ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಡಿಯೋ ಪುಸ್ತಕಗಳು ಹೆಚ್ಚಾಗಿ ಬರಬೇಕು'

ಸಾಹಿತ್ಯ ಪ್ರಕಾಶನ
Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮನುಷ್ಯನ ಬದುಕಿನಲ್ಲಿ `ಕಾಮ' ಆರಂಭದಲ್ಲಿ ಸಂಪೂರ್ಣ ಸ್ವಾರ್ಥದಿಂದಲೇ ಶುರುವಾಗುತ್ತದೆ. ಕೇವಲ ನನ್ನ ದೇಹದ ಬಯಕೆಯ ಪೂರೈಕೆ, ನನ್ನ ಮನಸ್ಸಿನ ಬೇಗುದಿಯ ಶಮನ, ನನ್ನ ವೈಯಕ್ತಿಕ ಜಗತ್ತಿಗೆ ಮಾತ್ರ ಸಂಬಂಧಿಸಿದ್ದು ಎನ್ನುವಂತೆ ಕಂಡರೂ, ಅನಂತರ ಅದು ಮದುವೆಯ ಮೂಲಕ ಮತ್ತೊಂದು ಜೀವದೊಡನೆ ಬಾಳನ್ನು ಹಂಚಿಕೊಳ್ಳುವುದಕ್ಕೂ, ಸಂಸಾರ-ಮಕ್ಕಳು ಆದ ಮೇಲೆ ಜಗತ್ತಿನ ಜೊತೆಗೆ ಬದುಕನ್ನು ಹಂಚಿಕೊಳ್ಳುವುದಕ್ಕೂ ಶುರುವಾದಾಗ, `ಕಾಮ'ದ ಉದ್ದೇಶವೇ ಬೇರೆಯಿತ್ತೇನೋ ಎನ್ನುವ ಭಾವನೆ ಮೂಡುತ್ತದೆ.

ಬಹುಶಃ ನನ್ನ `ಛಂದ ಪುಸ್ತಕ'ದ ಉದಯ ಮತ್ತು ಬೆಳವಣಿಗೆ ಇದೇ ರೀತಿಯಿಂದ ಆಯಿತೆಂದು ನನಗೆ ಈಗ ಅನ್ನಿಸುತ್ತದೆ. ಶುರುವಿನಲ್ಲಿ ನನಗೆ ಯಾವುದೇ ಪುಸ್ತಕ ಪ್ರಕಾಶನದ ಕಲ್ಪನೆಯೂ ಇರಲಿಲ್ಲ. ಅದರಲ್ಲಿ ಉತ್ಸಾಹವೂ ಇರಲಿಲ್ಲ. ಸುಮಾರು ಮೂರು ಪುಸ್ತಕಗಳಿಗಾಗುವಷ್ಟು ಕತೆ ಮತ್ತು ಪ್ರಬಂಧಗಳನ್ನು ಬರೆದಿದ್ದೆ. ಅವನ್ನು ಪ್ರಕಟಿಸುವದೊಂದೇ ನನ್ನ ಹೆಬ್ಬಯಕೆಯಾಗಿತ್ತು.

ದುರದೃಷ್ಟದಿಂದ ಯಾವುದೇ ಪ್ರಕಾಶಕರೂ ಅವನ್ನು ಪ್ರಕಟಿಸಲು ಮುಂದೆ ಬರಲಿಲ್ಲವಾದ್ದರಿಂದ, ಗೆಳೆಯ `ಅಪಾರ'ನ ಸಲಹೆಯ ಮೇರೆಗೆ ನಾನೇ ಅವನ್ನು ಪ್ರಕಟಿಸಿಕೊಂಡೆ. ನನ್ನದೇ ಪುಸ್ತಕವನ್ನು ನಾನೇ ಹಣ ಹೂಡಿ ಪ್ರಕಟಿಸಿಕೊಳ್ಳಬೇಕಲ್ಲಾ ಎಂದು ಅತ್ಯಂತ ಸಂಕೋಚ, ಕೀಳರಿಮೆಯಿಂದ ನನ್ನ ದೇಹ ಹಿಡಿಯಷ್ಟಾಗಿತ್ತು. ಪ್ರಕಟವಾದ ಪುಸ್ತಕವನ್ನು ಅಂಗಡಿಗಳಿಗೆ ತೆಗೆದುಕೊಂಡು ಹೋಗಿ, `ದಯವಿಟ್ಟು ಈ ಪುಸ್ತಕಗಳನ್ನು ಮಾರಾಟ ಮಾಡಿ' ಎಂದು ಬೇಡಿಕೊಳ್ಳುವಾಗ ಜೀವ ಬಾಯಿಗೆ ಬರುತ್ತಿತ್ತು. ಆದರೆ ಒಂದು ವರ್ಷ ಮುಗಿಯುವಷ್ಟರಲ್ಲಿ ನಾನು ಮುದ್ರಿಸಿದ ಎಲ್ಲಾ ಪುಸ್ತಕಗಳು ಮಾರಾಟವಾಗಿದ್ದವು. ಜೊತೆಗೆ ಇನ್ನಷ್ಟು ಬೇಕೆಂಬ ಬೇಡಿಕೆಯೂ ನನಗೆ ಅಂಗಡಿಯಿಂದ ಬಂತು.

ಆಗ ನನಗೆ ಧೈರ್ಯ ಬಂತು! ಮನಸ್ಸು ನನ್ನ ಸ್ವಾರ್ಥದಿಂದ ಹಿಂದಕ್ಕೆ ಸರಿದು ಬೇರೆ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸಿತು. `ಅರೆ, ನನ್ನ ಪುಸ್ತಕಗಳನ್ನು ಇಷ್ಟ ಸುಲಭವಾಗಿ ಒಂದು ವರ್ಷದಲ್ಲಿ ಮಾರಾಟ ಮಾಡುವದಾದರೆ, ಉಳಿದವರ ಪುಸ್ತಕಗಳನ್ನು ನಾನ್ಯಾಕೆ ಪ್ರಕಟಿಸಬಾರದು? ನನ್ನಂತೆಯೇ ಎಷ್ಟೋ ಕನ್ನಡದ ಹೊಸ ಲೇಖಕರು ಪ್ರಕಾಶಕರು ಸಿಗದೆ ಒದ್ದಾಡುತ್ತಿರುತ್ತಾರಲ್ಲವೆ? ಆ ಕೆಲಸವನ್ನು ನಾನ್ಯಾಕೆ ಮಾಡಬಾರದು?' ಎಂಬ ಯೋಚನೆ ನನಗೆ ಛಂದ ಪುಸ್ತಕವನ್ನು ಗಂಭೀರವಾಗಿ ಪರಿಗಣಿಸಲು ಸಹಾಯ ಮಾಡಿತು. ಆ ರೀತಿಯಿಂದ `ಛಂದ ಪುಸ್ತಕ' ಬೆಳೆಯಲು ಪ್ರಾರಂಭವಾಯ್ತು!

`ಛಂದ ಪುಸ್ತಕ' ಪ್ರಾರಂಭವಾಗಿ ಹತ್ತು ವರ್ಷಗಳಾಗಿವೆ. ಈ ಹತ್ತು ವರ್ಷದಲ್ಲಿ ನಾನು ಪ್ರಕಟಿಸಿದ್ದು ಬರೀ 50 ಪುಸ್ತಕಗಳು. ಆದರೆ ಎಲ್ಲಾ ಪುಸ್ತಕಗಳನ್ನೂ ಅತ್ಯಂತ ಪ್ರೀತಿಯಿಂದ, ಸಾಹಿತ್ಯಲೋಕಕ್ಕೆ ಕಳಂಕ ಬರದಂತಹ ವಿಶೇಷ ಬರವಣಿಗೆಯೆನ್ನಿಸಿದಾಗ ಮಾತ್ರ ಪ್ರಕಟಿಸಿದ ತೃಪ್ತಿ ನನಗಿದೆ. ಈ ಪುಸ್ತಕಗಳೆಲ್ಲವೂ ಕನ್ನಡದಲ್ಲಿ ಹೊಸದಾಗಿ ಬರೆಯಲು ಪ್ರಾರಂಭಿಸಿದ ಲೇಖಕರವೇ ಆಗಿವೆ. ಈ ಹತ್ತು ವರ್ಷದಲ್ಲಿ ಅವರಲ್ಲಿ ಹಲವರು ಬೆಳೆದು ಸದ್ಯದ ಮಹತ್ವದ ಕನ್ನಡ ಲೇಖಕರಾಗಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಈ ಎಲ್ಲಾ ಲೇಖಕರೊಡನೆ ನಾನು ಇಂದಿಗೂ ಪ್ರೀತಿಯಿಂದ ಒಡನಾಡುತ್ತಿದ್ದೇನೆಂಬುದು ನನಗೆ ಖುಷಿಯ ಸಂಗತಿ. ನಾಡಿನ ಓದುಗರೂ ನಮ್ಮ ಎಲ್ಲಾ ಪ್ರಕಟಣೆಗಳನ್ನು ಸಂತೋಷದಿಂದ ಸ್ವೀಕರಿಸಿ, ಸುಮಾರು 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಪ್ರಸ್ತುತ ಕನ್ನಡದಲ್ಲಿ ಪುಸ್ತಕಗಳು ಭರದಿಂದ ಮಾರಾಟವಾಗುತ್ತಿವೆ. ಪುಸ್ತಕ ಚೆನ್ನಾಗಿದ್ದರೆ ವರ್ಷದಲ್ಲಿ ಒಂದೆರಡು ಮುದ್ರಣಗಳು ಕಾಣುವಷ್ಟು ಉತ್ಸಾಹದ ಮಾರಾಟ ಮಾರುಕಟ್ಟೆಯಲ್ಲಿದೆ. ಆದರೆ, ಈ ಪುಸ್ತಕಗಳನ್ನು ಕೊಳ್ಳುವವರೆಲ್ಲರೂ ಸಾಮಾನ್ಯವಾಗಿ 30 ವಯೋಮಾನ ದಾಟಿದವರೇ ಆಗಿರುತ್ತಾರೆ. ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ಮೇಲೆ ಪ್ರಾರಂಭವಾದ ಬೆಳವಣಿಗೆ ಇದಾಗಿದೆ. ಆದರೆ ನಮ್ಮ ಮಕ್ಕಳು ಇಂದು ಕನ್ನಡ ಪುಸ್ತಕಗಳನ್ನು ಓದುತ್ತಿಲ್ಲ ಎಂಬುದನ್ನು ನಾವು ಯಾರೂ ಮರೆಯುವಂತಿಲ್ಲ. ಇಡೀ ಭಾರತದ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗೆ ಪ್ರಾಮುಖ್ಯತೆಯೇ ಹೋಗಿ, ಬರೀ ವಿಜ್ಞಾನವೇ ಮುಖ್ಯವೆಂದು ಪರಿಗಣಿಸಿದ್ದರಿಂದ ಸೃಷ್ಟಿಯಾದ ಆತಂಕವಿದು. ಕೇವಲ ಕನ್ನಡವೊಂದೇ ಅಲ್ಲ, ಇತರ ಪ್ರಾದೇಶಿಕ ಭಾಷೆಯಲ್ಲಿಯೂ ಮಕ್ಕಳು ಪುಸ್ತಕವನ್ನು ಓದುತ್ತಿಲ್ಲ. ಇದೇ ಪರಿಸ್ಥಿತಿ ಇನ್ನಷ್ಟು ವರ್ಷ ಮುಂದುವರೆದರೆ, ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ಅಂತಹ ಉತ್ಸಾಹ ಇರಲಿಕ್ಕಿಲ್ಲ. ಆರುವಾಗ ಹೆಚ್ಚು ಬೆಳಗುವ ಜ್ಯೋತಿಯಂತೆ ನನಗೆ ಸದ್ಯದ ಕನ್ನಡ ಪುಸ್ತಕೋದ್ಯಮ ಕಾಣುತ್ತದೆ.

ಲಾಭದ ದೃಷ್ಟಿಯಿಂದ ನೋಡಿದಾಗ, ಪ್ರಕಟಿಸಿದ ಎಲ್ಲಾ ಪುಸ್ತಕಗಳು ಹೂಡಿದ ಹಣವನ್ನು ಹಿಂತಿರುಗಿಸುವುದಿಲ್ಲ. ಕೇವಲ ಗ್ರಂಥಾಲಯಗಳನ್ನು ನಂಬಿಕೊಂಡು ಪುಸ್ತಕ ಮಾಡುವವನೂ ನಾನಲ್ಲ. ಅಂಗಡಿಯಲ್ಲಿ ಓದುಗರು ಕೊಂಡು ಪುಸ್ತಕಗಳು ಖರ್ಚಾದರೆ ಮಾತ್ರ ನನಗೆ ಖುಷಿ. ಆದರೆ ನಾನು ಬರೆದ ಎಲ್ಲಾ ಪುಸ್ತಕಗಳಿಗೆ ಅಂಗಡಿಯಲ್ಲಿ ಸಾಕಷ್ಟು ಬೇಡಿಕೆಯಿದೆ. ಅವುಗಳು ಸಾಕಷ್ಟು ಮರುಮುದ್ರಣವನ್ನು ಕಾಣುತ್ತವೆ. ಅದರಿಂದ ಸ್ವಲ್ಪ ಹಣವೂ ನನಗೆ ಬರುತ್ತದೆ. ಆ ಹಣವನ್ನು ಉಳಿದ ಪುಸ್ತಕಗಳ ಪ್ರಕಟಣೆ, ಬಿಡುಗಡೆ ಸಮಾರಂಭಕ್ಕೆ ಹಂಚಿಕೊಳ್ಳುತ್ತೇನೆ. ಆದ್ದರಿಂದ ನನಗೆ ಪುಸ್ತಕ ಪ್ರಕಟಣೆಯಿಂದ ಲಾಭವಿಲ್ಲದಿದ್ದರೂ, ನಷ್ಟವಂತೂ ಆಗಿಲ್ಲ. ಇದು ನಾನು ಪ್ರೀತಿಯಿಂದ ಮಾಡುವ ಕೆಲಸವಾದ್ದರಿಂದ, ಇಲ್ಲಿ ಲಾಭ ನನಗೆ ಅಷ್ಟು ಮುಖ್ಯವೆಂದು ಎಂದೂ ಕಂಡಿಲ್ಲ. ಪ್ರಸಿದ್ಧರ ಪುಸ್ತಕಗಳನ್ನು ಪ್ರಕಟಿಸುವುದು ಬೇಡವೆಂದು ನಾನು ನಿರ್ಧರಿಸಿದಾಗಲೇ, `ಲಾಭ ಮುಖ್ಯವಲ್ಲ' ಎಂಬ ಭಾವ ನನ್ನಲ್ಲಿ ಮೂಡಿರಬೇಕು.

ಪುಸ್ತಕ ಮಾರಾಟಕ್ಕೆ ಬೇಕಾದ ಅನುಕೂಲ ವಾತಾವರಣ ಕನ್ನಡದಲ್ಲಿ ಇಲ್ಲ. ಬೆಂಗಳೂರು ಹೊರತು ಪಡಿಸಿದರೆ ನಾಡಿನ ಇತರ ಪ್ರಮುಖ ನಗರದಲ್ಲಿ ಒಳ್ಳೆಯ ಪುಸ್ತಕದ ಅಂಗಡಿಗಳಿಲ್ಲ. ಕನ್ನಡ ಪುಸ್ತಕಗಳ ಮಾರಾಟ ಲಾಭದಾಯಕ ಉದ್ದಿಮೆಯಲ್ಲವೆಂಬುದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಇರುವ ಪುಸ್ತಕದ ಅಂಗಡಿಗಳ ಮಾರಾಟಗಾರರು ಹೆಚ್ಚಾಗಿ ಉಡುಗೊರೆ ಸಾಮಾನು, ಇಂಗ್ಲಿಷ್ ಪುಸ್ತಕಗಳು, ಸಿಡಿ ಇತ್ಯಾದಿಗಳನ್ನು ಮಾರಿ ಬದುಕಿಕೊಂಡಿದ್ದೇವೆಂದು ಹೇಳುತ್ತಾರೆ. ಹಿಂದೆಂದಿಗಿಂತಲೂ ಇಂದು ಕನ್ನಡ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆಯಾದರೂ, ಪುಸ್ತಕದ ಅಂಗಡಿಗಳನ್ನು ಯಥೇಚ್ಛವಾಗಿ ತೆರೆಯುವಷ್ಟು ಉದ್ದಿಮೆ ಬೆಳೆದಿಲ್ಲ. ಜಿಲ್ಲಾಕೇಂದ್ರದ ಎಷ್ಟೋ ಊರುಗಳಲ್ಲಿ ಪುಸ್ತಕ ಬಿಡುಗಡೆಯಾದಾಗ, ಲೇಖಕರು ಪುಸ್ತಕಗಳನ್ನು ಮಾರಾಟ ಮಾಡುವುದೇ ಇಲ್ಲ. ಎಲ್ಲಾ ಓದುಗರಿಗೆ ಗೌರವ ಪ್ರತಿಗಳನ್ನು ಕೊಟ್ಟು ಬಿಡುತ್ತಾರೆ. `ನನಗೆ ಗೌರವ ಪ್ರತಿ ಸಿಕ್ಕಿಲ್ಲ' ಎಂದು ಲೇಖಕರ ಮೇಲೆ ಸಿಟ್ಟಾಗುವ ಕನ್ನಡದ ಓದುಗರನ್ನು ಕಂಡಾಗ ನನಗೆ ತಮಾಷೆಯೆನ್ನಿಸುತ್ತದೆ.

`ಛಂದ ಪುಸ್ತಕ' ಹತ್ತು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಸುಮಾರು ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ನನ್ನಲ್ಲಿದೆ. ಸುನಿಲ್ ರಾವ್ ಅನುವಾದಿಸಿದ `ಲೈಫ್ ಅಂಡ್ ಟೈಮ್ಸ ಆಫ್ ಮೈಕಲ್ ಕೆ' ಎನ್ನುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೃತಿ, ಎಂ.ಆರ್. ದತ್ತಾತ್ರಿ ಬರೆದಿರುವ ಒಂದು ಹೊಸ ಕಾದಂಬರಿ, ಗುರುಪ್ರಸಾದ್ ಕಾಗಿನೆಲೆ ಅವರ ಹೊಸ ಕಥಾಸಂಕಲನ, ಷಣ್ಮುಖ ಎಸ್. ಅವರು ಬರೆದ `ಮೋಹನಸ್ವಾಮಿ' ಎನ್ನುವ ಸಲಿಂಗಕಾಮಕ್ಕೆ ಸಂಬಂಧಿಸಿದ ಕಥಾಸಂಕಲನ, ನನ್ನದೊಂದು ಹೊಸ ಕಥಾಗುಚ್ಛ - ಈ ಎಲ್ಲವನ್ನೂ ಈ ವರ್ಷದ ಕೊನೆಯೊಳಗೆ ಪ್ರಕಟಿಸುವ ತಯಾರಿಯಲ್ಲಿದ್ದೇನೆ.

ಕನ್ನಡದಲ್ಲಿ ಆಡಿಯೋ ಪುಸ್ತಕಗಳು ಹೆಚ್ಚಾಗಿ ಬರಬೇಕು ಎಂಬುದು ನನ್ನ ಆಸೆ. ಹಲವಾರು ಪ್ರಯತ್ನಗಳು ನಡೆದಿವೆಯಾದರೂ ಯಾವುದೂ ಯಶಸ್ವಿಯಾಗಿ ಮಾರಾಟವಾಗಿಲ್ಲ. ಪುಸ್ತಕ ಓದುವ ಹವ್ಯಾಸವಿರುವವರಿಗೆ ಆಡಿಯೋ ಪುಸ್ತಕ ಅಷ್ಟೊಂದು ರುಚಿಸಲಾರದು. ಆದರೆ ಬೇರೆ ಹೊಸ ಓದುಗರು ಇದಕ್ಕೆ ದಕ್ಕುವ ಸಾಧ್ಯತೆಗಳಿವೆ. ಇವು ಮುಖ್ಯವಾಗಿ ಎರಡು ವಿಭಿನ್ನ ಧ್ರುವದ ಹೊಸ ಓದುಗರನ್ನು ಆಕರ್ಷಿಸುವ ಶಕ್ತಿಯನ್ನು ಪಡೆದುಕೊಂಡಿವೆ. ಕನ್ನಡ ಮಾತೃಭಾಷೆಯಾದರೂ ಓದಲು ಬರೆಯಲು ಬಾರದ ನಮ್ಮ ಕನ್ನಡದ ಹೊಸ ಹುಡುಗರು ಅದನ್ನು ಮೆಚ್ಚಬಹುದು ಎಂಬುದು ನನ್ನ ನಂಬಿಕೆ. ಅದೇ ರೀತಿ ಅಕ್ಷರ ಲೋಕದ ಪರಿಚಯವಿಲ್ಲದ ನಮ್ಮ ಹಳ್ಳಿಯ ಹಿರಿಯ ನಾಗರಿಕರು ಈ ಆಡಿಯೋ ಪುಸ್ತಕಗಳನ್ನು ಮೆಚ್ಚಬಹುದೆಂದು ನನ್ನ ನಿರೀಕ್ಷೆ. ಆದ್ದರಿಂದ ಛಂದ ಪುಸ್ತಕದ ಹಲವಾರು ಪುಸ್ತಕಗಳ ಆಡಿಯೋ ಪುಸ್ತಕಗಳನ್ನು ಹೊರ ತರುವ ಯೋಜನೆಯನ್ನು ಹಾಕಿಕೊಂಡಿದ್ದೇನೆ. ಕನ್ನಡದ ಹುಡುಗನೊಬ್ಬ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಕಾರನ್ನು ವೇಗವಾಗಿ ಓಡಿಸುತ್ತಾ ನಮ್ಮ ಕನ್ನಡದ ಕತೆಯನ್ನು ಕೇಳುತ್ತಿರುವಾಗ, ಇಲ್ಲಿ ಕರ್ನಾಟಕದ ಮೂಲೆಯಲ್ಲಿರುವ ಹಳ್ಳಿಯಲ್ಲಿ ಅಕ್ಷರ ಬಾರದ ನಮ್ಮ ಹಳ್ಳಿಯ ರೈತನೊಬ್ಬ ತನ್ನ ಮೊಬೈಲ್ ಮೂಲಕ ಕಿವಿಯಲ್ಲಿ ಹೆಡ್‌ಸೆಟ್ ಇಟ್ಟುಕೊಂಡು ನಮ್ಮ ಕನ್ನಡ ಕತೆ ಕೇಳುತ್ತಾ ಹೊಲದಲ್ಲಿ ಬಿತ್ತನೆ ಮಾಡುವ ಕನಸನ್ನು ನಾನು ಕಾಣುತ್ತೇನೆ.

ಇಷ್ಟೆಲ್ಲಾ ಹೇಳಿದ ಮೇಲೆ ಮೊನ್ನೆ ನಡೆದ ಘಟನೆಯೊಂದನ್ನು ನಾನು ನಿಮಗೆ ಹೇಳಲೇ ಬೇಕು. ಕಳೆದ ಭಾನುವಾರ ನಮ್ಮ `ಛಂದ ಪುಸ್ತಕ ಬಹುಮಾನ' ಪಡೆದ ಮೌನೇಶ ಬಡಿಗೇರ ಅವರ `ಮಾಯಾಕೋಲಾಹಲ' ಎನ್ನುವ ಕಥಾಸಂಕಲನದ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದೆ. ಅದರ ಹಿಂದಿನ ದಿನ ನನಗೊಂದು ವಿಶೇಷ ದೂರವಾಣಿ ಕರೆ ಬಂತು.

`ಇದು ಛಂದ ಪುಸ್ತಕದ ಅಂಗಡಿಯೇನ್ರಿ...?'
`ಹೌದು'.

`ನಾಳೆ ಪುಸ್ತಕ ಬಿಡುಗಡೆ ಸಮಾರಂಭ ಅದೆ ಅಲ್ಲೇನ್ರೀ?'
`ಹೌದು'.

`ನಾವು ಪೊಲೀಸ್ ಸ್ಟೇಷನ್‌ನಿಂದ ಫೋನ್ ಮಾಡ್ತಿದೀವಿ'.
ನನ್ನ ಎದೆಬಡಿತ ಎರಡು ಕ್ಷಣ ನಿಂತಿತು. ಪೊಲೀಸು, ಕಾನೂನು ಎಂದರೆ ನನಗೆ ವಿಪರೀತ ಭಯವಿದೆ. ಆದ್ದರಿಂದ ಉತ್ತರಿಸದೆ ಸುಮ್ಮನೆ ಮೌನ ವಹಿಸಿದೆ.

`ಯಾರಾದ್ರೂ ಗಣ್ಯವ್ಯಕ್ತಿ ಬರ್ತಾ ಇದಾರೇನ್ರಿ?'

`ಹೌದು ಸಾರ್. ಸಾಗರದಿಂದ ಹಿರಿಯ ವಿಮರ್ಶಕ ಟಿ.ಪಿ. ಅಶೋಕ, ಮುಧೋಳದಿಂದ ಕನ್ನಡದ ಮುಖ್ಯ ಕವಿ ಆನಂದ ಝಂಜರವಾಡ ಅವರೂ ಬರ್ತಿದಾರೆ'.

`ಥೋ ಥೋ ಥೋ! ಅಂತಹವರೆಲ್ಲಾ ಅಲ್ಲ ಬಿಡ್ರಿ. ಗಣ್ಯವ್ಯಕ್ತಿ ಅಂದ್ರೆ ರಾಜಕೀಯದವರೂ, ಸಿನಿಮಾದವರೂ... ಅಂತಹವರು ಯಾರಾದ್ರೂ ಬರ್ತಾರಾ?'

`ಇಲ್ಲ ಸಾರ್, ಬರೀ ಸಾಹಿತ್ಯಾಸಕ್ತರು ಮಾತ್ರ ಬರ್ತಾರೆ'.

`ಹಂಗಾರೆ ನಿಮಗೆ ಸೆಕ್ಯೂರಿಟಿ ಬೇಕಾಗಿಲ್ಲ ಬಿಡ್ರಿ' ಎಂದು ಅವನೇ ಫೋನ್ ಡಿಸ್‌ಕನೆಕ್ಟ್ ಮಾಡಿದ.

ಸಾಹಿತ್ಯ ಲೋಕದಲ್ಲಿ ಜೀವಿಸುತ್ತಿರುವ ನಾವು ಅಲ್ಪಸಂಖ್ಯಾತರು. ಏನೇ ಸಾಧನೆ ಮಾಡಿದರೂ ಜಗತ್ತಿನ ಕಣ್ಣಲ್ಲಿ ನಾವು ಗಣ್ಯವ್ಯಕ್ತಿಗಳಂತೂ ಆಗಲು ಸಾಧ್ಯವಿಲ್ಲ. ಆದರೆ ನಮ್ಮ ನಮ್ಮ ಕಣ್ಣಲ್ಲಿ ನಾವು ನಗಣ್ಯರಾಗದೇ ಉಳಿದುಕೊಳ್ಳುವದಷ್ಟೇ ನಮಗೆ ಈಗಿರುವ ದಾರಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT