ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಾಡತ ಆಯುಷ್ಯ : ಸಂಸ್ಕಾರದ ವಿ-ಚಿತ್ರಕತೆ

Last Updated 29 ಜನವರಿ 2011, 18:30 IST
ಅಕ್ಷರ ಗಾತ್ರ

ಚಿತ್ರವನ್ನು ನಿಷೇಧಿಸಬೇಕೋ ಬೇಡವೋ ಎಂದು ನಿರ್ಧರಿಸಲು ದಿಲ್ಲಿಯ ಸೂಚನಾ-ಪ್ರಸಾರಣ ಮಂತ್ರಾಲಯ ಯೋಚಿಸಿದ ನ್ಯಾಯಮಂಡಳಿಯಲ್ಲಿ ರಾಣಿ ಬುರ್ರಾ, ಲಕ್ಷ್ಮೀ ಕೃಷ್ಣಮೂರ್ತಿಯವರ ತಂದೆ ಬುರ್ರಾ ವೆಂಕಟಪ್ಪಯ್ಯ ಇದ್ದರು. ಆದರೆ ಅವರು ಐಸಿಎಸ್ ಅಧಿಕಾರಿ. ಒಂದು ಕಾಲದಲ್ಲಿ ರಿಜರ್ವ್ ಬ್ಯಾಂಕಿನ ಗವರ್ನರ್ ಆಗಿದ್ದವರು. ಇಬ್ಬರು ಪುತ್ರಿಯರು ಚಿತ್ರದಲ್ಲಿದ್ದಾರೆಂದು ಪಕ್ಷಪಾತ ಮಾಡುವ ಕುಳವಲ್ಲ.

ಅಂತೂ ಚಿತ್ರ ನೋಡಿ, ಚರ್ಚೆಯಾಗಿ, ಮಿನಿಸ್ಟ್ರಿ ನಿಷೇಧವನ್ನು ಹಿಂದೆಗೆದುಕೊಂಡಿತು. ಸಂಭಾಷಣೆಯಿಂದ ‘ಶೂದ್ರ ಸ್ತ್ರೀ’ಯಿಂದ ‘ಶೂದ್ರ’ ಮತ್ತು ‘ಗೋಮಾಂಸ’ದಿಂದ ‘ಗೋ’ ಎಂಬ ವಿಶೇಷಣಗಳನ್ನು ಕತ್ತರಿಸಿದರೆ ಸಾಕು ಎಂದು ತೀರ್ಮಾನಿಸಿ A ಸರ್ಟಿಫಿಕೇಟು ಕೊಟ್ಟಿತು.

ಅಷ್ಟರಲ್ಲಿ ನಿಷೇಧಿತ ಚಿತ್ರ ಕರ್ನಾಟಕದಲ್ಲೆಲ್ಲ ಕುತೂಹಲ ಕೆರಳಿಸಿತ್ತು. ಆವರೆಗೆ ಸೆನ್ಸಾರ ಮಂಡಳಿಯ ನಿಷೇಧದಿಂದಾಗಿ ‘ಸಂಸ್ಕಾರ’ ಚಿತ್ರ ಕರ್ನಾಟಕದಲ್ಲಿ ಮನೆಮಾತಾಯಿತು. ಚಿತ್ರ ಅಪೇಕ್ಷೆಗೆ ಮೀರಿ ಯಶಸ್ವಿಯಾಯಿತು. ಆದರೆ ಈ ಯಶಸ್ಸಿಗೆ ಕೇವಲ ಆ ನಿಷೇಧವಾಗಲಿ, ಕಥಾಸಾಮಗ್ರಿಯ ನವ್ಯತೆಯಾಗಲಿ ಕಾರಣವಾಗಿರದೆ, ಚಿತ್ರದಲ್ಲಿ ಬರುವ ಚಂದ್ರಿ-ಪ್ರಾಣೇಶಾಚಾರ್ಯರ ಸಂಭೋಗದ ಉತ್ತೇಜಕ ಚಿತ್ರಣ ಕೂಡ ಪ್ರೇಕ್ಷಕರನ್ನು ಹಿಂಡು-ಹಿಂಡಾಗಿ ಆಕರ್ಷಿಸಿರಬೇಕು ಎಂಬ ಸಂದೇಹ ನನಗಿದೆ.
 
ಅಲ್ಲಿಯವರೆಗೆ ಭಾರತೀಯ ಚಿತ್ರಗಳಲ್ಲೆಲ್ಲ ಸಮಾಗಮವನ್ನು ಸೂಚ್ಯವಾಗಿ ತೋರಿಸಲಾಗುತ್ತಿತ್ತು. ಕೂಟದಲ್ಲಿ ತೊಡಗಬಯಸುವ ಜೋಡಿ ಪರಸ್ಪರರನ್ನಪ್ಪಿಕೊಳ್ಳುವ ಸಿದ್ಧತೆಯಲ್ಲಿದ್ದಾಗಲೇ ಕ್ಯಾಮರಾ ನಾಚಿಕೊಂಡಂತೆ ಇನ್ನೆಲ್ಲಿಗೋ ಕಣ್ಣು ಹೊರಳಿಸುತ್ತಿತ್ತು. ಆದರೆ ‘ಸಂಸ್ಕಾರ’ದಲ್ಲಿ ಆಲಿಂಗನದಿಂದ ಆರಂಭವಾಗುವ ಕ್ರಿಯೆ ಅಂಗಾಂಗಗಳ ಘರ್ಷಣೆ, ಹೊರಳಾಟ, ಮೈದಡವು, ಮರ್ದನಗಳನ್ನು ಅವಯವಗಳ close-upಗಳಲ್ಲೇ ಹಿಡಿದು, ನಾದುವ ಕೈ ಹಿಚುಕುತ್ತಿರುವದು ಹೆಗಲಿನ ಮಾಂಸಖಂಡವೋ ನಿತಂಬದ ಗೋಲವೋ, ತಡಕಾಡುವ ಕೈ ಹುಚ್ಚುಹುಚ್ಚಾಗಿ ಅರಸುತ್ತಿರುವದು ಕಂಕುಳದ ಸಂದಿಯನ್ನೋ ಗುಹ್ಯಾಂಗದ ಸೀಳನ್ನೋ ಎಂಬ ದಿಗ್ಭ್ರಮೆ ಹುಟ್ಟಿಸಿ ಮೈಥುನದ ಶಾರೀರಿಕತೆಯನ್ನು ವೀಕ್ಷಕರ ಅನುಭವಕ್ಕೆ ತಂದೊಡ್ಡಿತು. ಇನ್ನು ಚಂದ್ರಿಯ ಕಥಾನಕಕ್ಕೆ ಇದೇ ಉತ್ಪ್ರೇಕ್ಷಾ ಕಣವಾಗಿದ್ದುದರಿಂದ ಸ್ನೇಹಾ ತನ್ನ ಎಲ್ಲ ಉತ್ಕಟತೆಯನ್ನೂ ಭೋಗಾಸಕ್ತಿಯನ್ನೂ ತನ್ನ ಕಣ್ಣುಗಳಲ್ಲಿ, ಸ್ಪರ್ಶಗಳಲ್ಲಿ, ನೇವರಿಕೆಯಲ್ಲಿ, ಉಸಿರಿನಲ್ಲಿ, ಸುರಿದಳು. ಹೆಣ್ಣಿನ sexuality ಇಷ್ಟು ಉತ್ತಾನವಾಗಿ ಭಾರತೀಯ ಚಿತ್ರಗಳಲ್ಲಿ ಆ ಮೊದಲು ಎಂದೂ ಚಿತ್ರಿತವಾಗಿರಲಿಲ್ಲ. ಅನಂತಮೂರ್ತಿಗೆ ಬರವಣಿಗೆಯಲ್ಲಿ ಗುರುವಾಗಿದ್ದ ಕಾದಂಬರಿಕಾರ ಡಿ.ಎಚ್. ಲಾರೆನ್ಸ್ ಈ ಚಿತ್ರೀಕರಣವನ್ನು ಖಂಡಿತವಾಗಿ ಮೆಚ್ಚಿಕೊಳ್ಳುತ್ತಿದ್ದ. ಆದರೆ ಟಾಮ್‌ಗೆ ಸ್ಫೂರ್ತಿ ನೀಡಿದ್ದು ಅಂದಿನ ಫ್ರೆಂಚ್-ಇಟಾಲಿಯನ್ ಚಲನಚಿತ್ರಗಳ ಶೈಲಿ.

ಮೋಜಿನ ಮಾತೆಂದರೆ ಈ ಇಡಿಯ ಸನ್ನಿವೇಶದ ಚಿತ್ರಣದ ಹೊತ್ತಿಗೆ ಸ್ನೇಹಾ ಹಾಗೂ ನನ್ನಲ್ಲಿ ಮಾತು ನಿಂತು ಹೋಗಿ, shot ಮುಗಿದ ಗಳಿಗೆಗೆ ನಾವಿಬ್ಬರೂ ಪರಸ್ಪರರ ಪರಿಚಯವೇ ಇಲ್ಲದಂತೆ ದೂರ ಹೋಗಿ ಕುಳಿತುಕೊಳ್ಳುತ್ತಿದ್ದೆವು.

ಚಿತ್ರ ವ್ಯಾವಸಾಯಿಕವಾಗಿ ಅತ್ಯಂತ ಯಶಸ್ವಿಯಾಯಿತು. ಅದರ ಜೊತೆಗೆ ಅದಕ್ಕೆ ಆ ವರ್ಷದ ಅತ್ಯುತ್ತಮ ಚಿತ್ರವೆಂದು ಸುವರ್ಣ ಕಮಲದ ರಾಷ್ಟ್ರೀಯ ಪ್ರಶಸ್ತಿ ದೊರಕಿತು.

ಸರಕಾರದಿಂದ ನಿಷೇಧಿತವಾದ ಚಿತ್ರಕ್ಕೆ ಅದೇ ಸರಕಾರದಿಂದ ಸ್ವರ್ಣಕಮಲ!
ನಮಗೆ ಅತ್ಯಂತ ಹರ್ಷವಾಗಲಿಕ್ಕೆ ಕಾರಣವಾದ ಅಂಶವೆಂದರೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ‘ಸಂಸ್ಕಾರ’ ಸತ್ಯಜಿತ್‌ರಾಯರ ‘ಪ್ರತಿದ್ವಂದಿ’ಯನ್ನು ಸೋಲಿಸಿತ್ತು. ನಾವು ನಮ್ಮ ಗುರುವಿಗೆ ಸಲ್ಲಿಸಿದ ಕಾಣಿಕೆಯಾಗಿತ್ತದು.

ಚಿತ್ರ ಹೊರಬಂದ ಕೆಲ ತಿಂಗಳ ಬಳಿಕ ಸುರೇಂದ್ರನಾಥ ಭೆಟ್ಟಿಯಾದ.
‘ಹೇಗಿದ್ದೀ?’ ಎಂದು ಕೇಳಿದೆ.

‘“ಸಂಸ್ಕಾರ”ದ ಕೃಪೆಯಿಂದ ಸಂತೋಷವಾಗಿದ್ದೇನೆ’, ಎಂದು ನಾಟಕೀಯವಾಗಿ ಎರಡೂ ಬಾಹುಗಳನ್ನೆತ್ತರಿಸಿ ಹೊಟ್ಟೆತುಂಬ ನಕ್ಕ. ನನ್ನನ್ನೆಲ್ಲಿ ಅಪ್ಪಿಕೊಳ್ಳುತ್ತಾನೋ ಎಂದು ಹೆದರಿ ನಾನು ಸ್ವಲ್ಪ ದೂರವಾದೆ. ಚಿತ್ರದ ಒಟ್ಟೂ ಖರ್ಚು 95,000 ರೂಪಾಯಿ ಆಗಿತ್ತಂತೆ. ಈಗ ಅದಷ್ಟೂ ಬಂದು ಮೇಲೆ ಲಾಭವಾಗಿ ಸುಖವಾಗಿದ್ದೇನೆ ಎಂದು ಬೀಗುತ್ತಿದ್ದ.

ಚಿತ್ರ ಯಶಸ್ವಿಯಾದರೂ ಅದರ ಶ್ರೇಯಸ್ಸು ಪಟ್ಟಾಭಿಗೆ ಸಿಗಕೂಡದೆಂದು ನಾನು-ವಾಸುದೇವ್ ಪಣ ತೊಟ್ಟಿದ್ದೆವು. ಕೇಳಿದವರಿಗೆಲ್ಲ ‘ಪಟ್ಟಾಭಿಗೆ ನಿರ್ದೇಶನ ಎಂದರೇನು ಗೊತ್ತಿಲ್ಲ. ಅವನು ನಿರ್ದೇಶನ ಮಾಡಲೇ ಇಲ್ಲ’ ಎಂದು ಹೇಳಲಾರಂಭಿಸಿದೆವು.

ಇದು ಒಂದು ದೃಷ್ಟಿಯಿಂದ ಅನ್ಯಾಯದ ಮಾತಾಗಿತ್ತು. ಮುಖ್ಯ ಮಾತು ಎಂದರೆ, ಪಟ್ಟಾಭಿ ‘ಸಂಸ್ಕಾರ’ ಚಿತ್ರವನ್ನು ನಿರ್ಮಿಸುವ ಹೊಣೆಯನ್ನು ಹಮ್ಮಿಕೊಂಡಿದ್ದ. ಅವನಿಲ್ಲದೆ ಎಂದಾದರೂ ಆ ಚಿತ್ರವಾಗುತ್ತಿತ್ತೋ ಇಲ್ಲವೋ ದೇವರೇ ಬಲ್ಲ ಆಮೇಲೆ ಚಿತ್ರೀಕರಣ ಪೂರ್ಣವಾಗುವಂತೆ ದುಡ್ಡಿನ ವ್ಯವಸ್ಥೆ ಮಾಡಿಸಿದ್ದ. ಅದೆಷ್ಟು ಕಠೋರ ಹೊಣೆ ಎಂದು ನನಗಾಗ ತಿಳಿಯಲಿಲ್ಲ. ಇಡಿಯ ಚಿತ್ರವೇ ಸ್ವಯಂಭೂವಾಗಿದ್ದರಿಂದ ನಾವೂ ಆತನ ಮೇಲಿದ್ದ ಒತ್ತಡಗಳನ್ನು ಅರ್ಥೈಸಿಕೊಳ್ಳಬೇಕಾಗಿತ್ತೇನೋ! ಆದರೆ ನಮ್ಮ ಅಪಪ್ರಚಾರದ ಫಲವಾಗಿ ಚಿತ್ರಕ್ಕೆ ರಾಷ್ಟ್ರೀಯ ಮಟ್ಟದ ಮನ್ನಣೆ ಸಿಕ್ಕಮೇಲೂ ಕೂಡ ಪಟ್ಟಾಭಿಗೆ ಸಿಗಲಿಲ್ಲ. ಅವನ ಪ್ರತಿಯೊಂದು ಭಾಷಣ ‘I am Pattabhirama Reddy. You don’t know it, but I am the director of Samskara’ (ನಾನು ಪಟ್ಟಾಭಿ ರಾಮರೆಡ್ಡಿ, ನಾನು ‘ಸಂಸ್ಕಾರ’ ಚಿತ್ರದ ನಿರ್ದೇಶಕ. ನಿಮಗೆ ಈ ಮಾತು ಗೊತ್ತಿರಲಿಕ್ಕಿಲ್ಲ) ಎಂದೇ ಆರಂಭವಾಗುತ್ತಿತ್ತು. ಅವನು ಸಾಯುವವರೆಗೂ ಆ ನೋವು ಉಳಿಯಿತೆಂದು ಅವನ ಮಗಳಾದ ನಂದನಾರೆಡ್ಡಿ ಒಮ್ಮೆ ನನಗೆ ಹೇಳಿದ್ದಳು.

ರಾಮಾನುಜನ್ನರು ‘ಸಂಸ್ಕಾರ’ ಕಾದಂಬರಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದರಷ್ಟೇ ಅಲ್ಲ, ಅಮೇರಿಕನ್ ವಿಶ್ವವಿದ್ಯಾಲಯಗಳ ದಕ್ಷಿಣ ಏಶಿಯಾ ವ್ಯಾಸಂಗ ಕೇಂದ್ರಗಳಲ್ಲೆಲ್ಲ ಹಿಂದೂ ಸಂಸ್ಕೃತಿಯನ್ನು ಜೀವಂತವಾಗಿ ಚಿತ್ರಿಸುವ ಕಾದಂಬರಿ ಅದೊಂದೇ ಎಂಬಂತೆ ಪ್ರಚಾರ ಮಾಡಿದರು. ಅವರ ಬೆಂಬಲದ ಪರಿಣಾಮವಾಗಿ ಕೆಲ ಕಾಲ ಅಮೇರಿಕನ್ ವಿಶ್ವವಿದ್ಯಾಲಯಗಳಲ್ಲೆಲ್ಲ ‘ಸಂಸ್ಕಾರ’ ಎಲ್ಲರ ಬಾಯಲ್ಲಿತ್ತು.

ಅದರ ಜೊತೆಗೆ ಚಿತ್ರಪಟಕ್ಕೂ ನಂತರದ ಕಾಲದಲ್ಲಿ ಅದರ DVDಗಳಿಗೆ-ಸತತ ಬೇಡಿಕೆಯಿತ್ತು. ಈಗ ಕನ್ನಡೇತರ ಚಿತ್ರರಸಿಕರಿಗೆ ‘ಸಂಸ್ಕಾರ’ ಚಿತ್ರ ಹೆಚ್ಚು ಕಡಿಮೆ ಮರೆತು ಹೋಗಿದ್ದರೂ, ಪುಸ್ತಕದ ಕಾರಣದಿಂದಾಗಿ ಅಮೇರಿಕದಲ್ಲಿ ವಿದ್ಯಾರ್ಥಿಗಳಿಗೆ DVD ಬೇಕಾಗುತ್ತದೆ. ‘ಪುಸ್ತಕದ ನೆವದಿಂದಾಗಿ ಬದುಕಿರುವ ಚಿತ್ರ ಇದೊಂದೇ!’ ಎಂದು ಒಬ್ಬ ವಿದ್ಯಾರ್ಥಿನಿ ಹೇಳುತ್ತಿದ್ದಳು.

‘ಸಂಸ್ಕಾರಕ್ಕೆ’ ಭಾರತದಾದ್ಯಂತ ಹರ್ಷದ ಸ್ವಾಗತ ದೊರಕಿತು. ಮೃಣಾಲ್ ಸೇನ್ ನನಗೊಂದು ‘ಇಂದೊಂದು ಶ್ರೇಷ್ಠ ಚಿತ್ರ, ಶ್ರೇಷ್ಠ ಅಭಿನಯ ಕಂಡೆ’ ಎಂದು ಹೊಗಳಿ ತಂತಿ ಕಳಿಸಿದ. ಅಲ್‌ಕಾಝಿ ಭೆಟ್ಟಿಯಾದಾಗ ‘ಚಿತ್ರದ ನಿರ್ದೇಶನ-ಅಭಿನಯಗಳೆರಡೂ ನನ್ನ ಹೃದಯ ಕಲಕಿದವು’ ಎಂದು ಒಪ್ಪಿಕೊಂಡ. ರಾಜಕಪೂರ್ ಅಂತೂ ನೋಡಿ ಹುಚ್ಚನಂತೆ ಹೊಗಳಿದನಂತೆ. ‘ನನಗಾಗಿ ಒಂದು ಚಿತ್ರವನ್ನು ನಿರ್ದೇಶಿಸು’ ಎಂದು ಹೇಳಿ ಕಳಿಸಿದ. (ನಾನು ಒಪ್ಪದಿರುವುದರಲ್ಲೇ ಬುದ್ಧಿವಂತಿಕೆಯಿದೆ ಎಂದು ನಿರ್ಧರಿಸಿದೆ.)

ಕಲ್ಕತ್ತೆಯ ಚಿತ್ರಸಮಾರೋಹಗಳಲ್ಲಿ ‘ವಂಶವೃಕ್ಷ’ ಭಾಗವಹಿಸಿದಾಗ ನನಗೆ ಕೊನೆಗೊಮ್ಮೆ ಸತ್ಯಜಿತ್ ರಾಯ್ ಭೆಟ್ಟಿಯಾದರು. ನನ್ನನ್ನು, ಶಾರದಾಳನ್ನು ತಿಂಡಿಗೆ ಮನೆಗೆ ಕರೆದರು. ಆದರೆ ‘ಚಿತ್ರದಲ್ಲಿ ಮೊದಮೊದಲನೇ ಭಾಗದಲ್ಲಿದ್ದ ತೇಜ ಉತ್ತರಾರ್ಧದಲ್ಲಿರಲಿಲ್ಲ’ ಎಂದು ಹೇಳಿದರು. ನನ್ನ ಅಭಿನಯ ಕೂಡ ಅವರಿಗೆ ವಿಶೇಷ ಹಿಡಿಸಿದಂತೆ ಕಾಣಿಸಲಿಲ್ಲ.

‘ಸಂಸ್ಕಾರ’ದ ಯಶಸ್ಸಿನಿಂದಾಗಿ ಕನ್ನಡದಲ್ಲಿ ಕಲಾತ್ಮಕ ಚಿತ್ರಗಳ ಅಲೆಯೆದ್ದಿತು. ನಾನು-ಕಾರಂತ ಮಾತ್ರವಲ್ಲದೆ ಚಿತ್ರನಿರ್ಮಿತಿಯಲ್ಲಿ ಎಳ್ಳಷ್ಟೂ ಪ್ರತಿಭೆಯಿಲ್ಲದ ಹಲವಾರು ಸಾಹಿತಿಗಳು ಚಿತ್ರಪಟ ನಿರ್ದೇಶನಕ್ಕೆ ಧುಮುಕಿ ಕೈಸುಟ್ಟುಕೊಂಡರು. ಆದರೆ ಈ ಎಲ್ಲ ಅಡಸಲು-ಬಡಸಲು ಯತ್ನಗಳಿಂದ ಒಬ್ಬ ಸಮರ್ಥ ಚಿತ್ರನಿರ್ದೇಶಕ ಕನ್ನಡಕ್ಕೆ ಸಿಕ್ಕ ಎಂಬುದು ಸಂತೋಷದ ಸಂಗತಿ: ಗಿರೀಶ ಕಾಸರವಳ್ಳಿ. ‘ಸಂಸ್ಕಾರ’ದಿಂದಾಗಿ ಕನ್ನಡ ಚಿತ್ರರಂಗಕ್ಕೆ ಭಾರತೀಯ ಮನ್ನಣೆ ದೊರೆಯಿತೆಂಬುದು ನಿರ್ವಿವಾದ.

‘ಸಂಸ್ಕಾರ’ ಕಾದಂಬರಿಯ ಕಾರಣದಿಂದಾಗಿ ನಾನು ಚಿತ್ರಪಟ ಸೃಷ್ಟಿಗೆ ಬಂದೆ. ‘ಸಂಸ್ಕಾರ’ ಚಿತ್ರದ ಕಾರಣದಿಂದಾಗಿ ವ್ಯಾವಸಾಯಿಕ ಚಿತ್ರನಟ, ನಿರ್ದೇಶಕನಾದೆ. ಆದರೆ ಕೊನೆಗೂ ನಾಟಕ ಲೇಖನದಿಂದ ಹಾಗೂ ರಂಗಭೂಮಿಯಿಂದ ನನಗೆ ದೊರೆತಷ್ಟು ತೃಪ್ತಿ ಚಿತ್ರದಿಂದಲೂ ದೊರೆಯಲಿಲ್ಲ.

1970ರಲ್ಲಿ ಕರ್ನಾಟಕ ಸರಕಾರ ನೀಡುತ್ತಿದ್ದ (ಸಬ್ಸಿಡಿ)ಕ್ಕೆ ಅರ್ಹವಾಗಲಿಕ್ಕೆ ಒಂದು ಚಿತ್ರ ಕಡಿಮೆಯೆಂದರೆ 100 ನಿಮಿಷ ದೀರ್ಘವಾಗಿರುವದು ಅತ್ಯವಶ್ಯಕವಾಗಿತ್ತು. ‘ಸಂಸ್ಕಾರ’ದ ಚಿತ್ರೀಕರಣದಿಂದ ಸಾಕಷ್ಟು ಫಿಲ್ಮ್ ಸಾಮಗ್ರಿ ಹೊರಡಲಿಲ್ಲವಾದ್ದರಿಂದ ಯಾವು ಯಾವುದೋ ಅನವಶ್ಯಕ shotಗಳನ್ನು ಸೇರಿಸಿ ಚಿತ್ರದ ಉದ್ದ ಹಿಗ್ಗಿಸಬೇಕಾಯಿತು. ದುಡ್ಡಿರಲಿಲ್ಲವಾದ್ದರಿಂದ ಧ್ವನಿಯ ಆಯಾಮವನ್ನೇ ಕೈಬಿಡಲಾಯಿತು.

ಆದರೆ ಚಿತ್ರ ಯಶಸ್ವಿಯಾಗಿ, ಸಾಕಷ್ಟು ಹಣ ಗಳಿಸಿದ ಬಳಿಕ, ಅದನ್ನು ಅಂತರ್‌ರಾಷ್ಟ್ರೀಯ ಮಹೋತ್ಸವಗಳಿಗೆ ಕಳಿಸುವ ಮೊದಲಾದರೂ ಅರ್ಥಹೀನ shotಗಳನ್ನು ತೆಗೆದುಹಾಕಿ, ಚಿತ್ರಗಳನ್ನು ಸವರಿ, ಮೊಟಕುಗೊಳಿಸಿ, ಧ್ವನಿಯನ್ನು ಸುಧಾರಿಸಬಹುದಾಗಿತ್ತು.
ಆದರೆ ಪಟ್ಟಾಭಿ ಆ ಕಡೆಗೆ ಲಕ್ಷ್ಯ ಹಾಕಲೇ ಇಲ್ಲ. ನಾನು ಕಾದಂಬರಿಯ ದೆಸೆಯಿಂದ ಚಿತ್ರರಂಗಕ್ಕೆ ಬಂದಂತೆ ಪಟ್ಟಾಭಿ ತನ್ನ ಹೆಂಡತಿಯ ದೆಸೆಯಿಂದ ಆ ರಂಗಕ್ಕಿಳಿದಿದ್ದ. ಚಿತ್ರವನ್ನು ಆದಷ್ಟು ಉತ್ತಮಗೊಳಿಸಬೇಕು ಎಂದು ಯಾವ ಕಂಕಣಬದ್ಧ ನಿರ್ದೇಶಕನಿಗಾದರೂ ಇರಬೇಕಾದ ಕಳವಳ ಅವನಲ್ಲಿರಲಿಲ್ಲ.

1975ರಲ್ಲಿ ಪ್ರಧಾನಿ ಇಂದಿರಾಗಾಂಧಿ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ತನ್ನನ್ನು ವಿರೋಧಿಸುವ ರಾಜಕಾರಣಿಗಳನ್ನೆಲ್ಲ ಕಾರಾಗೃಹಕ್ಕೆ ತಳ್ಳಿದಳು. ಇಂಥ ವಿರೋಧಿಗಳಲ್ಲಿ ಸಮಾಜವಾದಿ ಪಕ್ಷದ ಜಾರ್ಜ್ ಫರ್ನಾಂಡೀಸ್ ಪ್ರಮುಖನಾಗಿದ್ದು ಅವನು ಪೊಲೀಸರ ಮಿತ್ರರಾಗಿದ್ದರಿಂದ ಅವರ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಜೊತೆಗೆ ಅವರ ಇಬ್ಬರು ಮಕ್ಕಳಾದ ನಂದನಾ-ಕೋಣಾರ್ಕರನ್ನೂ ಕೂಡ. ಅಲ್ಲಿ ಸ್ನೇಹಾ ಭಾವನಾವಿವಶಳಾಗಿ ‘ನನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟುಬಿಡಿ. ಅವರಿಗೇನೂ ಗೊತ್ತಿಲ್ಲ. ನನಗೆ ಎಲ್ಲ ಗೊತ್ತಿದೆ. ನಾನು ಹೇಳುತ್ತೇನೆ’ ಎಂದು ಘೋಷಿಸಿದ್ದರ ಫಲವಾಗಿ ಪಟ್ಟಾಭಿ-ನಂದನಾ- ಕೋಣಾರ್ಕರನ್ನು ಬಿಡುಗಡೆ ಮಾಡಲಾಯಿತು. ಬಂಧಿಯಾದ ಸ್ನೇಹಾ ಏಳು ತಿಂಗಳು ಕಾರಾಗೃಹದಲ್ಲಿ ಇರಬೇಕಾಯಿತು.

ಸ್ನೇಹಾಗೆ ತೀವ್ರವಾದ ಉಬ್ಬಸ (Asthma)ದ ಬಾಧೆಯಿತ್ತು. ಆಕೆ ನಾಟಕಗಳಲ್ಲಿ ಪಾತ್ರ ಧರಿಸಿದಾಗ ಪ್ರಯೋಗ ಆರಂಭವಾಗುವ ಮೊದಲು ಅಥವಾ ಯಾವುದೇ ಆತಂಕದ ಪರಿಸ್ಥಿತಿಯಲ್ಲಿ ಮೇಲುಬ್ಬಸ ಶುರುವಾಗಿ ಉಸಿರುಕಟ್ಟುತ್ತಿತ್ತು. (ರಂಗಭೂಮಿಯ ಮೇಲೆ ಹೆಜ್ಜೆಯಿಟ್ಟ ಗಳಿಗೆಗೆ ಅದು ಮಾಯವಾಗುತ್ತಿತ್ತು.) ಆದರೆ ಹಲವು ಸಲ ಆಕೆ ಉಸಿರಾಡಲಾಗದೆ ನೆಲದ ಮೇಲೆ ಹೊರಳಾಡುತ್ತಿದ್ದಳೆಂದೂ ಕೇಳಿದ್ದೇನೆ. ಅದೇನಿದ್ದರೂ ಕಾರಾಗೃಹದಲ್ಲಿ ಸ್ನೇಹಾಗೆ ಸರಿಯಾದ ಔಷಧೋಪಚಾರ ಸಿಗಲಿಲ್ಲ, ಅಲ್ಲಿಯೂ ಎರಡು ಮೂರು ಭಯಾನಕವಾದ ಅಸ್ತಮಾ ಆಘಾತಗಳು ಬಂದಿದ್ದವಂತೆ.

ಏಳು ತಿಂಗಳ ಬಳಿಕ ಮನೆಗೆ ಬಂದಳು. ಒಂದು ದಿನ ಮನೆಯಲ್ಲಿ ಗಂಡ-ಮಕ್ಕಳು ಯಾರೂ ಇಲ್ಲದೆ ಆಕೆ ಒಬ್ಬಳೇ ಇದ್ದಾಗ ಅಕಸ್ಮಾತ್ತಾಗಿ ಆಘಾತವಾಗಿ ತೀರಿಕೊಂಡಳು.

ನಾನು ಪಟ್ಟಾಭಿಯನ್ನು ಕಾಣಲು ಹೋದಾಗ, ಪಟ್ಟಾಭಿ ನಗುಮೊಗದಿಂದಲೇ ಸ್ವಾಗತಿಸಿದ. ‘ಇಂಥ ಒಳ್ಳೆಯ ನಟಿ, ಆದರೆ ತಪ್ಪು ಗಳಿಗೆಗೆ ರಂಗಭೂಮಿ ಬಿಟ್ಟು ನಿರ್ಗಮನ (Exit) ಮಾಡಿದಳು’ ಎಂದ.

ಮುಂದೆ ಪಟ್ಟಾಭಿ ಮೂರು ಚಿತ್ರಗಳನ್ನು ನಿರ್ದೇಶಿಸಿದ. ಅದರಲ್ಲಿ ‘ಚಂಡಮಾರುತ’ ತುರ್ತುಪರಿಸ್ಥಿತಿಯ ವಿರುದ್ಧ ಪ್ರತಿಭಟನೆಯಾಗಿತ್ತು, ‘ಶೃಂಗಾರಮಾಸ’ 1984ರಲ್ಲಿ ‘ದೇವರ ಕಾಡು’ 1990ರಲ್ಲಿ ನಿರ್ದೇಶಿಸಿದ. ಆದರೆ ಅವುಗಳಲ್ಲಿ ಯಾವುದೂ ವಿಶೇಷ ಯಶಸ್ಸನ್ನು ಕಾಣಲಿಲ್ಲ.

2006ರಲ್ಲಿ ಪಟ್ಟಾಭಿ ನಂದನಾಳ ಮನೆಯಲ್ಲೇ ತೀರಿಕೊಂಡ.
ಮೊನ್ನೆ ನಂದನಾಳಿಂದ ಗೊತ್ತಾಯಿತು: ಈಗ ‘ಸಂಸ್ಕಾರ’ದ ಮೂಲ negativesಏ ನಾಪತ್ತೆಯಾಗಿದೆ. ಅದನ್ನು ಪಟ್ಟಾಭಿ ಯಾವ ಕಾರಣಕ್ಕಾಗಿ ಯಾರಿಗೆ ಒಪ್ಪಿಸಿದನೋ ಎಂಬುದರ ದಾಖಲೆಯೇ ಇಲ್ಲ. ಪಟ್ಟಾಭಿಗೂ ಮರೆತು ಹೋಗಿದೆ. ಹೀಗಾಗಿ ಚಿತ್ರಪಟದ ಮೂಲ ಸಾಮಗ್ರಿಯೇ ಕಾಣೆಯಾಗಿದೆ. 

ಕಳೆದ ಹದಿನೇಳು ವಾರಗಳಿಂದ ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾಗುತ್ತಿರುವ ‘ಆಡಾಡತ ಆಯುಷ್ಯ’ದ ಆಯ್ದ ಭಾಗಗಳ ಕೊನೆಯ ಕಂತು ಇದು. ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಲಿರುವ ‘ಆಡಾಡತ ಆಯುಷ್ಯ’ ಗ್ರಂಥವು ಬರುವ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT