ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಚುರುಕಿಗೆ ಯತ್ನ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿಯಾಗಿ ಎರಡೂವರೆ ತಿಂಗಳ ನಂತರವಾದರೂ ಡಿ.ವಿ. ಸದಾನಂದಗೌಡರು ತಮ್ಮ ಆಡಳಿತಕ್ಕೆ ಕಾಯಕಲ್ಪ ನೀಡಲು `ನಾಗರಿಕ ಸನ್ನದು~ ರೂಪಿಸಿ ಜಾರಿಗೆ ತರಲು ಆಸಕ್ತಿ ವಹಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಉದ್ದೇಶಿತ ಕಾರ್ಯಕ್ರಮದಂತೆ ಸಾರ್ವಜನಿಕರ ಕೆಲಸವನ್ನು ಹದಿನೈದು ದಿನಗಳ ಒಳಗೆ ಮಾಡಿಕೊಡದ ಅಧಿಕಾರಿ ಸಂಬಂಧಪಟ್ಟ ನಾಗರಿಕರಿಗೆ ಪ್ರತಿ ದಿನ 100 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಅಧಿಕಾರಿ ತನ್ನ ತಪ್ಪಿಗೆ ದಂಡ ತೆರುವಂತಾದರೆ ಮುಂದೆ ಆತನ ಸೇವೆಯಲ್ಲಿ ಅದು ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಆದ್ದರಿಂದ ಇದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಈ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತಂದರೆ ಮೈಗಳ್ಳ ಮತ್ತು ಹಣಕ್ಕಾಗಿ ಜನರನ್ನು ಗೋಳಾಡಿಸುವ ಸರ್ಕಾರಿ ಸಿಬ್ಬಂದಿಗೆ ಚುರುಕು ಮುಟ್ಟಲಿದೆ. ಇಂತಹದೊಂದು ವ್ಯವಸ್ಥೆಯನ್ನು ಮೊದಲು ತಮ್ಮ ಕಾರ್ಯಾಲಯದ ಮೂಲಕ ಆರಂಭಿಸುವ ಅವರ ಆಶಯ ಮೆಚ್ಚುವಂತಹದ್ದು. `ನಾಗರಿಕ ಸನ್ನದು~, ಆಡಳಿತ ವ್ಯವಸ್ಥೆಯಲ್ಲಿ ಗುಣಮಟ್ಟ ಕಾಪಾಡುವುದಲ್ಲದೆ ಪಾರದರ್ಶಕ, ಉತ್ತರದಾಯಿತ್ವ ಮತ್ತು ಕೆಂಪುಪಟ್ಟಿಯ ವಿಳಂಬ ನೀತಿಯನ್ನು ನಿವಾರಿಸಲು ಸಹಕಾರಿಯಾಗುತ್ತದೆ. ಕಡತ ವಿಲೇವಾರಿಗೆ ಹೆಚ್ಚು ಆದ್ಯತೆ ನೀಡಿರುವ ಸದಾನಂದಗೌಡರು, ಉದ್ದೇಶಿತ `ನಾಗರಿಕ ಸನ್ನದು~ ವ್ಯವಸ್ಥೆಯನ್ನು ಎಲ್ಲ ಸಚಿವಾಲಯಗಳಿಗೂ, ವಿಶೇಷವಾಗಿ ಜನಸಂಪರ್ಕ ಇರುವ ಕಂದಾಯ, ಶಿಕ್ಷಣ, ಆರೋಗ್ಯ, ವಿದ್ಯುತ್, ಆಹಾರ ಮತ್ತು ನಾಗರಿಕ ಪೂರೈಕೆಯಂತಹ ಪ್ರಮುಖ ಇಲಾಖೆಗಳಿಗೂ ಆದಷ್ಟು ಬೇಗನೆ ವಿಸ್ತರಿಸಬೇಕು. ಈ ವ್ಯವಸ್ಥೆ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು.

`ನಾಗರಿಕ ಸನ್ನದು~ (ಸಿಟಿಜನ್ಸ್ ಚಾರ್ಟರ್) ಕಲ್ಪನೆಯು ಜನಲೋಕಪಾಲ ಕರಡು ಮಸೂದೆಯಲ್ಲೂ ಸೇರಿರುವುದು ಗಮನಾರ್ಹ. ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವುದಕ್ಕೆ ಇಂತಹ ವ್ಯವಸ್ಥೆಯಿಂದ ಮಾತ್ರ ಸಾಧ್ಯವಾಗಬಹುದು. ಈಗಾಗಲೇ ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಇಂತಹ ಶಕ್ತಿಯನ್ನು ನೀಡಿದೆ. ಆದರೂ ರಂಗೋಲಿ ಕೆಳಗೆ ನುಸುಳುವ ಅಧಿಕಾರಿ ಸಿಬ್ಬಂದಿ ಹಲವು ಕುಂಟು ನೆಪಗಳನ್ನು ಮತ್ತು ಹಾರಿಕೆ ಉತ್ತರ ನೀಡಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ತಂತ್ರಗಾರಿಕೆಯನ್ನು ಕಂಡುಕೊಂಡಿದ್ದಾರೆ. ಕಾನೂನು ಹೇಳುವುದು ಒಂದಾದರೆ ಅದನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುವ ಪ್ರಳಯಾಂತಕ ಅಧಿಕಾರಿಗಳಿದ್ದಾರೆ. ಆದರೆ ಇಂತಹ ಭಂಡ ಮತ್ತು ಭ್ರಷ್ಟ ಸಿಬ್ಬಂದಿಯನ್ನು ಸರಿದಾರಿಗೆ ತರಬೇಕಾದರೆ ಸಂಬಂಧಿಸಿದ ಇಲಾಖೆಯ ಮಂತ್ರಿಗಳು, ಕಾನೂನು ತಿಳುವಳಿಕೆ ಉಳ್ಳವರಾಗುವ ಜೊತೆಗೆ ದಕ್ಷರೂ ಪ್ರಾಮಾಣಿಕರೂ ಆಗಿರಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಸಂಪುಟದ ಸಚಿವರನ್ನು ಹೊಸ ವ್ಯವಸ್ಥೆಗೆ ಸಿದ್ಧಗೊಳಿಸಬೇಕಾಗುತ್ತದೆ. ವಿಧಾನಸೌಧಕ್ಕೇ ಬಾರದೆ ತಮ್ಮ ದಂಧೆಗಳಲ್ಲಿಯೇ ಮುಳುಗಿ ಹೋಗಿರುವ ಹಲವು ಸಚಿವರನ್ನು ಅವರು ಹೇಗೆ ಸರಿದಾರಿಗೆ ತರುತ್ತಾರೆ ಎನ್ನುವುದರ ಮೇಲೆ ಅವರ ಆಡಳಿತ ಚುರುಕುಗೊಳ್ಳುವ ಕಸರತ್ತು ನಿಂತಿದೆ. ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಬಗೆಗೆ ಕೇವಲ ಮಾತನಾಡಿದರೆ ಸಾಲದು, ಅದನ್ನು ಅಕ್ಷರಶಃ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT