ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿನಲ್ಲೂ ಆದಾಯ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಆಡು ಸಾಕಣೆ ಬೇಸಾಯಕ್ಕೆ ಪೂರಕ. ಗ್ರಾಮೀಣ ಪ್ರದೇಶದ ರೈತರಿಗೆ ಆದಾಯ ತರುವ ಪ್ರಮುಖ ಉಪ ಕಸುಬುಗಳಲ್ಲಿ ಇದೂ ಒಂದು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ಆಡುಗಳನ್ನು ಯಶಸ್ವಿಯಾಗಿ ಸಾಕುತ್ತಿದ್ದಾರೆ ಮತ್ತು ಅದು ಲಾಭದಾಯಕ ಎಂದೂ ತೋರಿಸಿಕೊಟ್ಟಿದ್ದಾರೆ.

ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಪಿ. ಬಂಗಾರ ಶೆಟ್ಟಿ ಐದಾರು ವರ್ಷಗಳಿಂದ ಆಡು ಸಾಕುತ್ತಿದ್ದಾರೆ. ಅವರದು ರೈತ ಕುಟುಂಬ. ಆರು ಎಕರೆ ಅಡಿಕೆ ಮತ್ತು ಒಂದು ಎಕರೆ ತೆಂಗಿನ ತೋಟವಿದೆ. ಐದು ಹಸುಗಳಿದ್ದರೂ ತೋಟಕ್ಕೆ ಗೊಬ್ಬರ ಸಾಕಾಗುತ್ತಿರಲಿಲ್ಲ.

ಹೈನುಗಾರಿಕೆಗಿಂತ ಆಡು ಸಾಕಣೆ ಸುಲಭ, ಖರ್ಚು ಕಡಿಮೆ ಎಂಬುದನ್ನು ಮನಗಂಡ ಅವರು ಊರ ತಳಿಯ ಎರಡು ಆಡುಗಳೊಂದಿಗೆ ಸಾಕಣೆ ಕಾಯಕ ಆರಂಭಿಸಿದರು. ಈಗ ಅವರ ಬಳಿ ಹೈಬ್ರಿಡ್ ಮತ್ತು ಊರ ತಳಿಯ 40ಕ್ಕೂ ಹೆಚ್ಚು ಆಡುಗಳಿವೆ.

ಬಂಗಾರ ಶೆಟ್ಟಿ ಅವರು ಆಡುಗಳಿಗೆ ದಿನಕ್ಕೆ ಒಂದು ಬಾರಿ ಮಳೆಗಾಲದಲ್ಲಿ ನೀರು ಅಥವಾ ಅನ್ನ ಬಸಿದ ಗಂಜಿ, ಬೇಸಿಗೆಯಲ್ಲಿ ತೆಂಗಿನ ಹಿಂಡಿಗೆ ನೀರು ಬೆರೆಸಿ ಕುಡಿಯಲು ಕೊಡುತ್ತಾರೆ. ಅವುಗಳನ್ನು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಮ್ಮ ತೆಂಗಿನ ತೋಟದಲ್ಲಿ ಮೇಯಲು ಬಿಡುತ್ತಾರೆ.

ಆರು ತಿಂಗಳಿಗೊಮ್ಮೆ ರೋಗ ನಿರೋಧಕ ಚುಚ್ಚುಮದ್ದನ್ನು ಕೊಡಿಸುತ್ತಾರೆ. ಇಷ್ಟು ಬಿಟ್ಟರೆ ಬೇರೆ ಆರೈಕೆ ಮಾಡುವುದಿಲ್ಲ. ಆಡು ಮೇಯಿಸಲು ಒಬ್ಬರು ಸಹಾಯಕರನ್ನು ಇಟ್ಟುಕೊಂಡಿದ್ದಾರೆ.

ಆಡುಗಳು ವರ್ಷಕ್ಕೆ ಎರಡು ಬಾರಿ ಮರಿ  ಹಾಕುತ್ತವೆ. ಆಡಿನ ಹಾಲನ್ನು ಅವರು ಬಳಸುವುದಿಲ್ಲ. ಹಾಲು ಕುಡಿದಷ್ಟೂ ಮರಿಗಳ ಬೆಳವಣಿಗೆ ಶೀಘ್ರವಾಗಿ ಆಗುತ್ತದೆ ಎಂಬುದು ಅವರ ಅನುಭವ. ಹೆಣ್ಣು ಮರಿಗಳನ್ನು ಉಳಿಸಿಕೊಂಡು ಗಂಡು ಆಡು 30 ಕಿಲೊ ಆದಾಗ ಸ್ಥಳೀಯವಾಗಿ ಮಾರುತ್ತಾರೆ.

ಒಂದು ಗಂಡು ಆಡು ಒಂದು ವರ್ಷದಲ್ಲಿ 15 ಕಿಲೊ ತೂಗುತ್ತದೆ. ಒಂದು ಕಿಲೊ ಮಾಂಸಕ್ಕೆ 300 ರೂಪಾಯಿ ದರ. ಜೀವಂತವಾಗಿ ತೂಗಿ ಕೊಡುವುದಾದರೆ ಕಿಲೊಗೆ 150 ರೂ. ಬೆಲೆ ಇದೆ. ಒಂದು ಆಡಿನ ಮಾರಾಟದಿಂದ 5 ರಿಂದ 8 ಸಾವಿರ ರೂಪಾಯಿ ಸಿಗುತ್ತದೆ. ಕೆಲವು ಹಬ್ಬಗಳ ಸಂದರ್ಭದಲ್ಲಿ ಆಡಿನ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುತ್ತದೆ. ಊರ ತಳಿಗಿಂತ ಹೈಬ್ರಿಡ್ ತಳಿ ಉತ್ತಮ, ಮಾಂಸ ಜಾಸ್ತಿ ಎನ್ನುತ್ತಾರೆ ಅವರು.

ಒಂದು ಚೀಲ ಆಡಿನ ಗೊಬ್ಬರಕ್ಕೆ 250 ರೂ. ಬೆಲೆ ಇದೆ. ಆದರೆ ಅವರು ಆಡುಗಳ ಹಿಕ್ಕೆಯನ್ನು ಮಾರಾಟ ಮಾಡುವುದಿಲ್ಲ. ಒಂದೆಡೆ ಸಂಗ್ರಹಿಸುತ್ತಾರೆ. 50 ಚೀಲದಷ್ಟು ಆದಾಗ ಅದಕ್ಕೆ 3 ಚೀಲ ಯೂರಿಯಾ, 3 ಚೀಲ ಸುಣ್ಣ ಬೆರೆಸಿ ಸೋಗೆ ಮುಚ್ಚಿ ಇಡುತ್ತಾರೆ.
 
20 ದಿವಸ ಕಳೆದ ಮೇಲೆ ಅದು ಕೊಳೆತು ಹುಡಿ ಹುಡಿಯಾಗಿ ಉತ್ತಮ ಗೊಬ್ಬರವಾಗುತ್ತದೆ. ಇದನ್ನು ತಮ್ಮ ತೋಟದ ಅಡಿಕೆ ಮರಗಳಿಗೆ ಹಾಕುತ್ತಾರೆ.

ಇದರಿಂದಾಗಿ ಅಡಿಕೆ ಇಳುವರಿ ಉತ್ತಮವಾಗಿದೆ. ಸುತ್ತ ಮುತ್ತಲಿನ ತೋಟಕ್ಕೆ ಹಳದಿ ರೋಗ ಬಂದರೂ ಆಡಿನ ಗೊಬ್ಬರ ಬಳಕೆಯಿಂದ ಅವರ ತೋಟಕ್ಕೆ ಬಂದಿಲ್ಲವಂತೆ. 50 ಆಡುಗಳು ಇದ್ದರೆ ಒಂದು ಕುಟುಂಬದ ನಿರ್ವಹಣೆ  ಸಾಧ್ಯ.

ಬೇಸಾಯದ ಜತೆ ಆಡು ಸಾಕಣೆಯ ಆದಾಯದಿಂದ ಉತ್ತಮ ಜೀವನ ನಡೆಸಬಹುದು ಎನ್ನುತ್ತಾರೆ ಬಂಗಾರ ಶೆಟ್ಟಿ. ಆಡು ಸಾಕಣೆಯ ಅನುಭವಗಳಿಗಾಗಿ ಅವರ ದೂರವಾಣಿ ಸಂಖ್ಯೆ 0872 234525ಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT