ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಸುವಾತನೆ ಆಟ ಮರೆತರೆ... (ಚಿತ್ರ: ಕಾಂಚಾಣ)

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೂವರು ಗೆಳೆಯರು. ಚಾನೆಲ್ ಒಂದರಲ್ಲಿ ಕೆಲಸ. ಮನರಂಜನೆ ಹೆಸರಿನಲ್ಲಿ ಜನರನ್ನು ಕೋಡಂಗಿಗಳಾಗಿಸುವುದು (`ಬಕ್ರ~ ಮಾಡುವುದು) ಅವರ ವೃತ್ತಿ. ತಾವೇ ಕೋಡಂಗಿಗಳಂತೆ ಕಾಣುವ ಈ ಪೋಲಿ ಗೆಳೆಯರು- ಸಂಜೆಗಳಲ್ಲಿ, ಜಾಲಿ ಬಾರುಗಳಲ್ಲಿ. ಈ ಗೆಳೆಯರ ಬದುಕು ಜಟಕಾಬಂಡಿಯಂತೆ ಸಾಗುತ್ತಿರುವಾಗ ಭೂಗತಲೋಕದ ಎಡಬಿಡಂಗಿಗಳು ಅವರಿಗೆ ಎದುರಾಗು ತ್ತಾರೆ. ಆ ಪಾಖಂಡಿಗಳು, `ಕಪ್ಪ ಒಪ್ಪಿಸಿ, ಇಲ್ಲ ಪ್ರಾಣ ಬಿಡಿ~ ಎಂದು ಬಂದೂಕು ತೋರಿಸುತ್ತಾರೆ. ಈ `ಕಪ್ಪದ ಕಷ್ಟ~ದಿಂದ ಪಾರಾಗಲು ಗೆಳೆಯರು ನಾನಾ ಕಷ್ಟ ಅನುಭವಿಸುತ್ತಾರೆ. ಕೊನೆಗೆ `ಆಡಿಸುವಾತ~ನ ಅನುಕೂಲಕ್ಕಾಗಿ ಶುಭಂ!

ಹೀಗೆ, ಸುಲಭವಾಗಿ ಹೇಳಿಬಿಡಬಹುದಾದ, ಆದರೆ ಸುಲಭವಾಗಿ ನೋಡಿಸಿಕೊಳ್ಳದ ಚಿತ್ರ `ಕಾಂಚಾಣ~. ಶ್ರೀಗಣೇಶ್ ಈ ಚಿತ್ರದ ನಿರ್ದೇಶಕರು. ಕಥೆಯೂ ಚಿತ್ರಕಥೆಯೂ ಅವರದ್ದೇ. ತಬಲಾ ನಾಣಿ ಅವರೊಂದಿಗೆ ಕೂತು ಸಂಭಾಷಣೆಯನ್ನೂ ಬರೆಯುವ ಮೂಲಕ `ಗಣೇಶ ವಿಲಾಸ~ ಮೆರೆದಿದೆ.

ದುಡ್ಡಿನ ವಿಶ್ವರೂಪವನ್ನು, ದುಡ್ಡಿಗಾಗಿ ಜನರು ತುಳಿಯುವ ವಾಮಮಾರ್ಗಗಳನ್ನೂ ಅನಾವರಣಗೊಳಿಸುವ ಪ್ರಯತ್ನವನ್ನು `ಕಾಂಚಾಣ~ ಮಾಡುತ್ತದೆ. ಆದರೆ, ಈ ನಿಟ್ಟಿನಲ್ಲಿ ಗಟ್ಟಿಯಾದ ಸಿದ್ಧತೆಯನ್ನು ಚಿತ್ರತಂಡ ಮಾಡಿಕೊಂಡಿಲ್ಲ. ಪ್ರಖ್ಯಾತ ಕಲಾವಿದರನ್ನು ಗುಡ್ಡೆ ಹಾಕಿಬಿಟ್ಟರೆ ಒಂದು ಸಿನಿಮಾ ತಂತಾನೇ ರೂಪುಗೊಳ್ಳುತ್ತದೆ ಎಂದು ನಿರ್ದೇಶಕರು ನಂಬಿದಂತಿದೆ.

ಪೋಲಿ ಗೆಳೆಯರ ಪಾತ್ರದಲ್ಲಿ ದಿಗಂತ್, ಸತೀಶ್ ನೀನಾಸಂ ಹಾಗೂ ತಬಲಾ ನಾಣಿ ಅಭಿನಯಿಸಿದ್ದಾರೆ. ವಿರಾಮದ ನಂತರ ಈ ಗುಂಪಿಗೆ ಕಿರಣ್ ಸೇರಿಕೊಳ್ಳುತ್ತಾರೆ. ಇವರಿಗೆ ಪರ್ಯಾಯವಾಗಿ ಮತ್ತೆರಡು ನೆಲೆಗಳಲ್ಲಿ ಟೆನ್ನಿಸ್ ಕೃಷ್ಣ ಹಾಗೂ ಮಿತ್ರಾ ಅವರ ಪಾತ್ರಗಳಿವೆ. ಈ ಗೆಳೆಯರು ತಮ್ಮ ಹಳೆಯ ಚಿತ್ರಗಳ ಮ್ಯಾನರಿಸಂಗಳನ್ನು, ಸವಕಲು ಜೋಕುಗಳನ್ನು ಇಲ್ಲಿಯೂ ಮುಂದುವರಿಸಿದ್ದಾರೆ. (ಐಟಂ ಸಾಂಗ್‌ಗೆ ವಿಶೇಷ ನಟಿಯರನ್ನು ಕರೆತರುವ ರೂಢಿಯನ್ನು ಮುರಿದಿರುವ ನಿರ್ದೇಶಕರು, `ಐಟಂ ಸಾಂಗ್~ ಒಂದರಲ್ಲಿ ರಂಗಾಯಣ ರಘು ಅವರನ್ನು ಕುಪ್ಪಳಿಸುವಂತೆ ಮಾಡಿದ್ದಾರೆ). ಸಣ್ಣದೊಂದು ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಬಂದುಹೋಗುತ್ತಾರೆ. ಹೀಗೆ ಬಂದುಹೋಗುವ ಪಾತ್ರಗಳ ಸಂಭ್ರಮದಲ್ಲಿ, ಸಿನಿಮಾಕ್ಕೊಂದು ಗಟ್ಟಿ ಕಥೆ ಬೇಕು ಎನ್ನುವುದು ನಿರ್ದೇಶಕರಿಗೆ ಮರೆತುಹೋದಂತಿದೆ.

ಇರುವ ಕಥೆಯ ಒಂದು ಭಾಗವಾಗಿ ಕಿರುತೆರೆ ಇರುವುದರ ಕಾರಣದಿಂದಲೋ ಏನೋ, ಸಿನಿಮಾಕ್ಕೆ ಕೂಡ ಕಿರುತೆರೆ ಸ್ವರೂಪ ಬಂದಿದೆ. ಕ್ಯಾಮೆರಾ ಬೆಳಕು ಮೈಮೇಲೆ ಬಿದ್ದಾಕ್ಷಣ ಹಾಗೂ ಮೈಕು ಕೈಗೆ ದೊರೆತ ಕೂಡಲೇ ಇದೇ ತಮ್ಮ ಕೊನೆಯ ಮಾತು ಎಂದು ವಟಗುಟ್ಟುವ ಮಂದಿಯಂತೆ, `ಕಾಂಚಾಣ~ದ ಪಾತ್ರಗಳೂ ವರ್ತಿಸುತ್ತವೆ. ಮಾತು ಎಂದ ಮೇಲೆ ಮಡಿಯೆಲ್ಲಿ, ಮೈಲಿಗೆಯೆಲ್ಲಿ? ಸದಭಿರುಚಿ ಎನ್ನುವುದು ಕಳೆದುಹೋದ ಒಂದು ಹಳಹಳಿಕೆ!

ಉಡಾಫೆಯೇ ಮೈವೆತ್ತಂತೆ ಕಾಣುವ ಪಾತ್ರಗಳು ದಿಗಂತ್‌ಗೆ ಲೀಲಾಜಾಲ. ಆದರಿಲ್ಲಿ, ಅವರು ಗುಂಪಿನಲ್ಲಿ ಗೋವಿಂದ. ಜನರನ್ನು ಬೇಸ್ತು (ಬೆಚ್ಚಿ) ಬೀಳಿಸುವ, ತನ್ನ ಕಚೇರಿಯ ಹಿರಿಯ ಸಹೋದ್ಯೋಗಿಯನ್ನು ಗೋಳುಗುಟ್ಟಿಸುವ, ಬಿಡುವು ಸಿಕ್ಕಾಗಲೆಲ್ಲ ಕುಡಿಯುವ ವ್ಯಕ್ತಿಗೂ ಕಾಮನೆಗಳು ಇರುವುದು ಸಹಜ ತಾನೆ? ಅಂಥ ಸಂದರ್ಭದಲ್ಲಿ, ನಾಯಕನ ಕನಸಿಗೆ ಬಣ್ಣಗಳಾಗುವ ಪಾತ್ರದಲ್ಲಿ ರಾಗಿಣಿ ಇದ್ದಾರೆ. ಅವರ ಪಾತ್ರ ಪ್ರೇಕ್ಷಕರ ಅನುಕಂಪಕ್ಕೆ ಅರ್ಹವಾದದ್ದು.

ಯೋಗರಾಜ ಭಟ್ ಹಾಗೂ ಹೃದಯಶಿವ `ಕಾಂಚಾಣ~ದ ಗೀತೆಗಳನ್ನು ಬರೆದಿದ್ದಾರೆ. ಛಾಯಾಗ್ರಹಣ ಸುಂದರನಾಥ ಸುವರ್ಣ ಅವರದ್ದು. ಆದರೆ, `ಗಣಾಧಿಪತಿ~ಯೇ ದಿಕ್ಕುತಪ್ಪಿದಲ್ಲಿ ಉಳಿದಂತೆ ಯಾರಿದ್ದರೇನು ಫಲ?

ಬೇಂದ್ರೆಯವರ `ಕುರುಡು ಕಾಂಚಾಣ~ ಕನ್ನಡದ ಅನನ್ಯ ಕವಿತೆಗಳಲ್ಲೊಂದು. `ಕಾಂಚಾಣ~ ಸಿನಿಮಾ ನೋಡುವ ಸಂದರ್ಭದಲ್ಲಿ ಬೇಂದ್ರೆ ಕವಿತೆ ತಂತಾನೇ ನೆನಪಾಗುತ್ತದೆ, ಕಸಿವಿಸಿ ಹೆಚ್ಚಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT