ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊದಲ್ಲಿ ಬಂದವಳು

ಒಡಲ ದನಿ
Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಾಲ್ಕು ವರ್ಷಗಳ ಹಿಂದಿನ ಮಾತು. ನಾನಾಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ತ್ಯಾಪೆ ಮುಖ ಹಾಕಿಕೊಂಡು ಕುಳಿತಿದ್ದೆ. ಯಾಕೆಂದರೆ ನಾನು ಫೇಲ್ ಆಗಿದ್ದೆ. ಅಂದು ನನಗೆ ಸಾಥ್ ನೀಡಿದ್ದು ನನ್ನ ಆಟೊ. ಈ ಕೆಲಸವೇ ಅಂತಾದ್ದು. ಇಲ್ಲಿ ಹಲವಾರು ಮುಖಗಳು ಪರಿಚಯವಾಗುತ್ತವೆ. ಕೋಪ, ಅಸೂಯೆ, ಅನುಕಂಪ, ಕರುಣೆ, ಮಾನವೀಯತೆ, ಪ್ರೀತಿಯ ಮನಸ್ಸುಗಳಿರುತ್ತವೆ. ಅದರಲ್ಲೂ ಮನಸ್ಸಿಗೆ ನಿಲುಕದ ಭಾಷೆಯ ಹೃದಯಗಳು ಎದುರಾಗುತ್ತವೆ. ಹೇಗಿದ್ದರೂ ಹೊಟ್ಟೆಪಾಡು, ಎಲ್ಲವನ್ನೂ ಸ್ವೀಕರಿಸಬೇಕು.

ನನ್ನ ಈ ಆಟೊ ಪಯಣದಲ್ಲಿ ಅದೇಷ್ಟೋ ಪಯಣಿಗರು ನನ್ನವರಾದರು. ಕೆಲವರು ಅನುಮಾನಿಸಿದರು. ಇವರೆಲ್ಲರಿಗಿಂತ ನಾನು ಎಂದೂ ಮರೆಯಲಾಗದ ಒಂದು ಹೆಸರು ನನ್ನಲ್ಲಿ ಅಳಿಯದೇ ಉಳಿದಿದೆ. ಆ ತೆಲುಗು ಸುಂದರಿಯ ಹೆಸರು ಭಾವನಾ (ಹೆಸರು ಬದಲಿಸಿದ್ದೇನೆ) ಅವಳ ಭಾವನೆಗಳು ಈ ಸಮಾಜಕ್ಕೆ ಯಾಕೆ ಅರ್ಥವಾಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಬಾಲ್ಯದಲ್ಲೇ ದೇವರು ಅವಳ ತಂದೆ-ತಾಯಿಯನ್ನು ಕಿತ್ತುಕೊಂಡಿದ್ದ. ಚಿಕ್ಕಮ್ಮನ ಸೆರೆಮನೆಯಲ್ಲೇ ಅವಳು 9ನೇ ತರಗತಿ ಮುಗಿಸಿದ್ದಳು. ಓದುವ ಹಂಬಲವಿದ್ದರೂ ನಿಂದನೆಗೆ ಗುರಿಯಾಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಳು. ಕೊನೆಗೆ ಊರಿಂದ ಹೊರಬರಲು ಸ್ನೇಹಿತೆಯೊಬ್ಬಳ ನೆರವು ಯಾಚಿಸಿದಳು. ಅದರ ಫಲವಾಗಿ, ಚಿಕ್ಕಮ್ಮನ ಸೆರೆಮನೆವಾಸಕ್ಕಿಂತಲೂ ನಿಕೃಷ್ಟವಾದ ಯಾತನೆಯನ್ನು ಅವಳು ಅನುಭವಿಸಬೇಕಾಯಿತು. ಭಾವನಾಳ ಕಷ್ಟಗಳಿಗೆ ಕೊನೆಯ ರೇಖೆ ಎಳೆಯಬೇಕಾದ ಸ್ನೇಹಿತೆ ರೇಖಾ, ಅವಳನ್ನು ಕೆಂಪುದೀಪದ ಕೆಳಗಿನ ಧಣಿಗೆ ಮಾರಿ ಅಲ್ಲಿಂದ ಹೊರಬಾರದಂತೆ ಲಕ್ಷ್ಮಣರೇಖೆ ಎಳೆದುಬಿಟ್ಟಿದ್ದಳು. ಇಂತಹ ಭಾವನಾ ನನಗೆ ಪರಿಚಯವಾದದ್ದು ನನ್ನ ಆಟೊದಲ್ಲಿ. ಮೊದಲಿಗೆ ಅವಳನ್ನು ನೋಡಿ ಬೆರಗಾದೆ. ಅವಳ ಕಣ್ಣು, ಮುಗ್ಧ ನಗು ಎಂತವರನ್ನೂ ಸೆಳೆಯುವಂತಿತ್ತು. ಅಷ್ಟರಲ್ಲಿ ಅವಳು ಬಂದು ಆಟೊದಲ್ಲಿ ಕುಳಿತು `ಡಿ.ಸಿ. ನಗರಕ್ಕೆ ಸ್ಟಾಪ್ ನೀಡಿ' ಅಂದಳು. ಬಳ್ಳಾರಿಯ ಡಿ.ಸಿ ನಗರ! ಚಕಿತನಾದೆ. ಈ ಎಳೆಯ ವಯಸ್ಸಿನ ಹುಡುಗಿ ಅಲ್ಲಿಗೇಕೆ? ಮನಸ್ಸು ತಳಮಳಗೊಂಡು ಪ್ರಶ್ನೆಗಳನ್ನು ಕೇಳಲಾರಂಭಿಸಿತು.

ಅವಳದು ತೆಲುಗು ಭಾಷೆ, ನನ್ನದು ಕನ್ನಡ. ಆದರೆ ಭಾವನೆಗಳಿಗೆ ಭಾಷೆ ಅಡ್ಡಿಯಾಗುವುದಿಲ್ಲ ಎಂಬುದು ನನಗೆ ಅಂದೇ ಅರ್ಥವಾಗಿದ್ದು. ಊರು ವಿಜಯವಾಡ (ಡಿ) ನಲ್ಲಮಂಡಲದ ನಲ್ಲಜರ್ಲಾ. ಎಲ್ಲವನ್ನೂ ನನ್ನೊಂದಿಗೆ ಹಂಚಿಕೊಂಡಳು. ಸ್ಟಾಪ್ ಬಂತು, ಇಳಿಸಿದೆ. ನನ್ನತ್ತ ನೋಡಿ ಒಂದೆರಡು ಹನಿ ಕಣ್ಣೀರು ಹಾಕಿದಳು. ಅಂದು ಮನೆಗೆ ಬಂದು ಮಲಗಿದಾಗ ಅವಳ ಮುಗ್ಧ ಕಣ್ಣುಗಳು ನನ್ನನ್ನು ಕಾಡತೊಡಗಿದವು. ಮರುದಿನ ಅದೇ ನಿಲ್ದಾಣದಲ್ಲಿ ಕಾದು ಕುಳಿತೆ. ಯಾವ ಪ್ರಯಾಣಿಕರು ಬಂದು ಕೇಳಿದರೂ `ಆಟೊ ಕೆಟ್ಟು ಹೋಗಿದೆ' ಎಂದು ಸುಳ್ಳು ಹೇಳಿದೆ. ಅಷ್ಟೊತ್ತಿಗೆ ಭಾವನಾ ಬಂದಳು. ಆಟೊದಲ್ಲಿ ಕುಳಿತು `ಮತ್ತದೇ ಜಾಗ' ಎಂದಳು. ಅವಳನ್ನು ಅಲ್ಲಿ ಬಿಟ್ಟು ಮತ್ತೆ ಅವಳ ಬರುವಿಕೆಗಾಗಿ ಕಾದು ಕುಳಿತೆ.

ಸೂರ್ಯ ಜಾರಿದ, ಚಂದ್ರ ಬಂದ. ಭಾವನಾ ಬರಲಿಲ್ಲ. ಇನ್ನೇನು ಹೋಗೊಣ ಎಂದು ಆಟೊ ಸ್ಟಾಟ್ ಮಾಡಿದೆ. ಅಷ್ಟರಲ್ಲಿ ಅವಳು ಬಂದಳು. ದೇಹ ಸೋತು ಹೋಗಿತ್ತು. ಮುಖ ಬಾಡಿತ್ತು, ನಡೆಯಲೂ ಆಗದಷ್ಟು ನಿಶ್ಶಕ್ತಿ ಆವರಿಸಿಕೊಂಡಿತ್ತು. ಮನಸ್ಸು ತಡೆಯಲಿಲ್ಲ. ಅವಳತ್ತ ಓಡಿ ಕೈ ಹಿಡಿದುಕೊಂಡೆ. ಅವಳು ಕೂಡಾ ಗಟ್ಟಿಯಾಗಿ ಹಿಡಿದುಕೊಂಡಳು. ಅದರಲ್ಲಿ ನನ್ನನ್ನು ಬಿಡಬೇಡ ಎಂಬ ವೇದನೆ ಅಡಗಿತ್ತು. ಅವಳ ಕೋಣೆಗೆ ಕರೆದೊಯ್ದೆ. ಊಟದ ವ್ಯವಸ್ಥೆ ಮಾಡಿ, ಔಷಧಿ ತಂದುಕೊಟ್ಟು ಮಲಗುವ ತನಕ ಅಲ್ಲೇ ಇದ್ದೆ. ಅದೆಷ್ಟು ಮೃಗೀಯ ಕಾಮುಕರು ವಿಕೃತವಾಗಿ ಅವಳಲ್ಲಿ ತಮ್ಮ ದಾಹವನ್ನು ತೀರಿಸಿಕೊಂಡಿದ್ದರೋ? ಎಳೆಯ ದೇಹ ಅದನ್ನೆಲ್ಲ ಅದ್ಹೇಗೆ ಭರಿಸಿತೋ ದೇವರೇ ಬಲ್ಲ.

ನಾನು ಅಲ್ಲಿಂದ ಹೊರಟವನೇ ನೇರವಾಗಿ ಮನೆಗೆ ಬಂದು ಮಲಗಿದೆ. ಮನಸ್ಸು ನಿರ್ಧಾರ ಮಾಡಿತು. ಅಂದುಕೊಂಡಂತೆ ತೆರಳಿದೆ. ಭಾವನಾಳನ್ನು ಕೂಗಿದೆ. ಹೊರ ಬಂದಳು. ಅವಳನ್ನು ಕಾಯುತ್ತಿದ್ದ ಧಾಂಡಿಗರು ಅಲ್ಲೇ ಇದ್ದರು. ನನ್ನ ಸ್ನೇಹಿತರಿಂದ ಪಡೆದುಕೊಂಡಿದ್ದ 3000 ರೂಪಾಯಿಯನ್ನು ಅವರಿಗೆ ಕೊಟ್ಟು ಒಂದು ದಿನದ ಮಟ್ಟಿಗೆ ಅವಳನ್ನು ನನ್ನ ವಶಕ್ಕೆ ಪಡೆದುಕೊಂಡೆ. ದಾರಿಯಲ್ಲಿ ಹೋಗುವಾಗ ಸ್ನೇಹಿತರೊಟ್ಟಿಗೆ ಸೇರಿ ಅವಳ ಹಿಂಬಾಲಕರನ್ನು ಚೆನ್ನಾಗಿ ತದುಕಿದೆ. ಅವಳು `ನನ್ನನ್ನು ರಕ್ಷಿಸಿ' ಎಂದು ಪರಿತಪಿಸಿದಳು. ಸುತ್ತಮುತ್ತ ಯಾರೂ ಕಾಣದಷ್ಟು ಕತ್ತಲು. ಅಂದು ರಾತ್ರಿ ನಾವೆಲ್ಲ ಸೇರಿ ಅವಳನ್ನು ಅಲ್ಲಿಂದ ಪಾರು ಮಾಡಿದೆವು. ಅದಾದ ನಂತರ ನಾನು ಒಂದು ವರ್ಷ ಭೂಗತನಾದೆ. ತದನಂತರ ಎಸ್ಸೆಸ್ಸೆಲ್ಸಿ ಪಾಸು ಮಾಡಿಕೊಂಡು ಪಿ.ಯು.ಸಿ. ಮುಗಿಸಿದೆ. ಈಗ ಪದವಿಯನ್ನು ಮುಂದುವರಿಸುತ್ತಿದ್ದೇನೆ. ಅವಳು ಕೂಡ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT