂಡ ಹೋಗಬೇಕಾದ ಸ್ಥಳಕ್ಕೆ ಬರಲು ಒಪ್ಪಲಿಲ್ಲ. ಸ್ವಲ್ಪ ಮಳೆ ಕಡಿಮೆಯಾದ ನಂತರ ಬರುತ್ತಿದ್ದ ಒಂದು ಆಟೊ ನಿಲ್ಲಿಸಿ ‘ನೀನು ಕೇಳಿದಷ್ಟು ಹಣ ಕೊಡುತ್ತೇನೆ’ ಎಂದಾಗ ಬರಲೊಪ್ಪಿದರೂ ಮೀಟರ್ ಹಾಕಲಿಲ್ಲ. ನಮಗೂ ವಿಧಿ ಇರಲಿಲ್ಲ.

ಲಕ್ಷದ ಹತ್ತಿರ ಇರುವ ಬೆಲೆಬಾಳುವ ಸೀರೆಗಳು ಈ ಮಳೆಯಲ್ಲಿ ನೆನೆದು ಹಾಳಾದರೆ ಎನ್ನುವ ಭಯ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಮೆಜ್ಟೆಸ್ಟಿಕ್‌ನಿಂದ ವಿಜಯನಗರಕ್ಕೆ ಆಟೊ ಚಾರ್ಜು 60- 70 ರೂಪಾಯಿ ಆಗಬಹುದೇನೋ. ನಾನು ಆ ದಿನ ಕೊಟ್ಟಿದ್ದು 180 ರೂ. ಮಳೆಯಿಂದ ನಡುಗುತ್ತಿದ್ದರೂ ಹೊಟ್ಟೆ ಊರಿದು ಹೋಯಿತು. ಮಳೆ ಅದರಲ್ಲೂ ದಿಡೀರ್ ಮಳೆ ಬಂದರಂತೂ ಬೆಂಗಳೂರಿನ ಆಟೊದವರಿಗೆ ಸುಗ್ಗಿಯೋ ಸುಗ್ಗಿ. ಹಗಲು ದರೋಡೆ.
ಈಗ ನನ್ನೂರಿನ ಆಟೊ ಚಾಲಕರ ಬಗ್ಗೆ ಹೇಳಬೇಕೆಂದರೆ ಯಾವುದೇ ನಖರಾ, ಧಿಮಾಕು ಮಾಡದೇ ಹೇಳಿದ ಕಡೆ ಕರೆದುಕೊಂಡು ಹೋಗುತ್ತಾರೆ.

ಅಕಸ್ಮಾತ್ ಕೆಲವೊಮ್ಮೆ ಮೀಟರ್‌ಗಿಂತ ಒಂದೆರಡು ರೂ. ಕಡಿಮೆ ಇದ್ದಲ್ಲಿ ‘ಪರವಾಗಿಲ್ಲ; ಇನ್ನೊಮ್ಮೆ ಕೊಡುವಿರಂತೆ’ ಎಂದು ಸೌಜನ್ಯದಿಂದ ಹೇಳುತ್ತಾರೆಯೇ ಹೊರತು ಬಯ್ದುಕೊಂಡು ಹೋಗುವುದಿಲ್ಲ. (ನಮ್ಮೂರಲ್ಲಿ ಮೀಟರ್ ಇಲ್ಲ. ಮಿನಿಮಮ್ 15 ರೂ. ಹಣ ಕೊಡುವುದು. ಒಮ್ಮೊಮ್ಮೆ ಸ್ವಲ್ಪ ದೂರವೇ ಪ್ರಯಾಣಿಸಿದಾಗ 5 ಅಥವಾ 6 ರೂ. ತೆಗೆದು ಕೊಳ್ಳುತ್ತಾರೆ).

ಕೊನೆಯದಾಗಿ ಇನ್ನೊಂದು ವಿಷಯ. ನಾನು ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಸಕಲೇಶಪುರಕ್ಕೆ ಮರಳುವಾಗ ದಾರಿಯಲ್ಲಿ ಬಸ್ ಕೆಟ್ಟು ಬೇರೆ ಬಸ್ಸಿನಲ್ಲಿ ಪ್ರಯಾಣಿಸಿ ಊರು ತಲುಪುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ. ಆಟೊ ಚಾಲಕ ಸೀದಾ ಮನೆ ಮುಂದೆ ನಿಲ್ಲಿಸಿ ಮಾಮೂಲಿ ಬಾಡಿಗೆ ಪಡೆದು, ನಾನು ಗೇಟು ತೆಗೆದು ಒಳಹೋಗುವ ತನಕ ನಿಂತು ನಂತರ ತೆರಳಿದರು. ಇಂತಹ ವರ್ತನೆಯನ್ನು ಬೆಂಗಳೂರಿನ ಆಟೊ ಚಾಲಕರಿಂದ ನಿರೀಕ್ಷಿಸಬಹುದೇ? ಬೆಂಗಳೂರಲ್ಲಾಗಿದ್ದರೆ ಡಬಲ್ ಚಾರ್ಜ್ ಜೊತೆಗೆ ಹೆದರಿಕೆಯಿಂದಲೇ ಪ್ರಯಾಣಿಸಬೇಕಾಗಿತ್ತು.

ಇನ್ನೊಂದು ಮಾತು. ಬೆಂಗಳೂರಿನ ಎಲ್ಲಾ ಚಾಲಕರ ಬಗ್ಗೆ ನಾನು ಹೀಗೇ ಹೇಳುತ್ತಿಲ್ಲ. ಆದರೆ ಬಹಳಷ್ಟು ಚಾಲಕರ ವರ್ತನೆ ಬೇಸರ ತರುವಂತಹದ್ದೇ ಆಗಿರುವುದು ವಿಷಾದನೀಯ. ಆಟೊಗಳಿರುವುದು ಜನರ ಸೌಕರ್ಯಕ್ಕಾಗಿ ತಾನೇ. ಇದನ್ನು ಮರೆತು ಕೇವಲ ಹಣಕ್ಕಾಗಿ ಕೆಟ್ಟದಾಗಿ ವರ್ತಿಸುವ ಇವರನ್ನು ‘ಕಂಟ್ರೋಲ್’ಗೆ ತರುವುದು ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿ. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಆಗಿರುವ, ಆಗುತ್ತಿರುವ ಕೆಲವು ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ನಿಮಗೂ ಇದೇ ರೀತಿಯ ಅಥವಾ ಬೇರೆ ರೀತಿಯ ಅನುಭವಗಳಾಗಿರಬಹುದು ಅಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT