ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪಕ್ಷದ ಹೊಣೆ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಪ್ರತಿ ಪಕ್ಷಗಳ ಸದಸ್ಯರ ಕಲಾಪ ಬಹಿಷ್ಕಾರದ ನಡುವೆ ಸುಮಾರು 87 ಸಾವಿರ ಕೋಟಿ ರೂಪಾಯಿ ವೆಚ್ಚಕ್ಕೆ ಅಧಿಕಾರ ನೀಡುವ  ಬಜೆಟ್ ಪ್ರಸ್ತಾಪಗಳಿಗೆ  ವಿಧಾನಸಭೆಯ ಅಂಗೀಕಾರ ಪಡೆದ ರಾಜ್ಯದ ಬಿಜೆಪಿ ಸರ್ಕಾರದ ಕ್ರಮ ಕಾಯ್ದೆ ಬಾಹಿರವಲ್ಲ. ಆದರೆ ಸಂಸದೀಯ ಪ್ರಜಾಸತ್ತೆಯ ಆಶಯಕ್ಕೆ ಅನುಗುಣವಾಗಿಲ್ಲ. ವಾಸ್ತವವಾಗಿ ಬಜೆಟ್ ಪ್ರಸ್ತಾವನೆಗಳು ತಿದ್ದುಪಡಿಗೆ ಅವಕಾಶ ಇರುವ ಕರಡು ಸೂಚನೆಗಳು.

ಜನಪ್ರತಿನಿಧಿಗಳು ಅವುಗಳ ಬಗ್ಗೆ ಚರ್ಚಿಸಿ, ಲೋಪ ದೋಷಗಳನ್ನು ಗುರುತಿಸಿ ಸಲಹೆ ಸೂಚನೆಗಳನ್ನು ನೀಡಿದ ನಂತರ ಅಂಗೀಕಾರ ಪಡೆಯುವುದು ಸಂಸದೀಯ ಶಿಷ್ಟಾಚಾರ. ಈ ಸಲದ ಅಲ್ಪಕಾಲದ ಅಧಿವೇಶನ ವಿರೋಧವೇ ಇಲ್ಲದ ಸನ್ನಿವೇಶದಲ್ಲಿ ನಡೆದಿದೆ. ಹದಿನಾರು ಮಂದಿ ಶಾಸಕರ ಅನರ್ಹತೆಯನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಆಡಳಿತಾರೂಢ ಬಿಜೆಪಿ ತನಗೆ ಅನುಕೂಲವಾದ ರೀತಿಯಲ್ಲಿ ಬಳಸಿಕೊಂಡಿದೆ. ಸದಸ್ಯತ್ವವನ್ನು ಮರಳಿ ಪಡೆದ ಬಂಡುಕೋರರ ಬೆಂಬಲವನ್ನು ಬಹುಮತದ ಸಾಬೀತಿಗೆ ಬಳಸಿಕೊಂಡ ಬಿಜೆಪಿ, ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಸ್ಪೀಕರ್ ಮತ್ತು ಮುಖ್ಯಮಂತ್ರಿ ವರ್ತನೆ ಬಗ್ಗೆ ಮಾಡಿದ್ದ ಆಕ್ಷೇಪಗಳನ್ನು ಬಹುಮತದ ಬಲದಿಂದ ನಿರ್ಲಕ್ಷಿಸಿದೆ. ಸುಪ್ರೀಂ ಕೋರ್ಟ್ ತೀರ್ಪು, ಸ್ಪೀಕರ್ ಮತ್ತು ಮುಖ್ಯಮಂತ್ರಿ ಸ್ಥಾನಗಳಿಂದ ಅಧಿಕಾರ ದುರುಪಯೋಗವಾಗಿರುವುದನ್ನು ಎತ್ತಿಹೇಳಿರುವುದರಿಂದ ಈ ಪ್ರಶ್ನೆ ಇತ್ಯರ್ಥವಾಗದೆ ಕಲಾಪದಲ್ಲಿ ಭಾಗವಹಿಸುವುದು ನಿರರ್ಥಕವೆಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಿಲುವು ತಾಳಿವೆ. ವಿರೋಧಪಕ್ಷಗಳ ನಿಲುವು ಸಮರ್ಥನೀಯ ಅಲ್ಲವೆಂಬುದು ನಿಜ. ಆದರೆ ಈ ಬಿಕ್ಕಟ್ಟನ್ನು ಪರಿಹರಿಸಲು ಆಸಕ್ತಿ ತೋರದಿರುವ ಆಡಳಿತ ಪಕ್ಷದ ನಿರ್ಲಕ್ಷ್ಯ ಧೋರಣೆ ಕೂಡಾ ಒಪ್ಪುವಂತಹದ್ದಲ್ಲ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳು  ಸಭಾತ್ಯಾಗ ಮಾಡುವುದು, ಕಲಾಪವನ್ನು ಬಹಿಷ್ಕರಿಸುವುದು ಹೊಸದೇನಲ್ಲ. ಇಂತಹ ಸಂದರ್ಭಗಳಲ್ಲಿ ಆಡಳಿತ ನಡೆಸಲು ಜನಾದೇಶ ಪಡೆದಿರುವ ಆಡಳಿತ ಪಕ್ಷ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಕೊನೆಗೂ ಆಡಳಿತ ನಡೆಸಬೇಕಾಗಿರುವುದು ಅವರೇ ಅಲ್ಲವೇ?
 
ಭಿನ್ನಾಭಿಪ್ರಾಯ ಉದ್ಭವಿಸಿದಾಗ ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸಿ ಅವರನ್ನು ಒಲಿಸಿಕೊಂಡು ಕಲಾಪವನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದು ಆಡಳಿತ ಪಕ್ಷದ ಕರ್ತವ್ಯ. ಸಂಸದೀಯ ಇತಿಹಾಸದಲ್ಲಿ ಇಂತಹ ನೂರಾರು ಉದಾಹರಣೆಗಳನ್ನು ನಾವು ಕಾಣಬಹುದು. ಯಾವುದೇ ಬಗೆಯ ಬಿಕ್ಕಟ್ಟು ಇರಲಿ, ಅದಕ್ಕೆ ಪರಿಹಾರ ಇದ್ದೇ ಇದೆ. ಸ್ಪೀಕರ್ ಬಗ್ಗೆ ವಿರೋಧಪಕ್ಷಗಳಿಗೆ ವಿರೋಧ ಇರುವುದರಿಂದ ಡೆಪ್ಯುಟಿ ಸ್ಪೀಕರ್ ಮೂಲಕ ಕಲಾಪ ನಡೆಸುವ ತಾತ್ಕಾಲಿಕ ಕ್ರಮಕ್ಕಾದರೂ ವಿರೋಧಪಕ್ಷಗಳನ್ನು ಒಪ್ಪಿಸುವ ಪ್ರಯತ್ನವನ್ನು ಮಾಡಬಹುದಿತ್ತು.

ಹಿರಿಯ ಸಚಿವರನ್ನು ಮಾತುಕತೆಗೆ ಕಳುಹಿಸಬಹುದಿತ್ತು. ಉದ್ದೇಶದಲ್ಲಿ ಪ್ರಾಮಾಣಿಕತೆ ಇದ್ದರೆ ಸಂಧಾನದ ಮಾರ್ಗಗಳು ತನ್ನಿಂದ ತಾನೇ ತೆರೆದುಕೊಳ್ಳುತ್ತವೆ. ಆದರೆ ರಾಜ್ಯದ ಆಡಳಿತಾರೂಢ ಪಕ್ಷ ಈ ಹೊಣೆಗಾರಿಕೆಯ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿಲ್ಲ. ವಿರೋಧಪಕ್ಷಗಳನ್ನು ಹೊರಗಿಟ್ಟು ಕಲಾಪ ನಡೆಸುವುದೇ ತಮಗೆ ಅನುಕೂಲ ಎಂದು ಅದು ಭಾವಿಸಿದಂತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಡುವ ದುರುದ್ದೇಶವೂ ಇದರಲ್ಲಿ ಅಡಗಿದಂತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಜನವಿರೋಧಿ ನಿಲುವು ಕೂಡಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT