ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಹೆಚ್ಚಳ: ಸರ್ಕಾರದ ಆದೇಶ ಊರ್ಜಿತ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರಕ್ಕೆ ಇನ್ನೂ 40 ಸಾವಿರ ಆಟೊರಿಕ್ಷಾಗಳಿಗೆ ಅನುಮತಿ ನೀಡಿ ಮಾರ್ಚ್ 23ರಂದು ಸರ್ಕಾರ ಹೊರಡಿಸಿರುವ ಆದೇಶದ ರದ್ದತಿಗೆ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಆದೇಶವನ್ನು ಊರ್ಜಿತಗೊಳಿಸಿದ್ದ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಮೊಹಮ್ಮದ್ ಅಬ್ಬಾಸ್ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿತು.

ಈಗ ಸದ್ಯ ನಗರದಲ್ಲಿ 85 ಸಾವಿರ ಸಾವಿರ ಆಟೊಗಳು ಇವೆ. ಅದನ್ನು 1.25 ಲಕ್ಷಕ್ಕೆ ಏರಿಸಿದರೆ ಜನರ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಲಿಲ್ಲ.

ಸಾರ್ವಜನಿಕರ ಹಿತದೃಷ್ಟಿಯಿಂದ ಆಟೊ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಇದು ಸರ್ಕಾರದ ನೀತಿ ನಿಯಮಕ್ಕೆ ಸಂಬಂಧಿಸಿದ ವಿಷಯ. ಇದರ ಮಧ್ಯೆ ಕೋರ್ಟ್ ಬಾರದು ಎಂಬ ಏಕಸದಸ್ಯಪೀಠದ ತೀರ್ಪನ್ನು ವಿಭಾಗೀಯ ಪೀಠ ಮಾನ್ಯ ಮಾಡಿದೆ.

ಹಬ್ಬಕ್ಕೆ ಪಟಾಕಿ: ಮಾಹಿತಿಗೆ ಆದೇಶ
ಹಬ್ಬ ಹರಿದಿನ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಬಹುದೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.

ಪಟಾಕಿ ಸಿಡಿತದಿಂದಾಗಿ ಹಲವು ಬಾಲಕರು ಕಣ್ಣು ಕಳೆದುಕೊಳ್ಳುತ್ತಿದ್ದು, ಪಟಾಕಿಗೆ ನಿಷೇಧ ಹೇರುವಂತೆ ಕೋರಿ ವಕೀಲ ಬಿ.ವಿ.ಪುಟ್ಟೇಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ವಿಶಾಲಪೀಠಕ್ಕೆ ವರ್ಗ ಕೋರಿ ಅರ್ಜಿ
ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೈಕೋರ್ಟ್‌ಗೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದು ಎಲ್ಲ ಅರ್ಜಿಗಳ ವಿಚಾರಣೆಯನ್ನು ವಿಶಾಲ ಪೀಠಕ್ಕೆ ವರ್ಗಾಯಿಸುವಂತೆ ಕೋರಿ ವಕೀಲ ಸಿರಾಜಿನ್ ಬಾಷಾ, ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಒಂದೊಂದು ಪೀಠದ ಮುಂದೆ ಒಂದೊಂದು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಕೆಲವೊಂದನ್ನು ಏಕಸದಸ್ಯಪೀಠ, ಇನ್ನು ಕೆಲವು ವಿಭಾಗೀಯ ಪೀಠಗಳು ನಡೆಸುತ್ತಿದ್ದು ಇದು ಗೊಂದಲಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಒಂದೇ ಕಡೆ ಎಲ್ಲ ಅರ್ಜಿಗಳ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಅವರು ನ್ಯಾಯಮೂರ್ತಿಗಳನ್ನು ಕೋರಿದ್ದಾರೆ.

ಜಾಮೀನು ಅರ್ಜಿ: 30ಕ್ಕೆ ತೀರ್ಪು
ಗಣಿ ಗುತ್ತಿಗೆ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತಕಲ್ ಮೈನಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಗೋಯಲ್ ಅವರಿಗೆ ಜಾಮೀನು ನೀಡಬೇಕೆ, ಬೇಡವೆ ಎಂಬ ಬಗೆಗಿನ ತೀರ್ಪನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಇದೇ 30ರಂದು ಪ್ರಕಟಿಸಲಿದೆ.

ಜಾಮೀನು ನೀಡಿಕೆ ಕುರಿತಾದ ವಾದ, ಪ್ರತಿವಾದಗಳನ್ನು ಆಲಿಸಿ ಸೋಮವಾರ ಪೂರ್ಣಗೊಳಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ತೀರ್ಪನ್ನು ಕಾಯ್ದಿರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT