ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಶಾಹಿಗೆ ಶರಣಾದ ರೈತ

Last Updated 30 ಜನವರಿ 2011, 17:00 IST
ಅಕ್ಷರ ಗಾತ್ರ

ಮಂಗಳೂರು: ಎಂಆರ್‌ಪಿಎಲ್ ಮೊದಲ ಹಂತದ ವಿಸ್ತರಣೆಗೆ ಜಾಗ ಬಿಟ್ಟು ಕೊಡಲಾರೆ ಎಂದು ಪಟ್ಟು ಹಿಡಿದು ಹೋರಾಟ ನಡೆಸಿದ್ದ ಕಳವಾರಿನ ಕೃಷಿಕ ಗ್ರೆಗರಿ ಪತ್ರಾವೊ ಕೊನೆಗೂ ಆಡಳಿತಶಾಹಿ ಎದುರು ಶರಣಾಗಿದ್ದಾರೆ.

‘ತಮ್ಮ ಕುಟುಂಬದ 14.27 ಎಕರೆ ಭೂಮಿಯನ್ನು ‘ಕೆಐಎಡಿಬಿ’ಗೆ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ) ಬಿಟ್ಟುಕೊಡಲು ತೀರ್ಮಾನಿಸಿದ್ದೇನೆ’ ಎಂದು ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದ ಕೃಷಿಕ ಗ್ರೆಗರಿ ಪತ್ರಾವೊ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯಮಂತ್ರಿಯಾದರೂ ನನ್ನ ಜಮೀನಿನಲ್ಲಿ ಕೃಷಿ ಮುಂದುವರಿಸಲು ಅವಕಾಶ ಕಲ್ಪಿಸಿಕೊಟ್ಟಾರು ಎಂದು ನಂಬಿದ್ದೆ. ಜಮೀನು ಎಂಆರ್‌ಪಿಎಲ್ ಮೊದಲ ಹಂತದ ವಿಸ್ತರಣೆಯ ನಡುವೆ ಬರುವುದರಿಂದ ಕೃಷಿ ಭೂಮಿ ಉಳಿಸಿಕೊಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇನ್ನೊಂದೆಡೆ ನ್ಯಾಯಾಲಯವೂ ಭೂಸ್ವಾಧೀನದ ವಿರುದ್ಧ ತೀರ್ಪು ನೀಡಿಲ್ಲ. ಆದರೆ 1996ರ ಬದಲು 2006ರ ದರದಲ್ಲಿ ಪರಿಹಾರ ನೀಡುವಂತೆ ಸೂಚಿಸಿದೆ. ಈಗ ನನ್ನ ಮುಂದಿರುವುದು ಎರಡೇ ಆಯ್ಕೆ ಒಂದು ಬೇರೆ ಕಡೆ ಜಮೀನು ಪಡೆದು ಕೃಷಿ ಮುಂದುವರಿಸುವುದು. ಇನ್ನೊಂದು ಈ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದು. ಆತ್ಮಹತ್ಯೆಗೆ ಮನಸ್ಸು ಒಪ್ಪುತ್ತಿಲ್ಲ. ಎಷ್ಟು ಹೋರಾಡಿದರೂ ಕೃಷಿ ಭೂಮಿ ಉಳಿಸಿಕೊಳ್ಳುವುದು ಕಷ್ಟ ಎಂದು ಮನವರಿಕೆ ಆಗಿದೆ. ದೇವರ ಮೇಲೆ ಭಾರ ಹಾಕಿ ಭೂಮಿ ಬಿಟ್ಟುಕೊಡಲು ನಿರ್ಧರಿಸಿದ್ದೇನೆ’ ಎಂದರು.

‘ಒಟ್ಟು 14.27 ಎಕರೆ ಜಮೀನು ಎಂಆರ್‌ಪಿಎಲ್ ಮೊದಲ ಹಂತದ ವಿಸ್ತರಣೆಗೆ ಹೋಗುತ್ತಿದೆ. ಈ ಪೈಕಿ 4.38 ಎಕರೆ ಭೂಸ್ವಾದೀನಕ್ಕೆ 1996ರಲ್ಲೇ  ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು. ಆದರೆ ನಮ್ಮ ಕುಟುಂಬ ಅದನ್ನು ಬಿಟ್ಟುಕೊಡಲು ಒಪ್ಪಿರಲಿಲ್ಲ. 2006ರಲ್ಲಿ ಇನ್ನುಳಿದ 6.99 ಎಕರೆ ಹಾಗೂ 2.90 ಎಕರೆ ಜಮೀನಿನ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಯಿತು. 4.38 ಎಕರೆ ಜಮೀನಿಗೂ 2006ರ ದರದಲ್ಲೇ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ. 15 ದಿನ ಹಿಂದೆ ಅಧಿಕಾರಿಗಳು ಪರಿಹಾರ ನಿಗದಿ ಪಡಿಸುವ ಸಲುವಾಗಿ ಜಮೀನಿನ ಸಮೀಕ್ಷೆ ನಡೆಸಿದ್ದಾರೆ’ ಎಂದು ಅವರು ತಿಳಿಸಿದರು.

ಕೃಷಿ ಭೂಮಿಯನ್ನೇ ಕೊಡಿಸಿ: ‘ನನಗೆ ಪರಿಹಾರ ಬೇಡ. ಅದರ ಬದಲು ಉತ್ತಮ ಕೃಷಿ ಭೂಮಿಯನ್ನೇ ಕೊಡಿಸಿ ಎಂಬುದು ನನ್ನ ಕೋರಿಕೆ. ಈಗ ಮಾತುಕತೆಗೆ ಕರೆದಿದ್ದಾರೆ. ಸರ್ಕಾರದ ವಿರುದ್ಧ ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಕೊಳಕೆ ಬೆಳೆಯ ಪೈರು ಗದ್ದೆಯಲ್ಲೇ ಇದೆ. ಅದು ಪೂರ್ತಿ ಬಲಿತ ಬಳಿಕ ಕಟಾವು ಮಾಡಲು ಅವಕಾಶ ಕಲ್ಪಿಸುವುದಾಗಿ ಹಾಗೂ ಕುಟುಂಬದ ಸದಸ್ಯನೊಬ್ಬನಿಗೆ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ದೊರಕಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದರು.

ಹೋರಾಟದ ಹಾದಿ: ಎಂಆರ್‌ಪಿಎಲ್ ಮೊದಲ ಹಂತದ ವಿಸ್ತರಣೆಗೆ ಕಳವಾರು ಗ್ರಾಮದ ಬಹುತೇಕ ರೈತರು ಜಮೀನು ಬಿಟ್ಟುಕೊಟ್ಟಿದ್ದರೂ, ಗ್ರೆಗರಿ ಮಾತ್ರ ಕೃಷಿ ಭೂಮಿ ಬಿಟ್ಟುಕೊಡಲು ಒಪ್ಪಿರಲಿಲ್ಲ. 2010ರ ಏಪ್ರಿಲ್ 28ರಂದು ಜಿಲ್ಲಾಡಳಿತ ಅವರ ಮನೆಯನ್ನೂ ಕೆಡವಿ ಭೂಸ್ವಾಧೀನ ನಡೆಸಲು ಮುಂದಾಗಿತ್ತು. ಇದನ್ನು ಪ್ರತಿಭಟಿಸಿ ಗ್ರೆಗರಿ ಜೂನ್ ತಿಂಗಳಲ್ಲಿ ಉಪವಾಸ ಆರಂಭಿಸಿದ್ದರು. ಅವರ ಹೋರಾಟಕ್ಕೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿತ್ತು.

ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್ ಎ.ಎಸ್. ಅವರೂ ಗ್ರೆಗರಿ ಜಮೀನಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಃ ದೂರವಾಣಿ ಕರೆ ಮಾಡಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಗ್ರೆಗರಿ 24ನೇ ದಿನದಂದು ಉಪವಾಸ ಹಿಂಪಡೆದಿದ್ದರು. ಆ ಬಳಿಕ ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರಿಂದ ವಿಚಾರಣೆ ನಡೆಸಿದ್ದರು. ಗ್ರೆಗರಿ ಅವರ ಭೂಮಿ ಎಂಆರ್‌ಪಿಎಲ್ ಮೊದಲ ಹಂತದ ವಿಸ್ತರಣೆಗೆ ಅನಿವಾರ್ಯ ಎಂದು ಪ್ರಾದೇಶಿಕ ಆಯುಕ್ತರು ಮುಖ್ಯಮಂತ್ರಿಗೆ ವರದಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT