ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿ ಕುಣಿದ ಚಿಣ್ಣರು

Last Updated 27 ಆಗಸ್ಟ್ 2011, 19:20 IST
ಅಕ್ಷರ ಗಾತ್ರ

ಬೆಂಗಳೂರು: ಆಟ ಆಡದೇ ಬಾಲ್ಯ ಕಳೆಯುವ ಬಾಲ ಕಾರ್ಮಿಕರು ಮತ್ತು ಶೋಷಿತ ವರ್ಗದ ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ರೀಚ್ ಔಟ್~ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತ ಶಾಲೆಗಳ ಪುಟಾಣಿ ಮಕ್ಕಳು ವಿವಿಧ ಬೌದ್ಧಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಐಎಸ್‌ಸಿಎಲ್ ಸಂಸ್ಥೆಯು ಚೈಲ್ಡ್ ರೈಟ್ಸ್ ಆ್ಯಂಡ್ ಯೂ (ಕ್ರೈ) ಸಂಸ್ಥೆಯ ಸಹಯೋಗದೊಂದಿಗೆ ಈ ಅಭಿಯಾನ ಆಯೋಜಿಸಿತ್ತು. 

 ತುತ್ತಿಗಾಗಿ ಬಾಲ್ಯವನ್ನು ಬಲಿಕೊಡುವ ಅಸಹಾಯಕ ಮಕ್ಕಳಿಗೂ ನಮ್ಮಂತೆ ಆಟ ಆಡುವ ಹಕ್ಕಿದೆ ಎಂಬುದನ್ನು ಸಾಮಾಜಿಕ ವ್ಯವಸ್ಥೆಗೆ ತಿಳಿಯಪಡಿಸುವ ಸಲುವಾಗಿ ಚಿತ್ರಕಲೆ, ಹಾವು-ಏಣಿ ಆಟ, ರಸ ಪ್ರಶ್ನೆ, ಕಥೆ ಹೇಳುವಿಕೆ, ಛಾಯಾಚಿತ್ರಗಳ ವಿಮರ್ಶೆ, ಕಾಗದ ಚೀಲ ತಯಾರಿಕೆ ಸೇರಿದಂತೆ ಹಲವು ಸೃಜನಾತ್ಮಕ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. 

ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಸ್ಕೂಲ್, ಇನ್‌ವೆಂಚರ್ ಅಕಾಡೆಮಿ , ಇಂಡಸ್ ಇಂಟರ್‌ನ್ಯಾಷನಲ್ ಮತ್ತು ವಿದ್ಯಾನಿಕೇತನ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ತಂಡ ತಂಡವಾಗಿ ಆಗಮಿಸಿ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪೋಷಕರು ಪ್ರೋತ್ಸಾಹ ನೀಡಿದರು.ಪರಿಕ್ರಮ, ಅಲೆಗೊ, ಯುಎನ್‌ಕೆ ತಂಡಗಳಿಂದ  `ರಾಕ್ ಸಂಗೀತ~ ಕಾರ್ಯಕ್ರಮ ನಡೆಯಿತು. 

ಈ ಬಗ್ಗೆ ಮಾತನಾಡಿದ ಚೈಲ್ಡ್ ರೈಟ್ಸ್ ಆ್ಯಂಡ್ ಯೂ(ಕ್ರೈ) ಸಂಸ್ಥೆಯ ಯುವ ವಿಭಾಗದ ವ್ಯವಸ್ಥಾಪಕಿ ಸೋನಿಯಾ, `ಇದೇ ಮೊದಲ ಬಾರಿಗೆ `ಕ್ರೈ~ ಸಂಸ್ಥೆಯು ಹಲವು ಸಂಘಟನೆಗಳ ಸಹಯೋಗದೊಂದಿಗೆ ಮಕ್ಕಳ ಹಕ್ಕಿನ ಕುರಿತು ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದು, ಒಟ್ಟು 4 ಶಾಲೆಯಿಂದ 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ~ ಎಂದರು.

`ಮಕ್ಕಳ ಹಕ್ಕಿನ ಕುರಿತು ಅರಿವು ಮೂಡಿಸುವಲ್ಲಿ ಇದು ಮೊದಲನೇ ಹಂತದ ಕಾರ್ಯಕ್ರಮವಾಗಿದ್ದು, ಸಂಗ್ರಹಗೊಳ್ಳಲಿರುವ ನಿಧಿಯನ್ನು ವರ್ಷವಿಡೀ ಹಮ್ಮಿಕೊಳ್ಳಲಿರುವ ವಿವಿಧ ಜಾಗೃತಿ ಅಭಿಯಾನ ಕಾರ್ಯಕ್ರಮಗಳಿಗೆ ಬಳಸಲಾಗುವುದು~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT