ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೋ ಪರ್ಮಿಟ್: ಸರ್ಕಾರಿ ಯೋಜನೆ ಫಲಾನುಭವಿಗಳ ಪರದಾಟ

Last Updated 16 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಆಟೋರಿಕ್ಷಾಗಳಿಗೆ ಕಳೆದ ಹತ್ತು ವರ್ಷಗಳಿಂದ `ಪರ್ಮಿಟ್~ ನೀಡುತ್ತಿಲ್ಲ. ಒಂದೂವರೆ ವರ್ಷದಿಂದ ಸರ್ಕಾರಿ ಯೋಜನೆಯಡಿ ಮಂಜೂರು ಮಾಡುವ ಆಟೋರಿಕ್ಷಾಗಳಿಗೂ `ಪರ್ಮಿಟ್~ ನೀಡುತ್ತಿಲ್ಲ.
ಬೆಳಗಾವಿಯುಲ್ಲಿ ಓಡಿಸಲೆಂದು ಖಾಸಗಿಯಾಗಿ ಆಟೋಗಳನ್ನು ಕೊಳ್ಳುವುದನ್ನೇ ಚಾಲಕರು ನಿಲ್ಲಿಸಿದ್ದಾರೆ. ಇದೇ ನೀತಿಯನ್ನು ಸರ್ಕಾರಿ ಯೋಜನೆಗಳಿಗೂ ಅನ್ವಯಿಸಿರುವುದರಿಂದ ಆಟೋ ನೀಡುವ ಯೋಜನೆಯನ್ನೇ ಬಂದ್ ಮಾಡಬೇಕಾದ ಸ್ಥಿತಿ ಎದುರಾಗಿದೆ.

2001ರಲ್ಲಿ ಆಟೋ ಚಾಲಕರ ಸಂಘದವರು ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಿರುವುದರಿಂದ ಹೊಸದಾಗಿ ಆಟೋಗಳಿಗೆ `ಪರ್ಮಿಟ್~ ನೀಡಬಾರದು ಎಂದು ಸಾರಿಗೆ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಅದನ್ನೇ ಅಸ್ತ್ರವಾಗಿಸಿಕೊಂಡಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಇಂದಿನವರೆಗೂ ಅನುಮತಿ ನೀಡುತ್ತಿಲ್ಲ.

ಕಳೆದ ಒಂದು ದಶಕದಲ್ಲಿ ಬೆಳಗಾವಿ ನಗರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಹೊಸ, ಹೊಸ ಬಡಾವಣೆಗಳು ತಲೆ ಎತ್ತಿವೆ. ಜನಸಂಖ್ಯೆಯೂ ಹೆಚ್ಚಾಗಿದೆ. ಆದರೆ `ಪರ್ಮಿಟ್~ ಪಡೆದ ಆಟೋಗಳ ಸಂಖ್ಯೆ ಹೆಚ್ಚಾಗಿಲ್ಲ. ಅನಧಿಕೃತ ಆಟೋಗಳ ಸಂಖ್ಯೆಯೇನೂ ಕಡಿಮೆಯಿಲ್ಲ.

`ನಗರದಲ್ಲಿ ಅಂದಾಜು ನಾಲ್ಕು ಸಾವಿರ ಆಟೋಗಳಿವೆ. ಉಳಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಆಟೋಗಳು ಪರ್ಮಿಟ್ ಇಲ್ಲದೇ ಓಡಾಡುತ್ತಿವೆ. ಆದರೆ ಅವುಗಳ ಪರಿಶೀಲನೆಯನ್ನು ಮಾತ್ರ ಮಾಡುವ ಗೋಜಿಗೆ ಮಾತ್ರ ಅಧಿಕಾರಿಗಳು ಹೋಗುತ್ತಿಲ್ಲ~ ಎನ್ನುತ್ತಾರೆ ಆಟೋ ಚಾಲಕ ರಫೀಕ್.

ರಸ್ತೆ ಸುರಕ್ಷಾ ಪ್ರಾಧಿಕಾರದ ಸಭೆಯಲ್ಲಿ ಆಟೋಗಳಿಗೆ ಪರ್ಮಿಟ್ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ. ವರ್ಷದಲ್ಲಿ ಎರಡು ಬಾರಿ ಈ ಸಭೆ ನಡೆಸಬೇಕು ಎಂದಿದೆ. ಆದರೆ ಕಳೆದ ವರ್ಷದಲ್ಲಿ ಒಂದೇ ಒಂದು ಸಭೆಯೂ ನಡೆದಿಲ್ಲ. ಸಭೆ ನೆಪ ಹೇಳಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು  ಪರ್ಮಿಟ್ ಕೇಳಿಕೊಂಡು ಬರುವ ಚಾಲಕರನ್ನು ಸಾಗ ಹಾಕುತ್ತಿದ್ದಾರೆ.

ಸರ್ಕಾರದ ಯೋಜನೆ: ಸರ್ಕಾರದ ಯೋಜನೆಗಳಡಿ ಮಂಜೂರಾಗುವ ಆಟೋಗಳಿಗೂ `ಪರ್ಮಿಟ್~ ಸಿಗುತ್ತಿಲ್ಲ. ಇತ್ತೀಚೆಗೆ ಮಹಾನಗರ ಪಾಲಿಕೆ 50 ಆಟೋಗಳಿಗೆ ಸಾಲ ನೀಡಿದೆ. ಆದರೆ ಅದನ್ನು ಪಡೆದ ಚಾಲಕರು ಅಪ್ಪಣೆ ಪತ್ರಕ್ಕಾಗಿ ನಿತ್ಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆಯುತ್ತಿದ್ದಾರೆ.

`2011 ಏಪ್ರಿಲ್ 25 ರಂದು ನಡೆದಿದ್ದ ಪ್ರಾಧಿಕಾರ ಸಭೆಯಲ್ಲಿ ಸರ್ಕಾರಿ ಯೋಜನೆಗಳಡಿ ಮಂಜೂರಾಗುವ ವಾಹನಗಳಿಗೆ ಪರ್ಮಿಟ್ ನೀಡಬೇಕು ಎಂದು ಆಗಿನ ಜಿಲ್ಲಾಧಿಕಾರಿ ಡಾ.ಏಕ್‌ರೂಪ್ ಕೌರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ ಆದೇಶಿಸಿದ್ದಾರೆ. ಆದರೆ ಅದು ಜಾರಿಯಾಗುತ್ತಿಲ್ಲ~ ಎಂದು ಜೈಭೀಮ ಆಟೋರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಉಪಾಧ್ಯಕ್ಷ ಸಂಜಯ ನಾಯಕ ದೂರುತ್ತಾರೆ.

`ಸಬ್ಸಿಡಿ ಹಾಗೂ ಸಾಲ ತೆಗೆದುಕೊಂಡು ಆಟೋಗಳನ್ನು ತೆಗೆದುಕೊಂಡಿದ್ದೇವೆ. ಆದರೆ ಪರ್ಮಿಟ್ ನೀಡುತ್ತಿಲ್ಲ. ಪರಿಣಾಮ ಆಟೋಗಳನ್ನು ಮನೆಯಲ್ಲಿ ನಿಲ್ಲಿಸಬೇಕಾಗಿದೆ. ಜೊತೆಗೆ ಸಾಲದ ಕಂತನ್ನು ಹೇಗೆ~ ಎಂಬ ಪ್ರಶ್ನೆ ಅವರದ್ದು.

`2008-09ರಲ್ಲಿ 40 ಆಟೋಗಳಿಗೆ ಪರ್ಮಿಟ್ ಅನುಮತಿ ಪಡೆದುಕೊಂಡಿದ್ದೇವು. ಅವುಗಳ ಮೇಲೆಯೇ ಕಳೆದ ವರ್ಷದವರೆಗೆ ಆಟೋಗಳನ್ನು ನೀಡಲಾಗಿದೆ. ಹೊಸ ಪರ್ಮಿಟ್ ದೊರೆಯದ್ದರಿಂದ ಈ ವರ್ಷ ಆಟೋಗಳಿಗೆ ಸಾಲ ಮಂಜೂರು ಮಾಡಿಲ್ಲ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ನೀಡಲಾಗುವುದು~ ಎನ್ನುತ್ತಾರೆ ಅಲ್ಪಸಂಖ್ಯಾತರ ನಿಗಮದ ಅಧಿಕಾರಿ ಬಸವರಾಜ ಹಾದಿಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT