ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೋಮೊಬೈಲ್ ಲವ್!

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಏನಿದು ಆಟೋಮೊಬೈಲ್ ಲವ್? ಇದು ಆಟೋಮೊಬೈಲ್ ಬಗ್ಗೆ ಯುವಕರಿಗೆ ಇರುವ ಲವ್ ಖಂಡಿತಾ ಅಲ್ಲ. ಯುವಕರಿಗೆ, ಯುವತಿಯರಿಗೆ ವಾಹನಗಳ ಮೇಲೆ ಪ್ರೀತಿಯಿರುವುದು ನಿಜ. ಆದರೆ ಈ ವಾಹನಗಳಿಂದಲೇ ಪ್ರೀತಿ ಬೆಸೆಯುವ ಸೇತುವೆ ಇರುವುದೇ ಇಲ್ಲಿನ ಅಚ್ಚರಿ.

ಹೌದು, ಆಟೋಮೊಬೈಲ್ ಇಲ್ಲಿ ಪ್ರೀತಿ ಕಟ್ಟುವ ಎಂಜಿನಿಯರ್. ಆಟೋಮೊಬೈಲ್‌ನಿಂದಲೇ ಗಂಡು- ಹೆಣ್ಣಿನ ನಡುವೆ ಆಕರ್ಷಣೆ ಆರಂಭವಾಗಿ ಪ್ರೀತಿಯಾಗಿ ಮಾರ್ಪಾಟಾಗಿ, ಸಂಬಂಧ ಬೆಸೆದುಕೊಳ್ಳುವ ಅದ್ಭುತ ಕ್ರಿಯೆಯೇ ಈ ಆಟೋಮೊಬೈಲ್ ಲವ್!

ಆಕರ್ಷಣೆಯೇ ಮೊದಲ ಮೆಟ್ಟಿಲು!

ಗಂಡು- ಹೆಣ್ಣಿನ ನಡುವೆ ಪ್ರೀತಿ ಸಂಬಂಧ ಬೆಳೆಯುವ ಮುನ್ನ, ಆಟೋಮೊಬೈಲ್ ಮೇಲಿನ ಆಕರ್ಷಣೆಯೇ ಇಲ್ಲಿ ಪ್ರೀತಿಯ ಮೊದಲ ಹೆಜ್ಜೆ. ಯುವಕರಿಗೆ ಆಟೋಮೊಬೈಲ್ ಇಷ್ಟ ನಿಜ. ಆದರೆ ಯಾವುದು ಇಷ್ಟ? ಲಕ್ಷ ಲಕ್ಷ ರೂ. ಬೆಲೆ ಬಾಳುವ ಸ್ಕಾರ್ಪಿಯೋ, ಇನ್ನೋವಾ, ಫಾರ್ಚೂನರ್ ಕಾರೇ? ಐಷಾರಾಮದಲ್ಲಿ ಅಗ್ರಗಣ್ಯವಾಗಿರುವ ಮರ್ಸಿಡೆಸ್ ಬೆನ್ಝೇ? ಖಂಡಿತಾ, ಈ ಕೋಟಿ ಮುಟ್ಟುವ ಕಾರುಗಳಿರಲಿ, ಲಕ್ಷ ರೂಪಾಯಿಯ ನ್ಯಾನೋ ಸಹಿತ ಯುವಕರಿಗೆ ಇಷ್ಟವಿಲ್ಲ.

ಯಾಕೆಂದರೆ ಯುವಕರ ಮೆಚ್ಚಿನ ಥ್ರಿಲ್ ಈ ನಾಲ್ಕು ಚಕ್ರದ ಕಾರುಗಳಲ್ಲಿಲ್ಲ. ಈ ಥ್ರಿಲ್ ಇರುವುದು ಕೇವಲ ಎರಡು ಚಕ್ರದ ಬೈಕ್‌ನ ಮೇಲೆ. ಬೈಕ್‌ನ ಮೇಲೆ ಕುಳಿತು ಜಗತ್ತನ್ನೇ ಮರೆಯುವ ಶ್ರೇಷ್ಠ ಅವಕಾಶ ಇನ್ನೆಲ್ಲಿ ಸಿಗಲು ಸಾಧ್ಯ. ಇದು ಯುವಕರ ಸಮರ್ಥನೆ!

ಹೌದು, ಯುವಕರಿಗೆ ಬೈಕ್‌ನ ಮೇಲೆ ಸವಾರಿ ಮಾಡಿದರೆ ಸಿಗುವ ಥ್ರಿಲ್ ಕಾರ್‌ನಲ್ಲಿ ಸಿಗುವುದಿಲ್ಲ. ಕಾರು ಕೈಗೆಟುಕದ್ದು ಎನ್ನುವುದು ಇಲ್ಲಿ ಮೂಲ ಕಾರಣವಲ್ಲ. ಬೈಕ್ ಕಾರಿಗಿಂತಲೂ ವೇಗವಾಗೇನೂ ಹೋಗುವುದಿಲ್ಲ.
 
ಆದರೆ, ಬೈಕ್‌ನಲ್ಲಿ ಕುಳಿತು ಎಕ್ಸಿಲರೇಟರ್ ಕೊಟ್ಟರೇ ಸಾಕು, ಆ ಸ್ಪೀಡ್‌ನ ಅನುಭವ ಮೈಯೆಲ್ಲ ಆವರಿಸುತ್ತದೆ. ವೇಗದ ನೇರ ಅನುಭವ ಹೊಸ ಜೀವ ಕೊಡುತ್ತದೆ. ಅದರಲ್ಲೂ ಜೀವನವನ್ನು ತಮ್ಮ ಹೊಚ್ಚ ಹೊಸ ಕಣ್ಣುಗಳಲ್ಲಿ ನೋಡಲಾರಂಭಿಸಿರುವ ಯುವಕರಿಗಂತೂ, ಬೈಕ್ ಬಿಟ್ಟರೆ ಬೇರೇನೋ ಮಜ ನೀಡದು.
 
ಹಾಗೆಂದೂ ನಮ್ಮ ಹುಡುಗಿಯರೇನೂ ಕಡಿಮೆಯಿಲ್ಲ. ಸ್ಕೂಟಿ ಏರಿ ಸಾಗುವ ಹುಡುಗಿಯರಿಗೆ ಇರುವ ಡಿಮಾಂಡ್ ಇನ್ನಾರಿಗಿದೆ? ಹುಡುಗರ ಕಣ್ಣಲ್ಲಿ ಅಪ್ಸರೆಯಾಗಿ, ಹುಡುಗಿಯರಿಗೆ ಸ್ಕೂಟಿ ಓಡಿಸುವುದೇ ಮಜವಾಗಿ ಜಗತ್ತನ್ನು ಮರೆಯುವ ಅವಕಾಶವೇ ಈ ಎರಡು ಚಕ್ರಗಳಲ್ಲಿರುವುದು ನಿಜಕ್ಕೂ ಮುದ ನೀಡುವ ವಿಚಾರವಲ್ಲವೇ?

ಚಲ್ ಮೇರಿ ಲೂನಾ!
ಈ ಸ್ಲೋಗನ್‌ನ್ನು ಕೇಳೇ ಇರುತ್ತೀರ ಅಲ್ಲವೇ? 80 ರ ದಶಕದಲ್ಲಿ ಕೈನೆಟಿಕ್ ಲೂನಾ ಎಂದರೆ ಪ್ರತಿಷ್ಠೆಯ ಸಂಗತಿಯಾಗಿತ್ತು. 2006ರ ವರೆಗೂ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಲೂನಾ, ಬೈಕ್‌ಗಳ ಭೋರ್ಗರೆತದಲ್ಲಿ ಮರೆಯಾಯಿತು. ಹೀರೋ ಹೋಂಡಾದ ಸಿಬಿಝೀ ನಂತರ ಬಂದ ಬಜಾಜ್‌ನ ಪಲ್ಸರ್ ಪ್ರೀತಿ ಲೋಕದಲ್ಲಿ ಯುವಕರನ್ನೂ, ರಸ್ತೆಗಳನ್ನೂ ಆಳಿವೆ ಎಂದರೆ ತಪ್ಪಾಗಲಾರದು.
 
ಹುಡುಗಿಯರಿಗೂ ಅಷ್ಟೆ ಕೈನೆಟಿಕ್ ಹೋಂಡಾ ಒಂದೇ ಇದ್ದ ಕಾಲದಲ್ಲಿ, ಅದೇ ಯುವತಿಯರ ರಾಣಿ. ನಂತರ ಬಂದ ಹೋಂಡಾ ಆಕ್ಟಿವಾ, ಕೊಂಚ ಪ್ರಸಿದ್ಧಿ ಕಂಡಿರುವ ಹೋಂಡಾ ಆಕ್ಸಿಸ್, ಹೀರೋ ಹೋಂಡಾ ಪ್ಲೆಷರ್ ಪಟ್ಟದ ರಾಣಿಯರಾಗಿ ಮರೆಯುತ್ತಿವೆ. ಈ ಬೈಕ್- ಸ್ಕೂಟರ್‌ಗಳ ನಡುವೆಯೇ ಪ್ರೀತಿ ಬೆಳೆದು, ಮಧುರ ಬಾಂಧವ್ಯ ಬೆಳೆದಿರುವ ರೀತಿಯೇ ಇಲ್ಲಿ ಚೆನ್ನ.

ಹಿಂದಿನ ಸೀಟು, ಪ್ರಿಯತಮೆಗೆ ರಿಸರ್ವ್!
ಯಾವುದೇ ಹುಡುಗಿಗೆ ತನ್ನ ಪ್ರಿಯತಮನ ಬಳಿ ಬೈಕೊಂದು ಇರಬೇಕು. ನಾನು ಅವನ ಹಿಂದೆ ಕುಳಿತು, ತನ್ನ ಬಾಹುಗಳಿಂದ ಅವನ ಸೊಂಟ ಬಳಸಬೇಕು. ನಮ್ಮ ಮುಂಗುರುಗಳು ಅವನ ಕೆನ್ನೆಗೆ ತಾಗಬೇಕು ಎಂಬ ಕನಸು ಕಂಡೇ ಕಾಣುತ್ತಾಳೆ. ಹುಡುಗನಿಗೂ ಅಷ್ಟೇ ತನ್ನ ಬಳಿ ಬೈಕ್ ಇರಬೇಕು. ಅದು ಸ್ಪೋರ್ಟ್ಸ್ ಬೈಕೇ ಆಗಿರಬೇಕು.

ನನ್ನ ಬೈಕ್‌ನ ಹಿಂದಿನ ಸೀಟ್ ನನ್ನ ಪ್ರಿಯತಮೆಗೇ ಮೀಸಲಾಗಿರಬೇಕು ಎಂದು ಬಯಸಿರುತ್ತಾನೆ? ಇದು ಆಕರ್ಷಣೆಯ ಮೊದಲ ಹೆಜ್ಜೆಯಾಗಿ, ಕಾಲೇಜುಗಳಲ್ಲಿ ಪ್ರೇಮ ಬೆಸೆಯುವ ಮೆಟ್ಟಿಲಾಗೂ ಮಾರ್ಪಡುವುದು ಎಲ್ಲೆಡೆ ಕಾಣಸಿಗುವಂಥದ್ದು.
 
ಇಲ್ಲಿ ನಿಜ ಪ್ರೀತಿಯಲ್ಲದೇ ಆಕರ್ಷಣೆಯ ಪ್ರೀತಿಯೇ ಆಗಿದ್ದರೂ, ಮುಗ್ಧ ಹದಿಹರೆಯದ ಯುವಕರಲ್ಲಿ ಕಪಟ ಚಿಂತನೆ ಎಳ್ಳಷ್ಟೂ ಇರದು. ಯಾವುದೇ ಪ್ರತಿಫಲಾಂಕ್ಷೆಗಳ ನಿರೀಕ್ಷೆಯಿಲ್ಲದೇ ಮುಗ್ಧವಾಗಿ ಪ್ರೀತಿಸುವವರು ಈ ಹದಿಹರೆಯದ ತರುಣರೇ!

ನನ್ನ ಪ್ರಿಯತಮನ ಬಳಿ ಈ ಬೈಕ್ ಇರಲಿ!
ಹಿಂದೆ ಇದ್ದದ್ದೇ ಎರಡು ಬೈಕ್. ಒಂದು ಬುಲೆಟ್. ಇನ್ನೊಂದು ಯಜ್ಡಿ. ಬುಲೆಟ್ ಪೊಲೀಸರಿಗೆ, ಸೈನ್ಯದವರಿಗೆ ನೀಡುತ್ತಿದ್ದ ಕಾರಣ, ಯುವತಿಯರಿಗೆ ಅದರ ಬಗ್ಗೆ ಆಕರ್ಷಣೆಗಿಂತಲೂ ಹೆದರಿಕೆಯೇ ಹೆಚ್ಚು! ಈಗಲೂ ಅದು ಮುಂದುವರೆದಿದೆ.

ಯಜ್ಡಿ ಆಗಿನ ಕಾಲದ ಫೇವರೇಟ್ ಆದರೂ, ಕಾಲಾಂತರದಲ್ಲಿ ಹೊಸ ಹೊಸ ಆಧುನಿಕ ಬೈಕ್‌ಗಳು ಸ್ಥಾನ ಆಕ್ರಮಿಸಿವೆ. ಆದರೆ ಈಗಿರುವ ಬೈಕ್‌ಗಳೆಷ್ಟು. ಅಬ್ಬಬ್ಬಾ ಆಯ್ಕೆ ಮಾಡಲಿಕ್ಕೆ ಕಷ್ಟವಾಗುವಷ್ಟು ಸಂಖ್ಯೆಯಲ್ಲಿವೆ. ಆದರೂ ನಮ್ಮ ಯುವತಿಯರಿಗೆ ತಮ್ಮ ಪ್ರಿಯತಮನ ಬಳಿ ಇದೇ ಬೈಕ್ ಇರಬೇಕು ಎಂಬ ಫೇವರೇಟ್ ಲಿಸ್ಟ್ ಅಂತೂ ಇದೆ. ಇದನ್ನು ಟಾಪ್ ಟೆನ್ ಲಿಸ್ಟ್ ಮಾಡಿ ನೋಡೋಣ.
1. ಬಜಾಜ್ ಪಲ್ಸರ್
2. ಟಿವಿಎಸ್ ಅಪಾಚೆ
3. ಹೀರೋ ಸಿಬಿಸಿ ಎಕ್ಸ್‌ಸ್ಟ್ರೀಂ
4. ಹೀರೋ ಕರಿಜ್ಮಾ
5. ಬಜಾಜ್ ಅವೆಂಜರ್
6. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
7. ಹೋಂಡಾ ಸಿಬಿಆರ್ 250
8. ಹೋಂಡಾ ಯೂನಿಕಾರ್ನ್
9. ಹೀರೋ ಪ್ಯಾಷನ್
10. ಹೋಂಡಾ ಡ್ಯಾಜ್ಲರ್

ಇವೆಲ್ಲವೂ ಹೆಚ್ಚೂ ಕಡಿಮೆ ಪ್ರೀಮಿಯಂ ಸೆಗ್ಮೆಂಟ್‌ನ ಬೈಕ್‌ಗಳೇ. ಯುವತಿಯ ಮನವನ್ನಾಳುವ ಸ್ವಪ್ನ ರಥಗಳು. ಆದರೆ ಇವನ್ನು ತಮ್ಮ ಪ್ರಿಯತಮ ಹೊಂದಲೇ ಬೇಕು ಎಂದೇನಿಲ್ಲ. ಏಕೆಂದರೆ ಇವು ಕೇವಲ ಫೇವರೇಟ್ ಬೈಕ್‌ಗಳಷ್ಟೇ.
 
ಶುದ್ಧ ಮನಸ್ಸಿನ ಯುವತಿಯರು ಸ್ಪ್ಲೆಂಡರ್ ಬೈಕ್ ಇದ್ದರೂ ಆಯಿತು ಎಂಬ ಮನಸ್ಥಿತಿಯನ್ನೂ ಹೊಂದಿರುತ್ತಾರೆ. ಆದರೆ ಬೈಕ್ ಮಾತ್ರ ಇರಲೇಬೇಕು. ತನ್ನ ಪ್ರಿಯಮನ ಹಿಂದೆ ಕುಳಿತು ಲಾಂಗ್ ಡ್ರೈವ್ ಹೋಗುವ, ಪಿಕ್‌ನಿಕ್ ಮಾಡುವ ಅವಕಾಶ ಬೇಕೇ ಬೇಕಲ್ಲ?

ಹುಡುಗರ ಫೇವರೇಟ್ ಯಾವುದು?
ಹುಡುಗರ ಫೇವರೇಟ್ ಹುಡುಗಿಯಷ್ಟೇ. ಸಾಮಾನ್ಯವಾಗಿ ತನ್ನ ಪ್ರಿಯತಮೆಯ ಬಳಿ ಇಂಥದ್ದೇ ಸ್ಕೂಟರ್ ಇರಲೇಬೇಕು ಎಂಬ ನಿರೀಕ್ಷೆ ಇರುವುದಿಲ್ಲ. ಇರದಿದ್ದರೂ ಆಯಿತು ಎನ್ನುವವರೇ ಹೆಚ್ಚು. ಆದರೂ ಇದ್ದರೆ ಅನುಕೂಲ ಉಂಟು ಎಂಬ ನೋಟವೂ ಕೆಲವರಿಗೆ ಇದ್ದೀತು.

ಸಮಯಕ್ಕೆ ಸರಿಯಾಗಿ ಭೇಟಿಯಾಗುವ, ತಡವಾದರೆ ಬೇಗ ಮನೆಗೆ ತಲುಪುವ ಅವಕಾಶ ತನ್ನ ಪ್ರಿಯತಮೆಗೂ ಇರಲಿ ಎಂಬ ಕಾಳಜಿ! ಆದರೂ ಹುಡುಗರ ಫೇವರೇಟ್ ಈಗ ಹೆಚ್ಚಾಗಿ ಹೋಂಡಾ ಆಕ್ಟಿವಾ. ಏವಿಯೇಟರ್ ಅಥವಾ ಡಿಯೋವನ್ನೂ ಇಷ್ಟ ಪಡುತ್ತಾರೆ. ಟಿವಿಎಸ್  ಸ್ಕೂಟಿ ಮಾತ್ರ ಆಲ್ ಟೈಂ ಫೇವರೇಟ್. ಆಕ್ಟಿವಾವನ್ನು ಹೊಂದುವ ಯುವಕರೂ ಇದ್ದಾರೆ! ಆದರೆ ಅಪಘಾತದ ಎಚ್ಚರಿಕೆಯೂ ಇರಲಿ

ಇದು ರಸ್ತೆಯಲ್ಲಿ ಬೈಕ್- ಸ್ಕೂಟರ್ ನಡುವೆ ಆಗುವ ಅಪಘಾತವಲ್ಲ. ಜೀವನದಲ್ಲಾಗುವ ಅಪಘಾತ. ಇಲ್ಲಿ ದೇಹಕ್ಕೆ ನೋವಾಗದು. ಹೃದಯಕ್ಕೆ ಆಗುವ ನೋವು. ಜೀವನವೇ ಹಾಳಾಗುವ ಅಪಘಾತವಿದು. ಸಾಮಾನ್ಯವಾಗಿ ಕಾಲೇಜು ಹಂತದಲ್ಲೆೀ ಈ ಆಟೋಮೊಬೈಲ್ ಲವ್ ಆಗುವುದು. ಅಪಘಾತಕ್ಕೀಡಾಗುವವರೂ ಕಾಲೇಜು ಮಟ್ಟದ ಯುವಕ- ಯುವತಿಯರೇ.

ಅದರಲ್ಲೂ ಮಧ್ಯಮ ವರ್ಗದ ಯುವತಿಯರಿಗೆ ಅದೇಕೋ ಏನೋ ಬೈಕ್ ಎಂದರೆ ಹುಚ್ಚು. ತನ್ನ ಲವರ್ ಬಳಿ ಬೈಕ್ ಇದ್ದರೆ ಸಾಕು. ಇನ್ನೇನು ಬೇಡ ಎಂಬ ಮನಸ್ಥಿತಿ ಇರುತ್ತದೆ. ತಮ್ಮ ಮನೆಯಲ್ಲಿ ಸಿಗದ ಐಷಾರಾಮ ತನ್ನ ಪ್ರಿಯತಮನಿಂದ ಸಿಗಲಿ ಎಂಬ ಆಸೆಯೂ ಮನದಲ್ಲಿ ಇರುತ್ತದೆ.

ಆದರೆ ಬೈಕ್ ಇದ್ದರೆ ಸಾಕು ಬೇರೇನೋ ಬೇಡ ಎಂಬ ಮುಗ್ಧತೆಯೇ ಪೆದ್ದುತನವಾಗಿ, ಬೇಸ್ತು ಬೀಳುವ ಹುಡುಗಿಯರು ಹೆಚ್ಚು. ಬೈಕ್ ಇದ್ದವ ಒಳ್ಳೆಯವನೋ, ಕೆಟ್ಟವನೋ ಎಂಬುದನ್ನು ನಿರ್ಧರಿಸುವ ಶಕ್ತಿಯಾಗಲಿ, ಜಾಣ್ಮೆಯಾಗಲಿ ಇಲ್ಲದ ವಯಸ್ಸು, ಅನನುಭವ! ಒಳ್ಳೆಯವ ಸಿಕ್ಕಲ್ಲಿ ಭಯವಿಲ್ಲ. ಕೆಟ್ಟವ ಸಿಕ್ಕರೆ?

ಅಪಘಾತವಾಗುವುದೇ ಇಲ್ಲಿ. ಶ್ರೀಮಂತ ಮನೆತನದ ಹುಡುಗರಿಗೆ ಸಾಮಾನ್ಯವಾಗಿ ಕಾಲೇಜು ಮಟ್ಟದಲ್ಲೆೀ ದೊಡ್ಡ ದೊಡ್ಡ ಬೈಕ್‌ಗಳನ್ನು ಪೋಷಕರು ಪ್ರೀತಿಯಿಂದ ಕೊಡಿಸಿರುತ್ತಾರೆ. ಪೆಟ್ರೋಲ್, ಬೇರೆ ಖರ್ಚಿಗೆಂದು ಕಿಸೆ ತುಂಬಾ ಹಣವನ್ನೂ ತುಂಬಿರುತ್ತಾರೆ.

ಕೈಯಲ್ಲಿ ಕಾಸು, ಜತೆಗೊಂದು ಬೈಕ್ ಇದ್ದು, ಹುಡುಗಿಯರನ್ನು ಆಕರ್ಷಿಸುವುದು ಕಷ್ಟವೇನಲ್ಲ. ಬೇಸ್ತು ಬಿದ್ದ ಹುಡುಗಿಗೆ ಮೋಸ ಮಾಡಲು ಹೇಸದ ಹಣದ ಮದವೂ ಇದ್ದೀತು. ಕಾಲೇಜು ಮುಗಿಯುತ್ತಿದ್ದಂತೆ, ಪ್ರೀತಿಯೂ ಮುಗಿದು, ಆರಂಭದಲ್ಲಿದ್ದ ಪ್ರೀತಿ ದ್ವೇಷವಾಗಿ ಪರಿಣಮಿಸಿ ಬೆನ್ನು ತಿರುಗಿಸಿ ಹೋಗುವ ಪ್ರವೃತ್ತಿಯೂ ಹೆಚ್ಚಿದೆ. ಹುಡುಗಾಟದ ಮನಸ್ಸಿನ ಹುಡುಗಿಯರಿಗೆ ಆಘಾತವಾಗದೇ ಹೋದರೂ, ಸೂಕ್ಷ್ಮ ಮನಸ್ಸಿನ ಹುಡುಗಿಯರ ಮನಸ್ಸು ಒಡೆದು ಜೀವನ ಹಾಳಾಗುವುದರಲ್ಲಿ ಎರಡು ಮಾತಿಲ್ಲ.

ಹುಡುಗರೂ ಮೋಸ ಹೋದಾರು!

ಮೋಸ- ಕಪಟಕ್ಕೆ ಲಿಂಗವಿಲ್ಲ. ಹುಡುಗಿಯರಲ್ಲೂ ಒಳ್ಳೆಯವರು- ಕೆಟ್ಟವರೂ ಇರಬಹುದಲ್ಲವೇ? ಬೈಕ್ ಇದ್ದರೆ ಹುಡುಗಿ ಸಿಗುತ್ತಾಳೆ ಎಂದು ಪೋಷಕರನ್ನು ಕಾಡುವ ಮಧ್ಯಮ ವರ್ಗದ ಯುವಕರು, ಓದಿನ ಕಡೆಗೂ ಗಮನ ನೀಡದೇ, ಪ್ರೀತಿಯನ್ನೂ ಮಾಡಲಾಗದೇ ಅತೃಪ್ತ ಆತ್ಮಗಳಾಗಿ ಅಲೆಯುತ್ತಾರೆ. ಕಾಡಿಸಿ ಬೈಕ್ ಕೊಂಡು, ಹುಡುಗಿ ಸಿಕ್ಕರೂ, ಐಷಾರಾಮ ಬಯಸುವ ಹುಡುಗಿ ಬಣ್ಣ ಚಿಟ್ಟೆಯಾಗಿ, ಮತ್ತಷ್ಟು ಐಷಾರಾಮ ಬಯಸಿ ಬೇರೆ ಹೂವಿನ ಮಕರಂದ ಬಯಸಿ ಹೋದಾಗ, ದೇವದಾಸರೂ ಆಗುತ್ತಾರೆ!

ಡೇಟಿಂಗ್ ಎಂಬ ಚೀಟಿಂಗ್!
ಲವ್ ಮಾಡಿದರೆ ಮದುವೆ. ಇಲ್ಲವಾದರೆ ಮೋಸ ಎಂಬ ಮಾತು ಅರಿತ ಕೆಲವು ಯುವಕ- ಯುವತಿಯರು ಪ್ರೀತಿ ಎಂಬ ಎರಡಕ್ಷರಕ್ಕೆ ಬೀಳದೇ, ಡೇಟಿಂಗ್ ಎಂಬ ಮೂರಕ್ಷರ ಪಠಿಸಲು ಶುರು ಮಾಡಿದ್ದಾರೆ! ಇದಕ್ಕೆ ಪ್ರೀತಿಯೂ ಬೇಡ. ಬದ್ಧತೆಯಂತೂ ಬೇಡವೇ ಬೇಡ. ಬೇಕಿರುವುದು ಕೇವಲ ಆಕರ್ಷಣೆ. ಕೈಯಲ್ಲೊಂದಿಷ್ಟು ಹಡಬಿಟ್ಟಿ ಹಣ.

ಡೇಟಿಂಗ್ ಒಂದು ದಿನಕ್ಕೇ ಇರಬಹುದು, ಒಂದು ಡಿನ್ನರ್‌ಗೆ ಇರಬಹುದು, ಒಂದು ವರ್ಷಕ್ಕೇ ಇರಬಹುದು. ಆದರೆ ಶಾಶ್ವತವಂತೂ ಖಂಡಿತಾ ಅಲ್ಲ. ಪಾಶ್ಚಿಮಾತ್ಯರಲ್ಲಿ ಕೇವಲ ಸ್ನೇಹಕ್ಕೆಂದು ಪ್ರಾರಂಭವಾದ, ಅವರ ಸಂಸ್ಕೃತಿಗೆ ಸೀಮಿತವಾದ ಪ್ರಾಮಾಣಿಕ ಸಂಬಂಧ, ಇಲ್ಲಿ ಮೋಜಿಗಾಗಿ ಪರಿವರ್ತಿತಗೊಂಡು ಸೆಕ್ಸ್‌ವರೆಗೂ ತಲುಪುವ, ನಂತರ ಹೊಸ ಡೇಟ್ ಆರಂಭಿಸುವ ಪರಿಪಾಠ ಕಾಲೇಜು ಯುವಕರಲ್ಲಿ ಹೆಚ್ಚಾಗಿದೆ. ಇದಕ್ಕಂತೂ ಆಟೋಮೊಬೈಲ್ ಬೇಕೇ ಬೇಕು. ಶ್ರೀಮಂತ ಯುವಕರಲ್ಲಿ ಬೈಕ್, ಸ್ಕೂಟರ್ ಬಿಟ್ಟು ಹಾಕಿ, ಕಾರ್ ಇಲ್ಲದಿದ್ದರೆ ಡೇಟಿಂಗ್ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಮುಂದಿಡುತ್ತಾರೆ?

ಲವ್‌ಗೆ ಆಟೋಮೊಬೈಲ್ ಬೇಡ!

ಪ್ರೀತಿಸಲು ಬೇಕಿರುವುದು ಸ್ವಚ್ಛ ಮನಸ್ಸೇ ಹೊರತು, ಆಟೋಮೊಬೈಕ್ ಖಂಡಿತಾ ಅಲ್ಲ. ಅದೇನಿದ್ದರೂ ಸಂಚಾರದ ಸಾಧನವಷ್ಟೇ. ಬೈಕ್, ಸ್ಕೂಟರ್, ಕಾರುಗಳ ಮೇಲೇ ಪ್ರೀತಿ ಬೆಳೆಸಿಕೊಳ್ಳುವ ಯುವಕ- ಯುವತಿಯರೂ ಇದ್ದಾರೆ. ಅವರಿಗೆ ಪ್ರಿಯತಮನೂ ಬೇಡ, ಪ್ರಿಯತಮೆಯೂ ಬೇಡ. ಅವರಿಗೆ ಅವರ ವಾಹನವೇ ಜೀವ. ಅದು ಬೇರೆಯದೇ ವಿಷಯ.

ಆದರೆ ಗಂಡು- ಹೆಣ್ಣಿನ ನಡುವಿನ ಪ್ರೀತಿ ಕೇವಲ ಕಾಮದ ಆಕರ್ಷಣೆಯಲ್ಲ. ಒಬ್ಬರಿಗೆ ಒಬ್ಬರು ಜೀವನದ ಕೊನೆವರೆಗೂ ಆಗುವ ಕಾಳಜಿ, ಆಕರ್ಷಣೆ. ಆಟೋಮೊಬೈಲ್ ಸಂಬಂಧ ಬೆಸೆಯಲಿ, ಮುರಿಯದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT