ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೋ ಸಿಸ್ಟಮ್ ಕೊಳ್ಳುವ ಮುನ್ನ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸರಳವಾದ ಮೋನೋ ಕ್ಯಾಸೆಟ್ ಪ್ಲೇಯರ್‌ಗಳಿಂದ ಈಗಿನ ಅತ್ಯಾಧುನಿಕವಾದ 5.1 ಸಿಸ್ಟಮ್‌ಗಳ ತನಕ ಆಡಿಯೋ ಸಿಸ್ಟಮ್‌ಗಳ ದೀರ್ಘ ಪಯಣ ಸಾಗಿದೆ. ಇನ್ನೂ ಸಾಗುತ್ತಲೇ ಇದೆ. ಆಡಿಯೋ ಸಿಸ್ಟಮ್‌ಗಳು ಹಲವು ನಮೂನೆಗಳಲ್ಲಿ ಲಭ್ಯ.

ಸಾವಿರದಿಂದ ಹಿಡಿದು ಹಲವು ಲಕ್ಷಗಳ ತನಕವೂ ಬೆಲೆಬಾಳುವ ಸಿಸ್ಟಮ್‌ಗಳಿವೆ. ಇವುಗಳ ಬಗ್ಗೆ ಪೂರ್ತಿಯಾಗಿ ತಿಳಿಸಲು ಹಲವು ಲೇಖನಗಳೇ ಬೇಕು. ಇವನ್ನು ಹಲವು ಕಂತುಗಳಲ್ಲಿ ನೀಡಲಾಗುವುದು. ಇದು ಈ ಮಾಲಿಕೆಯ ಪ್ರಥಮ ಕಂತು.
 
ಮೋನೋ ಮತ್ತು ಸ್ಟೀರಿಯೋ
ಆಡಿಯೋ ಸಿಸ್ಟಮ್‌ಗಳಲ್ಲಿ ಈಗ ಕಂಡು ಬರುವುದು ಎಲ್ಲವೂ ಸ್ಟೀರಿಯೋಗಳೇ. ಸ್ಟೀರಿಯೋ ಎಂದರೆ ಏನು? ಸರಳವಾಗಿ ಹೇಳುವುದಾದರೆ ಎರಡು ಚಾನೆಲ್‌ಗಳು ಮತ್ತು ಎರಡು ಸ್ಪೀಕರ್‌ಗಳು ಇರುವಂತಹವುಗಳು. ಎರಡೇಕೆ? ಯಾಕೆಂದರೆ ನಮಗೆ ಎರಡು ಕಿವಿ ಇವೆ! ನಮಗೆ ಧ್ವನಿ ಕೇಳಿ ಬಂದಾಗ ಅದು ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ.
 
ನಮಗೆ ಎರಡು ಕಿವಿ ಇರುವುದರಿಂದ ಇದು ಸಾಧ್ಯವಾಗಿದೆ. ಒಂದು ಧ್ವನಿ ನಮ್ಮ ಎಡ ಮತ್ತು ಬಲ ಕಿವಿಗಳನ್ನು ತಲುಪುವುದರಲ್ಲಿ ಸ್ವಲ್ಪ ಸಮಯದ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅಳೆದು ಮೆದುಳು ಎಂಬ ಅದ್ಭುತ ಗಣಕ ಧ್ವನಿ ಯಾವ ದಿಕ್ಕಿನಿಂದ ಬರುತ್ತಿದೆ ಎಂದು ಅರ್ಥಮಾಡಿಕೊಳ್ಳುತ್ತದೆ.
 
ಹಾಗೆಯೇ ಅದು ಇದ್ದಲ್ಲಿಯೇ ಇದೆಯೇ ಅಥವಾ ಚಲಿಸುತ್ತಿದೆಯೇ, ಚಲಿಸುತ್ತಿದ್ದರೆ ಯಾವ ದಿಕ್ಕಿಗೆ, ಎಷ್ಟು ವೇಗದಲ್ಲಿ ಎಂದೆಲ್ಲ ಲೆಕ್ಕಹಾಕುತ್ತದೆ. ಒಟ್ಟಿನಲ್ಲಿ ಧ್ವನಿಯ ಮೂರು ಆಯಾಮದ ಚಿತ್ರಣವನ್ನು ಮೆದುಳು ಲೆಕ್ಕ ಹಾಕುತ್ತದೆ. ಇದೇ ಪರಿಣಾಮ ಒಂದು ಆಡಿಯೋ ಸಿಸ್ಟಮ್ ಮೂಡಿಸಬೇಕಾದರೆ ಎಡದ ಕಿವಿಗೆ ಮತ್ತು ಬಲದ ಕಿವಿಗೆ ಪ್ರತ್ಯೇಕವಾಗಿ ಧ್ವನಿ ಬೀಳುವಂತೆ ಮಾಡಬೇಕು.

ಇದನ್ನು ಹೆಡ್‌ಫೋನ್‌ಗಳು ಸಮರ್ಥವಾಗಿ ಮಾಡುತ್ತವೆ. ಎರಡು ಮೈಕ್ ಇಟ್ಟುಕೊಂಡು ಧ್ವನಿಯನ್ನು ರೆಕಾರ್ಡ್ ಮಾಡಿ ಎಡ ಮತ್ತು ಬಲ ಕಿವಿಗಳಿಗೆ ಪ್ರತ್ಯೇಕ ಧ್ವನಿ ಬೀಳುವಂತೆ ಮಾಡಿದರೆ ಧ್ವನಿಯ ಪೂರ್ತಿ ಮೂರು ಆಯಾಮದ ಪುನರುತ್ಪತ್ತಿ ಆದಂತೆ. ಎರಡು ಸ್ಪೀಕರ್ ಇಟ್ಟುಕೊಂಡು ಆಲಿಸುವಾಗ ಎರಡು ಸ್ಪೀಕರುಗಳ ಮಧ್ಯದಲ್ಲಿ ಕುಳಿತು ಕೇಳಿದರೆ ಬಹುಮಟ್ಟಿಗೆ ಇದೇ ಅನುಭವ ಆಗುತ್ತದೆ.
 
ಹೀಗೆ ಎರಡು ಚಾನೆಲ್ ಇಲ್ಲದೆ ಕೇವಲ ಒಂದೇ ಚಾನೆಲ್ ಇದ್ದರೆ ಅದು ಮೋನೋ. ಮೀಡಿಯಂ ವೇವ್ ಅಥವಾ ಶಾರ್ಟ್‌ವೇವ್ ರೇಡಿಯೋಗಳು ಮೋನೋ ಆಗಿರುತ್ತವೆ. ಎಫ್‌ಎಂ ರೇಡಿಯೋಗಳಲ್ಲಿ ಸ್ಟೀರಿಯೋ ಸೌಲಭ್ಯ ಇದೆ. ಸ್ಟೀರಿಯೋ ಸಿಸ್ಟಮ್‌ಗಳಲ್ಲಿ ಹಲವು ನಮೂನೆಗಳಿವೆ. ಅವುಗಳ ಕಡೆಗೆ ಗಮನ ಹರಿಸೋಣ.

ಬೂಮ್‌ಬಾಕ್ಸ್
ಸರಳವಾದ, ಸುಲಭವಾಗಿ ಎತ್ತೊಯ್ಯಬಲ್ಲ, ಟೂ-ಇನ್-ಒನ್ ಅಥವಾ ಥ್ರೀ-ಇನ್-ಒನ್ ಎಂದು ಕರೆಯಿಸಕೊಳ್ಳುತ್ತಿದ್ದ ಸ್ಟೀರಿಯೋ ಸಿಸ್ಟಮ್‌ಗಳು. ಇವುಗಳಲ್ಲಿ ಕ್ಯಾಸೆಟ್ ಪ್ಲೇಯರ್ ಅಥವಾ ಸೀಡಿ ಪ್ಲೇಯರ್ ಹಾಗೂ ರೇಡಿಯೋಗಳು ಇರುತ್ತವೆ. ಇವುಗಳಲ್ಲಿ ಎರಡು ಸ್ಪೀಕರ್‌ಗಳಿರುತ್ತವೆ. ಕೆಲವು ನಮೂನೆಗಳಲ್ಲಿ ಸ್ಪೀಕರುಗಳನ್ನು ಬೇರೆ ಬೇರೆ ಮಾಡಿ ಸ್ವಲ್ಪ ದೂರ ಇಟ್ಟು ಆಲಿಸಲೂಬಹುದು.

ಎರಡು ಕ್ಯಾಸೆಟ್ ಸೌಲಭ್ಯದವೂ ಇದ್ದವು. ಇಂತಹವುಗಳಲ್ಲಿ ಕ್ಯಾಸೆಟ್‌ಗಳನ್ನು ಸುಲಭವಾಗಿ ಪ್ರತಿ ಮಾಡಿಕೊಳ್ಳಬಹುದು. ಎರಡು ಮೂರು ದಶಕಗಳ ಹಿಂದೆ ಇವು ತುಂಬ ಪ್ರಚಲಿತವಾಗಿದ್ದವು. ಈಗ ಇವುಗಳು ಹೆಚ್ಚಾಗಿ ಕಂಡುಬರುತ್ತಿಲ್ಲ. ಇವುಗಳಲ್ಲಿ ಧ್ವನಿ ಹಾಗೂ ಸಂಗೀತದ ಗುಣಮಟ್ಟ ಅಷ್ಟೇನೂ ಉತ್ತಮವಾಗಿಲ್ಲ. ಅಧಿಕ ವಾಲ್ಯೂಮ್ ಮಾತ್ರ ಇರುತ್ತಿತ್ತು. ಅಂತೆಯೇ ಇವುಗಳಿಗೆ ಬೂಮ್‌ಬಾಕ್ಸ್ ಎಂಬ ಹೆಸರು ಬಂತು.

ಶೆಲ್ಫ್ ಸ್ಟೀರಿಯೋ ಸಿಸ್ಟಮ್
ಇವುಗಳು ಸುಲಭವಾಗಿ ಎತ್ತೊಯ್ಯಬಲ್ಲವಲ್ಲ. ಇವುಗಳಲ್ಲೂ ಕ್ಯಾಸೆಟ್ ಪ್ಲೇಯರ್, ಸೀಡಿ ಅಥವಾ ಡಿ.ವಿ.ಡಿ. ಜೊತೆ ರೇಡಿಯೋ ಇರುತ್ತವೆ. ಇವುಗಳನ್ನು ಆಂಪ್ಲಿಫೈಯರ್ ಆಗಿಯೂ ಬಳಸಬಹುದು. ಇವುಗಳ ಧ್ವನಿ ಹಾಗೂ ಸಂಗೀತದ ಗುಣಮಟ್ಟ ಬೂಮ್‌ಬಾಕ್ಸ್‌ಗಳಿಗಿಂತ ಸ್ವಲ್ಪ ಉತ್ತಮವಾಗಿರುತ್ತವೆ.

ಕಾಂಪೊನೆಂಟ್ ಸಿಸ್ಟಮ್
ಇವುಗಳು ಉತ್ತಮ ಗುಣಮಟ್ಟದವು. ಇವುಗಳಲ್ಲಿ ಕ್ಯಾಸೆಟ್ ಪ್ಲೇಯರ್, ಡಿ.ವಿ.ಡಿ. ಪ್ಲೇಯರ್, ರೇಡಿಯೋ, ಆಂಪ್ಲಿಫೈಯರ್, ಸ್ಪೀಕರ್, ಎಲ್ಲ ಬೇರೆ ಬೇರೆ ಆಗಿರುತ್ತವೆ. ಪ್ರತಿಯೊಂದು ಉತ್ತಮ ಗುಣಮಟ್ಟದ್ದಾಗಿರುತ್ತವೆ. ಇವುಗಳನ್ನು ಹೈಫೈ (High Fidility)  ಎಂದೂ ಕರೆಯುತ್ತಾರೆ.

ಇವುಗಳಲ್ಲಿ ಟೀವಿಗೂ ಇನ್‌ಪುಟ್ ಮತ್ತು ಔಟ್‌ಪುಟ್ ಸೌಲಭ್ಯ ಇರುತ್ತದೆ. ಆದ್ದರಿಂದ ಕೆಲವೊಮ್ಮೆ ಇವುಗಳು ಹೋಮ್ ಥಿಯೇಟರಿನ ಅಂಗವಾಗಿಯೂ ಇರುತ್ತವೆ. ಇವುಗಳಲ್ಲಿ ಬಳಸುವ ಪ್ರತಿ ಯುನಿಟ್‌ನ ಬೆಲೆಯೂ ಹಲವು ಸಾವಿರ ರೂ. ಗಳಿರುತ್ತವೆ. ಉದಾಹರಣೆಗೆ ಓಂಕಿಯೋ ಆಂಪ್ಲಿಫೈಯರ್ ರೇಡಿಯೋದ ಬೆಲೆ 25 ಸಾವಿರದಿಂದ ಪ್ರಾರಂಭವಾಗುತ್ತದೆ. ಇವುಗಳ ಫ್ರೀಕ್ವೆನ್ಸಿ ರೆಸ್ಪೋನ್ಸ್ ಅತ್ಯುತ್ತಮವಾಗಿರುತ್ತದೆ.

ಫ್ರೀಕ್ವೆನ್ಸಿ ರೆಸ್ಪೋನ್ಸ್
ಇದು ಆಡಿಯೋ ಸಿಸ್ಟಮ್‌ಗಳ ಗುಣಮಟ್ಟವನ್ನು ಅಳೆಯುವ ಒಂದು ಮಾನಕ. ನಾವು 20 ಹರ್ಟ್ಸ್‌ನಿಂದ (Hz) 20,000 ಹರ್ಟ್ಸ್ (20 ಕಿಲೋಹರ್ಟ್ಸ್, kHz)  ಕಂಪನಾಂಕ ಇರುವ ಧ್ವನಿ ಅಲೆಗಳನ್ನು ಸ್ಪಷ್ಟವಾಗಿ ಆಲಿಸಬಲ್ಲೆವು. ಆದರೆ ಎಲ್ಲ  ಆಡಿಯೋ ಸಿಸ್ಟಮ್‌ಗಳು ಈ ವ್ಯಾಪ್ತಿಯನ್ನು ಸಂಪೂರ್ಣವಾಗಿ ಪುನರುತ್ಪತ್ತಿ ಮಾಡಲಾರವು.

ಆಂಪ್ಲಿಫೈಯರ್‌ಗಳು ಇದಕ್ಕಿಂತಲೂ ಉತ್ತಮ ವ್ಯಾಪ್ತಿಯಲ್ಲಿ ಕೆಲಸ ಮಾಡಬಲ್ಲವು. ಆದರೆ ಇತರೆ ಘಟಕಗಳು ಈ ವ್ಯಾಪ್ತಿಯನ್ನು ಪೂರ್ತಿಯಾಗಿ ತಲುಪಲಾರವು. ಉದಾಹರಣೆಗೆ ಕ್ಯಾಸೆಟ್‌ಗಳು 12,000 ಹರ್ಟ್ಸ್‌ಗಳನ್ನು ಮೀರಲಾರವು. ಸ್ಪೀಕರ್‌ಗಳಲ್ಲಿ ಈ ವ್ಯಾಪ್ತಿಯನ್ನು ತಲುಪಲು ಬೇರೆ ಬೇರೆ ಸ್ಪೀಕರ್‌ಗಳನ್ನು ಬಳಸಲಾಗುತ್ತದೆ.
 
ಅತಿ ಕಡಿಮೆ ಕಂಪನಾಂಕದ ಧ್ವನಿಯನ್ನು ಹೊರಡಿಸಲು ಸಬ್ ವೂಫರ್ (sub-woofer), ಅದಕ್ಕಿಂತ ಸ್ವಲ್ಪ ಜಾಸ್ತಿ ಕಂಪನಾಂಕದ ಧ್ವನಿಗೆ ವೂಫರ್, ಹೆಚ್ಚಿನ ಕಂಪನಾಂಕದ ಧ್ವನಿಗೆ ಟ್ವೀಟರ್, ಇತ್ಯಾದಿ ಸ್ಪೀಕರ್‌ಗಳನ್ನು ಬಳಸಲಾಗುತ್ತದೆ. ಇವೆಲ್ಲ ಒಂದು ದೊಡ್ಡ ಪೆಟ್ಟಿಗೆಯಲ್ಲಿ ಅಡಕವಾಗಿರುವುದು ಸಾಮಾನ್ಯ. ಸ್ಪೀಕರ್ ಪೆಟ್ಟಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಒಂದಕ್ಕಿಂತ ಹೆಚ್ಚು ಸ್ಪೀಕರ್‌ಗಳಿರುವುದನ್ನು ಕಾಣಬಹುದು.

ಈ ಮಾನಕವಲ್ಲದೆ ಸ್ಟೀರಿಯೋ ಸಿಸ್ಟಮ್‌ನ ಗುಣಮಟ್ಟವನ್ನು ಅಳೆಯಲು ಇನ್ನೂ ಹಲವು ಮಾನಕಗಳಿವೆ. ಅವುಗಳ ಬಗ್ಗೆ ಮುಂದಿನ ಕಂತುಗಳಲ್ಲಿ ವಿವರಿಸಲಾಗುವುದು. 
 
ಗ್ಯಾಜೆಟ್ ಸಲಹೆ
ಸಂತೋಷ ಹೆಗ್ಡೆ ಅವರ ಪ್ರಶ್ನೆ: ನನಗೆ ವನ್ಯಜೀವಿ ಫೋಟೋಗ್ರಫಿ ಮಾಡುವ ಆಸೆ. ನಾನು ಸದ್ಯಕ್ಕೆ Panasonic Lumix Fz  ಕ್ಯಾಮೆರಾ ಕೊಂಡು ಪ್ರಾರಂಭಿಸಬೇಕು ಅಂದುಕೊಂಡಿದ್ದೇನೆ. ಇದು ಸಾಕೆ? ನಿಮ್ಮ ಅಭಿಪ್ರಾಯವೇನು? 
ಉ: ಇದು ಸೂಪರ್ ಝೂಮ್ ಮಾದರಿಯ ಕ್ಯಾಮೆರಾ. ಇದರಲ್ಲಿ ಹಲವು ನಮೂನೆಗಳು ಲಭ್ಯ. ಆದರೆ ಇದು ಎಸ್‌ಎಲ್‌ಆರ್ ಅಲ್ಲ. ಅಂದರೆ ಮುಂದಕ್ಕೆ ಹೆಚ್ಚಿಗೆ ಲೆನ್ಸ್ ಜೋಡಿಸಲು ಅಸಾಧ್ಯ. ಆದುದರಿಂದ ನೀವು ಉತ್ತಮ ಡಿಎಸ್‌ಎಲ್‌ಆರ್ ಮತ್ತು ಉತ್ತಮ ಟೆಲಿಲೆನ್ಸ್ ಕೊಂಡು ಪ್ರಾರಂಭಿಸುವುದೇ ಒಳ್ಳೆಯದು.

gadgetloka@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT