ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಮಂಡಳಿ ರಾಜೀನಾಮೆಗೆ ಆಗ್ರಹ

Last Updated 18 ಜುಲೈ 2012, 9:10 IST
ಅಕ್ಷರ ಗಾತ್ರ

ಬ್ರಹ್ಮಾವರ: ಪಟ್ಟಣದ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಮಯದಿಂದ ಸೇವೆ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕಾರ್ಖಾನೆಯ ಆಡಳಿತ ವರ್ಗ ಸೇವೆಯಿಂದ ವಜಾ ಮಾಡಿ ಕಾರ್ಖಾನೆ ಮುಚ್ಚಿದ್ದು ಕಾರ್ಮಿಕರಿಗೆ ಯಾವುದೇ ಸಂಬಳ ಪರಿಹಾರ ಒದಗಿಸಲು ವಿಫಲರಾದ ಕಾರಣ ರಾಜೀನಾಮೆ ನೀಡುವಂತೆ ಕಾರ್ಮಿಕ ಸಂಘ ಆಗ್ರಹಿಸಿದೆ. 

ಕಾರ್ಖಾನೆ ಮುಚ್ಚಿದ ನಂತರ ಕಾರ್ಮಿಕರು ಕೆಲಸವಿಲ್ಲದೇ ಬೀದಿ ಪಾಲಾಗಿದ್ದಾರೆ.  ಕಾರ್ಮಿಕರ ಕುಟುಂಬದವರ ಪರಿಸ್ಥಿತಿ ಅತಂತ್ರವಾಗಿದ್ದು ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಿದೆ. ಸಾಕಷ್ಟು ಕಾರ್ಮಿಕರು ಆರ್ಥಿಕ ತೊಂದರೆಯಿಂದಾಗಿ ಸಣ್ಣ ಪುಟ್ಟ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ಆದರೂ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗ ವಾಸಿಸಲು ನೆಲೆ ಇಲ್ಲದೆ ಕಾರ್ಖಾನೆಯಿಂದ ಸಿಗುವ ವೇತನ ಮತ್ತು ಇತರ ಸೌಲಭ್ಯಗಳ ನಿರೀಕ್ಷೆಯಲ್ಲೇ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. 

ಕಾರ್ಖಾನೆಯಿಂದ ಕಾರ್ಮಿಕರಿಗೆ ಪಾವತಿಸಲು ಇದ್ದ ಬಾಕಿ ವೇತನ ಮತ್ತು ಇತರ ಸೌಲಭ್ಯಗಳನ್ನು ಅಕ್ಟೋಬರ್ 2010 ರಿಂದ ಅನ್ವಯವಾಗುವಂತೆ 6 ತಿಂಗಳ ಕಾಲಮಿತಿಯೊಳಗೆ ಪಾವತಿಸುವಂತೆ ಹೈಕೋರ್ಟ್‌ರಿಟ್ ಆದೇಶ ಸಂಖ್ಯೆ 19663/2004- 2010 ಆ. 24ರಂದು ಕಾರ್ಖಾನೆಯ ಆಡಳಿತ ಮಂಡಳಿಗೆ ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡದೇ ನ್ಯಾಯಾಲಯದ ಆದೇಶ ಪಾಲನೆಯಲ್ಲಿ ಆಡಳಿತ ವರ್ಗವು ವಿಫಲವಾಗಿರುತ್ತದೆ ಎಂದು ಸಂಘ ಹೇಳಿದೆ.

ನ್ಯಾಯಾಲಯದ ಆದೇಶವಾಗಿ 2 ವರ್ಷ ಸಮೀಪಿಸುತ್ತಿದ್ದರೂ ಆಡಳಿತ ವರ್ಗದಿಂದ ಕಾರ್ಮಿಕರ ಪಾವತಿ ಬಗ್ಗೆ ಯಾವುದೇ ಪ್ರಗತಿ ಕಂಡು ಬಾರದ ಕಾರಣ ಕಾರ್ಮಿಕರು ಉಪಕಾರ್ಮಿಕ ಆಯುಕ್ತರು, ಹಾಸನ ಪ್ರಾದೇಶಿಕ, ಹಾಸನ ಇವರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಕಾರ್ಮಿಕರ ಬಾಕಿ ಮೊತ್ತ 786 ಲಕ್ಷವನ್ನು ಭೂಕಂದಾಯ ಬಾಕಿಯಾಗಿ ವಸೂಲಿ ಮಾಡುವ ಆದೇಶ ನೀಡಿದ ಬಗ್ಗೆ ಮತ್ತು ಕಾರ್ಮಿಕರ ಕಷ್ಟವನ್ನು ದೂರಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಮಸ್ಯೆಗಳು ಮನವರಿಕೆಯಾಗಿದ್ದು ಇದಕ್ಕೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಕೂಡಲೆ ಇತ್ಯರ್ಥ ಮಾಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾರ್ಮಿಕರ ಸಂಘ ತಿಳಿಸಿದೆ.

ನಿಯೋಗದಲ್ಲಿ ಕಾರ್ಮಿಕ ಸಂಘದ ಅದ್ಯಕ್ಷ ಎಸ್.ಭಾಸ್ಕರ ಶೆಟ್ಟಿ, ಕಾರ್ಮಿಕರ ಸಂಘದ ಕಾರ್ಯದರ್ಶಿ ಎಸ್.ಕುಮಾರ್ ಉಪಾಧ್ಯಕ್ಷ ಸುಬ್ಬ ಬಿಲ್ಲವ, ಕೋಶಾಧಿಕಾರಿ ಶ್ಯಾಮಣ್ಣ, ಚಂದ್ರ ಪೂಜಾರಿ ಇದ್ದಾರೆ.

`ಆಡಳಿತ ಮಂಡಳಿ ನುಡಿದಂತೆ ನಡೆಯಲಿ~
ಕಳೆದ ಜೂ.16 ರಂದು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ನಡೆದ ತುರ್ತು ಆಡಳಿತ ಮಂಡಳಿಯ ಸಭೆಯಲ್ಲಿ ಮತ್ತು 20 ರಂದು ಶಾಸಕ ಕೆ. ರಘುಪತಿ ಭಟ್ ಅವರೊಂದಿಗೆ ಆಡಳಿತ ಮಂಡಳಿಯ ನಿಯೋಗ ಮುಖ್ಯಮಂತ್ರಿ ಸದಾನಂದ ಗೌಡರೊಡನೆ ಚರ್ಚಿಸಿ ಸರ್ಕಾರದಿಂದ 12 ಕೋಟಿ ರೂ. ಅನುದಾನ ತರುವುದಾಗಿ ತಿಳಿಸಿದ್ದರು. ಈ ಬಾರಿಯೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಆಡಳಿತ ಮಂಡಳಿಯ ಎಲ್ಲರೂ ಸಾಮೂಹಿಕ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಆದರೆ, ಸರ್ಕಾರದ ಅನುದಾನ ತರಲು ವಿಫಲರಾದ ಕಾರಣ ಸುಮ್ಮನೆ ಪತ್ರಿಕೆಗಳಲ್ಲಿ ಗೊಂದಲಕಾರಿ ಹೇಳಿಕೆ ನೀಡಿ ಕಾರ್ಮಿಕರನ್ನು ಮತ್ತು ರೈತರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಬಿಟ್ಟು ಕೊಟ್ಟ ಮಾತಿಗೆ ತಪ್ಪದೆ ಕೂಡಲೆ ಆಡಳಿತ ಮಂಡಳಿಯವರು ರಾಜೀನಾಮೆ ನೀಡಬೇಕು ಎಂದು ಕಾರ್ಮಿಕ ಸಂಘ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT