ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಟೆಕ್: ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಬ್ರೇಕ್ ಎಂದರೆ ತಕ್ಷಣ ನೆನಪಿಗೆ ಬರುವುದು ನಮ್ಮ ಬಾಲ್ಯ. ಸೈಕಲ್ ಕಲಿಯುವಾಗ ಎದ್ದು ಬಿದ್ದ ಆ ಕ್ಷಣಗಳು. ಸೈಕಲ್‌ನಲ್ಲಿ ಬ್ಯಾಲೆನ್ಸ್ ಕಲಿಯುವುದೇ ಹರಸಾಹಸವಾಗಿ, ಪೆಡಲ್ ತುಳಿಯುತ್ತ ಎರಡು ಚಕ್ರಗಳ ಮೇಲೆ ಬೀಳದಂತೆ ಸಾಗುವ ಆ ಮೊದಲ ರೋಮಾಂಚನದ ಕ್ಷಣಗಳನ್ನು ಮರೆಯುವಂತೆಯೇ ಇಲ್ಲ. ಆದರೆ ಸೈಕಲ್ ತುಳಿಯುತ್ತ ವೇಗ ಗಳಿಸಿ, ಸೈಕಲ್ ನಿಲ್ಲಿಸಬೇಕಾದರೆ ಬ್ರೇಕ್ ಹಾಕಬೇಕಲ್ಲ. ಹ್ಯಾಂಡಲ್‌ನಲ್ಲಿದ್ದ ಬ್ರೇಕ್ ಲಿವರ್ ಅದುಮಿ ನಿಲ್ಲಿಸಿ, ಕೆಲವೊಮ್ಮೆ ಪಲ್ಟಿ ಹೊಡೆಯುವುದೂ ಎಷ್ಟು ಅದ್ಭುತದ ಕ್ಷಣಗಳಲ್ಲವೇ? ಆಗಲೇ ಮೊದಲು ಕಾಣುವುದು ಈ ಬ್ರೇಕ್.

ಸೈಕಲ್‌ನ ಚಕ್ರದ ರಿಮ್‌ಗಳನ್ನು ಗಟ್ಟಿಯಾಗಿ ಅದುಮಿ ನಿಲ್ಲಿಸುವ ರಬ್ಬರ್‌ನ ಎರಡು ಬಿಲ್ಲೆಗಳೇ ಬ್ರೇಕ್‌ಗಳು. ಇದು ಬ್ರೇಕ್‌ನ ಮೂಲ ತತ್ವ. ಅಂದರೆ ಚಲಿಸುವ ಚಕ್ರಗಳನ್ನು ಭದ್ರವಾಗಿ ಹಿಡಿಯುವುದು. ಇದೇ ತತ್ವ ಈಗ ಸಾಕಷ್ಟು ಮುಂದುವರೆದಿದೆ. ಸೈಕಲ್‌ನಲ್ಲಿರುವ ಕಣ್ಣಿಗೆ ಕಾಣುವ ಬ್ರೇಕ್‌ಗಳು, ಈಗ ಅಶರೀರವಾಗಿವೆ. ಚಕ್ರದೊಳಗೆ ಹುದುಗಿವೆ, ಕೆಲವು ಬ್ರೇಕ್‌ಗಳು (ಡಿಸ್ಕ್) ತಟ್ಟೆಯ ಆಕಾರ ತಾಳಿವೆ. ಇನ್ನೂ ಒಂದು ಹೆಜ್ಜೆ ಹೋಗಿ ಕಂಪ್ಯೂಟರ್ ನಿಯಂತ್ರಣವನ್ನೂ ಹೊಂದಿದೆ. ಈ ಬಾರಿಯ ಆಟೋ ಟೆಕ್‌ನಲ್ಲಿದೆ ಬ್ರೇಕ್ ಲೋಕದ ಬಗ್ಗೆ ಇಣುಕು ನೋಟ.

ಡ್ರಮ್ ಬ್ರೇಕ್
ವಾಹನ ಲೋಕದಲ್ಲಿನ ಕಚ್ಚಾ ಹಾಗೂ ಮೂಲಭೂತ ಬ್ರೇಕ್ ತಂತ್ರಜ್ಞಾನವಿದು. ಯಂತ್ರಚಾಲಿತ ಚಕ್ರಗಳನ್ನು ಹಿಡಿದು ನಿಲ್ಲಿಸಲು ಕೇವಲ ರಬ್ಬರ್ ಬಿಲ್ಲೆಗಳು ಸಾಲದು.

ಅದಕ್ಕೂ ಯಾಂತ್ರಿಕ ಸಹಾಯದ ಅಗತ್ಯವಿದೆ. ಡ್ರಮ್ ಬ್ರೇಕ್‌ಗಳು ರಚಿತಗೊಂಡಿದ್ದೇ ಈ ಉದ್ದೇಶದಿಂದ. ಹೆಸರೇ ಹೇಳುವಂತೆ ಇದು ಡ್ರಮ್‌ನೊಳಗೆ ಕೆಲಸ ಮಾಡುವ ಸಾಧನ.

ಚಕ್ರ ತಿರುಗುವ ಆಕ್ಸಿಲ್‌ಗೆ ಜೋಡಿತಗೊಂಡಿರುವ ಡ್ರಮ್ ಬ್ರೇಕ್‌ನ ಒಳಗೆ ಎರಡು ಶೂಗಳನ್ನು ಅಳವಡಿಸಲಾಗಿರುತ್ತವೆ. ಚಾಲಕ ಅಥವಾ ಸವಾರ ಬ್ರೇಕ್ ಹಾಕುತ್ತಿದ್ದಂತೆ ಈ ಎರಡು ಶೂಗಳು ವಿಸ್ತರಿಸಿ, ಡ್ರಮ್‌ನ ಒಳಭಾಗವನ್ನು ಉಜ್ಜುತ್ತವೆ.

ಆಗ ಸಹಜವಾಗೇ ಚಕ್ರದ ವೇಗ ಕಡಿಮೆಯಾಗುತ್ತದೆ. ಅರ್ಧ ಗೋಲಾಕೃತಿಯಲ್ಲಿರುವ ಈ ಶೂಗಳಿಗೆ ಕಲ್ನಾರು ಅಥವಾ ಆಲ್ಬೆಸ್ಟಾಸ್ ನಾರಿನಿಂದ ಮಾಡಿರುವ ಲೇಪನವಿರುತ್ತದೆ. ಈ ಶೂಗಳ ಮೇಲ್ಮೈ ಅತಿ ಒರಟಾಗಿದ್ದು, ಘರ್ಷಣೆಯ ಮೂಲಕ ವೇಗ ನಿಯಂತ್ರಿಸುತ್ತವೆ.

ಕಾಲ ಕ್ರಮೇಣ ಘರ್ಷಣೆಯಿಂದಲೇ ತಮ್ಮ ಒರಟುತನ ಕಳೆದುಕೊಂಡು ಸವೆಯುವ ಈ ಶೂಗಳನ್ನು ಬದಲಿಸಬೇಕು. ಇಲ್ಲವಾದಲ್ಲಿ ಬ್ರೇಕ್‌ನ್ನು ಪರಿಣಾಮಕಾರಿಯಾಗಿ ಬಳಸಲಾಗದು. ಭಾರತದಲ್ಲಿ ಬಹುತೇಕ ಎಕಾನಮಿ ಬೈಕ್‌ಗಳಲ್ಲಿ ಹಾಗೂ ಸ್ಕೂಟರ್‌ಗಳಲ್ಲಿ ಈಗಲೂ ಡ್ರಮ್ ಬ್ರೇಕ್ ಬಳಕೆಯಲ್ಲಿದೆ. ನೀರು ಡ್ರಮ್ ಒಳಗೆ ನುಗ್ಗಿದರೆ ಸರಿಯಾಗಿ ಬ್ರೇಕ್ ಹಿಡಿಯದಿರುವುದು ಇದರ ಮೈನಸ್ ಪಾಯಿಂಟ್.


ಡಿಸ್ಕ್ ಬ್ರೇಕ್
ಡ್ರಮ್ ಬ್ರೇಕ್‌ಗಳಲ್ಲಿನ ಶೂಗಳು ಸವೆದು ಬ್ರೇಕ್ ಪರಿಣಾಮಕಾರಿಯಾಗದ ಕಾರಣ ಕಾಲಾಂತರದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಡ್ರಮ್ ಬ್ರೇಕ್‌ಗೆ ಸಾಧ್ಯವಾಗಲಿಲ್ಲ.

ಇದನ್ನು ಬದಲಿಸಿದ್ದೇ ಡಿಸ್ಕ್ ಬ್ರೇಕ್‌ಗಳು. ಈಗಿನ ಬಹುತೇಕ ವಾಹನಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನೇ ಅಳವಡಿಸಲಾಗುತ್ತಿದೆ. ಇದು ಡ್ರಮ್ ಬ್ರೇಕ್‌ನಂತೆ ಸರಳ ತಂತ್ರಜ್ಞಾನ ಹೊಂದದೇ ಕ್ಲಿಷ್ಟ ರಚನೆಯನ್ನು ಹೊಂದಿದೆ. ಇದರಲ್ಲೂ ಹೆಸರೇ ಹೇಳುವಂತೆ ಡಿಸ್ಕ್ ಚಕ್ರದ ವೇಗ ನಿಯಂತ್ರಿಸುತ್ತದೆ. ಆದರೆ ವಿಧಾನ ಮಾತ್ರ ವಿಭಿನ್ನ. ಚಕ್ರಕ್ಕೆ ಸಮಾನಾಂತರವಾಗಿ ಅತಿ ಗಡುಸಾದ ಉಕ್ಕಿನ ತಟ್ಟೆಯನ್ನು (ಡಿಸ್ಕ್) ಜೋಡಿಸಿರಲಾಗುತ್ತದೆ.

ಇದು ಚಕ್ರದೊಂದಿಗೆ, ಅದರಷ್ಟೇ ವೇಗದಲ್ಲಿ ತಿರುಗುತ್ತಿರುತ್ತದೆ. ಈ ಚಕ್ರವನ್ನು ಹಿಡಿದು ನಿಲ್ಲಿಸಲು ಕ್ಯಾಲಿಪರ್, ಪಿಸ್ಟನ್ ಹಾಗೂ ಬ್ರೇಕ್ ಪ್ಯಾಡ್‌ಗಳೆಂಬ ಮೂರು ಸಾಧನಗಳು ಕೆಲಸ ಮಾಡುತ್ತವೆ.
 
ಚಕ್ರಕ್ಕೆ ಅಂಟಿಕೊಂಡಂತೇ ಇರುವ ಬ್ರೇಕ್ ಪ್ಯಾಡ್‌ಗಳನ್ನು ಕ್ಯಾಲಿಪರ್ ಹಿಡಿದಿರುತ್ತದೆ. ಬ್ರೇಕ್ ಹಾಕಿದಾಗ ಪಿಸ್ಟನ್‌ಗಳು ಉಬ್ಬಿ, ಬ್ರೇಕ್ ಪ್ಯಾಡ್‌ಗಳು ಡಿಸ್ಕ್‌ನ್ನು ಭದ್ರವಾಗಿ ಹಿಡಿಸುತ್ತವೆ. ಡ್ರಮ್ ಬ್ರೇಕ್‌ಗೂ ಪರಿಣಾಮಕಾರಿ ಬ್ರೇಕಿಂಗ್ ಇಲ್ಲಿ ಸಾಧ್ಯ.
 
ಇಲ್ಲಿ ಉಕ್ಕಿನ ಡಿಸ್ಕ್ ಹಾಗೂ ಪ್ಯಾಡ್‌ಗಳು ಸವೆಯುವ ಸಮಯ  ತೀರ ನಿಧಾನವಾದ್ದರಿಂದ, ಬದಲಿಸುವ ಅಗತ್ಯವೇ ಬರುವುದಿಲ್ಲ. ಡಿಸ್ಕ್ ಬ್ರೇಕ್ ಫ್ಲ್ಯೂಯಿಡ್ ಎಂಬ ಎಣ್ಣೆಯನ್ನು ಆಗಾಗ ಬದಲಿಸಬೇಕಷ್ಟೆ. ಜತೆಗೆ, ಇಲ್ಲಿ ವಾಟರ್ ಪ್ರೂಫಿಂಗ್ ವ್ಯವಸ್ಥೆಯಿದ್ದು, ನೀರು ಬಿದ್ದರೂ ಪರಿಣಾಮಕಾರಿ ಬ್ರೇಕಿಂಗ್ ಸಾಧ್ಯವಿದೆ. ಸಾಮಾನ್ಯವಾಗಿ ಮುಂದಿನ ಚಕ್ರಗಳಿಗೆ ಇವನ್ನು ಅಳವಡಿಸಲಾಗುತ್ತದೆ.
 
ಭಾರತೀಯ ರಸ್ತೆಗಳಿಗೆ ಇವು ಹೊಸ ತಂತ್ರಜ್ಞಾನವಾದರೂ ಇಂಗ್ಲೆಂಡ್‌ನಲ್ಲಿ 1890 ರಲ್ಲೆೀ ರೈಲುಗಳಲ್ಲಿ ಇದರ ಬಳಕೆಯಿತ್ತು. 1940 ರಲ್ಲಿ ಅಮೆರಿಕಾದ ಬಹುತೇಕ ಎಲ್ಲ ಕಾರುಗಳಲ್ಲಿ ಇದರ ಬಳಕೆಯಾಯಿತು. ಭಾರತಕ್ಕೆ 1990 ರಲ್ಲಿ ಕಾರುಗಳಲ್ಲಿ ಬಳಕೆ ಆರಂಭವಾಗಿ, ಹೀರೋ ಹೋಂಡಾ ಸಿಬಿಜಿ ಮೂಲಕ ಬೈಕ್‌ಗಳಲ್ಲೂ ಇದರ ಅಳವಡಿಕೆ ಪ್ರಾರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT